ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಪಿಇ ಕಿಟ್‌ ವಿಲೇವಾರಿಗೆ ದೇಸಿ ಯಂತ್ರ

Last Updated 23 ಜುಲೈ 2020, 19:45 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ವೈದ್ಯಕೀಯ ಸಿಬ್ಬಂದಿ ಮತ್ತು ವಾರಿಯರ್ಸ್‌ ಧರಿಸುವ ಪಿಪಿಇ ಕಿಟ್ ಮತ್ತು ಇತರ ವೈದ್ಯಕೀಯ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಸವಾಲಿನ ಕೆಲಸ. ಸ್ವಲ್ಪ ಮೈಮರೆತರೂ ಸಾಂಕ್ರಾಮಿಕ ರೋಗ ಹರಡುವ ಅಪಾಯ ಇರುತ್ತದೆ.

ಈ ಸಮಸ್ಯೆಗೆ ದಾವಣಗೆರೆಯಈಶ್ವರ್‌ ರೇಡಿಯೊ ಅಂಗಡಿಯ ಎ.ಪಿ. ದಿವಾಕರ್ ಅವರು ಸ್ಥಳೀಯವಾಗಿ ಪರಿಹಾರ ರೂಪಿಸಿದ್ದಾರೆ. ವೈದ್ಯಕೀಯ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಸುಡಲು ದೇಸಿ ಯಂತ್ರವೊಂದನ್ನು (ಇನ್ಸಿನೇರೇಟರ್‌) ಅಭಿವೃದ್ಧಿಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಈಗಾಗಲೇ ಇಂಥ ಯಂತ್ರಗಳು ಲಭ್ಯವಿವೆ. ಆದರೆ, ಅದಕ್ಕಿಂತ ಇದು ವಿಭಿನ್ನ ಎನ್ನುವುದು ದಿವಾಕರ್ ಅವರ ಅಭಿಪ್ರಾಯ. ‘ಇದು ಕಡಿಮೆ ವಿದ್ಯುತ್‌ ಬೇಡುವ ಯಂತ್ರ. ಪರಿಸರಸ್ನೇಹಿ ಜತೆಗೆ, ಅಗ್ಗದ ಬೆಲೆಯಲ್ಲಿ ಸಿಗುತ್ತದೆ. ಗಾತ್ರದಲ್ಲಿ ಚಿಕ್ಕದಾಗಿರುವ ಕಾರಣ ಹೆಚ್ಚು ಜಾಗ ಬೇಕಾಗುವುದಿಲ್ಲ. ಯಂತ್ರಕ್ಕೆ ಸೆರಾಮಿಕ್‌ ಇನ್ಸುಲೇಷನ್ ಮಾಡುವ ಮೂಲಕ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ’ ಎಂದು ಯಂತ್ರದ ವೈಶಿಷ್ಟ್ಯಗಳನ್ನು ದಿವಾಕರ್ ವಿವರಿಸಿದರು.

ಈ ಯಂತ್ರದಲ್ಲಿ100 ಡಿಗ್ರಿಯಿಂದ 150ಡಿಗ್ರಿ ಸೆಂಟಿಗ್ರೇಡ್‌ ಬಿಸಿಗಾಳಿಯಿಂದ ವೈದ್ಯಕೀಯ ತ್ಯಾಜ್ಯದಲ್ಲಿರುವ ತೇವಾಂಶ ತೆಗೆಯಲಾಗುತ್ತದೆ. ನಂತರ500–600ಡಿಗ್ರಿ ಸೆಂಟಿಗ್ರೇಡ್‌ ತಾಪಮಾನದಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಸುಡಲಾಗುತ್ತದೆ.

ಯಂತ್ರ ಹೇಗೆ ಪರಿಸರ ಸ್ನೇಹಿ?
ಗಾಳಿಯಲ್ಲಿರುವ ಆಮ್ಲಜನಕವನ್ನು ದಹನ ಪ್ರಕ್ರಿಯೆಗೆ ಪೂರಕವಾಗಿ ಬಳಸಿಕೊಳ್ಳುವುದರಿಂದ ತ್ಯಾಜ್ಯ ಸುಡುವಾಗ ಅತ್ಯಂತ ಕಡಿಮೆ ಹೊಗೆ (ಕಾರ್ಬನ್‌ ಡೈಆಕ್ಸೈಡ್‌) ಹೊರಹೊಮ್ಮುತ್ತದೆ. ಅದರಲ್ಲೂಅತ್ಯಂತ ಅಪಾಯಕಾರಿಯಾದ ಕಾರ್ಬನ್‌ ಮೊನಾಕ್ಸೈಡ್‌ ಪ್ರಮಾಣ ಕೂಡ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಉಳಿದ ಯಂತ್ರಗಳಿಗೆ ಹೋಲಿಸಿದರೆ ಇದು ಹೆಚ್ಚು‘ಪರಿಸರ ಸ್ನೇಹಿ’ಎನ್ನುತ್ತಾರೆ ದಿವಾಕರ್.

ಇದು ವಿದ್ಯುತ್‌ ಮಿತವ್ಯಯಿ. ಸಿಂಗಲ್‌ ಫೇಸ್‌230ವೋಲ್ಟ್‌ ಎ.ಸಿ. ವಿದ್ಯುತ್ ಕಾರ್ಯನಿರ್ವಹಿಸುತ್ತದೆ. ಕಡಿಮೆ ವಿದ್ಯುತ್‌ ಖರ್ಚಾಗುವುದರಿಂದ ದುಬಾರಿ ವಿದ್ಯುತ್‌ ಬಿಲ್‌ಗಳಿಗೆ ಹೆದರಬೇಕಾಗಿಲ್ಲ.

ನಾಲ್ಕು ವರ್ಷಗಳ ಹಿಂದೆ...
ಎಂಜಿನಿಯರಿಂಗ್‌ ಪದವಿಯನ್ನು ಅರ್ಧಕ್ಕೆ ತೊರೆದು ತಂದೆಯ ಜತೆ ಕುಟುಂಬದ ಬ್ಯುಸಿನೆಸ್‌ ಮುಂದುವರಿಸಿದ ದಿವಾಕರ್‌2014ರಲ್ಲಿ ವೈದ್ಯಕೀಯ ತ್ಯಾಜ್ಯ ಸುಡುವಂತಹ ಯಂತ್ರಗಳ ತಯಾರಿಕೆ ಮತ್ತು ರೈತರ ಬೆಳೆಗಳಿಗೆ ತಗಲುವ ಕೀಟಬಾಧೆ ನಿಯಂತ್ರಿಸುವ ಸಾಧನಗಳ ಅಭಿವೃದ್ಧಿಯಲ್ಲಿ ತೊಡಗಿದ್ದರು.2016ರಲ್ಲಿ ಈ ಎರಡೂ ಯಂತ್ರಗಳ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದರು.ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ‘ಎಮಿಷನ್‌ ಟೆಸ್ಟ್‌’ನಡೆಸಿ ಪ್ರಮಾಣ ಪತ್ರ ಪಡೆದಿದ್ದಾರೆ.ಈಗಾಗಲೇ ದಾವಣಗೆರೆ ಜಿಲ್ಲೆಯ20ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಒಂದು ಖಾಸಗಿ ಆಸ್ಪತ್ರೆಯು ಈ ಯಂತ್ರಗಳನ್ನು ಖರೀದಿಸಿವೆ ಎಂದು ದಿವಾಕರ್‌ ತಿಳಿಸಿದರು.

ಆಸ್ಪತ್ರೆ,ಬಸ್‌ ನಿಲ್ದಾಣ,ರೈಲ್ವೆ ನಿಲ್ದಾಣ,ಮಾಲ್‌,ಛತ್ರ,ಬಹುಮಹಡಿ ಕಟ್ಟಡ,ಸಿನಿಮಾ ಮಂದಿರ ಮುಂತಾದ ಕಡೆ ಈ ಯಂತ್ರವನ್ನು ಬಳಸಬಹುದು. ಸ್ಥಳೀಯ ಪೌರಾಡಳಿತ ಸಂಸ್ಥೆಗಳು ಕಸವನ್ನು ಸುಡಲು ಈ ಯಂತ್ರ ಬಳಸಬಹುದು.ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸುಡುವ ಅಧಿಕ ಸಾಮರ್ಥ್ಯವಿರುವ ಯಂತ್ರದ ಅಭಿವೃದ್ಧಿ ಕೆಲಸ ನಡೆಸಿದ್ದು,ಬೆಂಗಳೂರಿನಲ್ಲಿ ಯಂತ್ರದ ಪ್ರದರ್ಶನಕ್ಕೆ ತಯಾರಿ ನಡೆಸಿದ್ದಾರೆ.
ಹೆಚ್ಚಿನ ಮಾಹಿತಿಗೆಸಂಪರ್ಕ ಸಂಖ್ಯೆ: 96637 68312

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT