ಗುರುವಾರ , ಏಪ್ರಿಲ್ 2, 2020
19 °C

ಕಂಕಣ ಸೂರ್ಯಗ್ರಹಣ ನೋಡೋಣ ಬನ್ನಿ; ಕಣ್ಣಿನ ಬಗ್ಗೆ ಎಚ್ಚರವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಕಣ ಸೂರ್ಯಗ್ರಹಣ

ಡಿಸೆಂಬರ್ 26, 2019ರ ಮುಂಜಾನೆಯಿಂದಲೇ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿರುವುದು ಮೌಢ್ಯತೆ ತುಂಬಿ ಕೊಂಡಿರುವವರಲ್ಲಿ ಹೆದರಿಕೆ ಉಂಟು ಮಾಡದೇ ಇರದು. ಆ ದಿನ ಮುಂಜಾನೆ ಮನೆಗಳಲ್ಲಿ ತಿಂಡಿ ಮಾಡುವುದಿಲ್ಲ, ಹೋಟೆಲ್‌ಗಳಲ್ಲಿ ತಿಂಡಿ ಕೊಡುವುದಿಲ್ಲ, ಸ್ನಾನ ಮಾಡುವುದೂ ಗ್ರಹಣ ನಂತರವೇ. ಕೆಲವು ದೇವಾಸ್ಥಾನಗಳು ಮುಂಜಾನೆಯಿಂದಲೇ ಬಂದ್ ಆಚರಿಸುತ್ತವೆ. ಕೆಲವು ಜ್ಯೋತಿಷಿಗಳಂತೂ ಅವರ ಕಚೇರಿಗಳಲ್ಲಿ ಕುಳಿತು ಜನರಿಗೆ ಮೌಢ್ಯತೆಯ ಮಾರ್ಗದರ್ಶನ ಮಾಡುವರು! ಇಷ್ಟಕ್ಕೂ ಆ ದಿನ ಆಗಸದಲ್ಲಿ ನಡೆಯುವುದಾದರೂ ಏನು? ಈವರೆಗೂ ನಡೆಯದ ವಿಶೇಷ ಏನಾದರೂ ಸಂಭವಿಸಲಿದೆಯೇ? 

ಆಕಾಶ ಕಾಯಗಳು ನಿರಂತರ ಚಲನೆಯಲ್ಲಿರುತ್ತವೆ. ನಕ್ಷತ್ರಗಳಿಂದ ಹೊರಹೊಮ್ಮುವ ಕಿರಣಗಳಿಂದ ಗ್ರಹ, ಉಪಗ್ರಹಗಳು ಹೊಳೆಯುತ್ತಿರುತ್ತವೆ. ಯಾವ ಗ್ರಹಗಳು ಸೂರ್ಯನಿಗೆ ಎದುರಾಗಿರುತ್ತವೆಯೋ ಆ ಭಾಗದಲ್ಲಿ ಬೆಳಕು ಬೀರುತ್ತದೆ; ಇನ್ನುಳಿದ ಭಾಗ ತನ್ನದೇ ಕಾಯದ ನೆರಳಿನಲ್ಲಿ ಸಂಜೆ ಮತ್ತು ರಾತ್ರಿಯನ್ನು ಹೊಂದುತ್ತವೆ. ಹೀಗೆ ಆಕಾಶಕಾಯಗಳ ಬುಗುರಿಯ ರೀತಿ ಸುತ್ತುವಿಕೆಯಿಂದಾಗಿ, ಹಗಲು, ರಾತ್ರಿಗಳ ಆಟವನ್ನು ಕಾಣಬಹುದಾಗಿದೆ. ಆದರೆ, ಆಕಾಶಕಾಯಗಳು ಸಾಗುವ ಪಥ ಮೊಟ್ಟೆಯಾಕಾರದಿಂದಾಗಿ ಒಮ್ಮೊಮ್ಮೆ ಒಂದು ಆಕಾಶಕಾಯದ ನೆರಳು ಮತ್ತೊಂದು ಆಕಾಶಕಾಯದ ಮೇಲೆ ಬೀಳುತ್ತದೆ. ಯಾವ ಪ್ರದೇಶದಲ್ಲಿ ಇತರೆ ಆಕಾಶಕಾಯದ ನೆರಳು ಬೀಳುತ್ತದೆಯೋ, ಆ ಪ್ರದೇಶದಲ್ಲಿ ಗ್ರಹಣ ಉಂಟಾಗುತ್ತದೆ.

ಇದನ್ನೂ ಓದಿ: 

ಸೂರ್ಯ ಗ್ರಹಣವೆಂದರೇನು?

ಸೂರ್ಯನಿಗೆ ಎದುರಾಗಿ ಚಂದ್ರ ಮತ್ತು ಭೂಮಿ ಯಾವ ಸಂಧರ್ಭದಲ್ಲಿ ಒಂದೇ ನೇರದಲ್ಲಿ ಬರುತ್ತವೆಯೋ ಆಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದು. ಆ ಪ್ರದೇಶದಲ್ಲಿ ಸೂರ್ಯ ಗ್ರಹಣ ಉಂಟಾಗುತ್ತದೆ.

ಕಂಕಣ ಸೂರ್ಯಗ್ರಹಣ 

ಡಿಸೆಂಬರ್ 26ರ ಬೆಳಿಗ್ಗೆ 8:17ಕ್ಕೆ ಕಂಕಣ ಸೂರ್ಯಗ್ರಹಣ ಆರಂಭವಾಗಿ ಬೆಳಿಗ್ಗೆ 10:57ಕ್ಕೆ ಪೂರ್ಣಗೊಳ್ಳಲಿದೆ. ಬೆಳಿಗ್ಗೆ 9:31ಕ್ಕೆ ಗ್ರಹಣ ಪೂರ್ಣ ಪ್ರಮಾಣದಲ್ಲಿ ಗೋಚರಿಸಲಿದ್ದು ಒಟ್ಟು 2 ಗಂಟೆ 40 ನಿಮಿಷ ಮತ್ತು 6 ಸಕೆಂಡ್‌ಗಳವರೆಗೂ ಗ್ರಹಣ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಡಿ.26ರಂದು ಸೂರ್ಯನಿಗೆ ಕಂಕಣ

ಈ ಬಾರಿಯ ಸೂರ್ಯಗ್ರಹಣದ ವೇಳೆ ಚಂದ್ರ ಮತ್ತು ಸೂರ್ಯ, ಭೂಮಿಯಿಂದ ನೇರದಲ್ಲಿದ್ದರೂ ಚಂದ್ರ ಚಲಿಸುವ ಪಥದಿಂದಾಗಿ ಸೂರ್ಯನ ಮುಖಭಾಗ ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಭೂಮಿಯ ಮೇಲಿರುವ ನಮಗೆ ಹೊಳೆಯುವ ಉಂಗುರಾಕಾರದ ಸೂರ್ಯ ಮನೋಹರವಾಗಿ ಕಾಣುತ್ತದೆ. ಇದನ್ನು (ರಿಂಗ್ ಆಫ್ ಫೈರ್) ಬೆಂಕಿ ಉಂಗುರವೆಂದು ವರ್ಣಿಸಲಾಗುತ್ತದೆ.

ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಸೂರ್ಯಗ್ರಹಣ ಗೋಚರಿಸಲಿದ್ದು, ಮಧುರೈ, ಕೊಯಮತ್ತೂರು, ಚೆರವತ್ತೂರು ಹಾಗೂ ಕೋಯಿಕೋಡ್‌ನಲ್ಲಿ ಗ್ರಹಣ ಗೋಚರಿಸುವುದು. ಕರ್ನಾಟಕದಲ್ಲಿ ಮಂಗಳೂರು ಸೂರ್ಯಗ್ರಹಣ ವೀಕ್ಷಿಸಲು ಪ್ರಶಸ್ತ ಸ್ಥಳವಾಗಿದೆ.

ಇದನ್ನೂ ಓದಿ: 

ಎಚ್ಚರಿಕೆ!

ಸೂರ್ಯಗ್ರಹಣವೆಂಬುದು ಶಾಶ್ವತವಾದುದಲ್ಲ. ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುವ ಕ್ರಿಯೆಯಾಗಿದ್ದು, ಇದನ್ನು ನೋಡಲು ಕೆಲವೊಂದು ವಿಧಾನಗಳನ್ನು ಅನುಸರಿಸುವುದು ಅವಶ್ಯಕ. ಸೂರ್ಯನನ್ನು ನೇರವಾಗಿ ನೋಡುವುದು ಯಾವಾಗಲೂ ಅಪಾಯಕಾರಿ. ಸೂರ್ಯನನ್ನು ಹೆಚ್ಚು ಸಮಯ ಬರಿಗಣ್ಣಿನಿಂದ ನೋಡಿದರೆ ರೆಟಿನಾ ಪರದೆ ಸುಟ್ಟು, ಶಾಶ್ವತವಾಗಿ ಕುರುಡು ಆವರಿಸುತ್ತದೆ. ಸೂರ್ಯಗ್ರಹಣ ಕಾಲದಲ್ಲಿ ನೆರಳುಂಟಾಗುವುದರಿಂದ ನಮ್ಮ ಕಣ್ಣಿನ ರಂಧ್ರ ಹಿಗ್ಗುತ್ತದೆ. ಬೆಳಕು ರೆಟಿನಾಗೆ ನೇರವಾಗಿ ತೀಕ್ಷಣವಾಗಿ ಹರಿಯುವುದರಿಂದ ರೆಟಿನಾಗೆ ತೊಂದರೆ ತಪ್ಪಿದ್ದಲ್ಲ.

ನೋಡುವ ವಿಧಾನ‌

 ⦁ ಕನ್ನಡಿಯ ಪ್ರತಿಬಿಂಬವನ್ನು ಗೋಡೆಯ ಮೇಲೆ ಮೂಡಿಸುವುದು

ಒಂದು ಆಯತಾಕಾರದ ಕನ್ನಡಿಯನ್ನು ತೆಗೆದುಕೊಂಡು, ಅದರ ಮಧ್ಯದಲ್ಲಿ ಒಂದು ಸೆಂ.ಮೀ ರಂಧ್ರವಿರುವ ಅಯತಾಕಾರದ ಹಾಳೆಯನ್ನು ಇರಿಸಿ, ರಂಧ್ರ ಮೇಲೆ ಬೆಳಕು ಬೀಳುವಂತೆ ಹಿಡಿದು ಗೋಡೆಯ ಮೇಲೆ ಪ್ರತಿಬಿಂಬ ಮೂಡಿಸುವುದರಿಂದ ಸುಂದರವಾದ ಗ್ರಹಣ ವೀಕ್ಷಿಸಬಹುದು.

ಇದನ್ನೂ ಓದಿ: 

⦁ ಸೂಕ್ಷ್ಮ ರಂಧ್ರ ಬಿಂಬಗ್ರಾಹಿ

ಒಂದು ಆಯತಾಕಾರದ ರಟ್ಟಿನ ಪೆಟ್ಟಿಗೆಯನ್ನು ತೆಗೆದುಕೊಂಡು, ಅದರ ಒಂದು ಬದಿಯ ಕೇಂದ್ರದಲ್ಲಿ ಸಣ್ಣದಾಗಿ ಸೂಜಿಯಿಂದ ರಂಧ್ರವನ್ನು ಮಾಡಿ. ಬೆಳಕಿನ ಕಿರಣವು ಆ ಮೂಲಕ ಹಾದು ಇನ್ನೊಂದು ಬದಿಯಲ್ಲಿ ಬೀಳುವಂತೆ ಮಾಡಿ, ಬೆಳಕಿನ ಪ್ರತಿಬಿಂಬದಲ್ಲಿ ಗ್ರಹಣ ವೀಕ್ಷಣೆ ಮಾಡಬಹುದಾಗಿದೆ.

⦁ ಸೂರ್ಯಗ್ರಹಣ ವೀಕ್ಷಣಾ ಕನ್ನಡಕಗಳು

ಕೆಲವು ವಿಜ್ಞಾನ ಸಂಘಟನೆಗಳು ಇಂತಹ ಸಂದರ್ಭದಲ್ಲಿ ಸೂರ್ಯಗ್ರಹಣ ವೀಕ್ಷಣಾ ಕನ್ನಡಕಗಳನ್ನು ತಯಾರಿಸಿ, ಜನರಿಗೆ ಗ್ರಹಣ ವೀಕ್ಷಣೆ ಮಾಡಲು ಸಹಾಯ ಮಾಡುತ್ತವೆ.

ಇದನ್ನೂ ಓದಿ:  

ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯವು ಬಿ.ಇಡಿ. ವಿಜ್ಞಾನ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ವಿಜ್ಞಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸೂರ್ಯಗ್ರಹಣ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜಾಜಿನಗರದ ನವರಂಗ ಚಿತ್ರಮಂದಿರದ ಹಿಂದಿರುವ ಆಟದ ಮೈದಾನದಲ್ಲಿ ಆಯೋಜನೆಯಾಗಲಿದ್ದು, ಆಸಕ್ತರು ಭಾಗವಹಿಸಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)