ಗುರುವಾರ , ಅಕ್ಟೋಬರ್ 29, 2020
28 °C
ಹೈಪರ್‌ಲೂಪ್‌: ಕೊಳವೆಯೊಳಗಿನ ಕೋಲ್ಮಿಂಚು

PV Web Exclusive: ಮೆಜೆಸ್ಟಿಕ್‌ನಿಂದ ಏರ್‌ಪೋರ್ಟ್‌ಗೆ 10 ನಿಮಿಷದ ಪ್ರಯಾಣ

ಇ.ಎಸ್. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

2050ರ ಹೊತ್ತಿಗೆ ಕೆಂಪು ಗ್ರಹ ಮಂಗಳನಲ್ಲಿ ಅಪಾರ ಉದ್ಯೋಗ ಸೃಷ್ಟಿಸಿ, ನಿತ್ಯ ಮೂರು ರಾಕೆಟ್‌‌ ಮೂಲಕ ಭೂಮಿ ಹಾಗೂ ಮಂಗಳನ ನಡುವೆ ಜನರನ್ನು ಹೊತ್ತೊಯ್ಯುವ ಯೋಜನೆಯನ್ನು ಸ್ಪೇಸ್‌ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದಾಗ ಹಲವರು ಗಲ್ಲದ ಮೇಲೆ ಬೆರಳಿಟ್ಟಿದ್ದರು. ಆದರೆ ಇದೇ ಇಲಾನ್ ಮಸ್ಕ್, ಕೊಳವೆ ಮಾರ್ಗದಲ್ಲಿ ವಿಮಾನಕ್ಕಿಂತಲೂ ವೇಗವಾಗಿ ತಲುಪುವ ಪರಿಕಲ್ಪನೆಯನ್ನು ಹೇಳಿ ಇನ್ನೂ ಎಂಟು ವರ್ಷಗಳಾಗಿಲ್ಲ. ಅಷ್ಟರಲ್ಲಾಗಲೇ ಇದು ದುಬೈನಲ್ಲಿ ಪ್ರಯಾಣಕ್ಕೆ ಸಿದ್ಧವಾಗಿದೆ. ದೂರದ ದುಬೈ ಏಕೆ, ನಮ್ಮ ಬೆಂಗಳೂರು ಹಾಗೂ ಮುಂಬೈನಲ್ಲೂ ಇನ್ನು ಕೊಳವೆ ಮಾರ್ಗದಲ್ಲಿ ಬುಲೆಟ್ ಮಾದರಿಯ ರೈಲು ಸಂಚರಿಸುವ ದಿನಗಳೂ ಹತ್ತಿರದಲ್ಲೇ ಇವೆ. 

ರೈಲಿನ ಆರಾಮ ಹಾಗೂ ವಿಮಾನದ ವೇಗ ಎರಡರ ಸಮ್ಮಿಶ್ರವಾದ ಹೈಪರ್‌ಲೂಪ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ರಾಷ್ಟ್ರ ಯಾವುದು ಎಂಬ ಚರ್ಚೆ ಈಗ ಜಾಗತಿಕಮಟ್ಟದಲ್ಲಿ ನಡೆಯುತ್ತಿದೆ. 2018ರಿಂದಲೇ ದುಬೈನಲ್ಲಿ ಹೈಪರ್‌ಲೂಪ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. 2021ಕ್ಕೆ ದುಬೈ ಹಾಗೂ ಅಬುದಬಿ ನಡುವಿನ 139 ಕಿ.ಮೀ. (ಮೂರೂವರೆ ಗಂಟೆ ಪ್ರಯಾಣ) ದೂರವನ್ನು ಕೇವಲ 12 ನಿಮಿಷಗಳಲ್ಲಿ ತಲುಪಲು ಭರದಿಂದ ಸಿದ್ಧತೆ ನಡೆದಿದೆ.

ಅಲ್ಲಿ ಹಾಗಾದರೆ, ಭಾರತದಲ್ಲಿ ಪುಣೆ ಹಾಗೂ ನವಿ ಮುಂಬೈ ನಡುವಿನ 115 ಕಿ.ಮೀ. ದೂರವನ್ನು ಹೈಪರ್‌ಲೂಪ್ 20 ನಿಮಿಷದಲ್ಲಿ ತಲುಪಬಹುದು. ಅಂದರೆ ಇಯರ್‌ಪಾಡ್‌ ಕಿವಿಗೆ ಸಿಕ್ಕಿಸಿ, ಎಫ್‌ಎಂ ನಲ್ಲಿ ಉಲಿಯುವ ಜಾಕಿಗಳ ಮಾತಿನ ಜತೆಗೆ ಒಂದೆರಡು ಹಾಡು ಪೂರ್ಣಗೊಳ್ಳುವುದರೊಳಗೆ ಮುಂಬೈಗೆ ಬಂದಿಳಿಯಬಹುದು. ಹಾಗೆಯೇ, ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಕೇವಲ 35 ಕಿ.ಮೀ. ದೂರದಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸದ್ಯದ ವಾಹನ ದಟ್ಟಣೆಯಲ್ಲಿ ಗಂಟೆಗಟ್ಟಲೆ ಸಮಯ ಬೇಕು. ಆದರೆ ಹೈಪರ್‌ಲೂಪ್‌ನಿಂದ ಹತ್ತು ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದು. 

ಪ್ರತಿ ಗಂಟೆಗೆ ಸಾವಿರಕ್ಕೂ ಅಧಿಕ ಕಿ.ಮಿ. ವೇಗ:

ಟ್ರಿಗರ್ ಒತ್ತಿದಾಕ್ಷಣ ಹ್ಯಾಮರ್ ಹೊಡೆತಕ್ಕೆ, ಸಿಲೆಂಡರ್‌ನಲ್ಲಿದ್ದ ಬುಲೆಟ್‌ ಸಿಡಿದು ಬ್ಯಾರಲ್‌ ಒಳಗೆ ಗಿರಗಿರನೆ ನುಗ್ಗುಹೋಗುವಂತೆ ಹೈಪರ್‌ಲೂಪ್‌ ಕೂಡಾ ಮಿಂಚಿನ ವೇಗದಲ್ಲಿ ಕೊಳವೆಯೊಳಗೆ ಸಂಚರಿಸುತ್ತದೆ. ಹೀಗೆ ಮಿಂಚಿ ಮರೆಯಾಗುವ ಹೈಪರ್‌ಲೂಪ್‌ನ ವೇಗ ಪ್ರತಿ ಗಂಟೆಗೆ ಒಂದು ಸಾವಿರ ಕಿ.ಮೀ. ಪುಣೆ ಹಾಗೂ ಮುಂಬೈ ನಡುವೆ ವರ್ಷಕ್ಕೆ 15 ಕೋಟಿ ಬಾರಿ ಪ್ರಯಾಣಿಸುವ ಯೋಜನೆ ಇದರದ್ದು ಎಂದಾದರೆ, ಇದರ ವೇಗವನ್ನು ಊಹಿಸಬಹುದು. ಇನ್ನೂ ಸರಳವಾಗಿ ಹೇಳಬೇಕೆಂದರೆ ಬೋಯಿಂಗ್ 707ಗಿಂತ 400ಕಿ.ಮೀ. ವೇಗ ಹಾಗೂ ಬುಗಟಿ ಕಾರಿಗಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಇದರದ್ದು ಎಂದರೆ, ಇದನ್ನೊಮ್ಮೆ ಹತ್ತಿ ಇಳಿಯಲೇಬೇಕು ಎಂದೆನಿಸದಿರದು. 

ಅಷ್ಟಕ್ಕು ಕ್ಯಾಪ್ಸೂಲ್ ಮಾದರಿಯ ಹೈಪರ್‌ಲೂಪ್‌ ರೈಲು, ಕಡಿಮೆ ಒತ್ತಡದ ಸ್ಟೀಲ್ ಕೊಳವೆಯೊಳಗಿನ ಮ್ಯಾಗ್ನೆಟಿಕ್ ಕಂಬಿ ಮೇಲೆ ಸಂಚರಿಸುವ ವಾಹನ. ಇದು ಶೇ 100ರಷ್ಟು ವಿದ್ಯುತ್ ಚಾಲಿತ ಹಾಗೂ ಚಾಲಕ ರಹಿತ. ಮ್ಯಾಗ್ನೆಟಿಕ್ ಹಳಿ ಮೇಲೆ ಆರಂಭದಲ್ಲಿ ಸಾಗುವ ಹೈಪರ್‌ ಲೂಪ್‌, ವೇಗ ಹೆಚ್ಚಿಸಿಕೊಳ್ಳುತ್ತಿದ್ದಂತೆ, ಹಳಿ ಬಿಟ್ಟು ತುಸು ಮೇಲೇರುತ್ತದೆ. ಇಷ್ಟು ಮಾತ್ರವಲ್ಲ ಕೊಳವೆಯೊಳಗೆ ಸಹಜವಾಗಿರುವ ಒತ್ತಡವನ್ನು ನಿರಂತರವಾಗಿ ಯಂತ್ರಗಳ ಮೂಲಕ ಹೊರಹಾಕುವುದರಿಂದ ತಡೆಯೇ ಇಲ್ಲದಂತೆ ನಾಗಾಲೋಟದಲ್ಲಿ ಚಲಿಸಲಿದೆ. ಹೀಗಾಗಿಯೇ ಜಗತ್ತಿನ ಅತ್ಯಂತ ಐಷಾರಾಮಿ ನಗರಗಳಾಗಿರುವ ದುಬೈ ಹಾಗೂ ಅಬುದಾಬಿ ಮೊದಲು ತಾವೇ ಹೊಂದಬೇಕು ಎಂಬ ಮಹದಾಸೆಯೊಂದಿಗೆ ಯೋಜನೆ ಪೂರ್ಣಗೊಳಿಸುವ ತವಕದಲ್ಲಿದ್ದಾರೆ.

ಬೋರಿಂಗ್ ಕಂಪನಿ: 2012ರಲ್ಲಿ ಇಂಥದ್ದೊಂದು ಸಂಚಾರ ತಂತ್ರಜ್ಞಾನ ಕುರಿತು ಹೇಳಿದ ಇಲಾನ್ ಮಸ್ಕ್, ತಮ್ಮದೇ ಆದ ಟೆಸ್ಲಾ ಕಾರನ್ನು ಕೊಳವೆ ಮೂಲಕ ವಾಷಿಂಗ್‌ಟನ್‌ನಿಂದ ನ್ಯೂಯಾರ್ಕ್‌ಗೆ ಕಳುಹಿಸಲು ಸಿದ್ಧತೆ ನಡೆಸಿದ್ದರು. ಅದಕ್ಕೊಂದು ಕಂಪನಿಯನ್ನೂ ಸ್ಥಾಪಿಸಿದರು. ಇಷ್ಟು ಆಸಕ್ತಿಕರ ವಿಷಯದ ತಂತ್ರಜ್ಞಾನಕ್ಕೆ ಅವರಿಟ್ಟ ಹೆಸರು ‘ಬೋರಿಂಗ್ ಕಂಪನಿ‘. ಈ ಎರಡು ನಗರಗಳ ನಡುವಿನ ಮೂರು ಗಂಟೆಗಳ ಪ್ರಯಾಣವನ್ನು ಅರ್ಧಗಂಟೆಗೆ ಇಳಿಸುವುದು ಈ ವೇಗದ ಕೊಳವೆ ಮಾರ್ಗದ ಉದ್ದೇಶವಾಗಿತ್ತು. 

ಆದರೆ ಎಲಾನ್ ಮಸ್ಕ್ ಅವರ ಈ ಪರಿಕಲ್ಪನೆ ಈಗ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ರೂಪ ತಾಳುತ್ತಿದೆ. ಭಾರತದಲ್ಲಿ ಕೂಡಾ. ಅಮೆರಿಕದ ವರ್ಜಿನ್, ಕೆನಡಾದ ಟ್ರಾನ್ಸ್‌ಪಾಡ್, ಭಾರತದ ಡಿಜಿಡಬ್ಲೂಎಚ್ ಹೈಪರ್‌ಲೂಪ್ ಕಂಪನಿಗಳೂ ಈ ರೇಸಿನಲ್ಲಿವೆ.

ಡಿಜಿಡಬ್ಲೂಡಿ ಕಂಪನಿಯು ಈಗಾಗಲೇ ದೆಹಲಿಯಿಂದ ಮುಂಬೈನ ನಡುವಿನ ಮೂರೂವರೆ ಗಂಟೆ ಪ್ರಯಾಣವನ್ನು 80 ನಿಮಿಷಗಳಿಗೆ ಇಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಇಷ್ಟು ಮಾತ್ರವಲ್ಲ, ಮುಂಬೈ–ಬೆಂಗಳೂರು–ಚೆನ್ನೈ ಕಾರಿಡಾರ್, ಹೈದರಾಬಾದ್–ಬೆಂಗಳೂರು–ಕೊಚ್ಚಿ ಕಾರಿಡಾರ್, ಅಮೃತಸರ–ಕೋಲ್ಕತ್ತ ಕಾರಿಡಾರ್, ಕೋಲ್ಕತ್ತ–ಚೆನ್ನೈ ಕಾರಿಡಾರ್ ನಿರ್ಮಿಸುವ ಕುರಿತೂ ತನ್ನ ಜಾಲತಾಣದಲ್ಲಿ ಹೇಳಿದೆ.

ಹಳ್ಳಿಗಳ ನಗರವಾಗಿದ್ದ ಭಾರತ, ಅತ್ಯಂತ ವೇಗವಾಗಿ ಅಂದರೆ ಶೇ 40.76ರಷ್ಟು ವೇಗದಲ್ಲಿ ಪಟ್ಟಣಗಳ ದೇಶವಾಗಿ ಬದಲಾಗುತ್ತಿದೆ. 2011ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡರೆ 2030ರ ಹೊತ್ತಿಗೆ ಶೇ 31.16ರಷ್ಟು ಜನ ನಗರವಾಸಿಗಳಾಗುತ್ತಾರೆ. ಇಷ್ಟು ವೇಗದಲ್ಲಿ ನಗರೀಕರಣವಾಗುತ್ತಿರುವ ಕಾಲಘಟ್ಟದಲ್ಲಿ ತ್ವರಿತ ಸಂಚಾರ ವ್ಯವಸ್ಥೆಯೂ ಅತ್ಯಗತ್ಯ. ಇದರಿಂದಾಗಿ ಮಹಾನಗರಗಳ ರಸ್ತೆಗಳ ಮೇಲಿನ ಒತ್ತಡವನ್ನು ತುಸುಮಟ್ಟಿಗೆ ಕಡಿತಗೊಳಿಸುವ ನಿಟ್ಟಿನಲ್ಲಿ ಹೈಪರ್‌ಲೂಪ್ ಆಶಾಕಿರಣವಾಗಿದೆ. 

ಹಾಗಿದ್ದರೆ ಹೈಪರ್‌ಲೂಪ್ ತಂತ್ರಜ್ಞಾನ ಗಗನಕುಸುಮವೇ ಸರಿ ಎಂದೆನಿಸದಿರದು. ಆಶ್ಚರ್ಯಕರ ಸಂಗತಿ ಎಂದರೆ, ಸಾಂಪ್ರದಾಯಿಕ ರೈಲು ವ್ಯವಸ್ಥೆಗಿಂತ ಇದರ ವೆಚ್ಚ ಕಡಿಮೆಯಂತೆ. ಅಂದರೆ ಸದ್ಯ ದುಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಹೈಪರ್‌ಲೂಪ್‌ಗೆ ಪ್ರತಿ ಕಿ.ಮೀ. ತಗುಲಿದ ವೆಚ್ಚ 2ರಿಂದ 4ಕೋಟಿ ಅಮೆರಿಕನ್ ಡಾಲರ್‌. ಈ ಹಣವನ್ನು 8ರಿಂದ 10 ವರ್ಷಗಳಲ್ಲಿ ಟಿಕೆಟ್ ಸಂಗ್ರಹದಿಂದಲೇ ಸಂಗ್ರಹಿಸಬಹುದು ಎನ್ನುವುದು ಈ ಯೋಜನೆಯ ಮುಖ್ಯಸ್ಥ ಬಿಬಾ ಕ್ರಿಸ್ಟರ್ ಲೆಕ್ಕಾಚಾರ.

ಇಷ್ಟೊಂದು ಹೂಡಿಕೆಯ ರೈಲಿನ ಪ್ರಯಾಣವೂ ಅಷ್ಟೇ ಅಗ್ಗವಂತೆ. ಬೀಜಿಂಗ್‌ನಿಂದ ಶಾಂಘೈ ನಡುವಿನ ವೇಗದ ರೈಲಿನಲ್ಲಿ ಪ್ರಯಾಣಕ್ಕೆ ಒಬ್ಬರಿಗೆ ₹80ಡಾಲರ್ ತಲುಗಲಿದೆ. ಹಾಗೆಯೇ ಲಂಡ್‌ನಿಂದ ಪ್ಯಾರಿಸ್ ವರೆಗೂ ಇರುವ ರೈಲಿನ ಪ್ರಯಾಣಕ್ಕೆ ₹60ಡಾಲರ್. ಆದರೆ ಹೈಪರ್‌ಲೂಪ್‌ನ ಗೋಲ್ಡ್ ಕ್ಲಾಸ್‌ನಲ್ಲಿ ಇದಕ್ಕಿಂತಲೂ ಅಗ್ಗದ ದರದಲ್ಲಿ ಸಂಚರಿಸುವಷ್ಟು ಸುಲಭದ್ದು ಎಂದೆನ್ನಲಾಗಿದೆ.

ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಕೆಲವೇ ವರ್ಷಗಳಲ್ಲಿ ಹೈಪರ್‌ಲೂಪ್ ಸಾಕಾರಗೊಂಡಿದೆ. ಇಲಾನ್ ಮಸ್ಕ್ ಪರಿಕಲ್ಪನೆಯ ಮಂಗಳನ ಅಂಗಳಕ್ಕೂ ಅಷ್ಟೇ ತ್ವರತಿವಾಗಿ ಹೋಗಿ ಬರುವ ತಂತ್ರಜ್ಞಾನದ ದಿನಗಳೂ ಶೀಘ್ರದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಕಾರ್ಯದಲ್ಲಿ ತಜ್ಞರು ತಲ್ಲೀನರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು