ನವದೆಹಲಿ: ನಾಸಾ-ಇಸ್ರೊ ಸಹಯೋಗದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಯ ನೌಕೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರುವ ಸಾಧ್ಯತೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದ್ದಾರೆ.
ಭಾರತದ ಇಬ್ಬರು ಗಗನಯಾತ್ರಿಗಳಾದ ಶುಭಾಂಶು ಶುಕ್ಲಾ ಮತ್ತು ಪ್ರಶಾಂತ್ ಬಾಲಕೃಷ್ಣ ನಾಯರ್ ಅವರನ್ನು ಬಾಹ್ಯಾಕಾಶದ ಯೋಜನೆಗೆ ನಿಯೋಜಿಸಲಾಗಿದೆ. ಸದ್ಯ ಅವರಿಬ್ಬರು ಅಮೆರಿಕದಲ್ಲಿ ಆ್ಯಕ್ಷಿಯಮ್ ಸ್ಪೇಸ್ ಆಕ್ಸ್-4 ಯೋಜನೆಯ ಭಾಗವಾಗಿ ತರಬೇತಿ ಪಡೆಯುತ್ತಿದ್ದಾರೆ.
ಆಕ್ಸ್-4 ಮಿಷನ್‌ಗಾಗಿ ಶುಕ್ಲಾ ಅವರನ್ನು ಇಸ್ರೊ ನಿಯೋಜಿಸಿದ್ದು, ನಾಯರ್ ಪರ್ಯಾಯ ಗಗನಯಾತ್ರಿ ಆಗಿದ್ದಾರೆ.
'ಮುಂದಿನ ವರ್ಷ ಏಪ್ರಿಲ್ ವೇಳೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಗಗನಯಾನಿ ಹಾರುವ ನಿರೀಕ್ಷೆಯಿದೆ' ಎಂದು ಸಚಿವರು ತಿಳಿಸಿದ್ದಾರೆ.
ಭಾರತ ಚಂದ್ರನ ಮೇಲೆ ಕಾಲಿಟ್ಟ ಆಗಸ್ಟ್ 23ರ ದಿನವನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಆಗಿ ಆಚರಿಸಲು ನಿರ್ಧರಿಸಲಾಗಿತ್ತು. ಈ ಸಂಬಂಧ ಸಚಿವರು ಮಾಹಿತಿ ನೀಡಿದರು.
ಮೊದಲ ವರ್ಷದ ಸಂಭ್ರಮದ ದಿನದಂದೇ ಚಂದ್ರಯಾನ-3 ಯೋಜನೆಯಲ್ಲಿ ಸಂಗ್ರಹಿಸಲಾದ ವೈಜ್ಞಾನಿಕ ಅಂಶಗಳನ್ನು ಇಸ್ರೊ ಬಿಡುಗಡೆ ಮಾಡುವ ಸಾಧ್ಯತೆಯಿದೆ.