ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡಿಮೆ ವಿದ್ಯುತ್ ಬಳಸುವ ಸ್ಮಾರ್ಟ್ BLDC ಫ್ಯಾನ್: ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ

Published 1 ಜೂನ್ 2024, 5:51 IST
Last Updated 1 ಜೂನ್ 2024, 5:51 IST
ಅಕ್ಷರ ಗಾತ್ರ
ಪ್ರಮುಖ ವೈಶಿಷ್ಟ್ಯಗಳು
  • ಬ್ರೀಝ್, ರಿವರ್ಸ್, ಸ್ಲೀಪ್ ಮೋಡ್‌ಗಳು
  • ವಿದ್ಯುತ್ ಉಳಿತಾಯಕ್ಕೆ 5 ಸ್ಟಾರ್ ರೇಟಿಂಗ್
  • ಸ್ಮಾರ್ಟ್ ರಿಮೋಟ್ ಕಂಟ್ರೋಲರ್

ಸುಡು ಬೇಸಿಗೆಯಲ್ಲಿ ಏರುತ್ತಿರುವ ವಿದ್ಯುತ್ ಬಿಲ್‌ಗೆ ಕಡಿವಾಣ ಹಾಕಲು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಪ್ರಯತ್ನಗಳು ಆಗುತ್ತಲೇ ಇವೆ. ಅದರ ಫಲವಾಗಿ ಈಗ ವಿದ್ಯುತ್ ಉಳಿಸುವ ಮತ್ತು ಹೆಚ್ಚು ವೈವಿಧ್ಯಮಯ ಆಯ್ಕೆಗಳುಳ್ಳ ಸೀಲಿಂಗ್ ಫ್ಯಾನ್‌ಗಳು ಮಾರುಕಟ್ಟೆಗೆ ಬಂದಿವೆ. ವಿದ್ಯುತ್ ಉಳಿತಾಯಕ್ಕಾಗಿ ಬಿಎಲ್‌ಡಿಸಿ ಮೋಟಾರುಗಳುಳ್ಳ ಫ್ಯಾನುಗಳು ಸದ್ದು ಮಾಡುತ್ತಿವೆ. ಅವುಗಳ ಸಾಲಿನಲ್ಲಿರುವ ಪಾಲಿಕ್ಯಾಬ್ ಕಂಪನಿಯ ಹೊಸ ಫ್ಯಾನ್ - ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ ಹೆಸರಿನ ಫ್ಯಾನ್ ಹೇಗಿದೆ? ತಿಂಗಳ ಕಾಲ ಬಳಸಿ ನೋಡಿದಾಗ ಕಂಡುಕೊಂಡ ಅಂಶಗಳು ಇಲ್ಲಿವೆ.

ಸೈಲೆನ್ಷಿಯೋ ಮಿನಿ ಫ್ಯಾನ್ - ಹೆಸರಿಗೆ ತಕ್ಕಂತೆ ಸೂಕ್ತ ವಿಸ್ತೀರ್ಣವಿರುವ ಕೊಠಡಿಗಳಲ್ಲಿ ಸಾಮಾನ್ಯ ಫ್ಯಾನ್‌ಗಳಂತೆ ಹೆಚ್ಚು ಸದ್ದು ಮಾಡುವುದಿಲ್ಲ. ಆಕರ್ಷಕವಾದ ವಿನ್ಯಾಸ ಹೊಂದಿರುವ ಈ ಫ್ಯಾನ್‌ನ ವಿಶೇಷತೆಗಳಲ್ಲೊಂದು ಎಂದರೆ ಈಗಿನ ಹೊಸ ಟ್ರೆಂಡ್ ಆಗಿರುವ ಬಿಎಲ್‌ಡಿಸಿ ಮೋಟಾರು. ಎಂದರೆ ಬ್ರಶ್‌ಲೆಸ್ ಡೈರೆಕ್ಟ್ ಕರೆಂಟ್ ಎಂಬುದರ ಸಂಕ್ಷಿಪ್ತ ರೂಪವಿದು. ಸಾಂಪ್ರದಾಯಿಕ ಎಸಿ ವಿದ್ಯುತ್ ಮೂಲಕ ಕೆಲಸ ಮಾಡುವ ಫ್ಯಾನುಗಳಿಗಿಂತ ಬಿಎಲ್‌ಡಿಸಿ ಮೋಟಾರು ಇರುವ ಫ್ಯಾನ್‌ಗಳಲ್ಲಿ ವಿದ್ಯುತ್ ಹೆಚ್ಚು ಉಳಿತಾಯವಾಗುತ್ತದೆ. ಅವುಗಳ ಚಾಲನೆಗೆ ಕಡಿಮೆ ವಿದ್ಯುತ್ ಬೇಕಿರುವುದರಿಂದ, ವಿದ್ಯುತ್ ಬಿಲ್‌ನಲ್ಲಿ ಉಳಿತಾಯವಾಗುತ್ತದೆ. ಈ ಸೀಲಿಂಗ್ ಫ್ಯಾನ್‌ಗೆ ವಿದ್ಯುತ್ ಉಳಿತಾಯಕ್ಕೆ ಸಂಬಂಧಿಸಿದಂತೆ 5 ಸ್ಟಾರ್ ರೇಟಿಂಗ್ ಇದೆ. (1ರಿಂದ 5ರವರೆಗಿನ ರೇಟಿಂಗ್‌ಗಳಲ್ಲಿ ಹೆಚ್ಚು ಇದ್ದಷ್ಟೂ ಕಡಿಮೆ ವಿದ್ಯುತ್ ಬಳಕೆ ಎಂದರ್ಥ.)

ಸುಲಭ ನಿರ್ವಹಣೆಗೆ ರಿಮೋಟ್ ಕಂಟ್ರೋಲ್

ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ ಫ್ಯಾನ್‌ನ ಜೊತೆಗೆ ರಿಮೋಟ್ ಕಂಟ್ರೋಲರ್ ಬರುತ್ತದೆ. ಫ್ಯಾನ್‌ನ ವೇಗ ಹೆಚ್ಚು ಅಥವಾ ಕಡಿಮೆ ಮಾಡುವುದಕ್ಕೆ, ಇಲ್ಲವೇ ತೀರಾ ಚಳಿಯಾದಾಗ ಫ್ಯಾನ್ ನಿಲ್ಲಿಸಲು ಹಾಸಿಗೆಯಿಂದ ಏಳಬೇಕಾಗಿಲ್ಲ. ಇದಕ್ಕಾಗಿಯೇ ಪುಟ್ಟ ರಿಮೋಟ್ ಕಂಟ್ರೋಲರ್ ಜೊತೆಗೆ ನೀಡಲಾಗಿದೆ. ಇದರಲ್ಲಿ ಪೂರ್ವನಿಗದಿತವಾಗಿ ಕಡಿಮೆಯಿಂದ ಗರಿಷ್ಠ ವೇಗದ 6 ಮೋಡ್‌ಗಳಿಗೆ ಬಟನ್‌ಗಳಿವೆ. ಅವೆಲ್ಲವನ್ನೂ ಮೀರಿ ಮತ್ತಷ್ಟು ವೇಗವಾಗಿಸುವ 'ಬೂಸ್ಟ್' ಬಟನ್ ಇದೆ. ಮತ್ತು ವೇಗವನ್ನು ಸ್ವಲ್ಪವೇ ತಗ್ಗಿಸುವ ಅಥವಾ ಹೆಚ್ಚಿಸುವ ಬಟನ್‌ಗಳೂ ಇವೆ. ಕೊಠಡಿಯ ತಾಪಮಾನ, ಋತುಮಾನಗಳು ಅಥವಾ ವೈಯಕ್ತಿಕ ಆಯ್ಕೆಗೆ ಅನುಗುಣವಾಗಿ ಫ್ಯಾನ್ ತಿರುಗುವ ವೇಗವನ್ನು ಹೊಂದಿಸಿಕೊಳ್ಳಲು ಈ ಎಲ್ಲ ಬಟನ್‌ಗಳು ಅನುಕೂಲ ಮಾಡುತ್ತವೆ.

ಇದರ ವಿಶೇಷತೆಗಳಲ್ಲಿ ಬ್ರೀಝ್ ಮೋಡ್ ಹಾಗೂ ರಿವರ್ಸ್ ಮೋಡ್ ಪ್ರಸ್ತಾಪಿಸಲೇಬೇಕಾದ ಎರಡು ಬಟನ್‌ಗಳು. ಬ್ರೀಝ್ ಮೋಡ್‌ನಲ್ಲಿ ತಂಗಾಳಿ ಬೀಸಿದ ಮಾದರಿಯಲ್ಲಿ ಎಂದರೆ, ಗಾಳಿ ಬೀಸುವ ವೇಗವು ಹಂತ ಹಂತವಾಗಿ ವೇಗವಾಗುತ್ತಾ ಮತ್ತೆ ಪುನಃ ಕಡಿಮೆಯಾಗುತ್ತದೆ. ಇದು ಕೊಠಡಿಯೊಳಗಿನ ಗಾಳಿಯನ್ನು ಏಕರೂಪದ ಉಷ್ಣತೆಯಲ್ಲಿರಿಸುವಲ್ಲಿ ಸಹಕಾರಿ. ರಿವರ್ಸ್ ಮೋಡ್, ಮುಖ್ಯವಾಗಿ ವಾತಾನುಕೂಲಿತ ವ್ಯವಸ್ಥೆ (ಎಸಿ) ಇರುವ ಕೊಠಡಿಗಳಿಗೆ ಮತ್ತು ಚಳಿಗಾಲದಲ್ಲಿ ಅನುಕೂಲ. ಒಂದು ಬಟನ್ ಒತ್ತಿದರೆ ಫ್ಯಾನ್ ತಿರುಗುವ ದಿಕ್ಕು ಬದಲಾಗುತ್ತದೆ ಮತ್ತು ಅಷ್ಟೇನೂ ವೇಗವಾಗಿಲ್ಲದೆ, ಸ್ವಲ್ಪವೇ ಗಾಳಿಯೊಂದಿಗೆ ತಿರುಗುತ್ತಿರುತ್ತದೆ. ಇವೆರಡು ಕೂಡ ಕಡಿಮೆ ವಿದ್ಯುತ್ ಬೇಡುವ ವ್ಯವಸ್ಥೆಗಳು ಎಂದು ಕಂಪನಿ ಹೇಳಿಕೊಂಡಿದೆ.

ಅಂತೆಯೇ, ಫ್ಯಾನ್ ಹಾಕಿಕೊಂಡು ನಿದ್ದೆ ಬಂದ ಬಳಿಕ ವಾತಾವರಣ ತಂಪಾದ ಬಳಿಕ ಫ್ಯಾನ್ ಅಗತ್ಯವಿಲ್ಲವೆಂದಾದರೆ ಹಾಸಿಗೆಯಿಂದ ಎದ್ದೇಳುವ ತ್ರಾಸವಿಲ್ಲದೆಯೇ, ನಿರ್ದಿಷ್ಟ ಸಮಯದ ಬಳಿಕ ಫ್ಯಾನ್ ತನ್ನ ವೇಗವನ್ನು (ಪ್ರತಿ ಗಂಟೆಗೊಮ್ಮೆ) ಕಡಿತ ಮಾಡಿಕೊಳ್ಳುತ್ತಾ ಬಂದು, ಕೊನೆಗೆ ತೀರಾ ನಿಧಾನವಾಗಿ ತಿರುಗುವಂತೆ ಮಾಡಲು 'ಸ್ಲೀಪ್ ಮೋಡ್' ಎಂಬ ಬಟನ್ ನೆರವಾಗುತ್ತದೆ.

ಈ ಫ್ಯಾನಿನ ಏರೋಡೈನಮಿಕ್ ವಿನ್ಯಾಸ, ಕಾಂಪ್ಯಾಕ್ಟ್ ಬಾಡಿ ಮತ್ತು ಉದ್ದವಾದ ಬ್ಲೇಡ್‌ಗಳು ಕೊಠಡಿಯೊಳಗೆ ಗಾಳಿಯನ್ನು ಸೂಕ್ತವಾಗಿ ಹರಡಲು ನೆರವಾಗುತ್ತವೆ. ಮೂರು ವರ್ಷಗಳ ವಾರಂಟಿ ಮಾತ್ರವಲ್ಲದೆ, ನೋಂದಾಯಿಸಿಕೊಂಡಲ್ಲಿ ಇನ್ನೂ ಒಂದು ವರ್ಷ ಹೆಚ್ಚುವರಿ ವಾರಂಟಿಯನ್ನು ಪಾಲಿಕ್ಯಾಬ್ ನೀಡುತ್ತಿದೆ. ರಿಜಿಸ್ಟರ್ ಮಾಡುವುದು ಕೂಡ ಸುಲಭ, ಬಾಕ್ಸ್‌ನಲ್ಲಿರುವ ಕ್ಯುಆರ್ ಕೋಡನ್ನು ಸ್ಕ್ಯಾನ್ ಮಾಡಿ, ಭರ್ತಿ ಮಾಡಿದರಾಯಿತು.

1200mm, 900mm ಹಾಗೂ 600mm ಗಾತ್ರದ ಬ್ಲೇಡುಗಳಿರುವ ಮೂರು ಮಾದರಿಗಳಲ್ಲಿ ಮತ್ತು 9 ಬಣ್ಣಗಳಲ್ಲಿ ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ ಫ್ಯಾನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅಮೆಜಾನ್ ತಾಣದಲ್ಲಿ ಇದರ ಬೆಲೆ ₹3199 ಆಗಿದೆ ಮತ್ತು ಕಂಪನಿಯವರೇ ಬಂದು ಫ್ಯಾನ್ ಅಳವಡಿಸಿ ಹೋಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT