2023ರಲ್ಲಿ ಸ್ಪೇಸ್‌ಎಕ್ಸ್ ಯೋಜನೆಯಡಿ ಬಾಹ್ಯಾಕಾಶಕ್ಕೆ ತೆರಳಲಿರುವ ಜಪಾನ್ ಮೂಲದ ಉದ್ಯಮಿ ಯಸಕು ಮೆಜಾವ, ತಮ್ಮೊಂದಿಗೆ 8 ಮಂದಿಯನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ.
ಜಗತ್ತಿನಾದ್ಯಂತ ಇರುವ ವಿವಿಧ ಕ್ಷೇತ್ರಗಳ 8 ಜನರಿಗೆ ನನ್ನೊಂದಿಗೆ ಖಾಸಗಿ ಬಾಹ್ಯಾಕಾಶಯಾನದಲ್ಲಿ ಭಾಗವಹಿಸಲು ನಾನು ಅವಕಾಶ ಮಾಡಿಕೊಡುತ್ತಿದ್ದೇನೆ. ಇದಕ್ಕೆ ಪೂರಕವಾಗಿ ಮೊದಲ ಹಂತದ ಆಯ್ಕೆ ಪ್ರಕ್ರಿಯೆಯನ್ನು ಮಾರ್ಚ್ 14ರಂದು ನಡೆಸಲಾಗುತ್ತದೆ. ಅಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಮೆಜಾವ ಜತೆ ಸಂದರ್ಶನ ಇರಲಿದೆ ಎಂದು ಉದ್ಯಮಿ ಮೆಜಾವ ತಿಳಿಸಿದ್ದಾರೆ.
ಎಲೊನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್ ಯೋಜನೆಯಲ್ಲಿ ಮೆಜಾವ ಪ್ರಯಾಣಿಸಲಿದ್ದು, ಪೂರ್ತಿ ಯಾತ್ರೆಯ ವೆಚ್ಚ ಭರಿಸಲಿದ್ದಾರೆ. ಆನ್‌ಲೈನ್ ಫ್ಯಾಶನ್ ಉದ್ಯಮ ಹೊಂದಿದ್ದ ಮೆಜಾವ, 2019ರಲ್ಲಿ ಅದನ್ನು ಸಾಫ್ಟ್‌ಬ್ಯಾಂಕ್‌ಗೆ ಮಾರಾಟ ಮಾಡಿದ್ದಾರೆ.
ಈಗಾಗಲೇ ಸ್ಪೇಸ್‌ಎಕ್ಸ್ ಹಲವು ಪರೀಕ್ಷಾರ್ಥ ಯೋಜನೆಗಳನ್ನು ಕೈಗೊಂಡಿದ್ದು, ಎಲೊನ್ ಮಸ್ಕ್ ಮತ್ತು ಅವರ ಕಾರ್ಯಕ್ರಮಗಳ ಬಗ್ಗೆ ನನಗೆ ನಂಬಿಕೆಯಿದೆ, ಬಾಹ್ಯಾಕಾಶ ಯೋಜನೆ ತಡವಾಗಬಹುದು ಎಂದುಕೊಂಡಿದ್ದೆ, ಆದರೆ ನಿಗದಿತ ಸಮಯಕ್ಕೆ ನಡೆಯುತ್ತಿದೆ ಎಂದು ಮೆಜಾವ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.