ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ವರ್ಷಗಳ ನಂತರ ಭೂಮಿ ಹೇಗಿರಲಿದೆ?

Last Updated 3 ಆಗಸ್ಟ್ 2021, 10:31 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಭವಿಷ್ಯದ ದಿನಗಳ ಬಗ್ಗೆ ವಿಜ್ಞಾನಿಗಳು ಬಹುತೇಕ ನಿಖರವಾದ ಅಂದಾಜು ಮಾಡಬಹುದು. ಆದರೆ ಕರಾರುವಾಕ್ಕಾಗಿ ಹೀಗೆ ಆಗುತ್ತದೆ ಎಂದು ಹೇಳುವುದು ಅಸಾಧ್ಯ. ಆದರೆ ಭೂಮಿಯಂತಹ ಗ್ರಹ 500 ವರ್ಷಗಳ ನಂತರ ಹೇಗಿರಲಿದೆ ಎಂಬುದನ್ನು ಸ್ಪಷ್ಟವಾಗಿ ಊಹಿಸಲು ಸಾಧ್ಯವಿಲ್ಲ. 1492ರಲ್ಲಿ ಕ್ರಿಸ್ಟೋಫರ್‌, ‌ಪ್ರಸ್ತುತ ಅಮೆರಿಕ ಹೇಗಿರಲಿದೆ ಎಂದು ಮೊದಲೇ ಹೇಳುವ ಪ್ರಯತ್ನ ನಡೆಸಿದ್ದರು.

ನಮ್ಮ ಗ್ರಹದಲ್ಲಿ ಪ್ರಮುಖವಾಗಿ ಎರಡು ಬಗೆಯ ಬದಲಾವಣೆಯಿಂದ ಭವಿಷ್ಯ ನಿರ್ಧಾರವಾಗುತ್ತದೆ. ಮೊದಲನೆಯದ್ದು ನೈಸರ್ಗಿಕ ಚಕ್ರ. ಅಂದರೆ ಭೂಮಿ ತನ್ನ ಕಕ್ಷೆಯಲ್ಲೇ ಸುತ್ತುವುದು ಮತ್ತು ಸೂರ್ಯನಿಗೆ ಸುತ್ತು ಹಾಕುವುದು. ಎರಡನೆಯದ್ದು ಜೀವಿಗಳ ಚಟುವಟಿಕೆ. ಮುಖ್ಯವಾಗಿ ಮನುಷ್ಯನಿಂದ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಹಿಮಯುಗ: ಭೂಮಿ ಎಡಬಿಡದೆ ಬದಲಾಗುತ್ತಿದೆ. ನೈಸರ್ಗಿಕ ಬದಲಾವಣೆಗಳಿಂದ ಅಸ್ಥಿರವಾಗಿರುವ ಭೂಮಿಯು ಓರೆಯಾಗಿರುವ ತನ್ನ ಕೋನದಲ್ಲಿ ಹಾಗೂ ಕಕ್ಷೆಯಲ್ಲಿ ಆಗುವ ಬದಲಾವಣೆಯಿಂದ ಸೂರ್ಯನಿಗೆ ಹತ್ತಿರ ಅಥವಾ ದೂರವಾಗುತ್ತದೆ. ಇದು 10 ಸಾವಿರ ವರ್ಷಗಳಿಗೊಮ್ಮೆ ಸಂಭವಿಸುವ ಬದಲಾವಣೆಯಾಗಿದೆ. ಇದರಿಂದ ಹಿಮಯುಗದಂತಹ ಸನ್ನಿವೇಶ ಬರುತ್ತದೆ.

ಭೂಗರ್ಭ ಶಾಸ್ತ್ರದಲ್ಲಿ 500 ವರ್ಷಗಳೇನು ದೀರ್ಘ ಅವಧಿಯಲ್ಲ.

ಬದಲಾಗುತ್ತಿರುವುದಕ್ಕೆ ಮನುಷ್ಯರೇ ಪ್ರಮುಖ ಕಾರಣ:ಗ್ರಹದ ಬದಲಾವಣೆಗೆ ಎರಡನೇ ಪ್ರಮುಖ ಕಾರಣ ಜೀವಿಗಳ ಚಟುವಟಿಕೆ. ಜೀವಿಗಳಿಂದ ಗ್ರಹ ಮೇಲೆ ಬೀರುವ ಪರಿಣಾಮವನ್ನು ಊಹಿಸಿಕೊಳ್ಳುವುದೇ ಕಷ್ಟವಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಒಂದರ ಮೇಲೆ ದುಷ್ಪರಿಣಾಮ ಬೀರಿದರೆ ಮತ್ತೊಂದರ ಮೇಲೆ ನೇರವಾಗಿ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಸಂಪೂರ್ಣ ನೈಸರ್ಗಿಕ ಚಕ್ರದ ಮೇಲೆ ಹಾನಿಯಾಗುತ್ತದೆ.

ಮನುಷ್ಯನ ಹಲವು ರೀತಿಯ ಚಟುವಟಿಕೆಗಳು ಭೂಮಿಯ ಬದಲಾವಣೆಗಳಿಗೆ ಕಾರಣ. ನಗರಗಳನ್ನು ಸೃಷ್ಟಿಸಲು ಮತ್ತು ತೋಟಗಾರಿಕೆ ನಡೆಸಲು ಅಪಾರ ಪ್ರಮಾಣದಲ್ಲಿ ಮರಗಳನ್ನು ಕಡಿಯುತ್ತಿರುವುದು ಮತ್ತು ವನ್ಯಜೀವಿಗಳನ್ನು ನಾಶಪಡಿಸುತ್ತಿರುವುದು ಪ್ರಮುಖ ಕಾರಣಗಳಾಗಿವೆ. ಇದರಿಂದ ಪ್ರಾಣಿಗಳು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಪ್ರಯತ್ನಿಸುತ್ತಿವೆ. ಇದರಿಂದ ಪರಿಸರ ವ್ಯವಸ್ಥೆಗೆ ಪೆಟ್ಟಾಗುತ್ತಿದೆ.

ಜಾಗತಿಕ ತಾಪಮಾನ ಏರಿಕೆಗೂ ಮನುಷ್ಯನದ್ದೇ ಕೊಡುಗೆ. ವ್ಯಾಪಕ ಇಂಧನಗಳ ಬಳಕೆಯಿಂದ ಹಸಿರುಮನೆ ಅನಿಲಗಳು ವಾತಾವರಣವನ್ನು ಸೇರುತ್ತಿವೆ. ಭೂಮಿಗೆ ಸಹಿಸಲಸಾಧ್ಯವಾದ ಪ್ರಮಾಣದಲ್ಲಿದೆ. ಸಾಮಾನ್ಯವಾಗಿ ಹಸಿರುಮನೆ ಅನಿಲಗಳು ಸೂರ್ಯ ಕಿರಣಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ಭೂಮಿಯ ವಾತಾವರಣ ಬಿಸಿಯಾಗುತ್ತದೆ. ಉಷ್ಣಾಂಶ ಹೆಚ್ಚಾದಂತೆ ಗ್ರೀನ್‌ಲ್ಯಾಂಡ್‌ ಮತ್ತು ಅಂಟಾರ್ಟಿಕಾದ ಮಂಜುಗಡ್ಡೆ ಕರಗುತ್ತದೆ. ಇದರಿಂದ ಸಮುದ್ರದಲ್ಲಿ ನೀರು ಹೆಚ್ಚಾಗುತ್ತದೆ. ಕರಾವಳಿ ಪ್ರದೇಶಗಳು ಮುಳುಗುತ್ತವೆ. ಭೂಮಿಯ ನೆಲ ಪ್ರದೇಶ ದಿನದಿಂದ ದಿನಕ್ಕೆ ಚಿಕ್ಕದಾಗುತ್ತದೆ. ಸಮುದ್ರ ಇಂಚಿಂಚಾಗಿ ನುಂಗುತ್ತದೆ.

ಇದು ಸದ್ಯದ ಭೂಮಿಯ ಪರಿಸ್ಥಿತಿ. ಇದು ಹೀಗೆಯೇ ಮುಂದುವರಿದರೆ 500 ವರ್ಷಗಳಲ್ಲಿ ಏನಾಗಲಿದೆ ಎಂಬುದನ್ನು ಸಾಮಾನ್ಯನೂ ಊಹಿಸಿಕೊಳ್ಳಬಹುದು. ಅಂದರೆ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದರ ಮೇಲೆ ಭೂಮಿಯ ಭವಿಷ್ಯ ನಿಂತಿದೆ. ಭೂಮಿಯಲ್ಲಿ ಉಷ್ಣಾಂಶ ಹೆಚ್ಚಾದಂತೆ ಮನುಷ್ಯ ಮಾತ್ರವಲ್ಲ, ಇಡೀ ಜೀವಸಂಕುಲವೇ ಕಷ್ಟಕ್ಕೆ ಸಿಲುಕುತ್ತದೆ. ಬಿಸಿ ಗಾಳಿ, ಬಿರುಗಾಳಿ ಮತ್ತು ಬರಗಾಲದಿಂದ ಭೂಮಿ ಬರಡಾಗುತ್ತದೆ.

ಕಳೆದ 500 ವರ್ಷಗಳಲ್ಲಿ ನಾವೇನು ಕಲಿತಿದ್ದೇವೆ?:500 ವರ್ಷಗಳ ಹಿಂದಕ್ಕೆ ತಿರುಗಿದರೆ ಜೈವಿಕ ಮಂಡಲದ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. 50 ಕೋಟಿಯಿದ್ದ ಜನಸಂಖ್ಯೆ 750 ಕೋಟಿಗೆ ತಲುಪಿದೆ. ಮನುಷ್ಯನ ಚಟುವಟಿಕೆಯಿಂದ ಸುಮಾರು 800ಕ್ಕೂ ಹೆಚ್ಚು ಜೀವವೈವಿಧ್ಯಗಳು ಅಳಿವಿನಂಚಿಗೆ ಬಂದಿವೆ. ಮನುಷ್ಯನ ಸಂತತಿ ಹೆಚ್ಚಾದಂತೆ ಇತರ ಪ್ರಾಣಿ-ಪಕ್ಷಿಗಳಿಗೆ ಜಾಗ ಕಡಿಮೆಯಾಗುತ್ತಿದೆ. ಮೊದಲೇ ಹೇಳಿದಂತೆ ಸಮುದ್ರ ಹೆಚ್ಚಾದಂತೆ ನೆಲದ ಪ್ರದೇಶ ಕಿರಿದಾಗುತ್ತದೆ. ಉಷ್ಣಾಂಶ ಹೆಚ್ಚಿದಂತೆ ಹಲವು ಜೀವವೈವಿಧ್ಯಗಳ ವಲಸೆ ಸಂಭವಿಸುತ್ತದೆ.

ಭೂಮಿಯ ಬದಲಾವಣೆಗಳೆಲ್ಲವೂ ಮನುಷ್ಯನಿಂದಲೇ ಸಂಭವಿಸಿದೆ ಎಂದಲ್ಲ. ಆದರೆ ಕೆಲವು ಸಂಗತಿಗಳಲ್ಲಿ ತೀರ ವಿಷಣ್ಣತೆಗೆ ತಲುವಂತೆ ಮಾಡಿದ್ದಾನೆ. ಇವತ್ತು ಭೂಮಿ ಎದುರಿಸುತ್ತಿರುವ ಸವಾಲುಗಳಲ್ಲಿ ಪ್ರಮುಖವಾದುದು ಇಂಧನಗಳ ಬಳಕೆಯನ್ನು ಕಡಿಮೆಗೊಳಿಸುವುದಾಗಿದೆ. ಇದು ಜಾಗತಿಕ ಸಮಸ್ಯೆಯೂ ಹೌದು. ವಿಶ್ವ ಮಟ್ಟದಲ್ಲಿ ಇಂಧನ ಬಳಕೆಯನ್ನು ತಗ್ಗಿಸುವ ಗುರಿಯೊಂದಿಗೆ ಎಲ್ಲ ರಾಷ್ಟ್ರಗಳು ಕೈಜೋಡಿಸುವ ಅನಿವಾರ್ಯತೆ ಇದೆ.

ಕ್ರಿಸ್ಟೋಫರ್‌ ಕೊಲಂಬಸ್‌, ಅಮೆರಿಕದ ಹೆದ್ದಾರಿಗಳು ಕಾರುಗಳಿಂದ ಪೂರ್ಣಗೊಂಡಿರುತ್ತದೆ ಅಥವಾ ಮೊಬೈಲ್‌ಗಳಿಂದ ತುಂಬಿರುತ್ತದೆ ಎಂದು ಭವಿಷ್ಯ ನುಡಿದಿರಲಿಲ್ಲ. ಮುಂದಿನ 500 ವರ್ಷಗಳಲ್ಲಿ ತಂತ್ರಜ್ಞಾನವು ಭಾರಿ ಪ್ರಮಾಣದ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ. ಆದರೆ ತಂತ್ರಜ್ಞಾನಗಳ ಅಭಿವೃದ್ಧಿಯಿಂದ ಹವಾಮಾನ ಬದಲಾವಣೆ ಸಾಧ್ಯವಿಲ್ಲ. ಮುಂದೆ ಯಾರಾದರೂ ಸರಿಪಡಿಸುತ್ತಾರೆ ಎಂದು ದಿನದೂಡುವುದರಲ್ಲಿ ಅರ್ಥವಿಲ್ಲ. ಅಂತಹ ಅಪೇಕ್ಷೆ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ.

ಹಾಗಾಗಿ, 500 ವರ್ಷಗಳ ನಂತರ ಭೂಮಿ ಹೇಗೆ ಇರಲಿದೆ ಎಂಬುದನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ. ಮನುಷ್ಯರು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡರೆ, ಅರಣ್ಯಗಳನ್ನು ಉಳಿಸಿದರೆ, ಸಮುದ್ರದ ಮಟ್ಟ ಹೆಚ್ಚದಂತೆ ನಿಗಾ ವಹಿಸಿದರೆ, ಸಿಟಿಗಳು ಹೆಚ್ಚಾಗದಂತೆ ನೋಡಿಕೊಂಡರೆ ಬಹುಶಃ ಭೂಮಿಯು ಇಂದಿನಂತೇ ಇರಬಹುದು ಎಂದು ಬಿಂಗ್‌ಹ್ಯಾಮ್‌ಟನ್‌ ವಿಶ್ವವಿದ್ಯಾಲಯದ ತಜ್ಞರಾದ ಮೈಕೇಲ್‌ ಎ ಲಿಟಲ್‌ ಮತ್ತು ವಿಲಿಯಮ್‌ ಡಿ ಮೆಕ್‌ಡೊನಾಲ್ಡ್‌ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT