ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣುಗಳೂ ಉಸಿರಾಡುತ್ತವೆ!

Published 5 ಜುಲೈ 2023, 1:00 IST
Last Updated 5 ಜುಲೈ 2023, 1:00 IST
ಅಕ್ಷರ ಗಾತ್ರ

ಶಾಲೆಯಲ್ಲಿ ಕಲಿತ ಅಣುಗಳ ಬಗೆಗಿನ ಪಾಠ ಮರೆಯುವುದುಂಟೇ? ಅಣುವೊಳಗಿನ ನ್ಯೂಟ್ರಾನ್‌, ಎಲೆಕ್ಟ್ರಾನ್‌, ಪ್ರೋಟಾನ್, ಅದರೊಳಗಿನ ನ್ಯೂಕ್ಲಿಯಸ್ ಎಂಬ ರಚನೆಯ ಪ್ರಾಥಮಿಕ ಪಾಠ ನಮಗೆ ಆಗಲೇ ಸಿಕ್ಕಿರುತ್ತದೆ. ಅಂತೆಯೇ, ಅಣುಶಕ್ತಿಯ ಪರಿಚಯವೂ ನಮಗಿದೆ. ಅಣುಬಾಂಬ್, ಅಣುವಿದ್ಯುತ್‌ ನಮಗೆ ಹೊಸತಲ್ಲ. ಆದರೆ, ಇಲ್ಲಿನ ಚರ್ಚೆ ಕೊಂಚ ಭಿನ್ನವಾಗಿದೆ. ‘ಅಣುಗಳೂ ಉಸಿರಾಡುತ್ತವೆ’ ಎಂಬ ಹೊಸ ವಿಚಾರವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದನ್ನು ವಿಜ್ಞಾನಿಗಳು ‘ಅಣುಪದರ ಕಂಪನ’ ಎಂದು ಕರೆದಿದ್ದಾರೆ.

ಈ ಹೊಸ ಆವಿಷ್ಕಾರದ ಬಳಕೆಯ ಸಾಧ್ಯತೆಗಳ ಬಗ್ಗೆ ಈಗ ಚರ್ಚೆ ನಡೆದಿದೆ. ಈ ಅಣುಗಳ ಉಸಿರಾಟ ಎಂದರೇನು? ಹೇಗೆ ಈ ಉಸಿರಾಟ ಸಾಧ್ಯ? ಇದರ ಬಳಕೆ ಏನು? – ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ಸಂಶೋಧಿಸಿರುವ ವಿಜ್ಞಾನಿಗಳೇ ಸರಳವಾಗಿ ತಿಳಿಸಿದ್ದಾರೆ. ಈ ಹೊಸ ಸಂಶೋಧನೆಯ ಸಹಾಯದಿಂದ ನಮ್ಮ ನಿತ್ಯಜೀವನವನ್ನು ಮತ್ತಷ್ಟು ಸರಳಗೊಳಿಸಿಕೊಳ್ಳಬಹುದು ಎಂದು ವ್ಯಾಖ್ಯಾನಿಸಿದ್ದಾರೆ.

ಏನಿದು ಅಣುಗಳ ಉಸಿರಾಟ?

ಅಣುಗಳಿಂದ ರಚಿಸಲ್ಪಟ್ಟಿರುವ ಎರಡು ಅಣುಪದರಗಳ ನಡುವೆ ಸದಾ ಕಾಲ ಅತಿ ಸೂಕ್ಷ್ಮವಾದ ಭೌತಿಕವಾದ ಘರ್ಷಣೆ ಇದ್ದೇ ಇರುತ್ತದೆ ಎಂಬುದೇ ಈ ಹೊಸ ಆವಿಷ್ಕಾರ. ಈ ಅಣುಗಳ ಉಸಿರಾಟವು ಪ್ರಾಣಿ–ಪಕ್ಷಿಗಳಂತೆ ಆ ಪದರಗಳ ನಡುವೆ ಭೌತಿಕವಾಗಿ ಕಾಣುವಂತೆ ಇರುತ್ತದೆ. ಅಂದರೆ, ಎರಡುಗಳ ಪದರಗಳ ಹಿಗ್ಗುವಿಕೆ ಮತ್ತು ಕುಕ್ಕುವಿಕೆ ಗೋಚರಿಸುತ್ತದೆ. ಈ ಹಿಗ್ಗುವ ಹಾಗೂ ಕುಗ್ಗವ ಪ್ರಕ್ರಿಯೆಯನ್ನೇ ವಿಜ್ಞಾನಿಗಳು ಉಸಿರಾಟಕ್ಕೆ ಹೋಲಿಸಿದ್ದಾರಷ್ಟೇ. ಇಲ್ಲಿ ಮತ್ತೊಂದು ಕೌತುಕದ ವಿಚಾರವಿದೆ. ಇದು ಕೇವಲ ಗೋಚರಿಸುವ ಪ್ರಕ್ರಿಯೆಯಲ್ಲ. ಈ ಅಣು ಉಸಿರಾಟವು ಸದ್ದುನ್ನು ಸಹಾ ಮಾಡುತ್ತದೆ. ಈ ಸದ್ದನ್ನು ನಾವು ಅನೇಕ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಮೊ ಲೀ ಅವರು ಅವರು ಈ ಸಂಶೋಧೆಯನ್ನು ಮಾಡಿದ್ದಾರೆ. ಈ ಅಣು ಉಸಿರಾಟ ಅಥವಾ ಅಣುಗಳ ಘರ್ಷಣೆಯನ್ನು ದತ್ತಾಂಶ ರವಾನೆಗೆ ಬಳಸಿಕೊಳ್ಳಬಹುದಾಗಿದೆ. ಅದರಲ್ಲೂ ಧ್ವನಿ ದತ್ತಾಂಶ ರವಾನೆ ಇದರಿಂದ ಅತ್ಯಂತ ಸರಳವಾಗಲಿದೆ. ಟೆಲಿ ಕಮ್ಯುನಿಕೇಷನ್ಸ್‌ನಲ್ಲಿ ಈಗಲೂ ರೇಡಿಯೋ ಸಂಜ್ಞೆಗಳನ್ನು ಬಳಸಿಕೊಂಡು ಮೊಬೈಲ್‌ ಫೋನ್‌ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಮೊಬೈಲ್‌ ಟವರ್‌ಗಳ ನಿರ್ಮಾಣ, ಅದಕ್ಕಾಗಿ ಅಪಾರ ಪ್ರಮಾಣದ ವಿದ್ಯುತ್‌ ಬಳಕೆಯಾಗುತ್ತಿದೆ. ಅಲ್ಲದೇ, ಇದರಿಂದ ಪರಿಸರದ ಮೇಲೂ ಅಡ್ಡ ಪರಿಣಾಮಗಳಾಗುತ್ತಿವೆ. ಈ ಹೊಸ ಸಂಶೋಧನೆಯಿಂದ ಅಣುಗಳ ಘರ್ಷಣೆಯನ್ನು ಬಳಸಿಕೊಂಡು ಧ್ವನಿಯನ್ನು ಉತ್ಪಾದಿಸಿ ಅದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಸಾರ ಮಾಡುವ ಸಾಧ್ಯತೆ ಇದೆ.

ಬಳಕೆ ಏನು?


ಧ್ವನಿಯನ್ನು ವಿದ್ಯುತ್‌ ಸಂಜ್ಞೆಯಾಗಿ ಪರಿವರ್ತಿಸುವ ತಂತ್ರಜ್ಞಾನ ನಮ್ಮಲ್ಲಿ ಈಗಾಗಲೇ ಇದೆ. ಇದೇ ಮಾದರಿಯಲ್ಲಿ ಅಣುಕಂಪನದ ಸಹಾಯದಿಂದ ಧ್ವನಿಸಂಜ್ಞೆಗಳನ್ನು ಉತ್ಪಾದಿಸಿ ಪ್ರಸಾರ ಮಾಡಬಹುದಾಗಿದೆ. ಅಲ್ಲದೇ, ಇಲ್ಲಿ ಅಣುವಿನ ಶಕ್ತಿ ಅಪಾರ. ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳುವ ಯುರೇನಿಯಂ, ಥೋರಿಯಂ ಅನ್ನೇ ಬಳಸಿಕೊಳ್ಳಬೇಕು ಎಂದೇನಿಲ್ಲ. ಇವುಗಳ ವಿಕರಣಗುಣ ಅತಿ ಹೆಚ್ಚು. ಹೀಗಾಗಿ, ಕಡಿಮೆ ಅಪಾಯಕಾರಿಯುಳ್ಳ ಯಾವುದೇ ರಾಸಾಯನಿಕವನ್ನು ಬಳಸಿಕೊಂಡು ಅಣುಕಂಪನವನ್ನು ಉಂಟುಮಾಡಬಹುದು. ಒಟ್ಟಿನಲ್ಲಿ ಅಣುಕಂಪನವನ್ನು ಸಂಜ್ಞೆಯಾಗಿ ಪರಿವರ್ತಿಸಿ ಭೂಮಿಯ ವಾತಾವರಣಕ್ಕೆ ಸೇರಿಸುವುದಷ್ಟೇ ಕೆಲಸ. ಪರಿವರ್ತನೆಯಾಗಿ ಬಿತ್ತರಗೊಂಡ ಸಂಜ್ಞೆಗಳನ್ನು ಧ್ವನಿಸಂಜ್ಞೆಗಳಾಗಿ ಪರಿವರ್ತಿಸುವ ಸಾಧನಗಳಷ್ಟೇ ಬೇಕಿರುವುದು.

ಅತಿ ವೇಗದ ಇಂಟರ್ನೆಟ್


ಅಲ್ಲದೇ, ಅತಿ ವೇಗದ ದತ್ತಾಂಶ ರವಾನೆಯೂ ಇದರಿಂದ ಸಾಧ್ಯ. ಸದ್ಯಕ್ಕೆ ಫೈಬರ್ ಲೈನ್‌ ಮೂಲಕ ವಿಶ್ವದ ಎಲ್ಲ ಮೂಲೆಗಳಿಗೂ ಇಂಟರ್‌ನೆಟ್‌ ತಲುಪುತ್ತಿದೆ. ಈ ಅಣುಕಂಪನದ ಮೂಲಕವೂ ಅತಿ ವೇಗದ ದತ್ತಾಂಶವನ್ನು ರವಾನೆ ಮಾಡಬಹುದಾಗಿದೆ. ಇದಕ್ಕಾಗಿ ‘ಕ್ವಾಂಟಮ್ ಎಮಿಟರ್‌’ ಎಂಬ ಸಾಧನವನ್ನೂ ಸಂಶೋಧಿಸಿದ್ದಾರೆ. ‘ಅಣುಕಂಪನದ ಮೂಲಕ ರವಾನೆಯಾಗುವ ದತ್ತಾಂಶದಲ್ಲಿ ಲೇಟೆನ್ಸಿ (ದತ್ತಾಂಶ ತಡವಾಗಿ ತಲುಪುವುದು) ಬಹಳ ಕಡಿಮೆ. ಹಾಗಾಗಿ, ಕ್ಞಣಾರ್ಧದಲ್ಲಿ ಸಂಜ್ಞೆಗಳ ರವಾನೆ ಸಾಧ್ಯ. ನೀವು ಗಮನಿಸಿರಬಹುದು, ಭೂಮಿಯ ಇನ್ನೊಂದು ಭಾಗದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೆಲವು ಸೆಕೆಂಡ್‌ಗಳ ಬಳಿಕವಷ್ಟೇ ನಮಗೆ ಟಿವಿಯಲ್ಲಿ ಕಾಣಿಸುತ್ತವೆ. ಇದಕ್ಕೆ ಕಾರಣ ಡೇಟಾ ಲೇಟೆನ್ಸಿ. ಈ ಬಗೆಯ ಮಿತಿಗಳು ಅಣುಕಂಪನ ದತ್ತಾಂಶ ರವಾನೆಯಲ್ಲಿ ಇರುವುದಿಲ್ಲ. ಏಕೆಂದರೆ, ಇದು ನಿಸ್ತಂತುವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಮೊ ಲೀ ವ್ಯಾಖ್ಯಾನಿಸಿದ್ದಾರೆ.

ಇದರ ಉಪಯೋಗಗಳು ಮಾನವ ಪರವಾಗಿವೆ. ದತ್ತಾಂಶವನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಇಂಟರ್‌ನೆಟ್‌, ದೂರವಾಣಿ ಇತ್ಯಾದಿ ಸೇವೆಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ (ಭವಿಷಯದಲ್ಲಿ ಉಚಿತವಾಗಿ) ನೀಡುವುದು. ಅಲ್ಲದೇ, ಈಗಿನ ತಂತ್ರಜ್ಞಾನಗಳಲ್ಲಿನ ಮಿತಿ ನಮಗೆ ತಿಳಿದಿರುವ ಕಾರಣ, ಆ ಮಿತಿಗಳನ್ನು ಇಲ್ಲದಂತೆ ಮಾಡುವುದು. ಜೊತೆಗೆ ಪರಿಸರಕ್ಕೆ ಹಾನಿಯಾಗದಂತೆ, ಭವಿಷ್ಯದ ತಲೆಮಾರಿನ ಜನರೂ ನೆಮ್ಮದಿಯಿಂದ ಬದುಕುವಂತಹ ವಾತಾವರಣವನ್ನು ನಿರ್ಮಿಸುವುದು ಪ್ರಧಾನ ಉದ್ದೇಶ – ಎಂದು ಮೊ ಲೀ ಹಾಗೂ ತಂಡ ತಮ್ಮ ಸಂಶೋಧನೆಯನ್ನು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT