ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಯುವ ಪ್ಲಾಸ್ಟಿಕ್ ಶೋಧ

Published 26 ಡಿಸೆಂಬರ್ 2023, 23:30 IST
Last Updated 26 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಪರಿಸರ ಮಾಲಿನ್ಯಕ್ಕೆ ಅತಿ ದೊಡ್ಡ ಕೊಡುಗೆಯನ್ನು ನೀಡುತ್ತಿರುವುದು ಪ್ಲಾಸ್ಟಿಕ್‌. ಪ್ಲಾಸ್ಟಿಕ್ ನೂರಾರು ವರ್ಷಗಳಾದರೂ ಕೊಳೆಯದೇ ಮಣ್ಣಿನಲ್ಲೇ ಉಳಿಯುವ ಗುಣಲಕ್ಷಣವನ್ನು ಹೊಂದಿರುವುದು ಅತಿ ದೊಡ್ಡ ಶಾಪವೆಂದೇ ಪರಿಗಣಿಸಲಾಗಿದೆ. ಆದರೆ, ಇದೀಗ ಕೊಳೆಯಬಲ್ಲ ಪ್ಲಾಸ್ಟಿಕ್‌ನ ಶೋಧವಾಗಿದೆ. ಇದು ತನ್ನ ನಿಗದಿತ ಅವಧಿ ಮುಗಿದ ಬಳಿಕ ಬಹುಬೇಗ ಕೊಳೆಯುವ ಲಕ್ಷಣವನ್ನು ಹೊತ್ತು ಬಂದಿದೆ.

ಪ್ಲಾಸ್ಟಿಕ್‌ನ ಶೋಧವಾಗಿ ಬಹುತೇಕ 100 ವರ್ಷಗಳು ಮುಗಿದಿವೆ. ‌ಪ್ಲಾಸ್ಟಿಕ್‌ನ ಸಂಶೋಧನೆಯಾದಾಗ ಅದನ್ನು ಅತಿ ದೊಡ್ಡ ವಿಸ್ಮಯವೆಂದೇ ಕರೆಯಲಾಗಿತ್ತು. ಬಹುಕಾಲ ಬಾಳಿಕೆ ಬರುವ, ಮಣ್ಣಿನಲ್ಲಿ ಬಟ್ಟೆ ಅಥವಾ ಕಾಗದದ ಹಾಗೆ ಕರಗದ ಅಥವಾ ಕೊಳೆಯದ ಈ ವಸ್ತು ಅತಿ ಅಗ್ಗದ, ಜನಸಾಮಾನ್ಯರಿಗೆ ಅನುಕೂಲಕಾರಿಯಾದ ವಸ್ತುವೆಂದು ಗಣನೆಗೆ ಒಳಪಟ್ಟಿತ್ತು.

ನಿಗದಿತ ಪ್ಲಾಸ್ಟಿಕ್‌ ಸಾಂದ್ರತೆಯಿದ್ದರೆ ಮಾತ್ರ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡಬಹುದು. ಇಲ್ಲವಾದಲ್ಲಿ ಅದನ್ನು ತ್ಯಾಜ್ಯವಾಗಿ ಅನಿವಾರ್ಯವಾಗಿ ಬಿಸಾಡಲೇಬೇಕು. ಇದೇ ಕಾರಣಕ್ಕೆ ನಿಗದಿತ ಮೈಕ್ರಾನ್‌ಗಳಲ್ಲೇ ಪ್ಲಾಸ್ಟಿಕ್‌ ಚೀಲ ಇತ್ಯಾದಿ ವಸ್ತುಗಳನ್ನು ತಯಾರಿಸಬೇಕೆಂದು ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಕಟ್ಟುನಿಟ್ಟಿನ ಕಾನೂನು ತರಲಾಗಿದೆ.

ಕಾನೂನು ಇದ್ದರೂ ಅದನ್ನು ಜಾರಿ ಮಾಡುವುದು ಕಷ್ಟ. ಎಷ್ಟೇ ನಿಯಂತ್ರಣ ಹೇರಿದರೂ ಜನರು ಪ್ಲಾಸ್ಟಿಕ್‌ ಬಳಕೆಯನ್ನು ಬಿಡುತ್ತಿಲ್ಲ. ಈ ಇತಿಮಿತಿಗಳನ್ನು ಅರಿತುಕೊಂಡಿದ್ದ  ವಿಜ್ಞಾನಿಗಳು ಕೊಳೆಯಬಲ್ಲ ಪ್ಲಾಸ್ಟಿಕ್‌ನ ಶೋಧಕಾರ್ಯದಲ್ಲಿ ಬಹು ಕಾಲದಿಂದಲೂ ತೊಡಗಿಸಿಕೊಂಡಿದ್ದರು. ಇದೀಗ ಅಮೆರಿಕದ ‘ನಾರ್ತ್‌ವೆಸ್ಟರ್ನ್‌ ಯೂನಿವರ್ಸಿಟಿ’ಯ ವಿಜ್ಞಾನಿಗಳು ಕೊಳೆಯಬಲ್ಲ ಪ್ಲಾಸ್ಟಿಕ್‌ ಕಂಡುಹಿಡಿದಿದ್ದಾರೆ. ಈಗಾಗಲೇ ಅತಿ ಹೆಚ್ಚು ಬಳಕೆಯಲ್ಲಿರುವ ನೈಲಾನ್‌–6 ಪ್ಲಾಸ್ಟಿಕ್‌ ಅನ್ನು ಕೊಳೆಯುವಂತೆ ತಯಾರಿಸಿದ್ದಾರೆ.

ಸಾಮಾನ್ಯವಾಗಿ ದಿನಬಳಕೆಗೆ ಬಳಸುವ ಪ್ಲಾಸ್ಟಿಕ್‌ ಚೀಲಗಳು, ಬಟ್ಟೆಗಳು, ಕಾರ್ಪೆಟ್, ಪ್ಯಾಕೇಜ್‌ ಉದ್ಯಮದಲ್ಲಿ ಮತ್ತು ಮೀನುಗಾರಿಕೆಯಲ್ಲಿ ಬಳಸುವ ಬಲೆಗಳಲ್ಲಿ ಅತಿ ಮುಖ್ಯವಾಗಿ ನೈಲಾನ್‌–6 ಅನ್ನು ಬಳಸಲಾಗುತ್ತದೆ. ಭೂಮಿಯ ಮೇಲಿನ ಮಣ್ಣಿನ ಮಾಲಿನ್ಯದಲ್ಲಿ ಶೇ 90ರಷ್ಟು ಇದರಿಂದಲೇ ಉಂಟಾಗುತ್ತಿದೆ. ಅಲ್ಲದೇ, ನೀರು ಕೂಡ ಇದರಿಂದಲೇ ಮಲಿನವಾಗುತ್ತಿದೆ. ನದಿ ಹಾಗೂ ಸಮುದ್ರಗಳ ತಳದಲ್ಲಿ ಪ್ಲಾಸ್ಟಿಕ್‌ ಪದರಗಳು ಶೇಖರವಾಗಿದ್ದು, ಸರಿಪಡಿಸಲಾಗದಂತೆ ಈಗಾಗಲೇ ಹಾನಿಯಾಗಿದೆ. ಪ್ರತಿ ವರ್ಷ 1 ಮಿಲಿಯನ್ ಪೌಂಡ್ ನೈಲಾನ್‌ ಬಲೆ ಸಮುದ್ರದ ಪಾಲಾಗುತ್ತಿದೆ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ನೈಲಾನ್‌–6 ಅನ್ನು ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸಿದ್ದಾರೆ.

ಇಟ್ರಿಯಂ ಲೋಹ ಬಳಕೆ

ಭೂಮಿಯಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಲಭ್ಯವಿರುವ ‘ಇಟ್ರಿಯಂ’ ಎಂಬ ಲೋಹವನ್ನು ಪ್ಲಾಸ್ಟಿಕ್‌ ಉತ್ಪಾದನೆಗೆ ಬಳಸಿಕೊಳ್ಳುವುದೇ ಈ ಸಂಶೋಧನೆಯ ಸಾರಾಂಶ. ಈ ಲೋಹವನ್ನು ಪ್ಲಾಸ್ಟಿಕ್‌ ಉತ್ಪಾದನೆಯ ಸಮಯದಲ್ಲಿ ನಿಗದಿತ ಪ್ರಮಾಣದಲ್ಲಿ ಬೆರೆಸುವುದು. ಅಲ್ಲದೇ, ‘ಲ್ಯಾಂಥನಂ’ ಎಂಬ ಮತ್ತೊಂದು ಲೋಹವನ್ನು ಕಡಿಮೆ ಪ್ರಮಾಣದಲ್ಲಿ ಪ್ಲಾಸ್ಟಿಕ್‌ನೊಂದಿಗೆ ಬೆರೆಸುವುದು. ಇದರಿಂದ ಪ್ಲಾಸ್ಟಿಕ್‌ನ ಅಣುರಚನೆಯಲ್ಲಿ ದೊಡ್ಡ ಬದಲಾವಣೆಗಳಾಗುವುದನ್ನು ವಿಜ್ಞಾನಿಗಳಾದ ಟಾಬಿನ್ ಮಾರ್ಕ್ಸ್‌, ಲಿಂಡಾ ಜಿ. ಬ್ರಾಡ್‌ಬೆಲ್ಟ್‌ ಗುರುತಿಸಿದ್ದಾರೆ. ಇಟ್ರಿಯಂ ಬೆರೆಸಿದ ನೈಲಾನ್‌ – 6 ಗಟ್ಟಿಯಾಗಿಯೇ ಇರುತ್ತದೆ. ಆದರೆ, ಕೆಲವೇ ದಿನಗಳಲ್ಲಿ ಅದರ ಅಣುರಚನೆ ಶಿಥಿಲಗೊಳ್ಳುತ್ತದೆ.  ಅಂದರೆ, ಇಟ್ರಿಯಂ ಬೆರೆಸಿದ ನೈಲಾನ್‌ – 6 ಕೆಲವು ದಿನಗಳಲ್ಲಿ ಶಿಥಿಲಗೊಂಡು ಬಳಕೆಗೆ ಅನರ್ಹಗೊಳ್ಳುತ್ತದೆ. ಬಳಿಕ ಅದನ್ನು ಬಿಸಾಡಬೇಕು. ಬಿಸಾಡಿದ ಬಳಿಕ ಅದು ಸಂಪೂರ್ಣ ಶಿಥಿಲಗೊಂಡು ಕೊಳೆತು ಹೋಗುತ್ತದೆ. ಹಾಗಾಗಿ, ಅದು ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ. ‘ಈ ಹೊಸ ಬಗೆಯ ಪ್ಲಾಸ್ಟಿಕ್‌ ತಯಾರಿಯ ವೆಚ್ಚ ದುಬಾರಿಯೇನೂ ಅಲ್ಲ. ಹಾಗಾಗಿ, ಜನಸಾಮಾನ್ಯರಿಗೆ ಈ ಪ್ಲಾಸ್ಟಿಕ್‌ ಕೈಗೆಟುಕುವ ದರಕ್ಕೆ ದೊರಕುತ್ತದೆ’ ಎಂದು ಟಾಬಿನ್ ಹೇಳಿದ್ದಾರೆ.

ಬೇಕಿದೆ ಮತ್ತಷ್ಟು ಸಂಶೋಧನೆ

ಇದು ಅತಿ ಪ್ರಮುಖ ಸಂಶೋಧನೆಯಾದರೂ ಮತ್ತಷ್ಟು ಸಂಶೋಧನೆ ಬೇಕಾಗಿದೆ. ಈ ಹೊಸ ಸಂಶೋಧನೆಯ ಬಳಿಕವೂ ಪ್ಲಾಸ್ಟಿಕ್‌ ಅನ್ನು ಸುಡುವುದು ಸಾಧ್ಯವಾಗುವುದಿಲ್ಲ. ಪ್ಲಾಸ್ಟಿಕ್‌ ಅನ್ನು ಸುಟ್ಟರೆ ಅತಿ ಅಪಾಯಕಾರಿ ರಾಸಾಯನಿಕಗಳು ಪರಿಸರವನ್ನು ಸೇರುತ್ತವೆ. ಅಲ್ಲದೇ, ಸಾಂಪ್ರದಾಯಿಕ ನೈಲಾನ್ – 6ಗೆ ಈಗ ಮತ್ತೆರಡು ಹೊಸ ಲೋಹದ ಧಾತುಗಳನ್ನು ಸೇರಿಸುತ್ತಿರುವುದರಿಂದ ಪ್ಲಾಸ್ಟಿಕ್‌ ಅನ್ನು ಸುಟ್ಟರೆ ಮತ್ತಷ್ಟು ಅಪಾಯಕಾರಿ ರಾಸಾಯನಿಕಗಳು ಗಾಳಿಯನ್ನು ಸೇರುತ್ತವೆ. ಆದ್ದರಿಂದ ನಮ್ಮ ಸಂಶೋಧನೆಯನ್ನು ಮುಂದಿನ ಪೀಳಿಗೆಯ ವಿಜ್ಞಾನಿಗಳು ಮುಂದುವರಿಸಬೇಕು. ಹೊಸ ವಿಧಾನಗಳನ್ನು ಕಂಡುಹಿಡಿಯಬೇಕು ಎಂದು ಟಾಬಿನ್ ಹಾಗೂ ಲಿಂಡಾ ಕಿವಿಮಾತು ಹೇಳಿದ್ದಾರೆ.

ಈ ಹೊಸ ವಿಧಾನದ ಮೂಲಕ ಪ್ಲಾಸ್ಟಿಕ್‌ ತಯಾರಿಸಲು ಸಿದ್ಧತೆ ಖಂಡಿತವಾಗಿಯೂ ಬೇಕಾಗುತ್ತದೆ. ಅಲ್ಲದೇ, ಸರ್ಕಾರಗಳ ಮಟ್ಟದಲ್ಲಿ ನೀತಿ, ನಿಯಮಗಳನ್ನು ರೂಪಿಸಬೇಕಾಗುತ್ತದೆ. ಈಗಾಗಲೇ ಜಾರಿಯಲ್ಲಿರುವ ಪ್ಲಾಸ್ಟಿಕ್ ಉತ್ಪಾದನಾ ವಿಧಾನಗಳಿಗೆ ತಿದ್ದುಪಡಿ ತಂದು ಹೊಸ ವಿಧಾನ ಅಳವಡಿಸಿಕೊಳ್ಳುವಂತೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಸರ್ಕಾರ ನೀಡಬೇಕು. ಮಾರ್ಗಸೂಚಿಗಳನ್ನು ತಯಾರಿಸಬೇಕು.

ಇಟ್ರಿಯಂ ಹಾಗೂ ಲ್ಯಾಂಥನಂ ಲೋಹಗಳ ಗಣಿಗಾರಿಕೆ ಹಾಗೂ ಸಂಸ್ಕರಣೆಯನ್ನು ಹೆಚ್ಚಿಸಿ, ಪ್ಲಾಸ್ಟಿಕ್‌ ಉತ್ಪಾದನೆಗೆ ಬೇಕಾಗುವಂತೆ ವಿಧಾನಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯವೂ ಎದುರಾಗಲಿದೆ. ಇವೆಲ್ಲವನ್ನೂ ಜಾರಿಗೆ ತಂದಲ್ಲಿ ಪರಿಸರ ಮಾಲಿನ್ಯವನ್ನು ನಿಯಂತ್ರಣಕ್ಕೆ ತರಬಹುದು. ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲದೇ ಇದ್ದರೂ  ಭವಿಷ್ಯದಲ್ಲಿ ಆಗಬಹುದಾದ ಹಾನಿಯನ್ನು ತಡೆಯುವುದು ಇದರಿಂದ ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT