ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗಿಳಿದ ಚೀನಾದ ಗಗನ ಯಾತ್ರಿಗಳು

Last Updated 17 ಸೆಪ್ಟೆಂಬರ್ 2021, 7:02 IST
ಅಕ್ಷರ ಗಾತ್ರ

ಬೀಜಿಂಗ್‌: ಬಾಹ್ಯಾಕಾಶ ನಿಲ್ದಾಣ ನಿರ್ಮಾಣ, ದುರಸ್ತಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಮೂರು ತಿಂಗಳ ಹಿಂದೆ ಬಾಹ್ಯಾಕಾಶಕ್ಕೆ ತೆರಳಿದ್ದ ಚೀನಾದ ಮೂವರು ಗಗನಾಯತ್ರಿಗಳು ಶುಕ್ರವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

90 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿದ್ದ ನೀ ಹೈಶೆಂಗ್‌, ಲಿಯು ಬೊಮಿಂಗ್‌ ಮತ್ತು ಟ್ಯಾಂಗ್‌ ಹಾಂಗೊ ಗಗನಯಾತ್ರಿಗಳು ಶೆನ್‌ಶಾವ್‌–12 ಗಗನ ನೌಕೆ ಮೂಲಕ ಶುಕ್ರವಾರ ಬೆಳಗ್ಗಿನ ಜಾವ 1.30ಕ್ಕೆ (0530ಜಿಎಂಟಿ) ಇಲ್ಲಿನ ಗೊಬಿ ಮರುಭೂಮಿಯಲ್ಲಿ ಬಂದಿಳಿದರು.

ಚೀನಾದ ಬಾಹ್ಯಾಕಾಶ ನಿಲ್ದಾಣದಿಂದ ಗುರುವಾರ ಬೆಳಿಗ್ಗೆ 8.56ಕ್ಕೆ (0056 ಜಿಎಂಟಿ)ಕ್ಕೆ ಭೂಮಿಯತ್ತ ಪ್ರಯಾಣ ಆರಂಭಿಸಿದ್ದರು.

‘ಪ್ಯಾರಾಚೂಟ್‌ ಮೂಲಕ ಶೆನ್‌ಶಾವ್‌–12 ಗಗನ ನೌಕೆ ಗೊಬಿ ಮರುಭೂಮಿಯಲ್ಲಿ ಇಳಿಯಿತು. ಕೆಲವು ನಿಮಿಷಗಳ ನಂತರ ತಂತ್ರಜ್ಞರು ನೌಕೆಯ ಹ್ಯಾಚ್‌ ಅನ್ನು ತೆರೆಯಲು ಆರಂಭಿಸಿದರು.

ಜೂನ್ 17ರಂದು ಶೆನ್‌ಶಾವ್‌–12 ಗಗನ ನೌಕೆ ಮೂಲಕ ಮೂವರು ಗಗನ ಯಾತ್ರಿಗಳು ಬಾಹ್ಯಕಾಶ ನಿಲ್ದಾಣ ತಲುಪಿದ ಮೇಲೆ, ಯಾಂತ್ರಿಕ (ಮೆಕಾನಿಕಲ್ ಆರಮ್‌) ನೆರವಿನೊಂದಿಗೆ ಎರಡು ಬಾರಿ 10 ಮೀಟರ್‌ನಷ್ಟು ಬಾಹ್ಯಾಕಾಶ ನಡಿಗೆ ಕೈಗೊಂಡರು. ಈ ವೇಳೆ ಚೀನಾದ ಅಧ್ಯಕ್ಷ ಷಿ-ಜಿನ್‌ಪಿಂಗ್ ಅವರು ಗಗನ ಯಾತ್ರಿಗಳಿಗೆ ವೀಡಿಯೊ ಕರೆ ಮಾಡಿದ್ದರು.

ಈ ಯಶಸ್ವಿ ಗಗನಯಾನದಿಂದ ಉತ್ತೇಜನ ಗೊಂಡಿರುವ ಚೀನಾ, ಮುಂದಿನ ದಿನಗಳಲ್ಲಿ ಶೆನ್‌ಶಾವ್‌–13 ಮಿಷನ್‌ ಯೋಜನೆ ಆರಂಭಿಸುವುದಾಗಿ ತಿಳಿದುಬಂದಿದೆ. ಆದರೆ, ಆ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಲಿರುವ ಗಗನ ಯಾತ್ರಿಗಳ ಹೆಸರು ಹಾಗೂ ಯೋಜನೆ ಆರಂಭವಾಗುವ ದಿನಾಂಕವನ್ನು ಅದು ಇನ್ನೂ ಪ್ರಕಟಿಸಿಲ್ಲ.

ಅಂದ ಹಾಗೆ, ಚೀನಾ 2003ರಿಂದ ಇಲ್ಲಿವರೆಗೆ 14 ಗಗನ ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಈ ಮೂಲಕ ಹೆಚ್ಚು ಗಗನ ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿರುವ ಸೋವಿಯತ್ ಒಕ್ಕೂಟ ಮತ್ತು ಅಮೆರಿಕದ ನಂತರದ ಮೂರನೇ ರಾಷ್ಟ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT