ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ | ರೋಬಾಟ್‌ಗಳ ಕೃತಕ ಸ್ನಾಯುಗಳು

Published 15 ಆಗಸ್ಟ್ 2023, 23:30 IST
Last Updated 15 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಇಂದು ರೋಬಾಟ್‌ಗಳು ನಮ್ಮ ಆಧುನಿಕ ಜೀವನಶೈಲಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಬಾಹ್ಯಾಕಾಶ ವಿಜ್ಞಾನ ಮತ್ತು ರಕ್ಷಣಾ ವಿಭಾಗದ ಅವಿಭಾಜ್ಯ ಅಂಗಗಳಾಗಿವೆ. ರೋಬಾಟುಗಳ ಅನ್ವಯದಿಂದಲೇ ನಾವು ಒಂದು ಗ್ರಹದಿಂದ ಮತ್ತೊಂದು ಗ್ರಹ ಎಂದು ಇಡೀ ಸೌರಮಂಡಲವನ್ನೇ ಸುತ್ತುವ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೇವೆ. ಒಂದಷ್ಟು ಯೋಜನೆಗಳಲ್ಲಿ ತಕ್ಕಮಟ್ಟಿಗೆ ಯಶಸ್ಸು ಕೂಡ ಲಭಿಸಿದೆಯೆನ್ನಿ. ಆದರೆ ಮತ್ತೊಂದೆಡೆ ಈ ಯಶಸ್ಸಿಗೆ ತಳಹದಿಯಾದ ರೋಬಾಟ್‌ಗಳನ್ನು ಇನ್ನೂ ಅಭಿವೃದ್ದಿಪಡಿಸುವ ಸಂಶೋಧನಾಕಾರ್ಯಗಳು ಜೊತೆಜೊತೆಗೇ ಸಾಗಿವೆ. ರೋಬಾಟ್‌ಗಳು ಮನುಷ್ಯನ ಅನುಕರಣೆಯಾದರೂ ಮನುಷ್ಯನಿಗಿಂತ ಅವು ಬಹಳಷ್ಟು ವಿಷಯಗಳಲ್ಲಿ ಭಿನ್ನವೇ. ಇತ್ತೀಚೆಗೆ ಅವುಗಳಿಗೆ ನಮ್ಮಂತೆ ಭಾವನೆ, ಪ್ರಜ್ಞೆಗಳು ಮೂಡಿದರೆ ಹೇಗೆ ಎನ್ನುವ ಚರ್ಚೆಗಳೂ ನಡೆಯುತ್ತಿವೆ. ಅದೇನೆ ಇರಲಿ, ರೋಬಾಟ್‌ಗಳು ಇನ್ನೂ ಹೆಚ್ಚೆಚ್ಚು ಸುಧಾರಣೆಯಾಗಬೇಕು ಎನ್ನುವುದು ವಿಜ್ಞಾನಿಗಳ ಬಯಕೆ. ಹಾಗಾಗಿಯೇ ಮನುಷ್ಯನ ತದ್ರೂಪಿಯೇನೋ ಎನ್ನುವ ಮಟ್ಟಕ್ಕೆ ಅವನ್ನು ಸುಧಾರಿಸುತ್ತಿರುವುದನ್ನೂ ಕಾಣಬಹುದು.

ರೋಬಾಟ್‌ಗಳ ಚಲನೆಯ ಬಗ್ಗೆ ನಿಮಗೆ ತಿಳಿದೇ ಇದೆ. ಅವು ನಮ್ಮಂತೆ ಅಥವಾ ಇತರೆ ಪ್ರಾಣಿಗಳ ಹಾಗೆ ಸರಾಗವಾಗಿ ತಮ್ಮ ಕೈಕಾಲುಗಳನ್ನು ಆಡಿಸಲಾರವು. ಯಾಕೆ ಹೀಗೆ? ನಮ್ಮ ಕೈಕಾಲುಗಳಲ್ಲಿರುವ ಸ್ನಾಯುಗಳು ಐಚ್ಛಿಕ ಸ್ನಾಯುಗಳು. ಅರ್ಥಾತ್‌ ಅವು ನಮ್ಮ ಇಚ್ಛೆಗೆ ಒಳಪಡುವ ಮೃದುವಾದ ಸ್ನಾಯುಗಳು. ಬೇಕೆಂದಾಗ ಮುಂದಕ್ಕೆ ಅಥವಾ ಹಿಂದಕ್ಕೆ ಚಾಚಬಹುದು. ಆದರೆ ರೋಬಾಟುಗಳ ದೇಹ – ಹೀಗೆ ಮೃದುವಾದ ಮತ್ತು ಸುಲಭವಾಗಿ ಬಾಗುವ ಸ್ನಾಯುಗಳಿಂದ ಮಾಡಿಲ್ಲವಾದ್ದರಿಂದ ಅವುಗಳ ಚಲನೆಗೆ ಮಿತಿಯಿದೆ. ಇದೋ ಈ ಮಿತಿಯನ್ನು ಹಿಂದಿಕ್ಕಿ ನಮ್ಮಂತೆಯೇ ಸುಲಭವಾಗಿ ಚಲಿಸಲು ಸಹಾಯವಾಗುವ ಕೃತಕ ಸ್ನಾಯುವನ್ನು ಸೃಷ್ಟಿಸಿದ್ದಾರೆ ಪೆನ್‌ ಸ್ಟೇಟ್‌ ವಿಶ್ವವಿದ್ಯಾನಿಲಯದ ಕಿಂಗ್‌ ವಾಂಗ್‌ ಮತ್ತು ಸಂಗಡಿಗರು. ಈ ಸಂಶೋಧನೆಯು ಮೊನ್ನೆ ನೇಚರ್‌ ಮೆಟೀರಿಯಲ್ಸ್‌ ಪತ್ರಿಕೆಯಲ್ಲಿ ವರದಿಯಾಗಿದೆ.

ಇವರು ಸಂಶೋಧಿಸಿರುವ ಕೃತಕ ಸ್ನಾಯುವು ಒಂದು ಹೊಸಬಗೆಯ ಫೆರೋಎಲೆಕ್ಟ್ರಿಕ್‌ ಪಾಲಿಮರು. ಇವು ತಮ್ಮ ಮೇಲೆ ಬೀರಿದ ವಿದ್ಯುತ್‌ಶಕ್ತಿಯನ್ನು ತತ್‌ಕ್ಷಣವೇ ಯಾಂತ್ರಿಕಶಕ್ತಿಯಾಗಿ ಪರಿವರ್ತಿಸಿಕೊಳ್ಳಬಲ್ಲವು. ನಿರ್ದೇಶನದ ಮೇರೆಗೆ ಯಾಂತ್ರಿಕ ಶಕ್ತಿಯಿಂದಾಗಿ ಅವು ಚಲಿಸುತ್ತವೆ, ಬಾಗುತ್ತವೆ ಹಾಗೂ ಮತ್ತೆ ಮೊದಲಿನ ಸ್ಥಿತಿಗೆ ಬರುತ್ತವೆ. ಅರ್ಥಾತ್‌, ಈ ಬಗೆಯ ಪಾಲಿಮರು ಅಥವಾ ಕೃತಕ ಸ್ನಾಯುಗಳು ವೈದ್ಯಕೀಯ ಸಾಧನಗಳು, ಮುಂದುವರೆದ ರೋಬಾಟ್‌ಗಳು, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರಗಳಲ್ಲಿ ಬಹುಬೇಡಿಕೆಯ ಸಾಧನಗಳಾಗುವುದಂತೂ ಸತ್ಯ. ರೋಬಾಟ್‌ಗಳ ಮೇಲೆ ಬಲಪ್ರಯೋಗಿಸಿದಾಗ ಅವುಗಳ ಆಕಾರ ಹಾಗೂ ಚಲನೆಯಲ್ಲಿ ಹೇಗೆ ಬದಲಾವಣೆಯಾಗುತ್ತವೆ ಎನ್ನುವುದು ಒಂದು ಮುಖ್ಯ ಗುಣಲಕ್ಷಣ. ಆದರೆ, ಇದುವರೆಗೂ ಬಳಕೆಯಲ್ಲಿರುವ ರೋಬಾಟ್‌ಗಳು ಬಾಗಲಾರದ, ಸ್ಥಿರವಾಗಿರುವ ಹಾಗೂ ಕಠಿಣವಾಗಿರುವಂಥವು. ಆದರೆ ಈಗ ಪತ್ತೆಮಾಡಿರುವ ಮೃದುವಾಗಿರುವ ಫೆರೋಎಲೆಕ್ಟ್ರಿಕ್‌ ಪಾಲಿಮರುಗಳು ನಮಗೆ ಬೇಕೆಂದ ರೀತಿಯಲ್ಲಿ ಬಾಗಬಲ್ಲವು ಹಾಗೂ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಬಲ್ಲಂಥವು. ಹೆಚ್ಚುಕಡಿಮೆ ಪ್ರಾಣಿಗಳಂತೆಯೇ ಚಲನೆಯನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳಬಹುದಾದ ಒಂದು ಸೂಪರ್‌ ಸಾಧನ. ಹೀಗಾಗಿ ಈ ಮೃದು ರೋಬಾಟ್‌ಗಳು ತಮ್ಮ ಬಲ, ಸಾಮರ್ಥ್ಯ ಹಾಗೂ ಪ್ರಾಣಿಗಳ ಸ್ನಾಯುಗಳಂತೆ ಸುಲಭವಾಗಿ ಬಾಗುವ ಗುಣಲಕ್ಷಣಗಳಿಂದಾಗಿ ವಿಜ್ಞಾನಕ್ಷೇತ್ರದಲ್ಲಿ ವಿಶೇಷ ಗಮನವನ್ನು ಸೆಳೆಯುತ್ತಿವೆ. ಮೃದುವಾಗಿದ್ದರೂ, ಹೆಚ್ಚಿನ ಭಾರವನ್ನು ಹಾಗೂ ಒತ್ತಡವನ್ನು ಸಹಿಸಿಕೊಳ್ಲಬಲ್ಲ ಇವು ಸಾಫ್ಟ್‌ ರೋಬಾಟಿಕ್ಸ್‌ ಹಾಗೂ ಎಲೆಕ್ಟ್ರಾನಿಕ್ಸ್‌ನಂತಹ ವಿಜ್ಞಾನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತ್ತಷ್ಟು ಹೊಸ ಪ್ರಯೋಗಗಳಲ್ಲಿ ಬಳಕೆಗೆ ಬರುತ್ತವೆ ಎನ್ನುವುದು ವಿಜ್ಞಾನಿಗಳ ಅಂದಾಜು.

ಈ ಹೊಸ ಪಾಲಿಮರುಗಳು ಇತರೆ ಪಾಲಿಮರುಗಳಿಗಿಂತ ಅಗ್ಗವೂ ಹೌದು, ಹಗುರವೂ ಹೌದು. ಆದರೆ ಇವುಗಳ ಬಲ ಇತರೆ ಪಾಲಿಮರುಗಳಿಗಿಂತ ತುಸು ಕಡಿಮೆ ಹಾಗೂ ಇವುಗಳನ್ನು ಬಳಸಲು ಬೇಕಾಗುವ ಶಕ್ತಿ ತುಸು ಹೆಚ್ಚು ಎನ್ನುವುದು ಈ ಕೃತಕ ಸ್ನಾಯುವಿನ ಮಿತಿ. ಅರ್ಥಾತ್‌, ಈ ಪಾಲಿಮರಿನ ಮೇಲೆ ವಿದ್ಯುತ್‌ಶಕ್ತಿಯನ್ನು ಪ್ರಯೋಗಿಸಿದಾಗ ಆಕಾರದಲ್ಲಿ ಬದಲಾವಣೆಯಾಗಲು ಹೆಚ್ಚಿನ ಶಕ್ತಿಯ ಅವಶ್ಯಕತೆಯಿದೆಯಂತೆ. ಇದನ್ನು ಬಗೆಹರಿಸಲು ಇವರು ನ್ಯಾನೋಕಣಗಳನ್ನು ಬಳಸಿಕೊಂಡು, ಪರ್‌ಕೊಲೇಟಿವ್‌ ಫೆರೋಎಲೆಕ್ಟ್ರಿಕ್‌ ಪಾಲಿಮರ್‌ ನ್ಯಾನೋಕಾಂಪೋಸಿಟ್‌ ಎನ್ನುವ ಸೂಕ್ಷ್ಮವಾದ ಬಿಲ್ಲೆ ಅಥವಾ ಸಾಧನವನ್ನು ತಯಾರಿಸಿ ಕೃತಕ ಸ್ನಾಯುವಿಗೆ ಬೆಸೆದಿದ್ದಾರೆ. ಆಗ ಪಾಲಿಮರಿನೊಳಗೆ ಒಂದು ಗಟ್ಟಿಯಾದ ಬಂಧ ಏರ್ಪಡುತ್ತದೆ. ಈ ಬಂಧವು ಬೇಕಾದ್ದಕ್ಕಿಂತ ಕಡಿಮೆ ಅಂದರೆ, ಶೇ 10ಕ್ಕಿಂತಲೂ ಕಡಿಮೆ ವಿದ್ಯುತ್‌ಶಕ್ತಿಯನ್ನು ಬಳಸಿಕೊಂಡೇ ವಿದ್ಯುತ್‌ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಅಂದರೆ ಶೇ 10ಕ್ಕಿಂತಲೂ ಕಡಿಮೆ ವಿದ್ಯುತ್‌ಶಕ್ತಿಯಿಂದಲೇ ಪಾಲಿಮರು ಅಥವಾ ಸ್ನಾಯುಗಳ ಚಲನೆ ಆಗುತ್ತದೆ.

ರೋಬಾಟುಗಳ ಓಡಾಟ, ನಡೆದಾಟವೆಲ್ಲವೂ ಮನುಷ್ಯರಂತೆಯೇ ಸಹಜವಾಗಿಬಿಟ್ಟರೆ, ಆಗ ಅದು ರೋಬಾಟಿಕ್ಸ್‌ ವಿಜ್ಞಾನದಲ್ಲಿ ಮತ್ತೊಂದು ಸಾಧನೆಯೇ ಆಗುತ್ತದೆ. ಈಗಂತೂ ರೋಬಾಟ್‌ಗಳೇ ಶಸ್ತ್ರಚಿಕಿತ್ಸೆಯನ್ನೂ ನಡೆಸುತ್ತವಾದ್ದರಿಂದ ಅವುಗಳು ನಮ್ಮಷ್ಟೇ ಸಹಜವಾಗಿರಬೇಕಾದ್ದು ಅನಿವಾರ್ಯ. ಅದರಲ್ಲಿ ಈ ಕೃತಕ ಸ್ನಾಯುಗಳ ಪಾತ್ರ ಮಹತ್ವದ್ದು. ಹಾಗಾಗಿ ಈ ಕೃತಕ ಸ್ನಾಯುಗಳು ವೈದ್ಯಕೀಯ ಸಾಧನಗಳು, ಆಪ್ಟಿಕಲ್‌ ಸಾಧನಗಳು ಹಾಗೂ ಸಾಫ್ಟ್‌ ರೋಬಾಟಿಕ್ಸ್ ಕ್ಷೇತ್ರಗಳಲ್ಲಿ ಬಹಳ ಬೇಡಿಕೆಯ ಹಾಗೂ ಉಪಯುಕ್ತ ಸಾಧನವಾಗಬಲ್ಲದು ಎನ್ನುತ್ತಾರೆ, ವಾಂಗ್.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT