ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಿದೆ ಬೆಂಕಿಯುಂಗುರ

ಸೂರ್ಯ
Last Updated 21 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಆಕಾಶ ವೀಕ್ಷಣೆಯೆಂದರೆ ಹಲವರಲ್ಲಿ ಉತ್ಸಾಹ, ರೋಮಾಂಚನ ಹಾಗೂ ಎಲ್ಲಿಲ್ಲದ ಕುತೂಹಲ. ರಾತ್ರಿ ವೇಳೆ ಆಗಸದಲ್ಲಿ ಗೋಚರಿಸುವ ಅಸಂಖ್ಯಾತ ತಾರೆಗಳು, ಗ್ರಹಗಳು, ಧೂಮಕೇತುಗಳು ಮತ್ತು ಇತರೇ ಕಾಯಗಳು ಅನಾದಿಕಾಲದಿಂದಲೂ ಮನುಷ್ಯರಲ್ಲಿ ವಿಶಿಷ್ಟ ರೀತಿಯಲ್ಲಿ ಜಿಜ್ಞಾಸೆ ಮೂಡಿಸಿವೆ. ದೂರದರ್ಶಕದ ಸಹಾಯದಿಂದ ಈ ಕಾಯಗಳನ್ನು ವೀಕ್ಷಿಸಿ ಆನಂದ ಪಡೆಯುವ ರೀತಿ ಮತ್ತು ಆಗಸದಲ್ಲಿ ಕಾಣುವ ಚಿತ್ತಾರ ಎರಡೂ ಭಿನ್ನವಾದುದು. ಪ್ರತಿಯೊಂದು ಕಾಯವೂ ವೈಶಿಷ್ಟ್ಯಪೂರ್ಣವಾಗಿ ಗೋಚರಿಸುವುದೇ ಇದಕ್ಕೆ ಕಾರಣ.

ಅನೇಕ ಖಗೋಳಿಯ ಸಂಗತಿ/ ಘಟನೆಗಳು ಎಲ್ಲರಲ್ಲೂ ಕುತೂಹಲ ಕೆರಳಿಸಿವೆ. ಈ ರೀತಿಯ ವಿಸ್ಮಯಗಳಲ್ಲಿ ಗ್ರಹಣ (Eclipse) ಪ್ರಮುಖವಾದುದು. ಗ್ರಹಣವೆಂದರೆ ಈಗಲೂ ಕೆಲವರಲ್ಲಿ ಆತಂಕ, ತಳಮಳ, ಭಯ ಹಾಗೂ ಗೊಂದಲ ಮೂಡುವುದು ಸಹಜ. ಗ್ರಹಣ ಬಂತೆಂದರೆ ಸಾಕು ಪೂಜೆ–ಪುನಸ್ಕಾರ, ಜಪ–ತಪ, ದೇವರಲ್ಲಿ ಎಲ್ಲಿಲ್ಲದ ಭಕ್ತಿ ಹಾಗೂ ದಾನ –ಧರ್ಮ ಪ್ರಾರಂಭವಾಗುತ್ತದೆ. ಜ್ಯೋತಿಷಿಗಳು ಪಂಚಾಂಗ ತೆಗೆದು ರಾಶಿ, ಚಕ್ರಗಳ ಬಗ್ಗೆ ನಿರರ್ಗಳವಾಗಿ ಮಾಹಿತಿ ನೀಡುತ್ತಾರೆ. ಗ್ರಹಣದ ಬಗ್ಗೆ ಸುದ್ದಿವಾಹಿನಿಗಳೂ ಜನರಲ್ಲಿ ಎಲ್ಲಾ ರೀತಿಯ ಭಯ ಉಂಟು ಮಾಡಲು ಪ್ರಾರಂಭಿಸುತ್ತವೆ. ಗ್ರಹಣ ಮುಗಿಯುವ ತನಕ ಹಲವರು ಆತಂಕದಲ್ಲೇ ಸಮಯ ಕಳೆಯುತ್ತಾರೆ.

ಗ್ರಹಣದ ಪ್ರಸ್ತಾಪ ಈಗೇಕೆ? ಇದು ಅಪ್ರಸ್ತುತ ಎಂದು ಎಲ್ಲರೂ ಭಾವಿಸಬಹುದು. ಇದೇ 26ರಂದು ಪ್ರಪಂಚದ ಹಲವು ಭಾಗಗಳಲ್ಲಿ ಕಂಕಣ ಸೂರ್ಯ ಗ್ರಹಣ (Annular solar eclipse) ಗೋಚರಿಸುತ್ತದೆ. ಭಾರತದ ಕೆಲವು ಭಾಗಗಳಲ್ಲಿ ಇದು ಉತ್ತಮವಾಗಿಯೇ ಗೋಚರಿಸುತ್ತದೆ.

ಈ ಗ್ರಹಣ ಪ್ರಸಕ್ತ ವರ್ಷದ ಅವಿಸ್ಮರಣೀಯ ಹಾಗೂ ಔಚಿತ್ಯಪೂರ್ಣ ಘಟನೆ. ಖಗ್ರಾಸ ಮತ್ತು ಭಾಗಶಃ ಸೂರ್ಯಗ್ರಹಣದ ಬಗ್ಗೆ ಕೇಳಿದ್ದೇವೆ. ಆದರೆ, ಕಂಕಣ ಸೂರ್ಯಗ್ರಹಣ ಎಂದಾಗ ಅಚ್ಚರಿಪಡುವುದು ಸಹಜ. ಈ ರೀತಿಯ ಸೂರ್ಯಗ್ರಹಣ ವಿವಿಧ ದೇಶಗಳಲ್ಲಿ/ ಪ್ರಾಂತ್ಯಗಳಲ್ಲಿ ಸಂಭವಿಸುತ್ತದೆ. ಅದರಲ್ಲೂ ಅರೇಬಿಯಾ, ದಕ್ಷಿಣ ಮತ್ತು ಉತ್ತರ ಭಾರತ, ಶ್ರೀಲಂಕಾ, ಸಿಂಗಪುರ, ಸೂಡಾನ್, ಸುಮಾತ್ರ, ಪಶ್ಚಿಮ ಆಸ್ಟ್ರೇಲಿಯಾ ಹಾಗೂ ಗ್ವಾಮ್‌ನಲ್ಲಿ ಉತ್ತಮವಾಗಿ ಗೋಚರಿಸುತ್ತದೆ.

ರಾಜ್ಯದಲ್ಲೂ ಈ ಗ್ರಹಣ ವೈವಿಧ್ಯಮಯವಾಗಿ ಕಾಣುತ್ತದೆ. ಕೇರಳದ ಕಾಸರಗೋಡು, ವರನಾಡಿನ ಕಾಲ್‌ಪೆಟ್ಟ, ಕಣ್ಣೂರ್, ತಮಿಳುನಾಡು ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಗೋಚರಿಸು ತ್ತದೆ.

ಗ್ರಹಣದ ಗೋಚರತೆಯ ಸಮಯ ಮತ್ತು ಅವಧಿಯೇನು? ಗ್ರಹಣದಿಂದ ಗಂಡಾಂತರವಿದೆಯೇ? ಗ್ರಹಣ ವೀಕ್ಷಿಸುವ ಪರಿ ಏನು ಅಥವಾ ಹೇಗೆ? ಎಂಬ ಪ್ರಶ್ನೆಗಳು ಜನರಿಗೆ ಕಾಡುತ್ತಿರುತ್ತವೆ. ಈ ಪ್ರಶ್ನೆಗಳಿಗೆ ತರ್ಕಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಉತ್ತರ ಕಂಡುಕೊಳ್ಳಬೇಕು.ಮೈಸೂರಿನಲ್ಲಿ ಭಾಗಶಃ ಸಹ ಅಲ್ಲದೆ, ಖಗ್ರಾಸ ಗ್ರಹಣ ಸಹ ಅಲ್ಲದೆ, ಕಂಕಣ ಗ್ರಹಣದ ರೀತಿಯಲ್ಲಿ ಗೋಚರಿಸುತ್ತದೆ. ಸಂಪೂರ್ಣ ಗ್ರಹಣವಾದರೆ ಚಂದ್ರನು ಪರಿಪೂರ್ಣವಾಗಿ ಸೂರ್ಯನನ್ನು ಮುಚ್ಚುತ್ತಾನೆ. ಆದರೆ, ಕಂಕಣ ಗ್ರಹಣವಾದರೆ ಎರಡು ವೃತ್ತಗಳಂತೆ ಕಾಣುತ್ತದೆ. ಆದ್ದರಿಂದ ಕಂಕಣ ಸೂರ್ಯಗ್ರಹಣವನ್ನು ಆಂಗ್ಲ ಭಾಷೆಯಲ್ಲಿ ‘Ring Of Fire’ ಎನ್ನುತ್ತಾರೆ. ಮೈಸೂರಿನಲ್ಲಿ ಶೇಕಡ 93ರಿಂದ 99 ಗೋಚರತೆ ಕಂಡರೆ, ವಿರಾಜಪೇಟೆಯ ಕುಟ್ಟ, ಗುಂಡ್ಲುಪೇಟೆಯಲ್ಲಿ ಕಂಕಣ ಸೂರ್ಯ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತದೆ.

ಡಿಸೆಂಬರ್ 26ರಂದು ಮೈಸೂರಿನಲ್ಲಿ ಸೂರ್ಯಗ್ರಹಣವು ಬೆಳಿಗ್ಗೆ 8.06ಕ್ಕೆ ಪ್ರಾರಂಭವಾಗಿ 11.09ಕ್ಕೆ ಅಂತ್ಯವಾಗುತ್ತದೆ. ಗ್ರಹಣದ ಮಧ್ಯಭಾಗ ಬೆಳಿಗ್ಗೆ 9.28ಕ್ಕೆ ಸಂಭವಿಸುತ್ತದೆ.

ಗ್ರಹಣದ ಸಮಯ ಹಾಗೂ ಅವಧಿ ತಿಳಿದರೆ ಸಾಲದು. ವೀಕ್ಷಿಸುವ ಪರಿಯನ್ನು ಅರಿಯುವುದು ಅತ್ಯಗತ್ಯ. ಗ್ರಹಣಗಳನ್ನು ಸುಲಭವಾಗಿ ಬರಿಗಣ್ಣಿನಿಂದ ವೀಕ್ಷಿಸಬಹುದೇ ಅಥವಾ ಸಾಧನಗಳನ್ನು ಬಳಸಬೇಕೇ? ಎಂದು ಕೇಳಬಹುದು. ಸುದೀರ್ಘವಾಗಿ ಆಲೋಚಿಸಿದರೆ ಗ್ರಹಣಗಳನ್ನು ವೀಕ್ಷಿಸಿದಾಗ ಅನೇಕ ಖಗೋಳಿಯ ಅಂಶಗಳು ತಿಳಿಯುವುದು ಹಾಗೂ ವೀಕ್ಷಿಸಿದ ಆನಂದ ಅವರ್ಣನೀಯ. ಪ್ರಾಯೋಗಿಕವಾಗಿ ಯೋಚಿಸಿದರೆ ಚಂದ್ರಗ್ರಹಣವನ್ನು ಬರಿಯ ಕಣ್ಣಿನಿಂದ ವೀಕ್ಷಿಸಿದರೆ ಯಾವ ರೀತಿಯ ತೊಂದರೆಯೂ ಉಂಟಾಗುವುದಿಲ್ಲ. ಸೂರ್ಯ ಗ್ರಹಣವಾದರೆ ಅತ್ಯಂತ ಜಾಗರೂಕತೆ ವಹಿಸುವುದು ಅತ್ಯಾವಶ್ಯಕ. ಚಂದ್ರಗ್ರಹಣವಾದರೆ ನಮ್ಮ ದೃಷ್ಟಿ ಚಂದ್ರನತ್ತ ಇರುತ್ತದೆ. ಸೂರ್ಯಗ್ರಹಣವಾದರೆ ನೇರವಾಗಿ ಸೂರ್ಯನನ್ನು ನೋಡಬೇಕಾಗುತ್ತದೆ. ಹಾಗಾದರೆ, ಭಾಗಶಃ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸುವುದು ಹೇಗೆ? ಇದಕ್ಕೆ ಉತ್ತಮ ಗುಣಮಟ್ಟದ ದೂರದರ್ಶಕ ಸೌರ ಶೋಧಕವನ್ನು (Solar Filter) ಬಳಸಬೇಕು. ಅಥವಾ ಕಣ್ಣಿಗೆ ಸೌರ ಕನ್ನಡ ಧರಿಸಬೇಕು. ಇದರ ಸಹಾಯದಿಂದ ವೀಕ್ಷಿಸಿದರೆ, ಯಾವ ರೀತಿಯ ತೊಂದರೆಯೂ ಉಂಟಾಗುವುದಿಲ್ಲ.

ಮೈಸೂರು ವಿಜ್ಞಾನ ಪ್ರತಿಷ್ಠಾನವು ಗ್ರಹಣ ವೀಕ್ಷಣೆಗೆ ಎರಡು ಜಾಗಗಳನ್ನು ಗುರುತಿಸಿದೆ. ವಿರಾಜಪೇಟೆಯ ಕಟ್ಟಡದ ಒಂದು ದೊಡ್ಡ ಮೈದಾನದಲ್ಲಿ ಎರಡು ಸಾವಿರ ಮಕ್ಕಳಿಗೆ ವ್ಯವಸ್ಥೆ ಮಾಡಿದೆ. ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲೂ ಕೂಡ ಜನತೆಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಐದು ಸಾವಿರ ಸೌರ ಕನ್ನಡಕವನ್ನು ಮಕ್ಕಳಿಗೆ ವಿತರಿಸಲಿದೆ. ಕುಟ್ಟದಲ್ಲಿ ಸಂಪೂರ್ಣ ಕಂಕಣತೆ (Annularity) ಗೋಚರಿಸುತ್ತದೆ.

ಹೆಚ್ಚಿನ ಮಾಹಿತಿಗೆ ಸಂತೋಷ್ ಕುಮಾರ್‌, ಮೊಬೈಲ್‌ 81055 03863 ಮತ್ತು ಅವಿನಾಶ್‌, ಮೊಬೈಲ್‌ 97386 26104.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT