ಶುಕ್ರವಾರ, ಡಿಸೆಂಬರ್ 2, 2022
19 °C

ಆಳ–ಅಗಲ | ಬಾಹ್ಯಾಕಾಶಕ್ಕೆ ಲಗ್ಗೆ: ಉಪಗ್ರಹ ಉಡ್ಡಯನದಲ್ಲಿ ನವೋದ್ಯಮಗಳ ನೆಗೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಹ್ಯಾಕಾಶದಲ್ಲಿ ಖಾಸಗಿ ಸಹಭಾಗಿತ್ವದ ವಿಚಾರ ಬಂದಾಗಲೆಲ್ಲ ಮೊದಲು ನೆನಪಾಗುವ ಹೆಸರು ಇಲಾನ್‌ ಮಸ್ಕ್‌ ಮತ್ತು ಅವರು ಬಾಹ್ಯಾಕಾಶಕ್ಕಾಗಿ ಕಟ್ಟಿದ ಸಾಮ್ರಾಜ್ಯ ಸ್ಪೇಸ್‌ಎಕ್ಸ್‌. ಆದರೆ, ಬಾಹ್ಯಾಕಾಶದಲ್ಲಿ ಆಸಕ್ತವಾಗಿರುವ ಖಾಸಗಿ ಕಂಪನಿಗಳು ಮತ್ತು ನವೋದ್ಯಮಗಳು ಒಂದೆರಡಲ್ಲ. ಜಗತ್ತಿನಾದ್ಯಂತ ಈಗ 10 ಸಾವಿರಕ್ಕೂ ಹೆಚ್ಚು ಬಾಹ್ಯಾಕಾಶ ಕಂಪನಿಗಳಿವೆ. ರಾಕೆಟ್‌ ಮತ್ತು ಉಪಗ್ರಹಗಳ ತಯಾರಿ, ಉಡ್ಡಯನ, ಸಂಶೋಧನೆ ಮತ್ತು ಅಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳಲ್ಲಿ ಈ ಕಂಪನಿಗಳು ಕೆಲಸ ಮಾಡುತ್ತಿವೆ. 

ಅಮೆರಿಕದಲ್ಲಿ 1980ರ ದಶಕದಲ್ಲಿಯೇ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ತೆರೆದಿರಿಸಲಾಯಿತು. ಆದರೆ, ಸ್ಪೇಸ್‌ಟೆಕ್‌, ಬ್ಲೂಒರಿಜಿನ್‌, ವರ್ಜಿನ್‌ ಗ್ಯಾಲಾಕ್ಟಿಕ್‌ನಂತಹ ಕಂಪನಿಗಳು 2000ನೇ ದಶಕದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಕ್ರಿಯವಾಗುವವರೆಗೆ ಬಾಹ್ಯಾಕಾಶದಲ್ಲಿ ಖಾಸಗಿ ವಲಯ ಅಷ್ಟೊಂದು ಗಂಭೀರವಾಗಿ ಇರಲಿಲ್ಲ. ಈ ಕಂಪನಿಗಳು ಸಕ್ರಿಯವಾದ ನಂತರದ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳು ಹುಲುಸಾಗಿ ಬೆಳೆದಿವೆ. 5,500ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಅಲ್ಲಿ ಇವೆ. ಬ್ರಿಟನ್‌ನಲ್ಲಿ ಸುಮಾರು 3,000 ಖಾಸಗಿ ಕಂಪನಿಗಳು ಇವೆ. ಭಾರತದಲ್ಲಿ 365 ಕಂಪನಿಗಳು ಇವೆ ಎಂದು ಹೇಳಲಾಗುತ್ತಿದೆ. ನೂರಕ್ಕೂ ಹೆಚ್ಚು ಕಂಪನಿಗಳು ಹೆಚ್ಚು ಸಕ್ರಿಯವಾಗಿವೆ. ಕಂಪನಿಗಳ ಸಂಖ್ಯೆಯಲ್ಲಿ ಭಾರತವು ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದೆ. 

ಭಾರತದ ಬಾಹ್ಯಾಕಾಶ ಯಾನ 1960ರ ದಶಕದಲ್ಲಿ ಆರಂಭವಾದಾಗ ದೇಶದ ಬಳಿ ಉನ್ನತ ತಂತ್ರಜ್ಞಾನವೇನೂ ಇರಲಿಲ್ಲ. ಆದರೆ, ಇಸ್ರೊ ನೇತೃತ್ವದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರವು ಈಗ ಬಲಿಷ್ಠವಾಗಿ ಬೆಳೆದಿದೆ. ಚಂದ್ರ ಮತ್ತು ಮಂಗಳ ಗ್ರಹದ ವರೆಗೆ ಭಾರತ ಈಗ ತಲುಪಿದೆ. ಜಗತ್ತಿನ ಬೇರೆ ಯಾವುದೇ ದೇಶಕ್ಕಿಂತ ಕಡಿಮೆ ವೆಚ್ಚದಲ್ಲಿ ಉಪಗ್ರಹ, ರಾಕೆಟ್‌ ಅಭಿವೃದ್ಧಿ, ಉಡ್ಡಯನದ ಹೆಗ್ಗಳಿಕೆಯನ್ನೂ ಇಸ್ರೊ ಪಡೆದುಕೊಂಡಿದೆ. 

2020ರಲ್ಲಿ ಭಾರತದ ಬಾಹ್ಯಾಕಾಶ ನೀತಿಯಲ್ಲಿ ಪರಿವರ್ತನೆ ತರಲಾಯಿತು. ಖಾಸಗಿ ಕ್ಷೇತ್ರಕ್ಕೂ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಲಾಯಿತು. ಧ್ರುವ ಸ್ಪೇಸ್‌ 2012ರಲ್ಲಿ ಹೈದರಾಬಾದ್‌ನಲ್ಲಿ ಆರಂಭವಾಯಿತು. 2022ರ ನವೆಂಬರ್‌ 18 ಭಾರತದ ಬಾಹ್ಯಾಕಾಶ ಕ್ಷೇತ್ರವು ಭಿನ್ನ ತಿರುವು ಪಡೆದುಕೊಂಡ ವರ್ಷ. ಹೈದರಾಬಾದ್‌ನ ಸ್ಕೈರೂಟ್‌ ಏರೋಸ್ಪೇಸ್‌ ತನ್ನ ಮೊದಲ ರಾಕೆಟ್‌ ಅನ್ನು ಇಸ್ರೊ ಉಡ್ಡಯನ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಮೂರು ಸಣ್ಣ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 

ಬಾಹ್ಯಾಕಾಶ ತಂತ್ರಜ್ಞಾನವು ಅತ್ಯಂತ ನುರಿತ ವಿಜ್ಞಾನಿಗಳು, ತಂತ್ರಜ್ಞರು ಅಗತ್ಯವಿರುವ ಕ್ಷೇತ್ರ. ರಾಕೆಟ್‌ ಮತ್ತು ಉಪಗ್ರಹ ಅಭಿವೃದ್ಧಿಯಲ್ಲಿ ನಿಖರತೆಯು ಬಹಳ ಮುಖ್ಯ. ದೊಡ್ಡ ಮೊತ್ತದ ಹೂಡಿಕೆಯನ್ನೂ ಈ ಕ್ಷೇತ್ರವು ಬೇಡುತ್ತದೆ. ಜೊತೆಗೆ, ಹೂಡಿಕೆಯನ್ನು ವಾಪಸ್‌ ಪಡೆಯುವ ಯಾವ ಖಾತರಿಯೂ ಇರುವುದಿಲ್ಲ. ಸರ್ಕಾರದ ವತಿಯಿಂದ ಆರ್ಥಿಕ ಭದ್ರತೆ ಅಥವಾ ಹೂಡಿಕೆಗೆ ಭದ್ರತೆ ಕೂಡ ಇಲ್ಲ. ಭಾರತದ ಬಾಹ್ಯಾಕಾಶ ನೀತಿ 2022 ಇನ್ನೂ ಅಂತಿಮಗೊಂಡಿಲ್ಲ. ಬಾಹ್ಯಾಕಾಶದಲ್ಲಿ ಖಾಸಗಿಯವರಿಗೆ ಅವಕಾಶ ಕೊಟ್ಟರೂ ಕಾಯ್ದೆ ಇನ್ನೂ ಸಿದ್ಧವಾಗಿಲ್ಲ. ಇಂತಹ ಅನಿಶ್ಚಿತ ಸ್ಥಿತಿಯಲ್ಲಿಯೂ ಖಾಸಗಿ ಕ್ಷೇತ್ರವು ಅತ್ಯಂತ ಉತ್ಸಾಹದಿಂದಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿವೆ. ಹತ್ತಕ್ಕೂ ಹೆಚ್ಚು ಕಂಪನಿಗಳು ತಮ್ಮದೇ ಆದ ಉಡ್ಡಯನ ವಾಹನ ಮತ್ತು ಉಪಗ್ರಹಗಳನ್ನು ಸಿದ್ಧಪಡಿಸಿವೆ ಅಥವಾ ಸಿದ್ಧಪಡಿಸುತ್ತಿವೆ. ಹಲವು ಕಂಪನಿಗಳು ಪ್ರಾಯೋಗಿಕ ಪರೀಕ್ಷೆ ಆರಂಭಿಸಿವೆ. 

ಭಾರತದ ಬಾಹ್ಯಾಕಾಶ ನವೋದ್ಯಮಗಳನ್ನು ಇಸ್ರೊ ಕೈಹಿಡಿದು ಮುನ್ನಡೆಸುತ್ತಿದೆ ಎಂಬುದು ವಾಸ್ತವ ಸಂಗತಿ. 100ಕ್ಕೂ ಹೆಚ್ಚು ನವೋದ್ಯಮಗಳು ಇಸ್ರೊ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ಈ ನವೋದ್ಯಮಗಳಿಗೆ ಇಸ್ರೊದಿಂದ ಎಲ್ಲ ರೀತಿಯ ನೆರವು ದೊರೆಯುತ್ತಿದೆ. ದೇಶದ ಬಾಹ್ಯಾಕಾಶ ನೀತಿಯು ಅಂತಿಮಗೊಂಡ ಬಳಿಕ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರ, ಇಸ್ರೊ ಮಾಲೀಕತ್ವದ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳು ಹೇಗೆ ಬಳಸಿ ಕೊಳ್ಳಬಹುದು ಮುಂತಾದ ವಿಚಾರಗಳು ಸ್ಪಷ್ಟ ಆಗಲಿವೆ.

ಸ್ಕೈರೂಟ್: ಹೈದರಾಬಾದ್ (2018)

ಭಾರತದ ಅತ್ಯಂತ ಯಶಸ್ವಿ ಬಾಹ್ಯಾಕಾಶ ನವೋದ್ಯಮ ಎಂದು ಸ್ಕೈರೂಟ್ ಹೆಸರಾಗಿದೆ. ದೇಶೀಯವಾಗಿ ರಾಕೆಟ್‌ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಿದ ದೇಶದ ಖಾಸಗಿ ಒಡೆತನದ ಮೊದಲ ಸಂಸ್ಥೆ ಇದಾಗಿದೆ. ಇಸ್ರೊದ ಮಾಜಿ ಉದ್ಯೋಗಿಗಳಾದ ಪವನ್ ಕುಮಾರ್ ಚಂದನ ಮತ್ತು ನಾಗಾ ಭರತ್ ಎಂಬುವರು ಸ್ಕೈರೂಟ್‌ ಆರಂಭಿಸಿದರು. ಉಡ್ಡಯನ ವಾಹನಗಳನ್ನು ತಯಾರಿಸುವುದು ಮುಖ್ಯ ಉದ್ದೇಶ. ವಿಕ್ರಮ್ 1, ವಿಕ್ರಮ್ 2 ಹಾಗೂ ವಿಕ್ರಮ್ 3 ಹೆಸರಿನ ಉಡ್ಡಯನ ವಾಹನಗಳನ್ನು ಅಭಿವೃದ್ಧಿಪಡಿಸಿದೆ. ಇದೇ 18ರಂದು ಮೊದಲ ಉಡ್ಡಯನ ಮಾಡುವಲ್ಲಿ ಯಶಸ್ವಿಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಆರಂಭಕ್ಕೆ ಮುನ್ನುಡಿ ಬರೆದಿದೆ

ಬಾಹ್ಯಾಕಾಶ ನವೋದ್ಯಮಗಳ ತವರು ಬೆಂಗಳೂರು

ಬೆಲ್ಲಾಟ್ರಿಕ್ಸ್ ಏರೋಸ್ಪೇಸ್: ಕೊಯಮತ್ತೂರು (2015)

ರೋಹನ್ ಎಂ. ಗಣಪತಿ ಹಾಗೂ ಯಶಸ್ ಕರಣಂ ಎಂಬುವರು ಶುರುಮಾಡಿದ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ದೇಶದ ಭರವಸೆಯ ನವೋದ್ಯಮ ಎನಿಸಿಕೊಂಡಿದೆ. ಉಪಗ್ರಹಗಳಿಗೆ ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಇದು ಒದಗಿಸುತ್ತಿದೆ. ಅತಿ ಕಡಿಮೆ ಬೆಲೆಯ ‘ಚೇತಕ್’ ಹೆಸರಿನ ರಾಕೆಟ್ ಅನ್ನು ಸಂಸ್ಥೆ ಅಭಿವೃದ್ಧಿಪಡಿಸುತ್ತಿದ್ದು, ಇದನ್ನು ಮರುಬಳಕೆ ಮಾಡಬಹುದು. ಹೆಚ್ಚು ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಸ್ಯಾಟಲೈಟ್ ಪ್ರೊಪಲ್ಷನ್ ವ್ಯವಸ್ಥೆಯನ್ನೂ ಸಂಸ್ಥೆ ಅಭಿವೃದ್ದಿಪಡಿಸಿದೆ. 

ಆಸ್ಟ್ರೊಮ್: ಬೆಂಗಳೂರು (2015)

ವೈರ್‌ಲೆಸ್ ಕ್ಷೇತ್ರಕ್ಕೆ ಸಂಬಂಧಿಸಿದ ಈ ನವೋದ್ಯಮವನ್ನು ನೇಹಾ ಸಟಕ್ ಹಾಗೂ ಪ್ರಸಾದ್ ಎಚ್‌.ಎಲ್. ಭಟ್ ಎಂಬುವರು ಸ್ಥಾಪಿಸಿದರು. ಅಗ್ಗದ, ವೇಗದ ಹಾಗೂ ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕ ಹಾಗೂ ಸಲಕರಣೆಗಳನ್ನು ಮನೆ, ಶಾಲೆ, ಆರೋಗ್ಯ ಕೇಂದ್ರಗಳು ಹಾಗೂ ಉದ್ಯಮಗಳಿಗೆ ಒದಗಿಸುವ ಧ್ಯೇಯವನ್ನು ಇದು ಹೊಂದಿದೆ. ಜಗತ್ತಿನ ಎಲ್ಲ ಜನರಿಗೂ ಸುಲಭವಾಗಿ ಅಂತರ್ಜಾಲ ದೊರೆಯುವಂತೆ ಮಾಡಲು, ಭೂಕಕ್ಷೆಗೆ 198 ಉಪಗ್ರಹಗಳ ಗುಚ್ಛವನ್ನು ಕಳಹಿಸುವ ಉದ್ದೇಶವನ್ನು ಕಂಪನಿ ಹೊಂದಿದೆ.

ಪಿಕ್ಸೆಲ್: ಬೆಂಗಳೂರು (2018)

ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಪಿಕ್ಸೆಲ್ ಎಂಬ ಭರವಸೆಯ ನವೋದ್ಯಮವನ್ನು ಅವೈಸ್ ಅಹಮದ್ ಹಾಗೂ ಕ್ಷಿತಿಜ್ ಖಂಡೇಲ್‌ವಾಲ್ ಅವರು ಹುಟ್ಟುಹಾಕಿದರು. ಸಂಸ್ಥೆ ನಿರ್ಮಿಸಿರುವ ‘ಆನಂದ್’ ಹೆಸರಿನ ಉಪಗ್ರಹವನ್ನು ಇಸ್ರೊದ ರಾಕೆಟ್ ಇದೇ ಶನಿವಾರ ಹೊತ್ತೊಯ್ಯಲಿದೆ. ಇದೇ ಏಪ್ರಿಲ್‌ನಲ್ಲಿ ‘ಶಕುಂತಲಾ’ ಎಂಬ ಉಪಗ್ರಹವನ್ನು ಅಮೆರಿಕದ ಸ್ಪೇಸ್‌ಎಕ್ಸ್‌ ಸಂಸ್ಥೆಯ ರಾಕೆಟ್ ಮೂಲಕ ನಭಕ್ಕೆ ಕಳುಹಿಸಿದ್ದ ಹೆಗ್ಗಳಿಕೆ ಪಿಕ್ಸೆಲ್‌ನದ್ದು. 

ಅಗ್ನಿಕುಲ ಕಾಸ್ಮೋಸ್: ಚೆನ್ನೈ (2017)

ಸಣ್ಣ ಉಡಾವಣಾ ನೌಕೆಗಳನ್ನು ಕಡಿಮೆ ಬೆಲೆಗೆ ಒದಗಿಸುವ ಉದ್ದೇಶದಿಂದ ಅಗ್ನಿಕುಲ ಕಾಸ್ಮೋಸ್ ಎಂಬ ನವೋದ್ಯಮ ಆರಂಭವಾಯಿತು. 200 ಕೆ.ಜಿ ತೂಕವನ್ನು ತಾಳಿಕೊಳ್ಳುವ ಸಣ್ಣ ರಾಕೆಟ್‌ಗಳನ್ನು ಸಂಸ್ಥೆ ತಯಾರಿಸುತ್ತಿದೆ. ರಾಕೆಟ್ ಎಂಜಿನ್ ವಿನ್ಯಾಸ ಮಾಡಲು 3ಡಿ ತಂತ್ರಜ್ಞಾನವನ್ನು ಬಳಸಿಕೊಂಡ ದೇಶದ ಮೊದಲ ನವೋದ್ಯಮ ಎಂಬ ಶ್ರೇಯವೂ ಈ ಸಂಸ್ಥೆಯದ್ದು. 

ಕಾವಾ ಸ್ಪೇಸ್: ಮುಂಬೈ (2019)

ಭೂವೀಕ್ಷಣಾ ಉಪಗ್ರಹಗಳನ್ನು ನಿರ್ಮಿಸುವ ದಿಸೆಯಲ್ಲಿ ಶುರುವಾದ ನವೋದ್ಯಮವೇ ಕಾವಾ ಸ್ಪೇಸ್. ಕ್ರಿಸ್ ನಾಯರ್ ಮತ್ತು ಬಾಲಾ ಮೆನನ್ ಎಂಬುವರು ಮೂರು ವರ್ಷದ ಹಿಂದೆ ಇದನ್ನು ಹುಟ್ಟುಹಾಕಿದರು. ಬಾಹ್ಯಾಕಾಶದಲ್ಲಿ ಮೂಲಸೌಕರ್ಯ ನಿರ್ಮಾಣ ಹಾಗೂ ನಿರ್ವಹಣೆ ಉದ್ದೇಶವನ್ನೂ ಇದು ಹೊಂದಿದೆ. ಕೃಷಿ, ಹಣಕಾಸು  ಕ್ಷೇತ್ರದಲ್ಲಿ ಕೆಲಸ ಮಾಡುವ ಕಂಪನಿಗಳು ಕಾವಾದ ಗ್ರಾಹಕರು.

ಕ್ಸೊವಿಯನ್: ದೆಹಲಿ (2011)

ರಾಘವ್ ಶರ್ಮಾ ಮತ್ತು ಅಂಕಿತ್ ಭತೇಜಾ ಎಂಬುವರು ಕ್ಸೊವಿಯನ್ ಎಂಬ ಬಾಹ್ಯಾಕಾಶ ನವೋದ್ಯಮವನ್ನು ಶುರು ಮಾಡಿದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ಒಕ್ಕೂಟದ (ಐಎಎಫ್) ಸದಸ್ಯತ್ವ ಪಡೆದಿರುವ ಈ ಸಂಸ್ಥೆಯಲ್ಲಿ ಉಪಗ್ರಹ ತಂತ್ರಜ್ಞಾನದ ಬಗ್ಗೆ ಅಪಾರ ಅನುಭವ ಹೊಂದಿರುವ ತಂಡವಿದೆ. 2014ರಲ್ಲಿ ತನ್ನ ಮೊದಲ ಉಪಗ್ರಹ ‘ಕ್ಯಾನ್‌ಸ್ಯಾಟ್’ ಅನ್ನು ಅಭಿವೃದ್ಧಿಪಡಿಸಿತ್ತು. ಉಪಗ್ರಹ ಬಿಡಿಭಾಗಗಳ ತಯಾರಿಕೆ, ಎತ್ತರಕ್ಕೆ ಹಾರಬಲ್ಲ ಬಲೂನ್‌ಗಳು ಮತ್ತು ಕ್ಯಾನ್‌ಸ್ಯಾಟ್ ಸೌಂಡಿಂಗ್ ರಾಕೆಟ್‌ಗಳ ಅಭಿವೃದ್ಧಿಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. 

ಅರ್ತ್‌2ಆರ್ಬಿಟ್: ಬೆಂಗಳೂರು (2007)

ಸುಶ್ಮಿತಾ ಮೊಹಂತಿ ಅವರು 2007ರಲ್ಲಿ ಶುರುಮಾಡಿದ ಮೊದಲ ಖಾಸಗಿ ಬಾಹ್ಯಾಕಾಶ ನವೋದ್ಯಮವೇ ಅರ್ತ್‌2ಆರ್ಬಿಟ್. ಬಾಹ್ಯಾಕಾಶ ಉಡ್ಡಯನ ಸಲಹೆ ಮತ್ತು ಸೇವೆ ನೀಡುವುದು ಇದರ ಮೂಲ ಉದ್ದೇಶವಾಗಿತ್ತು. ಅಹಮದಾಬಾದ್, ಮುಂಬೈ, ತಿರುವನಂತಪುರಕ್ಕೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿತು. ವಿಯೆನ್ನಾ ಹಾಗೂ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕಚೇರಿ ತೆರೆದಿದೆ.

ಧ್ರುವ ಸ್ಪೇಸ್: ಹೈದರಾಬಾದ್ (2012)

ಸಂಜಯ್ ನೆಕ್ಕಂಟಿ, ಅಭಿಷೇಕ್ ರಾಜು ಮತ್ತು ನಾರಾಯಣ ಪ್ರಸಾದ್ ಎಂಬುವರು ಧ್ರುವ ಸ್ಪೇಸ್ ಎಂಬ ಬಾಹ್ಯಾಕಾಶ ನವೋದ್ಯಮ ಆರಂಭಿಸಿದರು. ಜರ್ಮನಿ ಹಾಗೂ ಸ್ವೀಡನ್‌ನಲ್ಲಿ ಉಪಗ್ರಹ ಹಾಗೂ ಬಾಹ್ಯಾಕಾಶ ಸಲಕರಣೆಗಳ ಬಗ್ಗೆ ಅಧ್ಯಯನ ನಡೆಸಿದ್ದ ಸಂಜಯ್ ಅವರು, ಇದಕ್ಕೂ ಮುನ್ನ ಸ್ಪೇಸ್‌ಟೆಕ್ ಎಂಬ ನವೋದ್ಯಮ ನಡೆಸಿದ್ದ ಅನುಭವ ಹೊಂದಿದ್ದರು. 2005ರಲ್ಲಿ ಉಡಾವಣೆಗೊಂಡಿದ್ದ ಹ್ಯಾಮ್‌ಸ್ಯಾಟ್–1 ಸ್ಯಾಟಲೈಟ್‌ ನಿರ್ವಹಣೆಗೆ ಇಸ್ರೊ ಜೊತೆ ಒಪ್ಪಂದ ಮಾಡಿಕೊಂಡಿದೆ.

ಬೃಹತ್‌ ಕಂಪನಿಗಳ ಪಾಲೂ ಇದೆ: 

ಆದಿತ್ಯ ಬಿರ್ಲಾ ಒಡೆತನದ ಹಿಂಡಾಲ್ಕೊ–ಅಲ್ಮೆಕ್ಸ್ ಏರೋಸ್ಪೇಸ್, ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್, ಮಹೀಂದ್ರಾ ಏರೋಸ್ಪೇಸ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಡಾಸೋ–ರಿಲಯನ್ಸ್ ಏರೋಸ್ಪೇಸ್‌ನಂತ ದೊಡ್ಡ ಕಂಪನಿಗಳೂ ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ

ಆಧಾರ: ಬಿಬಿಸಿ, ಫೋಬ್ಸ್‌ ಜಾಲತಾಣಗಳು, ಪಿಟಿಐ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು