ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಆಕ್ಸ್‌ಫರ್ಡ್‌ ಕೋವಿಡ್‌–19 ಲಸಿಕೆ ಪ್ರಯೋಗ

Last Updated 23 ಸೆಪ್ಟೆಂಬರ್ 2020, 9:40 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ಕಿಂಗ್‌ ಎಡ್ವರ್ಡ್‌ ಮೆಮೊರಿಯಲ್‌ (ಕೆಇಎಂ) ಆಸ್ಪತ್ರೆ ಬುಧವಾರದಿಂದ ಆಕ್ಸ್‌ಫರ್ಡ್‌ ಕೋವಿಶೀಲ್ಡ್‌ ಕೋವಿಡ್‌–19 ಲಸಿಕೆಯ ಎರಡು ಮತ್ತು 3ನೇ ಹಂತದ ಪ್ರಯೋಗ ಆರಂಭಿಸಿದೆ.

ಮುಂಬೈನ ಪರಲ್‌ ಪ್ರದೇಶದಲ್ಲಿರುವ ಆಸ್ಪತ್ರೆಯು ಮಾನವನ ಮೇಲೆ ಕೋವಿಡ್‌ ಲಸಿಕೆಯ ಅಂತಿಮ ಹಂತಗಳ ಪರೀಕ್ಷೆಗೆ ಮಹಾರಾಷ್ಟ್ರದ ಎಥಿಕ್ಸ್‌ ಕಮಿಟಿ (ವೈದ್ಯಕೀಯ ಸಂಶೋಧನೆಗಳ ಬಗ್ಗೆ ಪರಿಶೀಲಿಸಿ ನಿರ್ಣಯಿಸುವ ಸಮಿತಿ) ಅನುಮೋದನೆ ಪಡೆದಿದೆ.

ಪ್ರಯೋಗಗಳಿಗೆ ಒಳಗಾಗುವ ಸ್ವಯಂ ಸೇವಕರನ್ನು ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಶುರುವಾಗಿದೆ ಎಂದು ಕೆಇಎಂ ಆಸ್ಪತ್ರೆಯ ಮುಖ್ಯಸ್ಥ ಡಾ.ಹೇಮಂತ್‌ ದೇಶ್‌ಮುಖ್‌ ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ 100 ಜನರ ಮೇಲೆ ಕೋವಿಶೀಲ್ಡ್‌ ಲಸಿಕೆಯ ಪ್ರಯೋಗ ನಡೆಯಲಿದೆ.

ಬೃಹನ್ಮುಂಬೈ ಮುನಿಸಿಪಲ್‌ ಕಾರ್ಪೊರೇಷನ್‌ ನಿರ್ವಹಿಸುತ್ತಿರುವ ಮತ್ತೊಂದು ಆಸ್ಪತ್ರೆ ಬಿ.ವೈ.ಎಲ್‌.ನಾಯರ್‌ ಆಸ್ಪತ್ರೆಗೂ ಲಸಿಕೆ ಪ್ರಯೋಗ ನಡೆಸಲು ಅನುಮತಿ ದೊರೆತಿದೆ. ಬಿ.ವೈ.ಎಲ್‌.ನಾಯರ್‌ ಮತ್ತು ಕೆಇಎಂ ಎರಡೂ ಆಸ್ಪತ್ರೆಗಳಿಂದ ಒಟ್ಟು 200 ಜನರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.

ಆರ್‌ಟಿ–ಪಿಸಿಆರ್‌ ಮತ್ತು ಆ್ಯಂಟಿಜೆನ್‌ ಎರಡೂ ಪರೀಕ್ಷೆಗಳಲ್ಲಿ ಕೊರೊನಾ ವೈರಸ್‌ ಸೋಂಕಿಗೆ ನೆಗೆಟಿವ್‌ ಫಲಿತಾಂಶ ಬರುವ ವ್ಯಕ್ತಿಗಳಿಗೆ ಕೋವಿಡ್‌ ಲಸಿಕೆ ನೀಡಿ ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ.

ಪುಣೆ ಮೂಲದ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಬ್ರಿಟಿಷ್–ಸ್ಪೀಡಿಷ್‌ ಫಾರ್ಮಾ ಕಂಪನಿ ಆಸ್ಟ್ರಾಜೆನೆಕಾ ಜೊತೆಗೆ ಕೋವಿಡ್‌–19 ಲಸಿಕೆ ತಯಾರಿಕೆ ಒಪ್ಪಂದ ಮಾಡಿಕೊಂಡಿದೆ. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಕೋವಿಡ್‌ ಲಸಿಕೆ ಅಭಿವೃದ್ಧಿ ಪಡಿಸಿದೆ. ಪುಣೆಯಲ್ಲಿಯೂ ಮನುಷ್ಯರ ಮೇಲೆ ಲಸಿಕೆಯ ಪ್ರಯೋಗ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT