ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗರಿಗೆದರಿದ ಬಾಹ್ಯಾಕಾಶ ಯಾನ

11 ತಿಂಗಳ ಬಳಿಕ ಇದೇ 7ರಂದು ಉಪಗ್ರಹ ಉಡಾವಣೆಗೆ ಇಸ್ರೊ ಸಜ್ಜು
Last Updated 2 ನವೆಂಬರ್ 2020, 17:35 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ ಬಳಿಕ ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಯಾನಗಳನ್ನು ನಿಲ್ಲಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪುನಃ ಈ ಚಟುವಟಿಕೆಗೆ ಚಾಲನೆ ನೀಡಿದೆ.

ಸುಮಾರು 11 ತಿಂಗಳ ಬಳಿಕ ಇದೇ 7 ರಂದು ಪಿಎಸ್ಎಲ್‌ವಿ ಮೂಲಕ ಇಒಎಸ್‌–01 ಮತ್ತು ಒಂಬತ್ತು ವಿದೇಶಿ ಉಪಗ್ರಹಗಳ ಉಡಾವಣೆಗೆ ಇಸ್ರೊ ಸಿದ್ಧತೆ ನಡೆಸಿಕೊಂಡಿದೆ. 2019ರ ಡಿಸೆಂಬರ್‌ 11 ರಂದು ಇಸ್ರೊ ನಡೆಸಿದ ಉಪಗ್ರಹ ಉಡಾವಣೆಯೇ ಕೊನೆಯ ಉಡಾವಣೆ ಆಗಿತ್ತು. ಆ ಬಳಿಕ ಮಾರ್ಚ್‌ನಲ್ಲಿ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿತ್ತು. ಆ ವೇಳೆಗಾಗಲೇ ಕೋವಿಡ್‌ ವ್ಯಾಪಿಸಿದ್ದರಿಂದ ಉಡಾವಣೆ ಮುಂದೂಡಲಾಯಿತು.

ಕೋವಿಡ್‌ನಿಂದಾಗಿ ಈ ಸಾಲಿನಲ್ಲಿ ವಿವಿಧ ಬಗೆಯ ಒಟ್ಟು 20 ಉಡಾವಣೆಗಳಿಗೆ ಅಡ್ಡಿಯಾಗಿದೆ. ಇವುಗಳಲ್ಲಿ ಭಾರತದ್ದೂ ಅಲ್ಲದೇ ಹಲವು ವಿದೇಶಿ ಉಪಗ್ರಹಗಳೂ ಒಳಗೊಂಡಿದ್ದವು. ಇದರ ಪರಿಣಾಮ ಇಸ್ರೊಗೆ ಆದಾಯದಲ್ಲೂ ಖೋತಾ ಆಗಿದೆ. 2018-19 ರಲ್ಲಿ ವಿದೇಶಿ ಉಪಗ್ರಹಗಳ ಉಡಾವಣೆ ಮೂಲಕ ₹324.19 ಕೋಟಿ ಆದಾಯವನ್ನು ಗಳಿಸಿತ್ತು. 2017–18 ರ ಸಾಲಿನ ಆದಾಯಕ್ಕಿಂತ ಶೇ 40 ರಷ್ಟು ಏರಿಕೆ ಕಂಡಿತ್ತು. ಆದರೆ, ಈ ವರ್ಷ ಆದಾಯ ಬಹುಪಾಲು ಕುಸಿತವಾಗಿದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.

‘ಉಪಗ್ರಹ ಉಡಾವಣೆಗಳನ್ನು ನಿಲ್ಲಿಸಿದ ಕಾರಣ ಆರ್ಥಿಕ ನಷ್ಟ ಆಗಿದೆ. ಆ ಪ್ರಮಾಣ ಎಷ್ಟು ಎಂಬುದನ್ನು ಈಗಲೇ ಹೇಳಲು ಆಗದು. ಅದರ ಅಂದಾಜು ನಡೆಸಲಾಗುತ್ತಿದೆ’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಹೇಳಿದ್ದಾರೆ.

ಇದೇ 7 ರಂದು ಉಡಾವಣೆಯಾಗುವ ಭೂವೀಕ್ಷಣಾ ಉಪಗ್ರಹ 01 (ಇಒಎಸ್‌) ಕೃಷಿ, ಅರಣ್ಯ ಮತ್ತು ಪ್ರಾಕೃತಿಕ ವಿಕೋ‍ಪ ನಿರ್ವಹಣೆಯ ಉದ್ದೇಶಕ್ಕೆ ನೆರವಾಗಲಿದೆ. ಅಂದು ಮಧ್ಯಾಹ್ನ 3.02 ಕ್ಕೆ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೆ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಪಿಎಸ್‌ಎಲ್‌ವಿಯ 51ನೇ ಉಡಾವಣೆ ಇದಾಗಿದೆ. ಹೊಸದಾಗಿ ರಚಿತವಾಗಿರುವ ‘ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌’ (ಎನ್‌ಎಸ್‌ಐಎಲ್‌) ಮೂಲಕ ವಾಣಿಜ್ಯ ಉದ್ದೇಶದ ವಿದೇಶಿ ಉಪಗ್ರಹ ಉಡಾವಣೆ ನಡೆಯಲಿದೆ.

ಉಡಾವಣೆಯ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಉಡಾವಣೆ ವೀಕ್ಷಣೆಗೆ ಅವಕಾಶ ಇಲ್ಲ. ವೀಕ್ಷಕರ ಗ್ಯಾಲರಿಯನ್ನು ಮುಚ್ಚಲಾಗುವುದು. ಆದರೆ, ಆಸಕ್ತರ ವೀಕ್ಷಣೆಗಾಗಿ ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಮೂಲಕ ನೇರ ಪ್ರಸಾರ ಇರುತ್ತದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT