ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Science And Technology: ಬಯೋ–ಇ3 ಔಷಧ ಲೋಕದ ಕ್ರಾಂತಿ

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಕೃತಕ ಬುದ್ಧಿಮತ್ತೆ ಎಂಬುದು ಮಾಹಿತಿಗೋ, ಚಿತ್ರ ರಚನೆಗೋ, ಸಂಗೀತ ಸಂಯೋಜನೆಗೋ ಅಥವಾ ಡೀಪ್‌ಫೇಕ್‌ಗಳಿಗೆ ಮಾತ್ರವಲ್ಲ, ಮನುಷ್ಯನ ಜೀವಿತಾವಧಿ ಹೆಚ್ಚಿಸಲೂ ಈಗ ಬಳಕೆಯಾಗುತ್ತಿದೆ.

ಐಟಿ, ಬಿಟಿ, ಎಐ ಹೀಗೆಲ್ಲಾ ತಂತ್ರಜ್ಞಾನ ಕ್ಷೇತ್ರ ನಾಗಾಲೋಟದಲ್ಲಿ ಓಡುತ್ತಿರುವ ಈ ಕಾಲಘಟ್ಟದಲ್ಲಿ ಆರೋಗ್ಯ ಹಾಗೂ ಔಷಧ ಉದ್ಯಮವೂ ಹಲವು ಹೊಸತುಗಳೊಂದಿಗೆ ಮನುಷ್ಯರ ಗುಣಮಟ್ಟದ ಜೀವಿತಾವಧಿ ಹೆಚ್ಚಿಸುವತ್ತ ದಾಪುಗಾಲಿಡುತ್ತಿದೆ. ಇದಕ್ಕೊಂದು ಹೊಸ ಸೇರ್ಪಡೆ ಆರ್ಗನ್‌–ಆನ್‌–ಚಿಪ್‌ ಎಂಬ ಬಯೋ–ಇ3 ಎಂಬ ತಂತ್ರಜ್ಞಾನ.

ಮುಂದುವರಿದ ರಾಷ್ಟ್ರಗಳಲ್ಲಿ ಕಳೆದ ದಶಕದಲ್ಲಿ ಈ ತಂತ್ರಜ್ಞಾನದ ಮೇಲೆ ಸದ್ದಿಲ್ಲದೆ ಕೆಲಸಗಳು ನಡೆಯುತ್ತಿವೆ. ಆದರೆ ಭಾರತವು ಬಯೋಇ3 ಎಂಬ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ನೀತಿಯನ್ನು ಅಳವಡಿಸಿಕೊಂಡಿರುವುದಾಗಿ ಕಳೆದ ಆ. 24ರಂದು ಘೋಷಿಸಿದ ನಂತರ, ಈ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ರೋಗ ಲಕ್ಷಣಗಳನ್ನು ಆಧರಿಸಿ ಔಷಧ ನೀಡುವ ಪದ್ಧತಿಯಿಂದ, ರೋಗದ ಮೂಲವನ್ನೇ ಪತ್ತೆ ಮಾಡಿ, ನಿಖರ ಚಿಕಿತ್ಸೆ ನೀಡುವ ಪದ್ಧತಿಯೆಡೆಗೆ ಕರೆದೊಯ್ಯುವ ಈ ತಂತ್ರಜ್ಞಾನದಲ್ಲಿ ಕ್ಲಿನಿಕಲ್ ಟ್ರಯಲ್ಸ್‌ಗೆ ಪ್ರಾಣಿಗಳ ಬದಲು, ನೇರವಾಗಿ ಮನುಷ್ಯರ ಅಂಗಾಂಗಳ ಕೋಶವನ್ನೇ ಬಳಸಲು ಅವಕಾಶ ಕಲ್ಪಿಸುವುದು ಈ ನೀತಿಯ ಮುಖ್ಯ ಉದ್ದೇಶ.

ಜೈವಿಕ ತಂತ್ರಜ್ಞಾನ ಕ್ಷೇತ್ರ ವ್ಯಾಪ್ತಿಯ ಈ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯೂ ಇದೆ. ಇದು ಜಾರಿಗೆ ಬಂದಿದ್ದೇ ಆದಲ್ಲಿ, ಸಂಶೋಧನೆ, ಪರೀಕ್ಷೆ ಹಾಗೂ ಅನುಷ್ಠಾನ ಮತ್ತು ಮಾರುಕಟ್ಟೆ ಎಲ್ಲವೂ ತ್ವರಿತವಾಗಿ ನಡೆಯುವುದರಿಂದ ರೋಗಿಗಳು ನಿರಾಸೆಯಿಂದ ಕೈಚೆಲ್ಲಬೇಕಿಲ್ಲ ಎಂದೆನ್ನುತ್ತಾರೆ ತಜ್ಞರು.

ಅಮೆರಿಕದ ಎಲಿ ಲಿಲ್ಲಿ ಸೇರಿದಂತೆ ಮುಂಚೂಣಿಯ ಔಷಧ ಕಂಪನಿಗಳು ಈಗಾಗಲೇ ಈ ತಂತ್ರಜ್ಞಾನ ಆಧರಿಸಿ ತಮ್ಮ ಸಂಶೋಧನೆಗಳನ್ನು ಆರಂಭಿಸಿವೆ. ಮನುಷ್ಯರ ಜೀವಕೋಶವನ್ನೇ ನೇರವಾಗಿ ಕ್ಲನಿಕಲ್ ಟ್ರಯಲ್ಸ್‌ಗಳಲ್ಲಿ ಬಳಸಲಾಗುವ ಈ ಸಂಶೋಧನೆಯಲ್ಲಿ ಪ್ರಾಣಿಗಳನ್ನು ಬಳಸಲಾಗುವುದಿಲ್ಲ ಎಂಬ ಸಮಾಧಾನ ಒಂದೆಡೆಯಾದರೆ, ಮನುಷ್ಯರ ಬಳಕೆಯ ಔಷಧಗಳು, ಅವರ ದೇಹ ಪ್ರಕೃತಿಯನ್ನು ಆಧರಿಸಿ ಸಿದ್ಧಪಡಿಸುವ ಉದ್ದೇಶವೂ ಇದರ ಹಿಂದಿದೆ.

ಸಾಮನ್ಯವಾಗಿ ಇಂಥ ಕ್ಲಿನಿಕಲ್ ಟ್ರಯಲ್ಸ್‌ಗಳಲ್ಲಿ ಹೆಚ್ಚಾಗಿ ಕುಲಾಂತರಿ ಇಲಿಗಳನ್ನೇ ಬಳಸಲಾಗುತ್ತದೆ. ಇವುಗಳು ಮನುಷ್ಯನ ನಾಲ್ಕನೇ ಒಂದು ಭಾಗದಷ್ಟು ಹೋಲುತ್ತವೆ. ಹೀಗಾಗಿ ಇವುಗಳ ಮೇಲೆ ನಡೆಸಲಾಗುವ ಪ್ರಯೋಗಗಳು ನಿಖರತೆ ಇದ್ದರೂ, ಅದು ನಾಲ್ಕನೇ ಒಂದು ಭಾಗದಷ್ಟು ಮಾತ್ರ ಎನ್ನುವ ವಾದವೂ ಇದೆ. ಇದಕ್ಕಾಗಿ ಆರ್ಗನ್‌–ಆನ್–ಚಿಪ್ ಎಂಬ ಈ ತಂತ್ರಜ್ಞಾನ ಸದ್ಯ ಪ್ರಚಲಿತದಲ್ಲಿದೆ.

ಆರ್ಗನ್ ಆನ್ ಚಿಪ್ ಜತೆಯಲ್ಲೇ 3ಡಿ ಕಲ್ಚರ್ ಮಾದರಿಯೂ ಈಗ ಹೊಸ ತಂತ್ರಜ್ಞಾನವಾಗಿದೆ. ಇಂಥ ಮಾದರಿಗಳಲ್ಲಿ  3D  ಸ್ಫೆರಾಯಿಡ್ಸ್,  ಆರ್ಗನಾಯಿಡ್ಸ್,  ಬಯೋಪ್ರಿಂಟಿಂಗ್  ಕೂಡಾ  ಸೇರಿವೆ. ಮನುಷ್ಯರ ಅಂಗಗಳ ಜೀವಕೋಶವನ್ನಷ್ಟೇ ಪಡೆದು, ಅದನ್ನು ಪ್ರಯೋಗಾಲಯದಲ್ಲಿ ಬೆಳೆಸಿ, ಅದರ ಮೇಲೆ ಹೊಸ ಔಷಧಗಳ ಪ್ರಯೋಗ ನಡೆಸುವುದು ಈ ತಂತ್ರಜ್ಞಾನದ ಪದ್ಧತಿ.

ಇದರಿಂದ ಆಗುವ ಲಾಭವೇನು...?

ಪ್ರಸ್ತುತ ಮತ್ತು ಸಾಂಪ್ರದಾಯಿಕ ಔಷಧ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಂದು ಹೊಸ ಲಸಿಕೆ ಅಭಿವೃದ್ಧಿಗೆ ಕನಿಷ್ಠ ದಶಕದ ಸಮಯ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಸರಾಸರಿ 2.3 ಶತಕೋಟಿ ಅಮೆರಿಕನ್ ಡಾಲರ್‌ ವೆಚ್ಚವಾಗುತ್ತಿದೆ. ಹೀಗಿದ್ದರೂ, ಅಂತಿಮವಾಗಿ ಇವು ವಿಫಲವಾಗುವ ಸಾಧ್ಯತೆಯೂ ಇದೆ.

ಸದ್ಯ ಆರ್ಗನ್‌ ಆನ್‌ ಚಿಪ್‌ನಲ್ಲಿ ಬಳಸಲಾಗುತ್ತಿರುವ ಮನುಷ್ಯರ ಕೆಲ ಅಂಗಾಂಗಳ ಮೇಲಿನ ಪ್ರಯೋಗಗಳ ಫಲಿತಾಂಶವು, ಪ್ರಾಣಿಗಳ ಮಾದರಿಗಿಂತ ಉತ್ತಮವಾಗಿವೆ. ಔಷಧಗಳ ಪರಿಣಾಮವೂ ಪರಿಣಾಮಕಾರಿಯಾಗಿದೆ. ಹೀಗಾಗಿ, ಸಂಶೋಧನೆಯ ಈ ಪ್ರಕ್ರಿಯೆ ಮೂಲಕ ಕಡಿಮೆ ಅವಧಿಯಲ್ಲಿ, ಕಡಿಮೆ ವೆಚ್ಚದಲ್ಲಿ ಔಷಧಗಳು ಮಾರುಕಟ್ಟೆಗೆ ಬರಲು ಸಾಧ್ಯ ಎನ್ನುವುದು ತಂತ್ರಜ್ಞರ ಮಾತು.

2010ರಲ್ಲಿ ಆರ್ಗನ್‌ ಆನ್ ಚಿಪ್‌ ಅನ್ವೇಷಣೆ

2010ರಲ್ಲಿ ಮೊದಲ ಬಾರಿಗೆ ಆರ್ಗನ್‌ ಆನ್ ಚಿಪ್‌ ಎಂಬ ತಂತ್ರಜ್ಞಾನವನ್ನು ಕಂಡುಹಿಡಿದಿರುವುದಾಗಿ ಸಂಶೋಧಕರು ಘೋಷಿಸಿದರು. ಇದಾಗಿ ಎರಡು ವರ್ಷಗಳ ನಂತರ ಅಮೆರಿಕ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು 10 ಕೋಟಿ ಅಮೆರಿಕನ್ ಡಾಲರ್‌ ಹೂಡಿತು. ಇದರಲ್ಲಿ ಮೂತ್ರಪಿಂಡ ಸೇರಿದಂತೆ ನಿರ್ದಿಷ್ಟ ಅಂಗಗಳ ಚಿಪ್‌ ಸಾಧನಗಳನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ವಿಜ್ಞಾನಿಗಳಿಗೆ ನೀಡಲಾಯಿತು. ಕರುಳು, ಹೃದಯ ಸೇರಿದಂತೆ ಪ್ರಮುಖ ಅಂಗಾಂಗಳು ಅನುಕರಿಸುವ ಪರಿಣಾಮಕಾರಿ ಬಾಡಿ–ಆನ್‌–ಚಿಪ್‌ ಸಾಧನಗಳನ್ನು ಅಭಿವೃದ್ಧಿಪಡಿಸಲಾಯಿತು. 

ಯಕೃತ್‌ ಹಾಗೂ ಶ್ವಾಸಕೋಶ ಸಂಬಂಧಿತ ಚಿಪ್‌ಗಳ ಅಭಿವೃದ್ಧಿಗೆ ಇದ್ದ ಕಾಯ್ದೆಗೆ ಅಮೆರಿಕ ತಿದ್ದುಪಡಿ ತಂದಿತು. ಯುರೋಪ್‌ನಲ್ಲೂ ಇಂಥದ್ದೇ ತಂತ್ರಜ್ಞಾನ ಅಂಗೀಕರಿಸುವ ಮೂಲಕ ಹಂತಹಂತವಾಗಿ ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ಬಳಕೆಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. 

ಈ ಎಲ್ಲದರ ಪರಿಣಾಮವಾಗಿ ವಿಶ್ವದ ಹಲವು ಮುಂಚೂಣಿ ಔಷಧ ತಯಾರಿಕಾ ಕಂಪನಿಗಳು ಈಗ ಆರ್ಗನ್‌ ಆನ್ ಚಿಪ್‌ ಮೇಲೆ ತಮ್ಮ ಕೆಲಸ ಆರಂಭಿಸಿವೆ. ಇವುಗಳಲ್ಲಿ ಬೇಯರ್‌ ಕಂಪನಿಯು ಯಕೃತ್ ಹಾಗೂ ಬಹು ಅಂಗಾಂಗಳ ಮೇಲೆ ಕೆಲಸ ಮಾಡುತ್ತಿದೆ. ಕೋವಿಶೀಲ್ಡ್‌ ಲಸಿಕೆ ಉತ್ಪಾದಿಸಿದ್ದ ಆಸ್ಟ್ರಾಜೆನಿಕಾ ಕೂಡಾ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದೆ. ಮೈಮೆಟಾಸ್, ಜಾನ್ಸ್‌ನ್ ಮತ್ತು ಜಾನ್ಸನ್‌ ಕೂಡಾ ಚಿಪ್‌ಗಳ ತಯಾರಿಕೆ ಆರಂಭಿಸಿವೆ.

ಭಾರತದ ಮುಂದಿರುವ ಸವಾಲುಗಳು

ಬಯೊಇ3 ನೀತಿಯ ಮೂಲಕ ಹೊಸ ಬಗೆಯ ಔಷಧ ಹಾಗೂ ಕ್ಲಿನಿಕಲ್ ಟ್ರಯಲ್ಸ್‌ಗಳ ಸಾಧ್ಯತೆಗಾಗಿ 2019ರ ಕಾಯ್ದೆಗೆ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತಂದಿದೆ. ಈ ಕುರಿತಂತೆ ಹೈದರಾಬಾದ್‌ನಲ್ಲಿರುವ ಕೋಶ ಹಾಗೂ ಆಣ್ವಿಕ ಜೀವವಿಜ್ಞಾನ ಕುರಿತ ಸಿಎಸ್ಐಆರ್ ಕೇಂದ್ರದಲ್ಲಿ ಈ ಹೊಸ ತಂತ್ರಜ್ಞಾನ ಕುರಿತು ಅಧ್ಯಯನಗಳು ಆರಂಭಗೊಂಡಿವೆ ಎಂದು ವರದಿಯಾಗಿದೆ.

ಆರ್ಗನ್ ಆನ್ ಚಿಪ್‌ ತಂತ್ರಜ್ಞಾನ ಬಂದಿದ್ದೇ ಆದಲ್ಲಿ, ಜೈವಿಕ ಎಂಜಿನಿಯರಿಂಗ್‌, ಫಾರ್ಮಕಾಲಜಿ, ಬಯೊಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್‌ ಹಾಗೂ ಕ್ಲಿನಿಕಲ್ ಮೆಡಿಸಿನ್‌ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಲಿದ್ದು, ವಿಫುಲ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈಗಾಗಲೇ 80ಕ್ಕೂ ಹೆಚ್ಚು ಪ್ರಯೋಗಾಲಯಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಇದರಲ್ಲಿ ಜೀವಕೋಶಗಳ 3ಡಿ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸುವ ಕ್ರಿಯೆಯೂ ಒಳಗೊಂಡಿದೆ ಎಂದು ತಜ್ಞರು ಹೇಳುತ್ತಾರೆ.

ಆದರೆ ಈ ನಿಟ್ಟಿನಲ್ಲಿ ಸಂಶೋಧಕರು ಹಾಗೂ ತಜ್ಞರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಶೈಕ್ಷಣಿಕ, ಸಂಶೋಧನೆ ಹಾಗೂ ಉದ್ಯಮಗಳನ್ನು ಬೆಸೆಯುವಂತೆ ಅನುಕೂಲವಾಗುವ ಯೋಜನೆಯನ್ನು ರೂಪಿಸಬೇಕಿದೆ ಎಂಬ ಆಗ್ರಹವೂ ಕೇಳಿಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT