ಸೂರ್ಯನ ಅಧ್ಯಯನಕ್ಕೆ ನೌಕೆ

ವಾಷಿಂಗ್ಟನ್: ಸೂರ್ಯನನ್ನು ಸಮೀಪದಿಂದ ಅಧ್ಯಯನ ನಡೆಸುವ ಮಹತ್ವದ ಕಾರ್ಯಕ್ಕೆ ನಾಸಾ ಪ್ರಥಮ ಬಾರಿ ಮುಂದಾಗಿದೆ. ‘ಪಾರ್ಕರ್ ಸೋಲಾರ್ ಪ್ರೋಬ್(ಪಿಎಸ್ಪಿ)’ ಎನ್ನುವ ಬಾಹ್ಯಾಕಾಶ ರೋಬೊ ನೌಕೆಯನ್ನು ಸೂರ್ಯನ ಹೊರಗಿನ ಮೇಲ್ಮೈ ಪ್ರದೇಶದ ಅಧ್ಯಯನಕ್ಕೆ ಕಳುಹಿಸಲು ನಾಸಾ ಸಿದ್ಧತೆ ಕೈಗೊಂಡಿದೆ. ಸುಮಾರು 62 ಲಕ್ಷ ಕಿಲೋ ಮೀಟರ್ ದೂರದ ಸೂರ್ಯನ ಹೊರಭಾಗ ಪ್ರವೇಶಿಸಿ ಅಧ್ಯಯನ ನಡೆಸುವ ಪ್ರಯತ್ನ ಇದಾಗಿದೆ.
2009ರಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. 2015ರಲ್ಲಿ ಈ ನೌಕೆಯ ಉಡಾವಣೆಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಹಲವು ಕಾರಣಗಳಿಂದ ಮುಂದೂಡಲಾಗಿತ್ತು. ಈಗ ಆಗಸ್ಟ್ 6ಕ್ಕೆ ಮುನ್ನ ಈ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಭೌತವಿಜ್ಞಾನಿ ಯುಗೆನ್ ಪಾರ್ಕರ್ ಅವರ ಹೆಸರನ್ನು ಈ ಬಾಹ್ಯಾಕಾಶ ನೌಕೆಗೆ ಇಡಲಾಗಿದೆ. ನಾಸಾ ಇದೇ ಪ್ರಥಮ ಬಾರಿ ಜೀವಂತವಿರುವ ವ್ಯಕ್ತಿಯ ಹೆಸರನ್ನು ಬಾಹ್ಯಾಕಾಶ ನೌಕೆಗೆ ಇಟ್ಟಿದೆ. ಅತಿ ಸಮೀಪದಿಂದ ಸೂರ್ಯನ ಕುರಿತು ಇದುವರೆಗೆ ನಡೆಯದೆ ಇರುವ ಅಧ್ಯಯನವನ್ನು ಈ ಸಂದರ್ಭದಲ್ಲಿ ಕೈಗೊಳ್ಳಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ.
‘ದಶಕಗಳಿಂದ ಸೂರ್ಯನ ಕುರಿತು ಅಧ್ಯಯನ ಕೈಗೊಳ್ಳಲಾಗುತ್ತಿದೆ. ಈಗ ಮಹತ್ವದ ಹಂತದ ಅಧ್ಯಯನ ಕೈಗೊಂಡಿದ್ದೇವೆ’ ಎಂದು ನಾಸಾದ ವಿಜ್ಞಾನಿ ಅಲೆಕ್ಸ್ ಯಂಗ್ ತಿಳಿಸಿದ್ದಾರೆ.
‘ಸೂರ್ಯನ ತಾಪಮಾನಕ್ಕೆ ಏಕೆ ಕರಗುವುದಿಲ್ಲ?
‘ಪಾರ್ಕರ್ ಸೋಲಾರ್ ಪ್ರೋಬ್ಗೆ ವಿಶೇಷ ತಾಪಮಾನ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
ಇದಕ್ಕಾಗಿ ‘ಕಾರ್ಬನ್ ಕಾಂಪೋಸಿಟ್’ ಉಷ್ಣಾಂಶ ಸುರಕ್ಷತೆ ಹೊಂದಿರುವ ತಾಪಮಾನ ನಿರೋಧಕ ಕವಚವನ್ನು ಬಳಸಲಾಗಿದೆ. ಈ ವ್ಯವಸ್ಥೆಯ ವಿನ್ಯಾಸವನ್ನು ಜಾನ್ಸ್ ಹಾಪ್ಕಿನ್ಸ್ ಅನ್ವಯಿಕ ಭೌತವಿಜ್ಞಾನ ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಲಾಗಿದೆ. 1650 ಡಿಗ್ರಿ ಸೆಲ್ಸಿಯಸ್ ತಾಳಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ನೌಕೆಯು ಸಂಪೂರ್ಣ ಸುರಕ್ಷಿತವಾಗಿರಲಿದೆ. ಈ ಸುರಕ್ಷತಾ ವ್ಯವಸ್ಥೆಯ ಒಟ್ಟು ತೂಕ 72 ಕೆಜಿಯಷ್ಟು ಎಂದು ನಾಸಾ ತಿಳಿಸಿದೆ.
ಏಕೆ ಅಧ್ಯಯನ?
ಸೂರ್ಯನ ಹೊರ ವಾತಾವರಣ ‘ಕರೋನಾ’ದಲ್ಲಿನ ರಹಸ್ಯಗಳನ್ನು ತಿಳಿದುಕೊಳ್ಳುವುದು. ಸೂರ್ಯನ ಮೇಲ್ಮೈ ತಾಪಮಾನ 5537.778 ಡಿಗ್ರಿ ಸೆಲ್ಸಿಯಷ್ಟು ಇರುತ್ತದೆ. ಆದರೆ, ‘ಕರೋನಾ’ ಭಾಗವು ಇದಕ್ಕಿಂತಲೂ 100ಪಟ್ಟು ಹೆಚ್ಚಾಗಿರುತ್ತದೆ. ಹೀಗಾಗಿ, ವಿಜ್ಞಾನಿಗಳು ಈ ವಿಷಯದ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದಾರೆ ಎಂದು ನಾಸಾ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
‘ಇದು ಯಾವ ರೀತಿ ಅನುಭವ ಅಂದರೆ, ನೀವು ಬೆಂಕಿಯಿಂದ ದೂರವಾಗಿರುತ್ತೀರಿ. ಆಗ ದಿಢೀರನೆ ಅತಿಯಾದ ಬಿಸಿಯ ಅನುಭವವಾದಂತಾಗುತ್ತದೆ’ ಎಂದು ವಿಜ್ಞಾನಿ ನಿಕ್ಕಿ ಫಾಕ್ಸ್ ವಿವರಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.