ಶುಕ್ರವಾರ, ಮೇ 27, 2022
22 °C

ಐಐಎಸ್ಸಿ ವಿಜ್ಞಾನಿಗಳ ಆವಿಷ್ಕಾರ: ಅಪಸ್ಮಾರಕ್ಕೆ ದಾಳಿಂಬೆ ರಸ ಮದ್ದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾಳಿಂಬೆ ರಸ ಸೇವನೆಯಿಂದ ಆಯಸ್ಸು ಹೆಚ್ಚುತ್ತದೆ ಎಂಬ ಅಂಶವನ್ನು ರಾಜ್ಯದ ವಿಜ್ಞಾನಿಗಳು ಆರು ವರ್ಷಗಳ ಹಿಂದೆ ಪತ್ತೆಹಚ್ಚಿದ್ದರು. ಈ ಸಂಶೋಧನೆಯನ್ನು ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ಸ್ ಆಫ್ ಹೆಲ್ತ್‌ ಮಾನ್ಯ ಮಾಡಿತ್ತು. ಈ ವಿಜ್ಞಾನಿಗಳ ತಂಡವು ಅಪಸ್ಮಾರ ಗುಣಪಡಿಸಬಲ್ಲ ಇನ್ನೊಂದು ಆವಿಷ್ಕಾರವನ್ನು ನಡೆಸಿದೆ.

ಈ ಬಾರಿ ತಂಡವು ಸಂಶೋಧಿಸಿರುವ ‘ರಹಸ್ಯ ಔಷಧ’ವು ದಾಳಿಂಬೆಯಲ್ಲಿರುವ ನಿರ್ದಿಷ್ಟ ರಾಸಾಯನಿಕ. ಪ್ರಾಣಿಗಳಲ್ಲಿ ಇದು ಅಪಸ್ಮಾರವನ್ನು ಪರಿಣಾಮಕಾರಿಯಾಗಿ ಗುಣಪಡಿಸಿರುವುದು ಅಧ್ಯಯನದಲ್ಲಿ ದೃಢಪಟ್ಟಿದೆ. 

‘ದಾಳಿಂಬೆಯ ಸೇವನೆಯು ನರ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಪ್ರಯೋಜನಕಾರಿ ಎಂಬುದನ್ನು ಜಗತ್ತಿನಾದ್ಯಂತ ನಡೆದಿರುವ ವಿವಿಧ ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ಕುರಿತ ಸಂಶೋಧನೆಗಳಿಗೆ ಅಮೆರಿಕದಲ್ಲಿ ಹೆಚ್ಚಿನ ಒಲವು ವ್ಯಕ್ತವಾಗಿದೆ. ಅಮೆರಿಕದಲ್ಲಿ ಈಗಾಗಲೇ ದಾಳಿಂಬೆಯ ಸಾರಕ್ಕೆ ಸಂಬಂಧಿಸಿ 15 ಪೇಟೆಂಟ್‌ಗಳನ್ನು ಪಡೆಯಲಾಗಿದೆ. ಆದರೆ, ಅಪಸ್ಮಾರ ಚಿಕಿತ್ಸೆಗೆ ಇದನ್ನು ಬಳಸುವ ಸಾಧ್ಯತೆ ಕುರಿತು ಅಂತರರಾಷ್ಟ್ರೀಯ ಮಟ್ಟದ ಯಾವುದೇ ಸಂಶೋಧನೆಗಳು ಗಮನಹರಿಸಿರಲಿಲ್ಲ. ಈ ವಿಚಾರದಲ್ಲಿ ನಮ್ಮ ಸಂಶೋಧನೆ ಮಹತ್ವದ್ದು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಬೆಳವಣಿಗೆ ಮತ್ತು ಜೀವವೈದ್ಯಕೀಯ ವಂಶಾವಳಿ ವಿಜ್ಞಾನ (ಡೆವೆಲಪ್ಮೆಂಟಲ್‌ ಆ್ಯಂಡ್‌ ಬಯೋಮೆಡಿಕಲ್‌ ಜೆನೆಟಿಕ್ಸ್‌) ಪ್ರಾಧ್ಯಾಪಕ ಡಾ.ಉಪೇಂದ್ರ ನೊಂಗ್ಥೊಂಬಾ ತಿಳಿಸಿದರು. ಅವರು ಈ ಅಧ್ಯಯನ ತಂಡದ ಹಿರಿಯ ಸಂಶೋಧಕರು.   

ಪ್ರಸ್ತುತ ಅಪಸ್ಮಾರ ಚಿಕಿತ್ಸೆಗೆ 12 ಬಗೆಯ ಔಷಧಗಳು ಲಭ್ಯ. ಅವುಗಳನ್ನು ನಿರಂತರವಾಗಿ ಮೂರರಿಂದ ಐದು ವರ್ಷಗಳ ಕಾಲ ಸೇವಿಸಬೇಕಾಗುತ್ತದೆ. ಆದಾಗ್ಯೂ ಅವೆಲ್ಲವೂ ಫಲಪ್ರದವಾಗುತ್ತವೆ ಎನ್ನಲಾಗದು. ಇವುಗಳಲ್ಲಿ ನಾಲ್ಕು ಔಷಧಗಳ ಬಳಕೆಗೆ ಮಾತ್ರ ವೈದ್ಯರು ಸಾಮಾನ್ಯವಾಗಿ ಶಿಫಾರಸು ಮಾಡುತ್ತಾರೆ ಎಂದು ಡಾ. ನೊಂಗ್ಥೊಂಬಾ ತಿಳಿಸಿದರು.

ಭಾರತೀಯ ಅಪಸ್ಮಾರ ಸಂಸ್ಥಯ ಬೆಂಗಳೂರು ಶಾಖೆಯ ಅಧ್ಯಕ್ಷ ಮುರಳೀಧರನ್‌ ಕೆ.ವಿ. ಅವರೂ ಈ ವಿಚಾರವನ್ನು ದೃಢಪಡಿಸಿದರು.

‘ಸತತ ಮೂರರಿಂದ ಐದು ವರ್ಷಗಳ ಕಾಲ ಸೇವಿಸಿದರೆ ಮಾತ್ರ ಈ ಔಷಧಗಳು ಅಪಸ್ಮಾರ ನಿವಾರಣೆಗೆ ಪರಿಣಾಮಕಾರಿಯಾಗಬಲ್ಲವು. ಇದರ ಲಕ್ಷಣಗಳು ಕ್ಷೀಣಿಸಿದ ಬಳಿಕವಷ್ಟೇ ವ್ಯಕ್ತಿಯು ಈ ಔಷಧಗಳ ಸೇವನೆಯನ್ನು ನಿಲ್ಲಿಸಬಹುದು. ಅಷ್ಟೇ ಅಲ್ಲ, ಈ ಔಷಧ ಸೇವಿಸುವವರು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು. ಔಷಧ ಸೇವನೆಯ ಪ್ರಮಾಣದಲ್ಲಿ ಏರುಪೇರಾದರೂ ಇದನ್ನು ಸೇವಿಸುವ ಕಾಲಾವಧಿಯನ್ನು ಮತ್ತೆ ಪುನರಾವರ್ತಿಸಬೇಕಾಗುತ್ತದೆ’ ಎಂದು ಈ ಮುರಳೀಧರನ್‌ ತಿಳಿಸಿದರು. 

ಈ ಸಾಂಪ್ರದಾಯಿಕ ಔಷಧಗಳಿಗೆ ಹೋಲಿಸಿದರೆ, ಐಐಎಸ್ಸಿಯ ವಿಜ್ಞಾನಿಗಳು ಆವಿಷ್ಕರಿಸಿರುವ ಔಷಧ ಹೆಚ್ಚು ಪರಿಣಾಮಕಾರಿಯಾಗಬಲ್ಲುದು. ಹಣ್ಣಿಗೆ ಮುತ್ತಿಗೆ ಬೀಳುವ ನೊಣದ ಮೇಲೆ ವಿಜ್ಞಾನಿಗಳು ಈ ಪ್ರಯೋಗ ನಡೆಸಿದ್ದರು.  ‘ಈ ಕಾರ್ಯವಿಧಾನವು ತುಸು ಅಚ್ಚರಿದಾಯಕ. ಪ್ರಯೋಗಕ್ಕೆ ಬಳಸಿದ ಹಣ್ಣಿನ ನೊಣಗಳಲ್ಲಿ ಜೀವಕೋಶಗಳಿಗೆ ಆದ ಹಾನಿಯು ಈ ರಾಸಾಯನಿಕ ಸಂಯುಕ್ತವನ್ನು ಉಣಿಸಿದ ಆರು ಗಂಟೆಗಳಲ್ಲಿ ಶಮನಗೊಂಡಿದೆ’ ಎಂದು ಡಾ.ನೊಂಗ್ಥೊಂಬಾ ವಿವರಿಸಿದರು.

‘ನರವ್ಯೂಹವನ್ನು ಈ ರಾಸಾಯನಿಕ ಸಂಯುಕ್ತವು ಹೇಗೆ ಸುಧಾರಿಸುತ್ತದೆ ಎಂಬ ಕಾರ್ಯವಿಧಾನವನ್ನು ಅರ್ಥ್ಯಸಿಕೊಳ್ಳುವುದೇ ಈ ಸಂಶೋಧನೆಯ ತಿರುಳು. ಇದನ್ನು ತಿಳಿದುಕೊಂಡರೆ ಅಪಸ್ಮಾರ ಚಿಕಿತ್ಸೆಯ ಚಿತ್ರಣವೇ ಬದಲಾಗಲಿದೆ’ ಎಂದರು.

ದತ್ತಾಂಶ ಸಂಗ್ರಹ ಕಾರ್ಯವನ್ನು ಪೂರ್ಣಗೊಳಿಸಿರುವ ವಿಜ್ಞಾನಿಗಳ ತಂಡವು ಈ ಆವಿಷ್ಕಾರಕ್ಕೆ ಸಂಬಂಧಿಸಿದ  ಸಂಶೋಧನಾ ಲೇಖನವನ್ನು ಪ್ರಕಟಿಸುವುದಕ್ಕೆ ಮುನ್ನ ಇಲಿಗಳ ಮೇಲೆ ಕೆಲ ತಿಂಗಳುಗಳ ಕಾಲ ಇದರ ಪ್ರಯೋಗ ನಡೆಸುವ ಮೂಲಕ ಈ ವಿಷಯದಲ್ಲಿ ಇನ್ನಷ್ಟು ಅಧ್ಯಯನ ನಡೆಸಲು ಉದ್ದೇಶಿಸಿದೆ. 

ಈ ಆವಿಷ್ಕಾರವು ಅಪಸ್ಮಾರ ಸಮಸ್ಯೆ ಎದುರಿಸುತ್ತಿರುವ ಸಮುದಾಯದ ಮೇಲೆ ಪರಿಣಾಮಬೀರಬಲ್ಲುದು. ಮುರಳೀಧರನ್ ಅವರ ಪ್ರಕಾರ, ಬೆಂಗಳೂರು ನಗರವೊಂದರಲ್ಲೇ ಪ್ರತಿ ಸಾವಿರದಲ್ಲಿ 8.8 ಮಂದಿ ಅಪಸ್ಮಾರದ ಸಮಸ್ಯೆ ಹೊಂದಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಗ್ರಾಮೀಣ ಸಮುದಾಯಗಳಲ್ಲಿ ಪ್ರತಿ ಸಾವಿರದಲ್ಲಿ 11.9ರಷ್ಟು ಮಂದಿ ಈ ಸಮಸ್ಯೆ ಎದುರಿಸುತ್ತಿದ್ದಾರೆ.

‘ಇದರರ್ಥ ಬೆಂಗಳೂರು ನಗರವೊಂದರಲ್ಲೇ 1.05 ಲಕ್ಷ ಮಂದಿ ಅಪಸ್ಮಾರದಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಇಂತಹವರ ಸಂಖ್ಯೆ 1.2 ಕೋಟಿ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು