ಭಾನುವಾರ, ಸೆಪ್ಟೆಂಬರ್ 20, 2020
21 °C

ಚಂದ್ರಯಾನ: ಹಲವು ವೈಫಲ್ಯಗಳು

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷಿ ಚಂದ್ರಯಾನ–2 ಯೋಜನೆ ಕೊನೆಯ ಹಂತದಲ್ಲಿ ದಿಕ್ಕು ತಪ್ಪಿದೆ. ಶನಿವಾರ (ಸೆಪ್ಟೆಂಬರ್ 7) ಮುಂಜಾನೆ ಆರ್ಬಿಟರ್‌ನಿಂದ ಬೇರ್ಪಟ್ಟ ಲ್ಯಾಂಡರ್ ‘ವಿಕ್ರಮ್‌’ ಚಂದ್ರನಿಂದ ಕೇವಲ 2.1 ಕಿ.ಲೊ ಮೀಟರ್‌ ದೂರದಲ್ಲಿದ್ದಾಗ ಇಸ್ರೊ ಭೂಕೇಂದ್ರದಿಂದ ಸಂಪರ್ಕ ಕಳೆದುಕೊಂಡಿದೆ. ಇದರಿಂದ ಹಲವರಿಗೆ ನಿರಾಸೆಯಾಗಿದೆ.

ಚಂದ್ರನ ಮತ್ತೊಂದು ಭಾಗವನ್ನು ಅಧ್ಯಯನ ಮಾಡಲು ಇಸ್ರೊ ಮೊದಲ ಪ್ರಯತ್ನದಲ್ಲೇ ಶೇ 99ರಷ್ಟು ಯಶಸ್ಸು ಸಾಧಿಸಿದೆ ಎಂದು ವಿಜ್ಞಾನಿಗಳ ಶ್ರಮವನ್ನು ಹಲವರು ಮೆಚ್ಚಿಕೊಳ್ಳುತ್ತಿದ್ದಾರೆ. ಭಾರತವಷ್ಟೇ ಅಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳು ಹಲವು ಬಾರಿ ವೈಫಲ್ಯದ ಕಹಿ ಉಂಡಿವೆ. ಆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಐದನೇ ಪ್ರಯತ್ನದಲ್ಲಿ ಭಾಗಶಃ ಯಶಸ್ಸು ಕಂಡ ದೊಡ್ಡಣ!

ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕ ಕೂಡ ಚಂದ್ರಯಾನ ಯೋಜನೆಯಲ್ಲಿ ಹಲವು ಬಾರಿ ವೈಫಲ್ಯ ಕಂಡಿದೆ. 1950ರಿಂದಲೇ ಚಂದ್ರನ ಅಧ್ಯಯನಕ್ಕೆ ನೌಕೆಗಳನ್ನು ಕಳುಹಿಸುವ ಪ್ರಯತ್ನ ಮಾಡಿತು. 1959ರಲ್ಲಿ ಉಡಾವಣೆ ಮಾಡಿದ್ದ ಪಯನೀರ್‌–4 ಉಪಗ್ರಹ ಭಾಗಶಃ ಯಶಸ್ವಿಯಾಗಿತ್ತು. ಇದಕ್ಕೂ ಮುಂಚೆ ಪಯನೀರ್‌ 0, ಪಯನೀರ್ 1, ಪಯನೀರ್ 2, ಪಯನೀರ್‌ 3 ಯೋಜನೆಗಳಲ್ಲಿ ನಾಸಾ ವೈಫಲ್ಯ ಕಂಡಿತ್ತು.

1960–62ರ ಅವಧಿಯಲ್ಲಿ ನಾಸಾ ಪಯನೀರ್‌ ಪಿ–30, ಪಯನೀರ್ ಪಿ–31, ರೇಂಜರ್‌ 3, ರೇಂಜರ್ 4, ರೇಂಜರ್‌5 ಯೋಜನೆಗಳನ್ನು ಕೈಗೊಂಡಿತ್ತು. ಈ ಐದು ಯೋಜನೆಗಳು ವಿಫಲವಾಗಿದ್ದವು. ಆದರೂ ಧೃತಿಗೆಡದೆ 1964 ಜನವರಿ 30ರಂದು ರೇಂಜರ್‌ 6 ಯೋಜನೆ ಕೈಗೊಂಡಿತು. ದುರಂತವೆಂಬಂತೆ ಈ ಯೋಜನೆ ಕೂಡ ವಿಫಲವಾಯಿತು. ಹೀಗೆ ಒಟ್ಟು 13 ಬಾರಿ ಚಂದ್ರಯಾನ ಯೋಜನೆಯಲ್ಲಿ ಅಮೆರಿಕ ವೈಫಲ್ಯ ಎದುರಿಸಿದೆ.

1964 ಜೂನ್‌ನಲ್ಲಿ ಉಡಾವಣೆ ಮಾಡಿದ ರೇಂಜರ್‌ 7 ಯೋಜನೆ ಯಶಸ್ವಿಯಾಗಿತ್ತು. ಈ ಎಲ್ಲ ವೈಫಲ್ಯಗಳಿಂದ ಪಾಠ ಕಲಿತ ಮೇಲೆ ರೇಂಜರ್‌ 8 ಮತ್ತು ರೇಂಜರ್‌ 9 ನೌಕೆಗಳನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿಸುವಲ್ಲಿ ನಾಸಾ ಯಶಸ್ವಿಯಾಯಿತು.

ಇದನ್ನೂ ಓದಿ: ಚಂದ್ರಯಾನ–2: ನೌಕೆ ಇಳಿಯುವ ಕೊನೆಯ 15 ನಿಮಿಷ ರೋಚಕ

1966 ಮೇನಲ್ಲಿ ಅಮೆರಿಕ ಕಳುಹಿಸಿದ್ದ ಸರ್ವೆಯರ್‌–1 ನೌಕೆ ಚಂದ್ರನ ಅಂಗಳ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದರ ನಂತರ ಕಳುಹಿಸಿದ್ದ ಸರ್ವೆಯರ್–2 ವಿಫಲವಾಗಿತ್ತು. ನಂತರ ಸರ್ವೆಯರ್–3 ಯಶಸ್ವಿಯಾದರೆ, ಸರ್ವೆಯರ್–4 ಮತ್ತೆ ವಿಫಲವಾಗಿತ್ತು.

ಈ ಪ್ರಯೋಗಗಳಿಂದ ಪಾಠ ಕಲಿತ ಮೇಲೆ ಸರ್ವೆಯರ್ 5,6,7 ಮತ್ತು ಅಪೋಲೊ 8 ಮತ್ತು 10 ಯೋಜನೆಗಳು ಯಶಸ್ವಿಯಾಗಿದ್ದವು. ಹಲವು ಪ್ರಯತ್ನಗಳನ್ನು ಮಾಡಿದ ಮೇಲೆ 1969ರಲ್ಲಿ ಮಾನವನ್ನು ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಕಳುಹಿಸುವುದಕ್ಕೆ ಸಾಧ್ಯವಾಯಿತು.

ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾದ ಸೋವಿಯತ್ ಒಕ್ಕೂಟ

ಅಮೆರಿಕದೊಂದಿಗೆ ಶೀತಲ ಸಮರಕ್ಕೆ ಇಳಿದಿದ್ದ ರಷ್ಯಾ ಕೂಡ ಚಂದ್ರನ ಅಧ್ಯಯನದಲ್ಲಿ ಸೋಲು ಗೆಲುವುಗಳನ್ನು ಕಂಡಿದೆ. 1958–60 ಅವಧಿಯಲ್ಲಿ ಮೂರು ಯೋಜನೆಗಳನ್ನು ರಷ್ಯಾ ಕೈಗೊಂಡಿತ್ತು. ಈ ಮೂರೂ ಯೋಜನೆಗಳು ವಿಫಲವಾಗಿದ್ದವು. ಇದಾದ ನಂತರ ಉಡಾವಣೆ ಮಾಡಿದ್ದ ಲೂನಾ–1 ಯೋಜನೆ ಭಾಗಶಃ ಯಶಸ್ವಿಯಾಗಿತ್ತು. ಇದರ ನಂತರ ಮತ್ತೊಂದು ಯೋಜನೆ ಕೂಡ ವಿಫಲವಾಗಿತ್ತು. 1959ರ ಸೆಪ್ಟೆಂಬರ್‌ನಲ್ಲಿ ಉಡಾವಣೆ ಮಾಡಿದ್ದ ಲೂನಾ–2 ಯೋಜನೆ ಯಶಸ್ವಿಯಾಗಿತ್ತು.

1960ರ ಆರಂಭದಲ್ಲಿ ಮತ್ತೆ ನಾಲ್ಕು ಯೋಜನೆಗಳನ್ನು ರಷ್ಯಾ ಕೈಗೊಂಡಿತು. ಈ ಯೋಜನೆಗಳಲ್ಲಿ ಚಂದ್ರನ ಅಂಗಳ ಪ್ರವೇಶಿಸುವ ಉದ್ದೇಶದಿಂದ ಪ್ರಯೋಗ ಮಾಡಿದ ಲೂನಾ–4 ಕುಡ ವಿಫಲವಾಯಿತು. 1965ರಲ್ಲಿ ಪ್ರಯೋಗಿಸಿದ ಕಾಸ್ಮೊಸ್‌ 60, ಲೂನಾ (ಯಾವುದೇ ಹೆಸರಿಟ್ಟಿರಲಿಲ್ಲ), ಲೂನಾ 5, ಲೂನಾ 6, ಲೂನಾ 7, ಲೂನಾ 8 ಯೋಜನೆಗಳು ಕೂಡ ವಿಫಲವಾದವು. ಇವೆಲ್ಲವೂ ಚಂದ್ರನ ಅಂಗಳಕ್ಕೆ ಸಂಶೋಧನಾ ನೌಕೆಯನ್ನು ಕಳುಹಿಸುವ ಯೋಜನೆಗಳಾಗಿದ್ದವು.

1966ರಿಂದ 70ರ ಅವಧಿಯಲ್ಲಿ ಪ್ರಯೋಗಿಸಿದ ಲೂನಾ 10, ಲೂನಾ 11, ಲೂನಾ 12, ಲೂನಾ 13, ಲೂನಾ 14 ಯೋಜನೆಗಳು ಯಶಸ್ವಿಯಾದವು. ಇವುಗಳ ನಂತರ ಪ್ರಯೋಗಿಸಿದ ಕಾಸ್ಮೋಸ್‌ 330 ಮತ್ತು ಕಾಸ್ಮೊಸ್‌ 305 ಯೋಜನೆಗಳು ವಿಫಲವಾದವು.

ಇಂತಹ ಹಲವು ಯಶಸ್ಸು ಮತ್ತು ಪ್ರಯೋಗಗಳ ನಂತರ 1970ರ ಅಕ್ಟೋಬರ್‌ನಲ್ಲಿ ರೋಬೊಟಿಕ್ ರೋವರ್‌ ಅನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಯೋಜನೆ ಯಶಸ್ವಿಯಾಯಿತು. 1973ರ ಆಗಸ್ಟ್‌ನಲ್ಲಿ ಪ್ರಯೋಗಿಸಿದ ಲುನೊಖೊಡ್‌ –2 ಯೋಜನೆ ಯಶಸ್ವಿಯಾಯಿತು.

ಚೀನಾ ಸಾಧನೆ

2000ದ ನಂತರ ವಿಶ್ವದ ಹಲವು ದೇಶಗಳು ಚಂದ್ರನ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ಕಾಳಜಿ ತೋರುತ್ತಿದ್ದರು. 2007ರಲ್ಲಿ ಚೇಂಜ್‌–1 ಹೆಸರಿನ ನೌಕೆಯನ್ನು ಚಂದ್ರನ ಅಧ್ಯಯನಕ್ಕಾಗಿ ಮೊದಲ ಬಾರಿಗೆ ಉಡಾವಣೆ ಮಾಡಿತು. 2013ರಿಂದಲೂ ಚಂದ್ರನ ಅಧ್ಯಯನದ ಕುರಿತು ಚೀನಾ ಹೆಚ್ಚು ಕಾಳಜಿ ತೋರುತ್ತಿದೆ. 2013ರ ಜೂನ್‌ನಲ್ಲಿ ಉಡಾವಣೆ ಮಾಡಿದ್ದ ಚೇಂಜ್‌ –3 ರೋವರ್‌ ಚಂದ್ರನ ಅಂಗಳ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.

2019ರ ಜನವರಿಯಲ್ಲಿ ಚಂದ್ರನ ಮತ್ತೊಂದು ಭಾಗದ ಕುರಿತು ಅಧ್ಯಯನ ಮಾಡಲು ಪ್ರಯೋಗಿಸಿದ ಯೋಜನೆ ಯಶಸ್ವಿಯಾಗಿತ್ತು. ಈ ಸಾಧನೆ ಮಾಡಿದ ಮೊದಲ ರಾಷ್ಟ್ರವಾಗಿಯೂ ಚೀನಾ ಪ್ರಶಂಸೆಗೆ ಪಾತ್ರವಾಯಿತು.

ವೈಫಲ್ಯಗಳೇ ಹೆಚ್ಚು

ನಾಸಾ ನೀಡಿರುವ ಮಾಹಿತಿ ಪ್ರಕಾರ 60 ವರ್ಷಗಳಲ್ಲಿ ಪ್ರಯೋಗಿಸಿರುವ ಚಂದ್ರಯಾನ ಯೋಜನೆಗಳ ಪೈಕಿ ಶೇ 40ರಷ್ಟು ವಿಫಲವಾಗಿವೆ. ಕೆಲವು ದೇಶಗಳು ಹಲವು ಬಾರಿ ವೈಫಲ್ಯವನ್ನೇ ಎದುರಿಸಿವೆ. ಹಲವು ವರ್ಷಗಳ ಪರಿಶ್ರಮ ಮತ್ತು ತಪ್ಪುಗಳಿಂದ ಪಾಠ ಕಲಿತ ಮೇಲಷ್ಠೇ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಸಂತೋಷದ ವಿಷಯವೆಂದರೆ ಇಸ್ರೊದ ಮೊದಲ ಪ್ರಯತ್ನದಲ್ಲೇ ಚಂದ್ರಯಾನ ಯೋಜನೆಯಲ್ಲಿ ಯಶಸ್ಸು ಸಾಧಿಸಿದೆ. ಚಂದ್ರಯಾನ–2 ಯೋಜನೆಯ ತಪ್ಪುಗಳಿಂದ ಮುಂದೆ ಪ್ರಯೋಗಿಸಲು ಉದ್ದೇಶಿಸಿರುವ ಗಗನ್‌ಯಾನ ಮತ್ತು ಮಂಗಳಯಾನ–2 ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಗಳು ಇವೆ.

109: ಈ ವರೆಗಿನ ಪ್ರಮುಖ ಚಂದ್ರಯಾನ ಯೋಜನೆಗಳು

61:  ಯಶಸ್ವಿಯಾದ ಯೋಜನೆಗಳು

48:  ವಿಫಲವಾದ ಯೋಜನೆಗಳು

ಇನ್ನಷ್ಟು ಓದಿಗೆ

ಚಂದ್ರನ ಮೇಲೆ ಮಾನವ ಹೆಜ್ಜೆ ಗುರುತು ದಾಖಲಿಸಿ 50 ವರ್ಷವಾಯ್ತು

ಚಂದ್ರಯಾನ 2 ಸಮಗ್ರ ಮಾಹಿತಿ– ಚಂದ್ರನೂರಿಗೆ ಮತ್ತೊಂದು ಯಾತ್ರೆ

ತಾಂತ್ರಿಕ ದೋಷ ನಿವಾರಣೆ, ಉಡ್ಡಯನಕ್ಕೆ ರಾಕೆಟ್‌ ಸಮರ್ಥ- ಇಸ್ರೊ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು