ಮಂಗಳವಾರ, ಡಿಸೆಂಬರ್ 1, 2020
23 °C

ಒನ್‌ಪ್ಲಸ್‌ 8ಟಿ: ಹಲವು ಪ್ಲಸ್‌, ಒಂದೆರಡು ಮೈನಸ್

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಒನ್‌ಪ್ಲಸ್‌ 8 ಸರಣಿಯಲ್ಲಿ ಈಚೆಗೆ ಬಿಡುಗಡೆ ಆಗಿರುವ ಒನ್‌ಪ್ಲಸ್‌ 8ಟಿ ಸ್ಮಾರ್ಟ್‌ಫೋನ್‌ ವಿನ್ಯಾಸದಲ್ಲಿ ಒನ್‌ಪ್ಲಸ್‌ 8ಗಿಂತ ಭಿನ್ನವಾಗಿದೆ. ಇದರ ಪರದೆಯು ಕರ್ವ್ ಆಗಿಲ್ಲ. ಹೆಚ್ಚು ತೂಕವಿದ್ದು ಗಾತ್ರವು ತುಸು ದೊಡ್ಡದಾಗಿಯೇ ಇದೆ. ಹಿಂಬದಿ ಕ್ಯಾಮೆರಾ ಬಲಬದಿಗೆ ಇದೆ. ಒನ್‌ಪ್ಲಸ್‌ 8ನಲ್ಲಿ ಮಧ್ಯಭಾಗದಲ್ಲಿ ಇತ್ತು. ಒನ್‌ಪ್ಲಸ್‌ 8 ಪ್ರೊಗೆ ಹೋಲಿಸಿದರೆ ಇದರ ಪರದೆ ಅದಕ್ಕಿಂತಲೂ ಸ್ವಲ್ಪ ಚಿಕ್ಕದಾಗಿದೆ.

5ಜಿ, ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ಹಾಗೂ ಆಕರ್ಷಕ ಪ‍ರದೆ ಈ ಹ್ಯಾಂಡ್‌ಸೆಟ್‌ನ ಹೈಲೈಟ್ಸ್‌. ತಂತ್ರಾಂಶದ ದೃಷ್ಟಿಯಿಂದ ನೋಡುವುದಾದರೆ ಆಂಡ್ರಾಯ್ಡ್‌ 11 ಆಧಾರಿತ ಸುಧಾರಿತ ಆಕ್ಸಿಜನ್‌ ಒಎಸ್‌ 11 ಹೊಂದಿದೆ. ಹೀಗಾಗಿ ಒನ್‌ಪ್ಲಸ್‌ನ ಬಹುತೇಕ ಆ್ಯಪ್‌ಗಳ ಹೆಸರು ದೊಡ್ಡದಾಗಿ, ಬೋಲ್ಡ್‌ ಆಗಿ ಕಾಣಿಸುತ್ತವೆ.

48 ಎಂಪಿ ಕ್ವಾಡ್‌ ಕ್ಯಾಮೆರಾದ ಗುಣಮಟ್ಟ ಉತ್ತಮವಾಗಿದೆ. ಮಂದ ಬೆಳಕಿನಲ್ಲಿ ಮತ್ತು ಪ್ರಕಾಶಮಾನವಾದ ಬೆಳಕಿನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದು. ಕಂಪನಿಯ ಈ ಹಿಂದಿನ ಕೆಲವು ಹ್ಯಾಂಡ್‌ಸೆಟ್‌ಗಳಲ್ಲಿ ದೂರದ ಚಿತ್ರ ತೆಗೆದ ಬಳಿಕ ಅದನ್ನು ಝೂಮ್‌ ಮಾಡಿದರೆ ಸ್ಪಷ್ಟತೆ ಇರುತ್ತಿರಲಿಲ್ಲ. ಆ ಸಮಸ್ಯೆಯನ್ನು 8 ಪ್ರೊದಲ್ಲಿ ಬಗೆಹರಿಸಲಾಗಿತ್ತು. 8ಟಿದಲ್ಲಿಯೂ ಅದನ್ನು ಇನ್ನಷ್ಟು ಉತ್ತಮಗೊಳಿಸುವ ಕಡೆಗೆ ಗಮನ ನೀಡಲಾಗಿದೆ.

8 ಪ್ರೊದಲ್ಲಿ ಸೆಲ್ಫಿ ಚಿತ್ರಗಳು ಬ್ಯೂಟಿಫೈ ಮಾಡಿದಂತೆ ಬರುತ್ತಿತ್ತು. 8ಟಿ ಹ್ಯಾಂಡ್‌ಸೆಟ್‌ನಲ್ಲಿ ಅದನ್ನು ಸರಿಪಡಿಸಿದ್ದು, ಸೆಲ್ಫಿ ಚಿತ್ರವು ಸಹಜ ಮೈಬಣ್ಣದಲ್ಲಿ ಮೂಡಿಬರುತ್ತದೆ. ನೈಟ್‌ಸ್ಕೇಪ್‌ ಆಯ್ಕೆ ನೀಡಿಲ್ಲವಾದರೂ ಸ್ಕ್ರೀನ್‌ ಫ್ಲ್ಯಾಷ್‌ ಇರುವುದರಿಂದ ಅದನ್ನು ಬಳಸಿಯೇ ಸೆಲ್ಫಿ ತೆಗೆಯಬಹುದು, ಆದರೆ ಚಿತ್ರ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ.

ಮೊನೊಕ್ರೋಮ್‌ ಮೋಡ್‌ನಲ್ಲಿ ಅತ್ಯಂತ ಸ್ಪಷ್ಟ ಮತ್ತು ಸುಂದರವಾದ ಚಿತ್ರಗಳನ್ನು ತೆಗೆಯಬಹುದು. ಬ್ಲಾಕ್‌ ಆ್ಯಂಡ್‌ ವೈಟ್‌ ಚಿತ್ರಗಳ ಬೆಳಕು ಮತ್ತು ನೆರಳಿನ ವಿವರಣೆಯು ಮುದ ನೀಡುತ್ತದೆ.

ಮ್ಯಾಕ್ರೊ ಮೋಡ್‌: ಈ ಆಯ್ಕೆ ಅಷ್ಟೊಂದು ತೃಪ್ತಿ ನೀಡಿಲ್ಲ. ಒಂದು ಹೂವಿನ ದಳದ ಸೂಕ್ಷ್ಮ ಅಂಶಗಳನ್ನು ಕ್ಲಿಕ್ ಮಾಡಲು ಪೋನ್‌ ಅನ್ನು ಅತಿ ಹತ್ತಿರಕ್ಕೆ ಒಯ್ಯಬೇಕು. ಅಷ್ಟು ಮಾಡಿದರೂ ಸ್ಪಷ್ಟವಾಗಿ ಮೂಡಿಬರುವುದಿಲ್ಲ.

ಬ್ಯಾಟರಿ: ಇದರಲ್ಲಿ 4,500 ಎಂಎಎಚ್‌ ಬ್ಯಾಟರಿ ಇದೆ. ವೇಗವಾಗಿ ಚಾರ್ಜ್‌ ಆಗಲು ವಾರ್ಪ್‌ ಚಾರ್ಜ್‌ 65 ವ್ಯವಸ್ಥೆ ಇದೆ. 30 ನಿಮಿಷದಲ್ಲಿ ಶೇ 70ರಷ್ಟು ಚಾರ್ಜ್‌ ಆಗುತ್ತದೆ. ಶೇ 100ರಷ್ಟು ಚಾರ್ಜ್‌ ಆಗಲು 40 ನಿಮಿಷ ಬೇಕು. ಒನ್‌ಪ್ಲಸ್‌ 8, 8 ಪ್ರೊದಂತೆಯೇ ಇದರಲ್ಲಿಯೂ ಬ್ಯಾಟರಿ ಬಾಳಿಕೆ ಸಾಮರ್ಥ್ಯದ ಬಗ್ಗೆ ಕಂಪನಿ ಗಮನ ಹರಿಸಿದೆ. ಗೇಮ್‌ ಆಡುವುದು, ವಿಡಿಯೊ ನೋಡುವುದು, ಬ್ರೌಸಿಂಗ್‌ ಮಾಡಿದರೂ ಒಂದೂವರೆ ದಿನ ಬಳಸುವುದಕ್ಕಂತೂ ಯಾವುದೇ ಸಮಸ್ಯೆ ಆಗುವುದಿಲ್ಲ.

ಕೊರತೆ ಏನು: ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿರುವಾಗ, ನಮ್ಮ ಕಿವಿಗಷ್ಟೇ ಕೇಳಬೇಕಾದ ಅವರ ಮಾತು ನಮ್ಮಿಂದ ಐದಾರು ಅಡಿ ದೂರದಲ್ಲಿ ಕೂತಿರುವವರಿಗೂ ಸ್ಪಷ್ಟವಾಗಿ ಕೇಳಿಸುತ್ತದೆ. ಇದನ್ನು ಬಗೆಹರಿಸಲು ಕಂಪನಿ ಗಮನ ಹರಿಸಬೇಕಿದೆ. ಇನ್‌ಬಿಲ್ಟ್‌ ಆಗಿ ಕಾಲ್‌ ರೆಕಾರ್ಡಿಂಗ್‌ ಆಯ್ಕೆ ಇದೆ. ಆದರೆ, ರಿಂಗ್‌ ಆಗುತ್ತಿರುವಾಗ ಕಾಲ್‌ ರೆಕಾರ್ಡ್‌ ಆನ್ ಮಾಡಲು ಸಾಧ್ಯವಿಲ್ಲ. ಇನ್ನೊಬ್ಬರು ಕರೆ ಸ್ವೀಕರಿಸಿದ ಬಳಿಕವೇ ರೆಕಾರ್ಡ್ ಆನ್‌ ಮಾಡಬೇಕು. ಹಾಗೆ ಮಾಡಿದರೆ ‘ನಿಮ್ಮ ಕರೆಯನ್ನು ಈಗ ರೆಕಾರ್ಡ್‌ ಮಾಡಲಾಗುತ್ತದೆ’ ಎನ್ನುವ ಧ್ವನಿ ಕೇಳಿಸುತ್ತದೆ. ಇದು ಕರೆ ಮಾಡಿದವರು ಮತ್ತು ಸ್ವೀಕರಿಸಿದವರು ಇಬ್ಬರಿಗೂ ಕೇಳಿಸುತ್ತದೆ. ಇದು ಈ ಹ್ಯಾಂಡ್‌ಸೆಟ್‌ನ ವೈಫಲ್ಯ.

ವೈಶಿಷ್ಟ್ಯ

* ಪರದೆ: 6.55 ಎಂಚು ಫ್ಯೂಯೆಡ್‌ ಅಮೊಎಲ್‌ಇಡಿ
* ಒಎಸ್‌; ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್‌ ಒಎಸ್‌
* ಪ್ರೊಸೆಸರ್; ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 865
* ಕ್ಯಾಮೆರಾ; 48 ಎಂಪಿ ಕ್ವಾಡ್‌ ಕ್ಯಾಮೆರಾ
* ಸೆಲ್ಫಿ ಕ್ಯಾಮೆರಾ; 16ಎಂಪಿ
* ಬ್ಯಾಟರಿ; 4500 ಎಂಎಎಚ್‌ ಬ್ಯಾಟರಿ. 65 ವಾರ್ಪ್‌ ಚಾರ್ಜಿಂಗ್‌
* ಫೇಸ್‌ ಅನ್‌ಲಾಕ್‌, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸರ್
* ಬೆಲೆ: 8ಜಿಬಿ ರ್‍ಯಾಮ್‌+ 128 ಜಿಬಿ ಸ್ಟೊರೇಜ್‌; ₹42,999. 12 ಜಿಬಿ ರ್‍ಯಾಮ್‌+ 256 ಜಿಬಿ ಸ್ಟೊರೇಜ್‌; ₹45,999

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು