ಶುಕ್ರವಾರ, ಮೇ 27, 2022
21 °C

ಕಪಟ ಸಂಶೋಧನೆಗಳು!

ಕೊಳ್ಳೇಗಾಲ ಶರ್ಮ Updated:

ಅಕ್ಷರ ಗಾತ್ರ : | |

Prajavani

ನಮ್ಮ ದೇಶಕ್ಕೆ 1947ನೇ ಇಸವಿಯಲ್ಲಿ ಬಂದಿದ್ದು ಸ್ವಾತಂತ್ರ್ಯ ಅಲ್ಲ, ಭಿಕ್ಷೆ ಎಂದು ಇತ್ತೀಚಿಗೆ ಕಂಗನಾ ರಾವತ್‌ ಹೇಳಿದ್ದು ಟಿವಿಯೊಂದರಲ್ಲಿ ಸುದ್ದಿಯಾಯಿತಷ್ಟೆ. ಅದು ವಿವಾದವಾಗುತ್ತಿದ್ದಂತೆ ತಕ್ಷಣವೇ ಆ ಟಿವಿಯವರು ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹಿಂದೆ ಸರಿದುಬಿಟ್ಟದ್ದು ಇನ್ನೂ ದೊಡ್ಡ ಸುದ್ದಿಯಾಯಿತು. ಹೀಗೆ ಜಾರಿ ಬಿಟ್ಟ ಮಾತನ್ನು ಹೇಳಲೇ ಇಲ್ಲ ಅಂತಲೋ, ಹೇಳಿದ್ದು ತಪ್ಪು ಎಂತಲೋ ಹಿಂತೆಗೆದುಕೊಳ್ಳುವುದು ಇತ್ತೀಚಿನ ರಾಜಕೀಯದಲ್ಲಿ ನಿತ್ಯವಾರ್ತೆ ಎನ್ನಬಹುದು. ಆದರೆ ವಿಜ್ಞಾನದಲ್ಲಿಯೂ ಇದು ಈಗ ಹೆಚ್ಚಾಗುತ್ತಿದೆಯಂತೆ. ಉದಾಹರಣೆಗೆ, ಮೊನ್ನೆ ಸಂಶೋಧನಾ ಪತ್ರಿಕೆಗಳ ಪ್ರಕಾಶಕರಲ್ಲಿ ಮೇಲ್ಪಂಕ್ತಿಯಲ್ಲಿರುವ ಎಲ್ಸೆವಿಯರ್‌ ಸುಮಾರು ನಾಲ್ಕು ನೂರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಣೆಯಿಂದ ಹಿಂಪಡೆಯುತ್ತಿದ್ದೇನೆ ಎಂದು ವರದಿ ಮಾಡಿತ್ತು. ಇತ್ತೀಚೆಗೆ ಇನ್ನೊಂದು ಪ್ರಕಾಶನ ಸಂಸ್ಥೆ ಸ್ಪ್ರಿಂಗರ್‌ ವರ್ಲಾಗ್‌ ಒಂದೇ ಸಂಚಿಕೆಯಲ್ಲಿ ಪ್ರಕಟವಾದ ನೂರ ಐವತ್ತಕ್ಕೂ ಹೆಚ್ಚು ಪ್ರಬಂಧಗಳನ್ನು ಅವು ಫೇಕ್‌ ಎಂದು ಹೇಳಿ ಹಿಂಪಡೆಯಿತು. ಇಂತಹ ಮೋಸದ ಸಂಶೋಧನೆಗಳನ್ನು ಪ್ರಕಟಣೆಗೆ ಕಳಿಸುವ ಕಾರ್ಯ ವ್ಯವಸ್ಥಿತ ಮೋಸ, ಒಂದು ಸ್ಕ್ಯಾಮ್ ಎಂದು ‘ನೇಚರ್‌’ ಪತ್ರಿಕೆ ಮೊನ್ನೆ ವರದಿ ಮಾಡಿದೆ.

ಪ್ರಕಟಣೆಯನ್ನು ಹಿಂಪಡೆಯುವುದೆಂದರೇನು ಎಂಬ ಗೊಂದಲವಾಯಿತೇ? ಹಾಗೆಂದರೆ ಇನ್ನೇನಲ್ಲ. ಯಾವುದೇ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ವಿವರಗಳಲ್ಲಿ ತಪ್ಪಿದ್ದರೆ ಅಥವಾ ವಿಜ್ಞಾನಪ್ರಪಂಚದ ರೀತಿ–ರಿವಾಜುಗಳಿಗೆ ಒಪ್ಪದಂತಹ ಸಂಶೋಧನೆಗಳನ್ನು ಅವು ಪ್ರಕಟವಾದ ಮೇಲೂ ‘ರಿಟ್ರಾಕ್ಷನ್‌’ ಎನ್ನುವ ವ್ಯವಹಾರದ ಮೂಲಕ ಹಿಂಪಡೆಯಲಾಗುತ್ತದೆ. ಅರ್ಥಾತ್‌, ಇವು ಮುದ್ರಿತವಾಗಿದ್ದರೂ ಪ್ರಕಟಣೆಯಾಗಲೇ ಇಲ್ಲವೇನೋ ಎಂಬಂತೆ ಅವಗಣಿಸಲಾಗುತ್ತದೆ. ಅಂದರೆ ಆ ಸಂಶೋಧನೆಯ ವಿವರಗಳನ್ನು ಆ ಮುಂದೆ ಬೇರೆ ಯಾರೂ ಒಪ್ಪುವುದೂ ಇಲ್ಲ. ಬೆಂಬಲಿಸುವುದೂ ಇಲ್ಲ. ಈ ಬಗೆಯಲ್ಲಿ ಪ್ರಬಂಧಗಳನ್ನು ಹಿಂಪಡೆಯುವುದೆಂದರೆ ವಿಜ್ಞಾನಿಗಳ ವೃತ್ತಿಜೀವನದಲ್ಲಿ ಒಂದು ಕಪ್ಪು ಚುಕ್ಕೆ ಬಿದ್ದಂತೆಯೇ. ಹೀಗೆ ಒಮ್ಮೆ ಒಂದು ಪ್ರಬಂಧವನ್ನು ಹಿಂಪಡೆದರೂ, ವಿಜ್ಞಾನಿಯ ಬಡ್ತಿ, ನೇಮಕಾತಿ ಮುಂತಾದುವುಗಳಿಗೆ ಘಾಸಿಯಾದಂತೆಯೇ ಸರಿ.

ವಿಷಯ ಅಷ್ಟೊಂದು ಗಂಭೀರವಾಗಿದ್ದರಿಂದ ಹಲವು ಸಂಶೋಧನಾ ಪತ್ರಿಕೆಗಳಲ್ಲಿ ಹಿಂಪಡೆದ ಪ್ರಬಂಧಗಳ ಸಂಖ್ಯೆ ವರ್ಷಕ್ಕೆ ಒಂದು ಕೂಡ ಇರುತ್ತಿರಲಿಲ್ಲ. ಪ್ರಕಟಣೆಗೂ ಮುನ್ನವೇ ಪ್ರಬಂಧಗಳನ್ನು ತೀವ್ರವಾದ ಪರಿಶೀಲನೆಗೆ ಒಡ್ಡಿ ಅನಂತರ ಪ್ರಕಟಿಸಲಾಗುತ್ತಿತ್ತು. ಇದು ಕೇವಲ ಬಡ್ತಿಗಾಗಿ ಪ್ರಬಂಧಗಳನ್ನು ಬರೆಯಬೇಕೆನ್ನುವ ಸಂಶೋಧಕರಿಗೆ ಅಡ್ಡಿಯಾಗಿತ್ತು. ಇತ್ತೀಚೆಗೆ ವಿಜ್ಞಾನಪ್ರಪಂಚದ ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ಪ್ರಿಡೇಟರ್‌ ಪ್ರಕಾಶಕರೆನ್ನುವ ಹೊಸ ಬಗೆಯ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿದ್ದುವು. ಇವು ‘ಪ್ರಬಂಧಕ್ಕಿಷ್ಟು ಹಣ’ ಎಂಬಂತೆ ವಸೂಲಿ ಮಾಡಿ, ಅವು ಸತ್ಯವೋ ಸುಳ್ಳೋ ಎಂದೂ ಪರಿಶೀಲಿಸದೆ ಪ್ರಕಟಿಸಿಬಿಡುತ್ತಿದ್ದವು. ಮೊದಲಿನಂತೆ ಮುದ್ರಿಸಬೇಕಾದ ಅವಶ್ಯಕತೆಯೂ ಇಲ್ಲದೆ, ಇ-ಪತ್ರಿಕೆಯ ರೂಪದಲ್ಲಿ ಪ್ರಕಟಿಸುವುದು ಸುಲಭವಾಗಿದ್ದರಿಂದ ಇಂತಹ ಸಂಸ್ಥೆಗಳು ಹುಟ್ಟಿಕೊಳ್ಳುವುದು ಸಲೀಸಾಗಿತ್ತು. ಹಣ ಮಾಡುವುದೂ ಸಲೀಸಾಗಿತ್ತು. ವಿಜ್ಞಾನಪ್ರಪಂಚ ಇಂತಹ ಪತ್ರಿಕೆಗಳನ್ನೂ, ಅವುಗಳಲ್ಲಿ ಪ್ರಕಟವಾದ ಪ್ರಬಂಧಗಳನ್ನೂ ನಿಷೇಧಿಸುವುದು ಅನಿವಾರ್ಯವಾಯಿತು. ಹೈದರಾಬಾದಿನಲ್ಲಿದ್ದ ಓಮಿಕ್‌ ಜರ್ನಲ್ಸ್‌ ಎನ್ನುವ ಸಂಸ್ಥೆಯ ಪ್ರಕಟಣೆಗಳನ್ನು ಹೀಗೆ ನಿಷೇಧಿಸಲಾಗಿದೆ. ಇದೇ ರೀತಿಯಲ್ಲಿ ಚೀನಾದ ಹಲವು ಪ್ರಕಾಶಕರೂ ನಿಷೇಧಕ್ಕೆ ಒಳಗಾಗಿದ್ದಾರೆ.

ಕಪಟ ಪ್ರಕಟಣೆಯ ಈ ಮೋಸಗಾರಿಕೆ ಬಲು ವ್ಯವಸ್ಥಿತವಾಗಿಯೇ ನಡೆದಿದೆ. ಸಾಮಾನ್ಯವಾಗಿ ವಿಜ್ಞಾನ ಪತ್ರಿಕೆಗಳು ಒಮ್ಮೊಮ್ಮೆ ವಿಶೇಷ ಸಂಚಿಕೆಗಳನ್ನು ಪ್ರಕಟಿಸುವುದುಂಟು. ಯಾವುದಾದರೂ ವಿಶೇಷ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆಗಳ ಪ್ರಬಂಧಗಳನ್ನೆಲ್ಲ ಒಂದೆಡೆ ಪ್ರಕಟಿಸುವುದು ಇದರ ಉದ್ದೇಶ. ಇಂತಹ ವಿಶೇಷಾಂಕಗಳಿಗೆ ಆಯಾ ವಿಷಯದಲ್ಲಿ ಹೆಸರು ಮಾಡಿದ ಸುಪ್ರಸಿದ್ಧ ವಿಜ್ಞಾನಿಗಳನ್ನೇ ಸಂಪಾದಕರನ್ನಾಗಿಯೂ ನೇಮಿಸುವುದುಂಟು. ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ನೂರಾರು ಪ್ರಬಂಧಗಳನ್ನು ಪ್ರಕಟಿಸಿದ ಮೋಸದ ಕಥೆ ಇದು.

ಇತ್ತೀಚೆಗೆ ‘ದಿ ಸೈಂಟಿಫಿಕ್‌ ವರ್ಲ್ಡ್‌ ಜರ್ನಲ್‌’ ಎನ್ನುವ ಪತ್ರಿಕೆಗೆ ಮೂವರು ಪ್ರತಿಷ್ಠಿತ ವಿಜ್ಞಾನಿಗಳು ಹೀಗೆ ‘ತಮ್ಮ ವಿಷಯವನ್ನು ಕುರಿತು ವಿಶೇಷಾಂಕವೊಂದನ್ನು ಪ್ರಕಟಿಸಬಾರದೇಕೆ’ ಎಂದು ಪತ್ರ ಬರೆದಿದ್ದರಂತೆ. ಪತ್ರಿಕೆ ಉತ್ಸಾಹದಿಂದ ಅದಕ್ಕೆ ಒಪ್ಪಿಕೊಂಡಿತು. ಲೇಖನಗಳನ್ನು ಆಹ್ವಾನಿಸಿತು. ಲೇಖನಗಳು ಬರಲಾರಂಭಿಸಿದ ಮೇಲೆ ಪತ್ರಿಕೆಯ ಸಂಪಾದಕರಿಗೆ ಏಕೋ ಅನುಮಾನ ಬಂದಿತು. ಹಲವಾರು ಪ್ರಬಂಧಗಳು ವೈಜ್ಞಾನಿಕ ಸಂಶೋಧನೆಗಳ ಫಲವೆಂದು ತೋರುತ್ತಿರಲಿಲ್ಲ. ಇದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅಂತಹ ಪ್ರಬಂಧಗಳನ್ನು ಕಳಿಸಿದ ಲೇಖಕರ ವಿಳಾಸವೂ ಸುಳ್ಳೆಂದು ತಿಳಿಯಿತು. ಅವುಗಳಲ್ಲಿ ಬಳಸಿದ ಪದಪುಂಜಗಳೂ ಸಾಮಾನ್ಯವಾಗಿ ವಿಜ್ಞಾನಿಗಳು ಬಳಸುವವುಗಳಂತೆ ಇರಲಿಲ್ಲ. ಕೊನೆಗೆ ತಿಳಿದದ್ದು, ಮೊದಲು ಪತ್ರ ಬರೆದ ವಿಜ್ಞಾನಿಗಳ ಪತ್ರವೇ ಕಪಟವಾಗಿತ್ತು. ಅದನ್ನು ಅವರು ಬರೆದೇ ಇರಲಿಲ್ಲ. ಅವರ ಹೆಸರಿನಲ್ಲಿ, ಅವರಂತೆಯೇ ಕಪಟವೇಷಿಗಳು ಪತ್ರ ಬರೆದು ವಿಶೇಷಾಂಕಕ್ಕೆ ನಾಂದಿ ಹಾಡಿದ್ದರು. ಅನಂತರ ನೂರಾರು ಲೇಖನಗಳನ್ನು ಕಳಿಸಿದ್ದರು.

ವಿಶೇಷವೆಂದರೆ ಈ ಪ್ರಬಂಧಗಳೆಲ್ಲವನ್ನೂ ಇತ್ತೀಚೆಗೆ ಸುದ್ದಿಯಲ್ಲಿರುವ ಆರ್ಟಿಫಿಶಿಯಲ್‌ ತಂತ್ರಜ್ಞಾನದ ತಂತ್ರಗಳನ್ನು ಬಳಸಿ ಕೃತಕವಾಗಿ ಸೃಷ್ಟಿಸಲಾಗಿತ್ತು. ಅಂದರೆ ಯಾವುದೋ ಕಂಪ್ಯೂಟರ್‌ ತಂತ್ರಾಂಶ, ಯಾರ್ಯಾರದ್ದೋ ಹೆಸರಿನಲ್ಲಿ, ಯಾವುಯಾವುದೋ ವಿಷಯಗಳ ಪದಪುಂಜಗಳನ್ನಷ್ಟೆ ಹೆಣೆದು, ಕಪಟ ಮಾಹಿತಿಯನ್ನು ಸೇರಿಸಿ, ಸಂಶೋಧನಾ ಪ್ರಬಂಧವೆನ್ನುವ ಹೆಸರಿನಲ್ಲಿ ಕಳಿಸುತ್ತಿತ್ತು. ಹೀಗೆ ಲೇಖಕರೇ ಇಲ್ಲದ ಲೇಖನಗಳು ಬಂದಿದ್ದುವು. ಅವನ್ನು ಪ್ರಕಟಿಸಿದ ಮೇಲೆ ಈ ಲೋಪಗಳು ಗೊತ್ತಾದುವು. ಹೀಗಾಗಿ ಅವನ್ನೆಲ್ಲ ಹಿಂಪಡೆಯಲಾಯಿತು.

ಹೋಗಲಿ, ಇದರಿಂದ ಆ ಮೋಸಗಾರರಿಗೆ ಏನು ಲಾಭವಾಯಿತೋ? ಗೊತ್ತಿಲ್ಲ. ಆದರೆ ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸುವ ದುಬಾರಿ ವ್ಯವಸ್ಥೆಗೆ ಪೆಟ್ಟು ಬಿದ್ದಿದ್ದು ನಿಜ. ಜೊತೆಗೇ ತಮ್ಮದು ಅತಿ ‘ವಿಶ್ವಾಸಾರ್ಹ ಪತ್ರಿಕೆ’ ಎಂದು ಕೊಚ್ಚಿಕೊಳ್ಳುತ್ತಿದ್ದ ಪ್ರಕಾಶಕರ ಹಮ್ಮಿಗೆ ಹೊಡೆತ ಬಿದ್ದದ್ದೂ ನಿಜ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ವಿಜ್ಞಾನ ಎನ್ನುವ ನಂಬಿಕೆಯ ವ್ಯವಸ್ಥೆಯ ಬುಡಕ್ಕೇ ಏಟು ಬಿದ್ದಿದ್ದೂ ಸತ್ಯ. ವಿಜ್ಞಾನಿಗಳಿಗೇ ಪತ್ತೆ ಹಚ್ಚಲು ಕಷ್ಟವಾಗುವಂತಹ ಭಾಷೆಯಲ್ಲಿ ಯಂತ್ರಗಳು ಬರೆದು ಮೋಸ ಮಾಡಬಲ್ಲವು ಎಂಬುದೂ ಗೊತ್ತಾಯಿತೆನ್ನಿ! ತಂತ್ರಜ್ಞಾನವು ವಿಜ್ಞಾನಕ್ಕೆ ಕೊಟ್ಟ ಪೆಟ್ಟು ಇದು. ಹಾಗೆಯೇ ವಿಜ್ಞಾನದ ಭಾಷೆ ಇನ್ನಷ್ಟು ಸರಳಗೊಳ್ಳದಿದ್ದರೆ ಇಂತಹ ಮೋಸ ಗೊತ್ತಾಗುವುದೂ ಇಲ್ಲ ಎನ್ನುವ ಎಚ್ಚರಿಕೆಯ ಗಂಟೆಯೂ ಹೌದು. ‌

ಕುತಂತ್ರಿಗಳು

ವರ್ಷಕ್ಕೆ ಒಂದು ಪ್ರಬಂಧವನ್ನೂ ಹಿಂಪಡೆಯದಿದ್ದ ಪ್ರಕಟಣೆಗಳಲ್ಲಿಯೂ ಕಪಟ ಸಂಶೋಧನೆಗಳೂ ಕಂಡುಬಂದಿದ್ದು ಇತ್ತೀಚಿನ ಸುದ್ದಿ. ಅತ್ಯಂತ ವಿಶ್ವಾಸಾರ್ಹ ಪ್ರಕಾಶನವೆಂದು ಹೆಸರಾದ ‘ಸ್ಪ್ರಿಂಗರ್‌ ನೇಚರ್‌’ ಕೂಡ ತನ್ನ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಅರವತ್ತೈದು ಪ್ರಬಂಧಗಳನ್ನು ಹಿಂಪಡೆದಿದೆ. ‘ಎಲ್ಸೆವಿಯರ್‌’ ಸಂಸ್ಥೆಯೂ ಹೀಗೆಯೇ ಒಂದು ವಿಶೇಷಾಂಕದಲ್ಲಿ ಪ್ರಕಟವಾದ 150 ಪ್ರಬಂಧಗಳನ್ನು ಹಿಂಪಡೆದಿದೆ. ವಿಶೇಷ ಎಂದರೆ ಈ ಯಾವ ಪ್ರಬಂಧಗಳನ್ನೂ ವಿಜ್ಞಾನಿಗಳು ಬರೆದೇ ಇಲ್ಲ. ಏಕೆಂದರೆ ಇವನ್ನು ಕಳಿಸಿದವರ ವಿಳಾಸಗಳೂ ಸುಳ್ಳು. ಇಮೇಲ್‌ ವಿಳಾಸಗಳೂ ಕಪಟ. ಇನ್ನು ಈ ಪ್ರಬಂಧಗಳ ವಿಷಯಗಳೂ ಅಷ್ಟೆ. ಒಂದಕ್ಕೊಂದು ಸಂಬಂಧವಿಲ್ಲದ ವಿಷಯಗಳನ್ನು ಹೆಣೆದು ಕಟ್ಟಿದ ಪ್ರಬಂಧಗಳು. ಬಹುತೇಕ ಪ್ರಬಂಧಗಳ ಲೇಖಕರು ಚೀನೀಯರು. ಅಂದರೆ ಇದು ಚೀನೀಯರ ಕೆಲಸ ಎಂದಲ್ಲ; ಅವರ ಹೆಸರನ್ನು ಬಳಸಿ ಲೇಖನಗಳನ್ನು ಕಳಿಸಿದ ಕುತಂತ್ರಿಗಳು ಯಾರದ್ದೋ ಕೆಲಸ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು