ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನುನೋವಿನ ಅಳತೆಗೊಂದು ಮಾಪಕ

Published 20 ಮಾರ್ಚ್ 2024, 0:30 IST
Last Updated 20 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ದೂರದರ್ಶನಗಳಲ್ಲಿ ಬೆನ್ನುನೋವಿನ ಉಪಶಮನಕ್ಕಾಗಿ ಹಲವಾರು ಮುಲಾಮು, ಸ್ಪ್ರೇ, ಅಥವಾ ಪುಡಿಗಳ ಜಾಹಿರಾತನ್ನು ನೀವೆಲ್ಲಾ ನೋಡಿರುತ್ತೀರಿ. ಮೂವತ್ತರ ದಶಕವನ್ನು ತಲುಪುತ್ತಿದ್ದಂತೆಯೇ ಅಥವಾ ಹೆಂಗಸರಾದರೆ ಮಕ್ಕಳಾಗುತ್ತಿದ್ದಂತೆಯೇ ಬೆನ್ನುನೋವು, ಸೊಂಟನೋವು ಸರ್ವೇಸಾಮಾನ್ಯ ಈಗ. ಈ ನೋವಿನ ಉಪಶಮನಕ್ಕೆಂದೇ ಜಾಹಿರಾತುಗಳಲ್ಲಿ ಪ್ರದರ್ಶಿಸುವ ಎಲ್ಲ ಉತ್ಪನ್ನಗಳನ್ನೂ ಪ್ರಯೋಗ ಮಾಡಿರುತ್ತೇವೆನ್ನಿ. ಕೊನೆಯಲ್ಲಿ ನೋವು ವಾಸಿಯಾಗದೆ ವೈದ್ಯರ ಬಳಿಗೆ ಹೋಗಿ ಹೊಸ ಪರಿಹಾರವನ್ನು ಹುಡುಕಿಕೊಳ್ಳಲೆತ್ನಿಸುತ್ತೇವೆ. ಆದರೆ ಅಷ್ಟರಲ್ಲಾಗಲೇ ಅದು ದೀರ್ಘಕಾಲದ (ಕ್ರೋನಿಕ್) ನೋವಾಗಿ ಪರಿಣಮಿಸಿಬಿಟ್ಟಿದ್ದರೆ ಅಥವಾ ಬೆನ್ನುಮೂಳೆಯು ದುರ್ಬಲವಾಗಿ ಏನಾದರೂ ತೊಂದರೆಯಾಗಿದ್ದರಂತೂ ವೈದ್ಯರು ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಾಗುತ್ತದೆ. ಇಲ್ಲಿ ಇತರೆ ಔಷಧಗಳನ್ನು ಬಳಸಿದಾಗ ನೋವು ಹೇಗೆ ಗುಣಮುಖವಾಗುತ್ತಿದೆ ಎನ್ನುವುದನ್ನು ರೋಗಿಯು ಸ್ವತಃ ತಾನೇ ವಿವರಿಸುತ್ತಾನೆ. ಆಗ ವೈದ್ಯರಿಗೆ ತಾವು ನೀಡಿರುವ ಔಷಧಗಳು ಹೇಗೆ ಕೆಲಸ ಮಾಡುತ್ತಿವೆ ಎಂದು ಸುಲಭವಾಗಿ ತಿಳಿಯುತ್ತದೆ. ಆದರೆ ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗ ರೋಗಿಯು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಇದನ್ನು ತಿಳಿಯುವುದು ಕಷ್ಟವಾಗಿತ್ತು. ಆದರೆ ಈಗ ನೋವು ಗುಣಮುಖವಾಗುತ್ತಿರುವುದನ್ನು ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗ ವೈದ್ಯರೇ ನೋಡಬಹುದಂತೆ! ಹೀಗೆಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆದ ವೆಸಿಲಿಯೋಸ್ ಕ್ರಿಸ್ಟೋಪೌಲೊಸ್ ನ್ಯೂರಾನ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಕ್ರಿಸ್ಟೋಪೌಲೊಸ್ ಅಭಿವೃದ್ದಿಪಡಿಸಿರುವ ಈ ತಂತ್ರಜ್ಞಾನವೇ ಫಂಕ್ಷನಲ್ ಅಲ್ಟ್ರಾಸೌಂಡ್ ಇಮೇಜಿಂಗ್ (ಎಫ್. ಯು. ಎಸ್. ಐ.) ಅಥವಾ ಕಾರ್ಯರೂಪಿ ಶ್ರವಣಾತೀತಧ್ವನಿ ಚಿತ್ರಣ. ಅರ್ಥಾತ್, ಶ್ರವಣಾತೀತ ಧ್ವನಿಯನ್ನು ಬಳಸಿಕೊಂಡು ದೇಹದೊಳಗಿನ ಅಂಗಗಳ ಚಿತ್ರಣವನ್ನು ಕ್ಲಿಕ್ಕಿಸುವುದು. ಈ ತಂತ್ರಜ್ಞಾನದಿಂದ ಮನುಷ್ಯನ ಬೆನ್ನುಹುರಿಯ ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಸ್ಪಷ್ಟವಾಗಿ ಬೆನ್ನುಹುರಿಯನ್ನು ನೋಡಬಹುದು ಹಾಗೂ ಅದರ ಉತ್ತಮ ಗುಣಮಟ್ಟದ (ಹೈ ರೆಸೊಲ್ಯೂಶನ್) ಚಿತ್ರಗಳನ್ನು ತೆಗೆಯಬಹುದಂತೆ. ಅಷ್ಟೇ ಅಲ್ಲದೆ, ವೈದ್ಯರು ನೀಡುವ ವಿವಿಧ ಚಿಕಿತ್ಸೆಗಳಿಗೆ ಬೆನ್ನುಹುರಿಯು ಹೇಗೆ ಸ್ಪಂದಿಸುತ್ತದೆ ಎಂಬುದರ ನಕ್ಷೆಯನ್ನೂ ದಾಖಲಿಸಬಹುದಂತೆ.

ಇದನ್ನು ಪರೀಕ್ಷಿಸಲು ಇವರು ಒಂದು ಆಸ್ಪತ್ರೆಯಲ್ಲಿ ದೀರ್ಘಕಾಲದ ಬೆನ್ನುನೋವಿನಿಂದ ಬಳಲುತ್ತಿದ್ದ ಆರು ರೋಗಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಔಷಧಗಳನ್ನು ಸೇವಿಸಿಯೂ ಗುಣಮುಖರಾಗದೇ ಕೊನೆಯಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ದರಾಗಿದ್ದರಿವರು. ಈ ರೀತಿಯ ಶಸ್ತ್ರಚಿಕಿತ್ಸೆಯಲ್ಲಿ ಮೊದಲಿಗೆ ವೈದ್ಯರು ರೋಗಿಯ ಬೆನ್ನುಹುರಿಗೆ ಎಲೆಕ್ಟ್ರೋಡುಗಳಿಂದ ಪ್ರಚೋದನೆ ನೀಡುತ್ತಾರೆ. ವಿದ್ಯುತ್ ವೋಲ್ಟೇಜ್‌ ರೋಗಿಯ ನೋವನ್ನು ತಗ್ಗಿಸಬಲ್ಲುದು ಎಂಬುದು ಇವರ ಅಂದಾಜು. ಆಕಸ್ಮಿಕವಾಗಿ ನಮ್ಮ ತಲೆಗೆ ಜೋರಾಗಿ ಗೋಡೆ ಅಥವಾ ಇನ್ನಾವುದರಿಂದಲೋ ಪೆಟ್ಟು ಬಿದ್ದಾಗ ನಾವು ಕೈನಿಂದ ಚೆನ್ನಾಗಿ ಉಜ್ಜಿಕೊಳ್ಳುತ್ತೇವೆ. ಆಗ ನರಗಳು ಮಿದುಳಿಗೆ ನೋವು ಕಡಿಮೆಗೊಳಿಸಲು ಸಂದೇಶ ನೀಡುತ್ತದೆಯಲ್ಲವೇ? ಅಂತೆಯೇ ಈ ಶಸ್ತ್ರಚಿಕಿತ್ಸೆಯು ಕೆಲಸ ಮಾಡುತ್ತದೆ ಎನ್ನುವುದು ವಿಜ್ಞಾನಿಗಳ ಅಂದಾಜು. ಹೀಗೆ ಬೆನ್ನುಹುರಿಯ ಚಟುವಟಿಕೆಗಳನ್ನು ಸ್ಪಷ್ಟವಾಗಿ ನೋಡುವ ತಂತ್ರವೊಂದು ಬೇಕಿತ್ತು. ಅದುವೇ ಎಫ್. ಯು. ಎಸ್. ಐ.

ಎಫ್. ಯು. ಎಸ್. ಐ. ಸ್ಕ್ಯಾನರ್ ಯಾವುದೇ ವ್ಯವಸ್ಥೆಯೊಳಗೂ ಸುಲಭವಾಗಿ ಚಲಿಸಬಲ್ಲದು ಹಾಗೂ ಇದಕ್ಕೆ ‘ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್’ (ಎಫ್. ಎಂ. ಆರ್. ಐ.) ತಂತ್ರಜ್ಞಾನಗಳಿಗೆ ಬೇಕಾದಂತಹ ಪ್ರತ್ಯೇಕವಾದ ಮೂಲಭೂತ ಸೌಕರ್ಯಗಳ ಅವಶ್ಯಕತೆಗಳೂ ಇಲ್ಲವಂತೆ. ನರಗಳ ಚಟುವಟಿಕೆಗಳನ್ನು ದಾಖಲಿಸುವಲ್ಲಿ ಇದು ಎಫ್. ಎಂ. ಆರ್. ಐ.ಗಿಂತಲೂ ಹೆಚ್ಚಿನ ಸೂಕ್ಷ್ಮತೆಯುಳ್ಳ ತಂತ್ರವಂತೆ.

ಚಿಕಿತ್ಸೆ ನಡೆಯುತ್ತಿರುವಾಗ ರೋಗಿಗಳಿಗೆ ಅರೆವಳಿಕೆಗಳನ್ನು ನೀಡಿ ನಿದ್ರಾವಸ್ಥೆಯಲ್ಲಿರಿಸುವುದರಿಂದ ಅವರು ನೋವಿನ ಮಟ್ಟ ಎಷ್ಟಿದೆ? ಅಥವಾ ಕಡಿಮೆಯಾಗುತ್ತಿದೆಯೇ? – ಹೀಗೆಂದು ಹೇಳುವ ಸ್ಥಿತಿಯಲ್ಲಿರುವುದಿಲ್ಲ. ಹಾಗಾಗಿ ಚಿಕಿತ್ಸೆ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ಪತ್ತೆ ಮಾಡುವುದು ಕಷ್ಟವಾಗಿತ್ತಂತೆ. ಆದರೆ ಎಫ್. ಯು. ಎಸ್. ಐ. ತಂತ್ರಜ್ಞಾನದಲ್ಲಿ ವಿದ್ಯುತ್ತಿನಿಂದ ಪ್ರಚೋದಿಸುತ್ತಾ ಬೆನ್ನುಹುರಿಯಲ್ಲಿ ರಕ್ತಪರಿಚಲನೆ ಹಾಗೂ ಅದರಲ್ಲಾಗುವ ಬದಲಾವಣೆಯನ್ನು ಗಮನಿಸಬಹುದಂತೆ. ಇದು ಚಿಕಿತ್ಸೆಯು ಕೆಲಸ ಮಾಡುತ್ತಿದೆ ಎಂದು ಸೂಚಿಸುತ್ತದೆ ಎನ್ನುತ್ತಾರೆ, ಕ್ರಿಸ್ಟೋಪೌಲೊಸ್.

ಬೆನ್ನುಹುರಿಯು ನಮ್ಮ ದೇಹದ ಸೂಕ್ಷ್ಮ ಭಾಗ. ಅದು ಉಸಿರಾಟ ಮತ್ತು ಹೃದಯ ಬಡಿತದಂತಹ ಸೂಕ್ಷ್ಮಕಾರ್ಯಗಳೊಂದಿಗೆ ಬೆಸೆದುಕೊಂಡಿರುವುದರಿಂದ ಅದರ ಚಿತ್ರಣವನ್ನು ತೆಗೆಯಲು ಎಫ್. ಎಂ. ಆರ್. ಐ.ನಂತಹ ಹಳೆಯ ಮಾದರಿ ತಂತ್ರಜ್ಞಾನಗಳು ಸೂಕ್ತವಲ್ಲ. ಏಕೆಂದರೆ, ಉಸಿರಾಟ ಮತ್ತು ಹೃದಯ ಬಡಿತದಂತಹ ಸಣ್ಣ ಚಲನೆ ಹಾಗೂ ಶಬ್ದಗಳು ಈ ಚಿತ್ರಣವನ್ನು ದಾಖಲಿಸುವಾಗ ಅನವಶ್ಯಕ ಅಡಚಣೆಯನ್ನುಂಟು ಮಾಡುತ್ತವಂತೆ. ಆದರೆ ಎಫ್. ಯು. ಎಸ್. ಐ. ಇಂತಹ ಅಡಚಣೆಗಳನ್ನು ಗುರುತಿಸುವುದೇ ಇಲ್ಲವಂತೆ. ಈ ತಂತ್ರಜ್ಞಾನವು ಕೇವಲ ನಮ್ಮ ಉದ್ದೇಶಿತ ಭಾಗದ ಮೇಲೆ ಶಬ್ದದ ಅಲೆಗಳನ್ನು ಹೊರಡಿಸುತ್ತವಷ್ಟೇ. ಆಗ ಅಲ್ಲಿರುವ ಕೆಂಪುರಕ್ತಕಣಗಳು ಆ ಶಬ್ದವನ್ನು ಪ್ರತಿಧ್ವನಿಸುತ್ತವೆ. ಸ್ಪಷ್ಟವಾದ ಚಿತ್ರವನ್ನೂ ನೀಡುತ್ತವೆ. ಜಲಾಂತರ್ಗಾಮಿ ಸೋನಾರಿನ ಹಾಗೆ! ಅದು ನೀರಿನಾಳದಲ್ಲಿರುವ ವಸ್ತುಗಳನ್ನು ಶಬ್ದವನ್ನು ಬಳಸಿಕೊಂಡೇ ಹುಡುಕಿ ಪತ್ತೆ ಹಚ್ಚುತ್ತದೆಯಲ್ಲಾ ಹಾಗೆ.

ನಮ್ಮ ಅಪಧಮನಿಗಳು ದೊಡ್ಡದಾಗಿವೆ. ಆದರೆ ಲೋಮನಾಳಗಳು ಸಣ್ಣವು. ಇವು ನಮ್ಮ ಮೆದುಳು ಹಾಗೂ ಬೆನ್ನುಹುರಿಯಲ್ಲಿ ಹರಡಿಕೊಂಡಿವೆ. ಇಂತಹ ಸೂಕ್ಷ್ಮ ಅಂಗಗಳಲ್ಲಿ ಇತರೆ ತಂತ್ರಜ್ಞಾನಗಳಿಂದ ರಕ್ತಪರಿಚಲನೆಯಲ್ಲಾಗುವ ಬದಲಾವಣೆಯನ್ನು ನೋಡುವುದು ಸಾಧ್ಯವಿರಲಿಲ್ಲ. ಮಾತ್ರವಲ್ಲದೆ, ವಿದ್ಯುತ್ತಿನಿಂದ ಬೆನ್ನುಹುರಿಗೆ ಹೊಡೆಸಿದಾಗ ಎಷ್ಟು ವೇಗವಾಗಿ ರಕ್ತ ಹರಿಯುತ್ತಿದೆ? ಎಷ್ಟು ಬಲವಾಗಿ ಹರಿಯುತ್ತಿದೆ? ಮರಳಿ ಅದೇ ಸ್ಥಿತಿಗೆ ಬರಲು ಎಷ್ಟು ಸಮಯ ಬೇಕಾಗುತ್ತದೆ? ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗಿದ್ದವು. ಆದರೆ ಎಫ್. ಯು. ಎಸ್. ಐ. ತಂತ್ರಜ್ಞಾನದಿಂದ ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆಯಂತೆ.

ಈ ಸಂಶೋಧನೆಯನ್ನು ಇನ್ನಷ್ಟು ಮುಂದುವರೆಸಿ, ಈ ತಂತ್ರಜ್ಞಾನದ ಸಫಲತೆಯನ್ನು ಪ್ರತಿಶತ ನೂರರಷ್ಟು ಸಾಧ್ಯ ಮಾಡುವುದು ವಿಜ್ಞಾನಿಗಳ ಉದ್ದೇಶ. ಮತ್ತು ಬೆನ್ನುಹುರಿಯ ದೌರ್ಬಲ್ಯದಿಂದಾಗಿ ಮೂತ್ರಕೋಶದ ಮೇಲೆ ನಿಯಂತ್ರಣ ತಪ್ಪಿಹೋಗಿರುವ ರೋಗಿಗಳ ಚಿಕಿತ್ಸೆಯನ್ನು ಇನ್ನಷ್ಟು ಸುಧಾರಿಸಲೂ ಎಫ್. ಯು. ಎಸ್. ಐ. ತಂತ್ರಜ್ಞಾನವು ಅನುಕೂಲಿಯಾಗಬಲ್ಲದು ಎನ್ನುತ್ತಾರೆ, ಕ್ರಿಸ್ಟೋಪೌಲೊಸ್. ಹೀಗೆ ನರವಿಜ್ಞಾನ ಹಾಗೂ ತಂತ್ರಜ್ಞಾನದ ಈ ಬೆಳವಣಿಗೆಗಳು ದೀರ್ಘಕಾಲದ ಬೆನ್ನುನೋವಿನಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಪರಿಹಾರವಾಗುವುದನ್ನು ಎದುರು ನೋಡೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT