ಶುಕ್ರವಾರ, ಅಕ್ಟೋಬರ್ 30, 2020
26 °C

PV Web Exclusive | ಮಂಗಳನ ದಕ್ಷಿಣ ಧ್ರುವದ ತಳದಲ್ಲಿ ಜಲರಾಶಿ!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಇಟಲಿಯ ಖಗೋಳ ವಿಜ್ಞಾನಿಗಳ ತಂಡವೊಂದು, ಕೆಂಪುಗ್ರಹದ ದಕ್ಷಿಣ ಧ್ರುವದ ನೀರ್ಗಲ್ಲಿನ ತಳದಲ್ಲಿ ಹುದುಗಿರುವ ಸರೋವರವನ್ನು ಪತ್ತೆ ಮಾಡಿರುವುದಾಗಿ 2018ರಲ್ಲಿ ಹೇಳಿಕೊಂಡಿತ್ತು. ಈಗ ಅದೇ ತಂಡ, ದಕ್ಷಿಣ ಧ್ರುವದ ತಳದಲ್ಲಿ ಇನ್ನೂ ಮೂರು ಸರೋವರಗಳು ಇವೆ ಎಂದು ಹೇಳಿದೆ. ಇವು ಉಪ್ಪಿನ ಸರೋವರಗಳಾಗಿರುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದೆ. ತಮ್ಮ ಸಂಶೋಧನೆಗೆ ಪೂರಕವಾದ ದಾಖಲೆಗಳನ್ನು ವಿಜ್ಞಾನಿಗಳು ನೀಡಿದ್ದು, ಅದರ ವಿವರಗಳು ನೇಚರ್‌ ಆ್ಯಸ್ಟ್ರೋನಮಿ ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿವೆ.

***

ಸೂರ್ಯಮಂಡಲದ ಎರಡನೇ ಅತ್ಯಂತ ಚಿಕ್ಕ ಗ್ರಹ ಹಾಗೂ ಗಾತ್ರದಲ್ಲಿ ಭೂಮಿಯ ಅರ್ಧದಷ್ಟಿರುವ ಮಂಗಳ ಗ್ರಹ ಕೌತುಕಗಳ ಗಣಿ. ಜಗತ್ತಿನ ವಿವಿಧ ರಾಷ್ಟ್ರಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು, ಖಗೋಳ ವಿಜ್ಞಾನಿಗಳು ಇದರ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ದೇಶದ ಇಸ್ರೊ ಕೂಡ ‘ಮಂಗಳಯಾನ’ ಕೈಗೊಂಡಿದೆ.

ತನ್ನ ಬಣ್ಣದ ಕಾರಣಕ್ಕೆ ಕೆಂಪು ಗ್ರಹ, ಅಂಗಾರಕ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ ಮಂಗಳ ಗ್ರಹದ ಬಗ್ಗೆ ನಿರಂತರ ಸಂಶೋಧನೆಗಳು ನಡೆಯುತ್ತಿವೆ. ಅಂತರಿಕ್ಷದಲ್ಲಿರುವ ಆಕಾಶಕಾಯಗಳಲ್ಲಿ ಭೂಮಿಯಲ್ಲಿರುವಂತೆ ನೀರು ಇದೆಯೇ, ಜೀವಿಗಳ ವಾಸಕ್ಕೆ ಯೋಗ್ಯವಾದ ವಾತಾವರಣ ಇದೆಯೇ ಎಂಬ ಕುತೂಹಲ ಮಾನವನಿಗೆ ಮೊದಲಿನಿಂದಲೂ ಇದೆ. ಹಾಗಾಗಿ, ಖಗೋಳ ವಿಜ್ಞಾನಿಗಳು ಯಾವುದೇ ಗ್ರಹ ಅಥವಾ ಆಕಾಶಕಾಯಗಳ ಅಧ್ಯಯನ ಆರಂಭಿಸಿದರೂ ಅಲ್ಲಿ ನೀರಿಗಾಗಿ ಹುಡುಕಾಟ ನಡೆಸುತ್ತಾರೆ.  

ಮಂಗಳ ಗ್ರಹದಲ್ಲೂ ಇಂತಹ ಹುಡುಕಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಜೀವಜಲದ ಅಸ್ತಿತ್ವದ ಶೋಧಕ್ಕೆ ಇತಿಹಾಸವೇ ಇದೆ. ಅಂಗಾರಕನಲ್ಲಿರುವ ಕಡು ಶೀತ ವಾತಾವರಣದ‌ಲ್ಲಿ ನೀರು ಇರುವ ಸಾಧ್ಯತೆಯ ಬಗ್ಗೆ ಖಗೋಳವಿಜ್ಞಾನಿಗಳು 2000ದಲ್ಲಿ ಮೊದಲ ಬಾರಿಗೆ ಊಹಿಸಿದ್ದರು.

ಉಪ್ಪಿನ ಸರೋವರ: ಇಟಲಿಯ ಖಗೋಳ ವಿಜ್ಞಾನಿಗಳ ತಂಡವೊಂದು, ಕೆಂಪುಗ್ರಹದ ದಕ್ಷಿಣ ಧ್ರುವದ ನೀರ್ಗಲ್ಲಿನ ತಳದಲ್ಲಿ ಹುದುಗಿರುವ ಸರೋವರವನ್ನು ಪತ್ತೆ ಮಾಡಿರುವುದಾಗಿ 2018ರಲ್ಲಿ ಹೇಳಿಕೊಂಡಿತ್ತು. ಈಗ ಅದೇ ತಂಡ, ದಕ್ಷಿಣ ಧ್ರುವದ ತಳದಲ್ಲಿ  ಇನ್ನೂ ಮೂರು ಸರೋವರಗಳು ಇವೆ ಎಂದು ಹೇಳಿದೆ. ಇವು ಉಪ್ಪಿನ ಸರೋವರಗಳಾಗಿರುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದೆ. ತಮ್ಮ ಸಂಶೋಧನೆಗೆ ಪೂರಕವಾದ ದಾಖಲೆಗಳನ್ನು ವಿಜ್ಞಾನಿಗಳು ನೀಡಿದ್ದು, ಅದರ ವಿವರಗಳು ನೇಚರ್‌ ಆ್ಯಸ್ಟ್ರೋನಮಿ ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿವೆ.

ಕೆಲವು ಶತಕೋಟಿ ವರ್ಷಗಳ ಹಿಂದೆ ಮಂಗಳನ ನೆಲದಲ್ಲೂ ನೀರು ಹರಿದಿತ್ತು, ನಂತರ ಕಾಲ ಕ್ರಮೇಣದಲ್ಲಿ ಬದಲಾದ ವಾತಾವರಣದಿಂದಾಗಿ ನೀರು ಮಾಯವಾಗಿತ್ತು ಎಂದು ವಿಜ್ಞಾನಿಗಳು ಈ ಹಿಂದೆಯೇ ಶಂಕಿಸಿದ್ದರು. ಗ್ರಹದಲ್ಲಿ ಗಾಳಿಯ ಒತ್ತಡ ತೀರಾ ಕಡಿಮೆ ಇರುವುದರಿಂದ ಮೇಲ್ಮೈನಲ್ಲಿ ನೀರು ಇರುವುದಕ್ಕೆ ಸಾಧ್ಯತೆಯೇ ಇಲ್ಲ ಎಂಬುದು ವಿಜ್ಞಾನಿಗಳ ವಾದ. ಆದರೆ, ನೆಲದ/ ಹಿಮಗಲ್ಲುಗಳ ತಳದಲ್ಲಿ ಇರುವ ಸಾಧ್ಯತೆಯನ್ನು ಊಹಿಸಿದ್ದರು. 

2018ರಲ್ಲಿ ಮಂಗಳನ ದಕ್ಷಿಣ ಧ್ರುವದಲ್ಲಿರುವ ನೀರ್ಗಲ್ಲಿನ ಒಂದೂವರೆ ಕಿ.ಮೀ ಆಳದಲ್ಲಿ ಸರೋವರ ಇದೆ ಎಂದು ಹೇಳಿದ್ದ ಇಟಲಿಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ನ ವಿಜ್ಞಾನಿ ರೋಬರ್ಟೊ ಒರೊಸೀ ಹಾಗೂ ತಂಡವೇ ಈಗ, ಇನ್ನಷ್ಟು ವಿಸ್ತೃತ ಅಧ್ಯಯನ ನಡೆಸಿ, ಅದೇ ಪ್ರದೇಶದಲ್ಲಿ ಇನ್ನೂ ಮೂರು ಸರೋವರಗಳು ಇವೆ ಎಂದು ಹೇಳಿದೆ. ನೆಲದಿಂದ ಒಂದು ಕಿ.ಮೀ ಆಳಕ್ಕೆ ಉಪ್ಪಿನ ಜಲರಾಶಿ ಇದೆ ಎಂದು ತಂಡ ಹೇಳಿದೆ. 

ಪತ್ತೆ ಹಚ್ಚಿದ್ದು ಹೇಗೆ?: ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುತ್ತಿರುವ ಯುರೋಪಿನ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ (ಇಎಸ್‌ಎ) ಮಾರ್ಸ್‌ ಎಕ್ಸ್‌ಪ್ರೆಸ್‌ ಅಂತರಿಕ್ಷ ನೌಕೆಯಲ್ಲಿ (2003ರ ಡಿಸೆಂಬರ್‌ನಿಂದ ಇದು ಕಾರ್ಯಾಚರಿಸುತ್ತಿದೆ) ಅಳವಡಿಸಲಾಗಿರುವ ‘ಮಾರ್ಸಿಸ್‌’ (ಅಡ್ವಾನ್ಸ್ಡ್‌ ರೆಡಾರ್‌ ಫಾರ್‌ ಸಬ್‌ಸರ್ಫೇಸ್‌ ಅಂಡ್‌ ಐನೊಸ್ಪಿಯರ್‌ ಸೌಂಡಿಂಗ್‌–MARSIS) ಎಂಬ ರೆಡಾರ್‌ ಅನ್ನು ಬಳಸಿಕೊಂಡು ವಿಜ್ಞಾನಿಗಳು ಸರೋವರಗಳನ್ನು ಪತ್ತೆ ಹಚ್ಚಿದ್ದಾರೆ.

ನೌಕೆಯಿಂದ ರೇಡಿಯೊ ತರಂಗಗಳನ್ನು ಮಂಗಳ ಗ್ರಹಕ್ಕೆ ಕಳುಹಿಸಿ, ರೆಡಾರ್‌ ದಾಖಲಿಸಿಕೊಂಡ ಅಲ್ಲಿಂದ ಪ್ರತಿಫಲಿತವಾಗುವ ತರಂಗ/ಸಂಕೇತಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಅಧ್ಯಯನ ನಡೆಸುವ ಮೂಲಕ ಸರೋವರಗಳನ್ನು ಪತ್ತೆಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ತರಂಗಗಳ ಪ್ರತಿಫಲನಗಳನ್ನು ಆಧರಿಸಿ ನಿರ್ದಿಷ್ಟ ಸ್ಥಳದಲ್ಲಿ ಯಾವ ವಸ್ತು ಇದೆ (ಉದಾ: ಕಲ್ಲು, ಹಿಮ ಅಥವಾ ನೀರು) ಎಂಬುದನ್ನು ಪತ್ತೆಹಚ್ಚಬಹುದು. ಭೂಮಿಯ ಹಿಮ ಖಂಡದ ಅಂಟಾರ್ಕ್ಟಿಕಾದ ಹಿಮಗಲ್ಲುಗಳ ಅಡಿಯಲ್ಲಿ ದೊಡ್ಡ ಸರೋವರ ಇರುವುದನ್ನು ಇದೇ ವಿಧಾನದಿಂದ ಪತ್ತೆ ಹಚ್ಚಲಾಗಿತ್ತು. ನೀರು ಇರುವ ಕಡೆ ರೇಡಿಯೊ ತರಂಗಗಳ ಪ್ರತಿಫಲನ ಹೆಚ್ಚಿರುತ್ತದೆ ಎಂಬುದು ವಿಜ್ಞಾನಿಗಳ ವಾದ. 

‘ಮಾರ್ಸಿಸ್‌’ ಉಪಕರಣ 2010ರಿಂದ 2019ರ ನಡುವೆ ಸಂಗ್ರಹಿಸಿರುವ ದತ್ತಾಂಶಗಳನ್ನು ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ. 2018ರ ಅಧ್ಯಯನಕ್ಕೆ 2012 ಮತ್ತು 2015ರ ನಡುವೆ ಸಂಗ್ರಹಿಸಿದ್ದ ದಾಖಲೆಗಳನ್ನು ಅವರು ವಿಶ್ಲೇಷಿಸಿದ್ದರು. ಈ ಬಾರಿಯ ಅಧ್ಯಯನಕ್ಕೆ 134 ದತ್ತಾಂಶಗಳನ್ನು ಬಳಕೆ ಮಾಡಿಕೊಂಡಿದ್ದಾರೆ. 

ಜೀವಿಗಳ ವಾಸಕ್ಕೆ ಯೋಗ್ಯವಾಗಿದೆಯೇ?

ಸರೋವರಗಳು ಇವೆ ಎಂಬುದನ್ನು ಸಾಬೀತು ಮಾಡಲು ಇನ್ನಷ್ಟು ಸಾಕ್ಷ್ಯಗಳ ಅಗತ್ಯವಿದೆ ಎಂದು ಇನ್ನೂ ಕೆಲವು ವಿಜ್ಞಾನಿಗಳು ಹೇಳಿದ್ದಾರೆ. 2018ರಲ್ಲಿ ನಡೆದ ಅಧ್ಯಯನವನ್ನೂ ವಿಜ್ಞಾನಿಗಳು ಪ್ರಶ್ನಿಸಿದ್ದರು.

ಹಿಮ ಕರಗಲು ಬೇಕಾದ ಕನಿಷ್ಠ ಉಷ್ಣಾಂಶವೂ ಅಲ್ಲಿ ಇಲ್ಲದಿರುವುದರಿಂದ ಅಥವಾ ಶಾಖವನ್ನು ಬಿಡುಗಡೆ ಮಾಡುವ ವಸ್ತು ಇಲ್ಲದಿರುವುದರಿಂದ ನೀರು ಹೇಗೆ ಇರಲು ಸಾಧ್ಯ ಎಂಬುದು ಅವರ ಪ್ರಶ್ನೆ. 

ನೀರು ಇದೆ ಎಂದು ಅಧ್ಯಯನ ಹೇಳುತ್ತಿದ್ದಂತೆಯೇ, ಅಲ್ಲಿ ಜೀವಿಗಳು ಇರಬಹುದಾ ಅಥವಾ ಅವುಗಳ ವಾಸಕ್ಕೆ ಯೋಗ್ಯವಾದ ವಾತಾವರಣ ಇದೆಯೇ ಎಂಬ ಚರ್ಚೆಯೂ ಆರಂಭವಾಗಿದೆ. ಹೆಚ್ಚಿನ ಅಧ್ಯಯನದಿಂದಲೇ ಇದು ಗೊತ್ತಾಗಬೇಕಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು