ಶನಿವಾರ, ಮಾರ್ಚ್ 25, 2023
24 °C
ಭೂಮಿಯೇ ಕಾರಣ– ಅಧ್ಯಯನಕಾರರ ಹೇಳಿಕೆ

PV Web Exclusive | ಚಂದ್ರನಿಗೆ ತುಕ್ಕು ಹಿಡಿಯುತ್ತಿದೆಯಂತೆ!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಂದ್ರನಲ್ಲಿ ಆಮ್ಲಜನಕ ಇಲ್ಲ. ದ್ರವ ರೂಪದ ನೀರಿಲ್ಲ (ಎರಡೂ ಧ್ರವಗಳಲ್ಲಿ ಹಾಗೂ ದೊಡ್ಡ ದೊಡ್ಡ ಕುಳಿಗಳಲ್ಲಿ ಘನೀಕೃತ ನೀರು ಇದೆ ಎಂಬುದು ಪತ್ತೆಯಾಗಿದೆ). ನೀರು, ಆಮ್ಲಜನಕ ಇಲ್ಲದಿದ್ದರೆ ತುಕ್ಕು ಹಿಡಿಯುವ ರಾಸಾಯನಿಕ ಕ್ರಿಯೆಯೇ ನಡೆಯುವುದಿಲ್ಲ. ಹೀಗಿರುವ ಚಂದ್ರನ ಮೇಲ್ಮೈನಲ್ಲಿ ತುಕ್ಕು ಹಿಡಿಯಲು ಹೇಗೆ ಸಾಧ್ಯ ಎಂಬುದು ವಿಜ್ಞಾನಿಗಳ ಅಚ್ಚರಿಗೆ ಕಾರಣ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅವರು ಬಯಸಿದ್ದಾರೆ. ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ) ಕೂಡ ಈ ವಿಚಾರದ ಬಗ್ಗೆ ಆಸಕ್ತಿ ತಳೆದಿದೆ. 

---

ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನಿಗೆ ತುಕ್ಕು ಹಿಡಿಯುತ್ತಿದೆಯಂತೆ! ಅಡ್ವಾನ್ಸಸ್‌ ವಿಜ್ಞಾನ ನಿಯತಕಾಲಿಕೆಯಲ್ಲಿ (https://advances.sciencemag.org/content/6/36/eaba1940) ಇತ್ತೀಚೆಗೆ ಪ್ರಕಟವಾದ ಅಧ್ಯಯನ ವರದಿಯಲ್ಲಿ ಸಂಶೋಧಕರು ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ನೀಡಿದ್ದಾರೆ.

ವಾತಾವರಣ ಇಲ್ಲದ ಚಂದ್ರನ ಅಂಗಳದಲ್ಲಿ ತುಕ್ಕು (rusting) ಹಿಡಿಯುವುದೇ?- ಅಚ್ಚರಿಗೊಂಡಿರುವ ವಿಜ್ಞಾನಿಗಳು ಹಾಗೂ ಖಗೋಳ ಕುತೂಹಲಿಗಳು ಕೇಳುತ್ತಿರುವ ಪ್ರಶ್ನೆ ಇದು.

ಕಬ್ಬಿಣವು ನೀರು ಹಾಗೂ ಆಮ್ಲಜನಕಕ್ಕೆ ತೆರೆದುಕೊಂಡಾಗ (ಬೆರೆತಾಗ) ತುಕ್ಕು ಹಿಡಿಯಲು ಆರಂಭಿಸುತ್ತದೆ. ಕಬ್ಬಿಣ ನಿಧಾನವಾಗಿ ಮಣ್ಣುಗೆಂಪು ಬಣ್ಣಕ್ಕೆ ತಿರುಗುತ್ತದೆ. ನಮ್ಮ ಭೂಮಿಯಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದು. ಮಂಗಳ ಗ್ರಹವು ಕೆಂಪಾಗಿ ಕಾಣಲು ತುಕ್ಕು ಹಿಡಿದಿರುವುದೇ ಕಾರಣ ಎಂಬುದು ಖಗೋಳ ವಿಜ್ಞಾನಿಗಳ ಸ್ಪಷ್ಟ ಮಾತು. ಈ ಹಿಂದೆ ಮಂಗಳನಲ್ಲಿ ಸಾಕಷ್ಟು ನೀರು ಇತ್ತು. ಆಮ್ಲಜನಕವೂ ಲಭ್ಯವಿತ್ತು. ಕಬ್ಬಿಣದ ಅಂಶದ ಖನಿಜಗಳೊಂದಿಗೆ ಇವು ಬೆರೆತು ಗ್ರಹವು ಕೆಂಪು ಬಣ್ಣಕ್ಕೆ ತಿರುಗಿದೆ ಎಂಬುದು ಅವರ ವಾದ.

ಆದರೆ, ಚಂದ್ರನಲ್ಲಿನ ಸ್ಥಿತಿ ಸಂಪೂರ್ಣ ಭಿನ್ನ. ಅಲ್ಲಿ ಆಮ್ಲಜನಕ ಇಲ್ಲ. ದ್ರವ ರೂಪದ ನೀರಿಲ್ಲ (ಎರಡೂ ಧ್ರವಗಳಲ್ಲಿ ಹಾಗೂ ದೊಡ್ಡ ದೊಡ್ಡ ಕುಳಿಗಳಲ್ಲಿ ಘನೀಕೃತ ನೀರು ಇದೆ ಎಂಬುದು ಪತ್ತೆಯಾಗಿದೆ). ನೀರು, ಆಮ್ಲಜನಕ ಇಲ್ಲದಿದ್ದರೆ ತುಕ್ಕು ಹಿಡಿಯುವ ರಾಸಾಯನಿಕ ಕ್ರಿಯೆಯೇ ನಡೆಯುವುದಿಲ್ಲ. ಹೀಗಿರುವಾಗ ಚಂದ್ರನ ಮೇಲ್ಮೈನಲ್ಲಿ ತುಕ್ಕು ಹಿಡಿಯಲು ಹೇಗೆ ಸಾಧ್ಯ ಎಂಬುದು ವಿಜ್ಞಾನಿಗಳ ಪ್ರಶ್ನೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅವರು ಬಯಸಿದ್ದಾರೆ. ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ) ಕೂಡ ಈ ವಿಚಾರದ ಬಗ್ಗೆ ಆಸಕ್ತಿ ತಳೆದಿದೆ. 

ಚಂದ್ರಯಾನದ ಹೆಜ್ಜೆ ಗುರುತು: ಈ ಹೊಸ ಅಧ್ಯಯನಕ್ಕೂ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೂ (ಇಸ್ರೊ) ಚಿಕ್ಕ ಸಂಬಂಧ ಇದೆ. ಚಂದ್ರನ ಅಧ್ಯಯನಕ್ಕಾಗಿ ಇಸ್ರೊ 2008ರಲ್ಲಿ ಕಳುಹಿಸಿದ್ದ ಚಂದ್ರಯಾನ–1 ನೌಕೆಯು, ಚಂದ್ರನ ಧ್ರುವಗಳಲ್ಲಿ ನೀರು ಹೆಪ್ಪುಗಟ್ಟಿರುವ ಸ್ಥಿತಿಯಲ್ಲಿ ಇದೆ ಎಂಬುದನ್ನು ಪತ್ತೆ ಹಚ್ಚಿತ್ತು. ಅಷ್ಟೇ ಅಲ್ಲ, ಕಬ್ಬಿಣದ ಅಂಶಗಳನ್ನು ಹೊಂದಿರುವ ಶಿಲೆಗಳು ಸೇರಿದಂತೆ ತರಹೇವಾರಿ ಖನಿಜಗಳು ಕೂಡ ಅಲ್ಲಿನ ಶುಷ್ಕ ಮಣ್ಣಿನಲ್ಲಿ ಬೆರೆತಿವೆ ಎಂಬುದನ್ನೂ ತಿಳಿಸಿತ್ತು. ಚಂದ್ರಯಾನ–1 ನೌಕೆಯಲ್ಲಿ ಅಳವಡಿಸಿದ್ದ, ಖನಿಜಗಳನ್ನು ಅಧ್ಯಯನ ಮಾಡುವ ಸಲಕರಣೆ (moon minerology mapper) ಸಂಗ್ರಹಿಸಿದ್ದ ದತ್ತಾಂಶಗಳಿಂದ ಇದು ದೃಢಪಟ್ಟಿತ್ತು (ಈ ಸಾಧನವನ್ನು ನಾಸಾದ ಜೆಟ್‌ ಪ್ರೊಪಲ್ಷನ್‌ ಲ್ಯಾಬೊರೇಟರಿ (ಜೆಪಿಎಲ್)‌ ನಿರ್ಮಿಸಿದೆ). 

ಖನಿಜದ ಮೂಲ ಕೆದಕುತ್ತಾ...: ಚಂದ್ರನ ಮೇಲ್ಮೈನಲ್ಲಿ ತುಕ್ಕು ಹಿಡಿಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿಜ್ಞಾನಿಗಳು ವಾದಿಸಲು ಕಾರಣವಾಗಿರುವುದು ಒಂದು ಖನಿಜದ ಉಪಸ್ಥಿತಿ. ಅದು ಹೆಮಟೈಟ್‌ ಅನ್ನೇ ಹೋಲುತ್ತಿದೆ.  

ಹವಾಯಿ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್‌ ಆಫ್‌ ಜಿಯೊಫಿಸಿಕ್ಸ್‌ ಅಂಡ್‌ ಪ್ಲಾನೆಟಾಲಜಿಯ (ಎಚ್‌ಐಜಿ‍ಪಿ) ಅಧ್ಯಯನಕಾರ ಶುವಾಯಿ ಲಿ ಅವರು ಚಂದ್ರಯಾನ–1 ರವಾನಿಸಿರುವ ದತ್ತಾಂಶಗಳನ್ನು ಮತ್ತಷ್ಟು ಅಧ್ಯಯನ ನಡೆಸಿ, ಚಂದ್ರನ ಎತ್ತರ ಅಕ್ಷಾಂಶಗಳಲ್ಲಿ ಹೆಮಟೈಟ್‌ ಅನ್ನೇ ಹೋಲುವ ಖನಿಜ ಇರುವುದನ್ನು ಪತ್ತೆ ಮಾಡಿದ್ದಾರೆ. ಹೆಮಟೈಟ್‌ ಅನ್ನು ನಮ್ಮಲ್ಲಿ ಕಬ್ಬಿಣದ ಅದಿರು ಎಂದು ಕರೆಯಲಾಗುತ್ತದೆ. ಇದು ಕಬ್ಬಿಣದ ಆಕ್ಸೈಡ್‌ನ ಒಂದು ರೂಪ. ಕಬ್ಬಿಣವು ಆಮ್ಲಜನಕ ಹಾಗೂ ನೀರಿನೊಂದಿಗೆ ಬೆರೆತಾಗ ರಾಸಾಯನಿಕ ಕ್ರಿಯೆ ನಡೆದು (ತುಕ್ಕು ಹಿಡಿಯುವುದು) ಇದು ಸೃಷ್ಟಿಯಾಗುತ್ತದೆ. 

ತಮ್ಮ ಸಂಶೋಧನೆಯನ್ನು ದೃಢಪಡಿಸುವುದಕ್ಕಾಗಿ ಶುವಾಯಿ ಲಿ ಅವರು ನಾಸಾದ ಜೆಟ್‌ ಪ್ರೊಪಲ್ಷನ್‌ ಲ್ಯಾಬೊರೇಟರಿಯ ವಿಜ್ಞಾನಿಗಳನ್ನು ಸಂಪರ್ಕಿಸಿ, ತಾವು ಕಂಡುಕೊಂಡಿದ್ದನ್ನು ದಾಖಲೆಗಳ ಸಮೇತ ವಿವರಿಸಿದ್ದಾರೆ. ಸಾಕ್ಷ್ಯಗಳನ್ನು ಪರಿಶೀಲಿಸಿದ ಅಲ್ಲಿನ ವಿಜ್ಞಾನಿಗಳಾದ ಅಬಿಗೇಲ್‌ ಫ್ರೇಮ್ಯಾನ್‌ ಮತ್ತು ವಿವಿಯಾನ್‌ ಸುನ್‌ ಅವರು ಹೆಮಟೈಟ್‌ನ ಉಪಸ್ಥಿತಿಯನ್ನು ದೃಢಪಡಿಸಿದ್ದಾರೆ. 

‘ಚಂದ್ರನಲ್ಲಿರುವ ಶುಷ್ಕ ವಾತಾವರಣವನ್ನು ಪರಿಗಣಿಸಿ ಹೇಳುವುದಾದರೆ, ಅಲ್ಲಿ ಹೆಮಟೈಟ್‌ ರೂಪುಗೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹಾಗಿದ್ದರೂ ಚಂದ್ರನ ಮೇಲ್ಮೈನಲ್ಲಿ ಅದು ಇದೆ. ಇದು ನನಗೆ ದೊಡ್ಡ ಒಗಟಾಗಿ ಕಾಡಿತು’ ಎಂದು ಶುವಾಯಿ ಲಿ ಹೇಳಿದ್ದಾರೆ. 

‘ಆರಂಭದಲ್ಲಿ ಇದನ್ನು ನಂಬುವುದಕ್ಕೆ ಸಾಧ್ಯವೇ ಆಗಲಿಲ್ಲ. ಅದಕ್ಕೆ ಕಾರಣ ಭೂಮಿಯ ನೈಸರ್ಗಿಕ ಉಪಗ್ರಹದಲ್ಲಿರುವ ವಾತಾವರಣ. ಆದರೆ, ನಾವೀಗ ಅಲ್ಲಿ ನೀರನ್ನು ಪತ್ತೆ ಹಚ್ಚಿರುವುದರಿಂದ ಅಲ್ಲಿ ಇನ್ನಷ್ಟು ಖನಿಜಗಳು ಇರಬಹುದು. ನೀರು ಅಲ್ಲಿನ ಕಲ್ಲುಗಳೊಂದಿಗೆ ರಾಸಾಯನಿಕ ಕ್ರಿಯೆ ಹೊಂದಿರುವ ಸಾಧ್ಯ‌ತೆಯೂ ಇದೆ. ದತ್ತಾಂಶಗಳನ್ನು ವಿಸ್ತೃತವಾಗಿ ಅಧ್ಯಯನ ನಡೆಸಿದಾಗ ಹೆಮಟೈಟ್‌ ಇರುವುದು ದೃಢಪಟ್ಟಿದೆ’ ಎಂದು ಫ್ರೇಮ್ಯಾನ್ ಹೇಳಿರುವುದಾಗಿ ಜೆಪಿಎಲ್‌ ಹೇಳಿದೆ.

ಭೂಮಿಯೇ ಕಾರಣ!

ಹೆಮಟೈಟ್‌ ಸೃಷ್ಟಿಯಾಗುವುದಕ್ಕೆ ಕಾರಣ ಏನಿರಬಹುದು ಎಂಬುದರ ಬಗ್ಗೆ ಶುವಾಯಿ ಲೀ ಅವರು ವಾದವೊಂದನ್ನು ಮುಂದಿಟ್ಟಿದ್ದಾರೆ. ಅವರ ಪ್ರಕಾರ, ಚಂದ್ರನಲ್ಲಿ ತುಕ್ಕು ಹಿಡಿಯುವುದಕ್ಕೆ ಕಾರಣ ಭೂಮಿ! ಅವರ ವಾದಕ್ಕೆ ಪೂರಕವೆಂಬಂತೆ ಭೂಮಿಯತ್ತ ಮುಖಮಾಡಿರುವ ಚಂದ್ರನ ಮೇಲ್ಮೈನ ಭಾಗದಲ್ಲೇ ಹೆಮಟೈಟ್‌ ಪ್ರಮಾಣ ಹೆಚ್ಚು ಕಂಡು ಬಂದಿದೆ. ಲೀ ಹೇಳುವಂತರ ಭೂಮಿಯಿಂದ ಆಮ್ಲಜನಕವು 3.85 ಲಕ್ಷ ಕಿ.ಮೀ ದೂರದಲ್ಲಿರುವ ಚಂದ್ರನ ಅಂಗಳಕ್ಕೆ ಸಾಗಿದೆ. ಹಲವು ಶತಕೋಟಿ ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಭೂಮಿ ಮತ್ತು ಚಂದ್ರ ಅತ್ಯಂತ ಸಮೀಪಕ್ಕೆ ಬಂದಾಗ ಹೆಚ್ಚು ಹೆಚ್ಚು ಆಮ್ಲಜನಕ ಚಂದ್ರನ ವಾತಾವರಣ ತಲುಪಿರಬಹುದು ಎಂಬುದು ಅವರ ವಿವರಣೆ. 

ಭೂಮಿಯ ಕಾಂತಕ್ಷೇತ್ರದ ಮೂಲಕ ಇಲ್ಲಿನ ಗಾಳಿಯು ಬಾಹ್ಯಾಕಾಶದಲ್ಲಿ ಸಾಗುತ್ತದೆ ಎಂಬುದು ಈ ಹಿಂದೆ ದೃಢಪಟ್ಟಿತ್ತು. ಭೂಮಿಯ ಕಕ್ಷೆಯಲ್ಲಿದ್ದ ಜಪಾನಿನ ಕಾಗುವಾ ನೌಕೆಯು, ಭೂಮಿಯ ಅತ್ಯಂತ ಮೇಲಿನ ವಾತಾವರಣದಲ್ಲಿ ಆಮ್ಲಜನಕವು ಭೂಮಿಯ ಕಾಂತಕ್ಷೇತ್ರಬಾಲದ ಮೂಲಕ (ಮ್ಯಾಗ್ನೆಟೊಟೇಲ್‌ ಎಂದು  ಹೇಳಲಾಗುತ್ತದೆ- ಗಾಳಿಯಿಂದಾಗಿ ಬಾಲದ ರೂಪದಲ್ಲಿ ಸೃಷ್ಟಿಯಾದ ಆಕಾಶಕಾಯದ ಕಾಂತೀಯಗೋಳದ ಒಂದು ಪ್ರದೇಶ) ಸಾಗುತ್ತಿದ್ದನ್ನು 2007ರಲ್ಲಿ ಪತ್ತೆ ಹೆಚ್ಚಿತ್ತು. ಇದೇ ವಿಧಾನದಲ್ಲಿ ಚಂದ್ರನಲ್ಲಿಗೆ ಭೂಮಿಯಿಂದ ಆಮ್ಲಜನಕ ಸಾಗಿರಬಹುದು ಲೀ ಶಂಕಿಸಿದ್ದಾರೆ.

ಚಂದ್ರನ ಧ್ರುವ, ಕುಳಿಗಳಲ್ಲಿ ಮಂಜುಗಡ್ಡೆ ಇದ್ದರೂ, ಈಗ ಪತ್ತೆಯಾಗಿರುವ ಹೆಮಟೈಟ್‌ ಅಲ್ಲಿಂದ ಸಾಕಷ್ಟು ದೂರದಲ್ಲಿದೆ. ಹಾಗಿದ್ದರೆ, ಹೆಮಟೈಟ್‌ ಸೃಷ್ಟಿಯಾಗಲು ನೀರು ಎಲ್ಲಿಂದ ಬಂತು ಎಂಬ ಪ್ರಶ್ನೆಯೂ ಎದ್ದಿದೆ. ವಾತಾವರಣದಲ್ಲಿ ಇರಬಹುದಾದಂತಹ ನೀರಿನ ಕಣಗಳಿಂದ ಹೆಮಟೈಟ್‌ ರಚನೆ ಆಗಿರಬಹುದು ಎಂದು ಲೀ ಅವರು ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ. ಅತ್ಯಂತ ವೇಗವಾಗಿ ಸಾಗುವ ದೂಳಿನ ಕಣಗಳು ನಿರಂತರವಾಗಿ ಚಂದ್ರನಿಗೆ ಬಡಿಯುತ್ತಿರುವುದರಿಂದ ನೀರಿನ ಅಣುಗಳನ್ನು ಬಿಡುಗಡೆ ಆಗುತ್ತಿರಬಹುದು ಅಥವಾ ದೂಳಿನ ಕಣಗಳಲ್ಲೇ ನೀರಿನ ಅಂಶ ಇರಬಹುದು. ಇದು, ಆಮ್ಲಜನಕ ಹಾಗೂ ಕಬ್ಬಿಣದೊಂದಿಗೆ ಬೆರೆತು ಹೆಮಟೈಟ್‌ ಸೃಷ್ಟಿಯಾಗಿರಬಹುದು ಎಂದು ಅವರು ಊಹಿಸಿದ್ದಾರೆ. 

ಲೀ ಅವರ ವಾದ ನಿಜ ಆಗಬೇಕೆಂದಿಲ್ಲ. ಆದರೆ, ತುಕ್ಕು ಹಿಡಿಯುವ ಪ್ರಕ್ರಿಯೆ ಚಂದ್ರನ ಅಂಗಳದಲ್ಲಿ ನಡೆಯುತ್ತಿರುವುದು ಸಾಬೀತಾಗಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ. ಅಚ್ಚರಿಗಳ ಕಣಜವಾಗಿರುವ ಚಂದ್ರ ಹಾಗೂ ಅದರ ವಾತಾವರಣದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಅಧ್ಯಯನ ದಾರಿಮಾಡಿಕೊಟ್ಟಿದೆ ಎಂದರೆ ತಪ್ಪಾಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು