ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯಿಲ್ಲದೆ ಕೊರೊನಾ ಗುಣಪಡಿಸಬಲ್ಲ ಔಷಧಿ ಸಿದ್ಧಪಡಿಸಲಾಗಿದೆ ಎಂದ ಚೀನಾ

Last Updated 19 ಮೇ 2020, 9:59 IST
ಅಕ್ಷರ ಗಾತ್ರ

ಬೀಜಿಂಗ್: ಲಸಿಕೆಯಿಲ್ಲದೇ ಕೊರೊನಾ ಸೋಂಕಿನಿಂದ ಗುಣಪಡಿಸಬಲ್ಲ ಔಷಧಿಯೊಂದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಚೀನಾದ ಪ್ರಯೋಗಾಲಯವೊಂದು ಹೇಳಿಕೊಂಡಿದೆ.

ಚೀನಾದ ಪೆಕಿಂಗ್‌ ವಿಶ್ವವಿದ್ಯಾಲಯದಲ್ಲಿ ಹೊಸ ಔಷಧಿಯ ಪ್ರಯೋಗ ನಡೆಸಲಾಗಿದೆ. ಈ ಔಷಧಿಯು ಸೋಂಕಿನಿಂದ ಗುಣಮುಖವಾಗುವ ಅವಧಿಯನ್ನು ಕಡಿಮೆ ಮಾಡಿದೆ. ಜತೆಗೆ, ವೈರಸ್‌ ನಿರೋಧಕ ಶಕ್ತಿಯನ್ನೂ ತಾತ್ಕಾಲಿಕವಾಗಿ ಸೃಷ್ಟಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಾಣಿಗಳ ಮೇಲಿನ ಪರೀಕ್ಷೆಯ ಹಂತದಲ್ಲಿ ಔಷಧಿ ಯಶಸ್ವಿಯಾಗಿದೆ ಎಂದು ವಿಶ್ವವಿದ್ಯಾಲಯದ, ಬೀಜಿಂಗ್‌ನಲ್ಲಿರುವ ‘ಅಡ್ವಾನ್ಸ್ಡ್ ಇನೊವೇಷನ್ ಸೆಂಟರ್ ಫಾರ್ ಜೀನೋಮಿಕ್ಸ್‌’ನ ನಿರ್ದೇಶಕ ಸನ್ನಿ ಕ್ಸಿ ತಿಳಿಸಿದ್ದಾರೆ.

‘ವೈರಸ್‌ ಅನ್ನು ತಟಸ್ಥಗೊಳಿಸಬಲ್ಲ ಪ್ರತಿರೋಧಕ ಕಣಗಳುಳ್ಳ ಔಷಧಿಯನ್ನು ಇಲಿಗಳ ಮೇಳೆ ಪ್ರಯೋಗಿಸಿದ ಐದು ದಿನಗಳಲ್ಲಿ ಅವುಗಳಲ್ಲಿ ವೈರಸ್‌ಗಳ ಪ್ರಮಾಣ ತುಂಬಾ ಕಡಿಮೆಯಾಗಿದೆ’ ಎಂದು ಅವರು ಹೇಳಿದ್ದಾರೆ. ಈ ಔಷಧಿಯು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಪಾತ್ರವಹಿಸಬಹುದು ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ವೈರಸ್ ಸೋಂಕಿತ ಕೋಶಗಳನ್ನು ತಟೆಗಟ್ಟಲು ಮಾನವನಲ್ಲಿರುವ ಪ್ರತಿರೋಧಕ ಕಣಗಳ ಸಹಾಯದಿಂದ ಕ್ಸಿ ಅವರ ತಂಡ ಈ ಔಷಧಿ ಸಿದ್ಧಪಡಿಸಿದೆ. ಸೋಂಕಿನಿಂದ ಚೇತರಿಸಿಕೊಂಡ 60 ಮಂದಿಯ ರಕ್ತದಿಂದ ಪ್ರತಿರೋಧಕ ಕಣಗಳನ್ನು ಪಡೆಯಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಚೀನಾದಲ್ಲಿ ಮೊದಲು ಪತ್ತೆಯಾಗಿತ್ತು. ಬಳಿಕ ವಿಶ್ವದಾದ್ಯಂತ ಹರಡಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ. ಜಗತ್ತಿನಾದ್ಯಂತ ಕೊರೊನಾಗೆ ಲಸಿಕೆ ಕಂಡುಹಿಡಿಯಲು ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ, ಲಸಿಕೆ ಅಭಿವೃದ್ಧಿಪಡಿಸಲು 12–18 ತಿಂಗಳು ಬೇಕಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೆಲ ದಿನಗಳ ಹಿಂದಷ್ಟೇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT