ಶುಕ್ರವಾರ, ಜೂನ್ 5, 2020
27 °C
ಫೋರ್ಟಿಸ್ ಆಸ್ಪತ್ರೆಯಲ್ಲಿ ಥರ್ಮಲ್ ಪರೀಕ್ಷೆ ನಡೆಸುವ ರೋಬೊಟ್‌ಗಳು

ಥರ್ಮಲ್ ಪರೀಕ್ಷೆಗೆ ಬಂದ ’ಮಿತ್ರ‘

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಸ್ಪತ್ರೆ ಸಿಬ್ಬಂದಿಯ ರಕ್ಷಣೆ, ಕಾರ್ಯಕರ್ತರ ರಕ್ಷಣೆ ಮತ್ತು ತಪಾಸಣಾ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯು ಕೊವಿಡ್-19 ತಪಾಸಣೆಗೆ ’ಮಿತ್ರ‘ ಎಂಬ ರೋಬೊಟಿಕ್‌ ವ್ಯವಸ್ಥೆಯನ್ನು ಪರಿಚಯಿಸಿದೆ.

ಕೋವಿಡ್-19 ವೈರಸ್‌ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು ಮತ್ತು ಶೀತವಿದ್ದರೆ, ತಪಾಸಣೆ ನಡೆಸುವ ರೋಬೊ ಸಂವಹನದ ಮೂಲಕ ಮಾಹಿತಿ ನೀಡುತ್ತದೆ. ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಆಸ್ಪತ್ರೆ ಪ್ರವೇಶಿಸುವ ಸಂದರ್ಭದಲ್ಲಿ ಈ ರೋಬೊ ಥರ್ಮಲ್‌ ಪರೀಕ್ಷೆ ಜತೆ ಇತರೆ ಪ್ರಾಥಮಿಕ ತಪಾಸಣೆ ನಡೆಸುತ್ತದೆ.

ರೋಗಿಗಳ ತಪಾಸಣೆ ನಡೆಸುವಾಗ ಆರೋಗ್ಯ ಸಿಬ್ಬಂದಿಗೆ ಸೋಂಕು ಹರಡುವ ಸಾಧ್ಯತೆಗಳಿರುತ್ತದೆ. ಈಗ ರೋಬೊ ’ಮಿತ್ರ‘ ಅಳವಡಿಸಿರುವುದರಿಂದ, ಆರೋಗ್ಯ ಸಿಬ್ಬಂದಿಗೆ ಸ್ವಲ್ಪ ರಿಲೀಫ್‌ ಸಿಕ್ಕಂತಾಗಿದೆ.

ರೋಬೊ ’ಮಿತ್ರ‘ನ ಬಗ್ಗೆ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ವಲಯ ನಿರ್ದೇಶಕ ಡಾ.ಮನೀಶ್ ಮಟ್ಟೂ ’ವಿಶ್ವದಾದ್ಯಂತ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ವೈದ್ಯರು ಹಾಗೂ ಇತರೆ ಸಿಬ್ಬಂದಿಯಲ್ಲಿ ಸೋಂಕು ಪ್ರಮಾಣ ಅಧಿಕವಾಗಿದೆ. ಇದರಿಂದ ಕೊರೊನಾ ವೈರಸ್‌ ವಿರುದ್ಧದ ಹೋರಾಟ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಬೊಟಿಕ್ ತಪಾಸಣೆ ಸೂಕ್ತವೆಂದು ನಮಗನಿಸಿತು‘ ಎಂದು ವಿವರಿಸಿದರು.

’ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿಯೇ ರೋಗಿಗಳು, ಅವರ ಆರೈಕೆಗಾಗಿ ಬರುವವರು ಮತ್ತು ನಮ್ಮ ಸಿಬ್ಬಂದಿಯನ್ನು ರೋಬೊ ಮೂಲಕ ತಪಾಸಣೆ ನಡೆಸುತ್ತಿದ್ದೇವೆ. ಈ ಪ್ರಕ್ರಿಯೆಯಿಂದಾಗಿ ಕೊವಿಡ್-19 ಸೋಂಕು ತಗುಲಿರುವ ಯಾವುದೇ ವ್ಯಕ್ತಿ ಆಸ್ಪತ್ರೆಯ ಒಳಗೆ ಬರಲು ಸಾಧ್ಯವಾಗುವುದಿಲ್ಲ‘ ಎಂದರು. 

ಎರಡು ಹಂತದಲ್ಲಿ ತಪಾಸಣೆ

ಈ ರೋಬೊಟಿಕ್‌ ತಪಾಸಣೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ರೋಬೊ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಇದ್ದು, ಆಸ್ಪತ್ರೆ ಒಳ ಬರುವ ವ್ಯಕ್ತಿಯ ಹೆಸರು ನೋಂದಾಯಿಸಿಕೊಂಡು ಮೊಬೈಲ್ ಸಂಖ್ಯೆ ಪಡೆದುಕೊಳ್ಳುತ್ತದೆ. ನಂತರ ದೇಹದ ಉಷ್ಣಾಂಶ ತಪಾಸಣೆ ನಡೆಸಲಿದೆ. ಕೆಮ್ಮು ಮತ್ತು ಶೀತಕ್ಕೆ ಸೇರಿ ಕೊರೊನಾ ಸೋಂಕು ಸಂಬಂಧಿಸಿದ ಲಕ್ಷಣಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ವ್ಯಕ್ತಿಗೆ ಕೆಮ್ಮು ಮತ್ತು ಶೀತದಂತಹ ಯಾವುದೇ ಲಕ್ಷಣಗಳು ಕಂಡು ಬರದಿದ್ದು, ಉಷ್ಣಾಂಶ ಸಾಮಾನ್ಯ ಸ್ಥಿತಿಯಲ್ಲಿದ್ದರೆ ಈ ರೊಬೊ ಅವರಿಗೆ ಆಸ್ಪತ್ರೆ ಪ್ರವೇಶಿಸುವ ಪಾಸ್‌ನ ಪ್ರಿಂಟ್ ಕೊಡುತ್ತದೆ. ಈ ಪಾಸ್‍ನಲ್ಲಿ ತಪಾಸಣೆ ನಡೆಸಿದ ಫಲಿತಾಂಶ, ವ್ಯಕ್ತಿಯ ಹೆಸರು, ಫೋಟೊ ಇರುತ್ತದೆ.

ಒಂದು ವೇಳೆ ವ್ಯಕ್ತಿ ದೇಹದ ಉಷ್ಣಾಂಶ ಅಧಿಕವಾಗಿದ್ದರೆ ಅಥವಾ ಕೆಮ್ಮು ಮತ್ತು ಶೀತ ಇರುವುದು ಖಾತರಿಯಾದರೆ ರೋಬೊ ‘ತಪಾಸಣೆ ಪ್ರಕ್ರಿಯೆ ಅನುತ್ತೀರ್ಣ‘ ಎಂದು ನಮೂದಿಸಿ ಪಾಸ್ ನೀಡಿ, ಮುಂದಿನ ರೋಬೊ ಬಳಿ ಹೋಗುವಂತೆ ಸಲಹೆ ನೀಡುತ್ತದೆ. ಇದಕ್ಕೆ ಮುನ್ನವೇ ಎರಡನೇ ರೊಬೊಗೆ ಈ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ರವಾನಿಸಿರುತ್ತದೆ. 

ತಪಾಸಣೆ ಅನುತ್ತೀರ್ಣ ಪಾಸ್‌ ಹಿಡಿದ ವ್ಯಕ್ತಿ ಎರಡನೇ ರೋಬೊ ಬಳಿ ಬರುತ್ತಿದ್ದಂತೆ, ಆ ವ್ಯಕ್ತಿಯ ವಿವರಗಳು ತೆರೆದುಕೊಂಡು, ಫ್ಲೂ ಕ್ಲಿನಿಕ್‍ನಲ್ಲಿರುವ ವೈದ್ಯರಿಗೆ ವಿಡಿಯೊ ಮೂಲಕ ಸಂಪರ್ಕ ಕಲ್ಪಿಸುತ್ತದೆ. ವೈದ್ಯರು ವ್ಯಕ್ತಿಯನ್ನು ವಿಡಿಯೊ ಕಾಲ್‌ ಮೂಲಕ ಮಾತನಾಡಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಾರೆ.

ವ್ಯಕ್ತಿಗೆ ಕೋವಿಡ್ –19 ಸೋಂಕು ಇಲ್ಲದಿದ್ದರೆ ಆಸ್ಪತ್ರೆಗೆ ಒಳಗೆ ಹೋಗಲು ಅನುಮತಿ ಪಾಸ್‌ ಅನ್ನು ಎರಡನೇ ರೋಬೊ ನೀಡುತ್ತದೆ. ಕೊರೊನಾ ಸೋಂಕು ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ಮಾಹಿತಿ ನೀಡಿ, ವ್ಯಕ್ತಿಯನ್ನು ಮುಂದಿನ ಚಿಕಿತ್ಸೆಗೆ ಕಳಿಸುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು