ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಮೈಲುಗಲ್ಲು; ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್ ತಿರುಗಾಟ

Last Updated 6 ಮಾರ್ಚ್ 2021, 4:26 IST
ಅಕ್ಷರ ಗಾತ್ರ

ವಾಷಿಂಗ್ಟನ್: ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್ ತನ್ನ ಮೊದಲ ಟೆಸ್ಟ್ ಡ್ರೈವ್ (ತಿರುಗಾಟ) ಯಶಸ್ವಿಯಾಗಿ ನಡೆಸಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ 'ನಾಸಾ' ತಿಳಿಸಿದೆ. ಈ ಮೂಲಕ ಕೆಂಪು ಗ್ರಹದ ಮಿಷನ್‌ನಲ್ಲಿ ನಾಸಾ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.

ಮಂಗಳ ಗ್ರಹದಲ್ಲಿ ಜೀವಿಗಳು, ಸೂಕ್ಷ್ಮಾಣು ಜೀವಿಗಳ ಕುರುಹಗಳ ಬಗ್ಗೆ ಪರಿಶೀಲಿಸಲು ಮತ್ತು ಅಲ್ಲಿನ ಮಣ್ಣು-ಕಲ್ಲಿನ ಮಾದರಿಯನ್ನು ತರಲು ನಾಸಾ ಐತಿಹಾಸಿಕ ಪರ್ಸಿವಿಯರೆನ್ಸ್ ರೋವರ್ ನೌಕೆಯನ್ನು ರವಾನಿಸಿತ್ತು.

ಆರು ಗಾಲಿಗಳನ್ನು ಹೊಂದಿರುವ ಪರ್ಸಿವಿಯರೆನ್ಸ್ ರೋವರ್, 33 ನಿಮಿಷಗಳ ಕಾಲ 6.5 ಮೀಟರ್ (21.3 ಅಡಿ) ಸಂಚರಿಸಿದೆ ಎಂದು ನಾಸಾ ತಿಳಿಸಿದೆ. ಈ ಸಂಬಂಧ ವಿಡಿಯೊ ಹಾಗೂ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಮಂಗಳ ಗ್ರಹದ ಧೂಳಿನಲ್ಲಿ ಟೈರ್‌ಗಳನ್ನು ಇಳಿಸಿದ ಪರ್ಸಿವಿಯರೆನ್ಸ್ ನೌಕೆಯು ನಾಲ್ಕು ಮೀಟರ್ ಮುಂದಕ್ಕೆ ಚಳಿಸಿ 15 ಡಿಗ್ರಿ ಎಡಕ್ಕೆ ತಿರುಗಿ ನಂತರ 2.5 ಮೀಟರ್ ಹಿಂದಕ್ಕೆ ಚಲಿಸಿತ್ತು.

ಪರ್ಸಿವಿಯರೆನ್ಸ್ ರೋವರ್ ಚಲನೆಯು ಮಂಗಳ ಗ್ರಹ ಯೋಜನೆಯಲ್ಲಿ ಐತಿಹಾಸಿಕ ಮೈಲುಗಲ್ಲು. ಇದು ಕೇವಲ ಆರಂಭ ಮಾತ್ರ, ಮತ್ತಷ್ಟು ದೀರ್ಘ ಚಲನೆಯನ್ನು ಗುರಿಯಾಗಿಸಿದ್ದೇವೆ ಎಂದು ನಾಸಾದ ಪರ್ಸಿವಿಯರೆನ್ಸ್ ಮೊಬಿಲಿಟಿ ಟೆಸ್ಟ್ ಬೆಡ್ ಎಂಜಿನಿಯರ್ ಅನೈಸ್ ಜರಿಫಿಯನ್ ತಿಳಿಸಿದ್ದಾರೆ.

ಮಂಗಳ ಗ್ರಹದ ಮೇಲ್ಮೈಯಲ್ಲಿ ಹೆಚ್ಚಿನ ಚಲನೆಗಾಗಿ ಸಂಭವನೀಯ ಮಾರ್ಗಗಳನ್ನು ಅಧ್ಯಯನ ನಡೆಸಲಾಗುತ್ತಿದೆ ಎಂದು ನಾಸಾ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ರೋವರ್ ಹೊತ್ತೆಯ್ಯುವ ಹೆಲಿಕಾಪ್ಟರ್ ಡ್ರೋನ್‌ನ ಮೊದಲ ಹಾರಾಟಕ್ಕೂ ಎಂಜಿನಿಯರ್‌ಗಳು ತಯಾರಿ ನಡೆಸುತ್ತಿದ್ದಾರೆ ಪರ್ಸಿವಿಯರೆನ್ಸ್ ಡೆಪ್ಯೂಟಿ ಮಿಷನ್ ಮ್ಯಾನೇಜರ್ ರಾಬರ್ಟ್ ಹಾಗ್ ತಿಳಿಸಿದ್ದಾರೆ.

ಪರ್ಸಿವಿಯರೆನ್ಸ್ ರೋವರ್ ಅನ್ನು ಹೊತ್ತಿದ್ದ ನೌಕೆಯನ್ನು 2020 ಜುಲೈ 30ರಂದು ಫ್ಲಾರಿಡಾದಿಂದ ಉಡ್ಡಯನ ಮಾಡಲಾಗಿತ್ತು. ಬರೋಬ್ಬರಿ 203 ದಿನಗಳ ಪ್ರಯಾಣದ ಬಳಿಕ 2021 ಫೆಬ್ರುವರಿ 18ರಂದು ಮಂಗಳನ ಅಂಗಳಕ್ಕೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT