ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಲ್ಲಿ ಆಸ್ತಿ ಕಂಡ ಮಹಾಶಯರು!

ಜಿಜ್ಞಾಸೆ
Last Updated 2 ಜನವರಿ 2021, 19:30 IST
ಅಕ್ಷರ ಗಾತ್ರ

ಇದು ಆಗಸದಲ್ಲಿ, ಅದು ಸಹ ಭೂಮಿಯಿಂದ 35,786 ಕಿ.ಮೀ. ದೂರದಲ್ಲಿ, ನೆಲ- ಜಲ- ಗಾಳಿಯ ಸೋಂಕಿಲ್ಲದ, ಗೊತ್ತು ಗುರಿಯಿಲ್ಲದ ಶೂನ್ಯದಲ್ಲಿ ಅದೃಷ್ಟ ಲಕ್ಷ್ಮಿಯನ್ನು ಕಂಡು – ಅದು ತಮ್ಮದೆಂದು ಹಕ್ಕು ಮಂಡಿಸಿದ ಮಹಾಶಯರ ಕಥೆ.

ತಂತ್ರಜ್ಞಾನದಿಂದ ಸಂಪನ್ನವಾಗಿರುವ ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿಯ ಕಬಂಧಬಾಹು ಅತಳ ವಿತಳ ಸುತಳ ಪಾತಾಳದಲ್ಲಿಯೂ ವಿಸ್ತರಿಸಲು ಸಹಾಯ ಮಾಡಿರುವುದು ದೂರಸಂಪರ್ಕ ಉಪಗ್ರಹಗಳು (communication satellites).

ದೈನಂದಿನ ವ್ಯಾಪಾರ ವಹಿವಾಟಿನಿಂದ ಹಿಡಿದು, ಮನರಂಜನೆ, ಯುದ್ಧ, ದೇಶರಕ್ಷಣೆ, ಪ್ರಕೃತಿ ವಿಕೋಪದಂತಹ ವಿಷಮ ಕಾಲದಲ್ಲೂ- ಮನುಷ್ಯನ ಕೈಹಿಡಿದು ಮೇಲೆತ್ತಿ ಅಭಿವೃದ್ಧಿ ಪಥದಲ್ಲಿ ರಾಷ್ಟ್ರಗಳು ಮುನ್ನುಗ್ಗಿ ಸಾಗುವಂತೆ ಮಾಡಿರುವಂತಹವು ದೂರಸಂಪರ್ಕ ಉಪಗ್ರಹಗಳು. ಈ ಉಪಗ್ರಹಗಳನ್ನು ಸಾವಿರಾರು ಕೋಟಿ ರೂಪಾಯಿ ಬೆಲೆಯ ಚಿನ್ನದ ಮೊಟ್ಟೆಯನ್ನಾಗಿಸಿರುವುದು - ಅವುಗಳು ಭೂಮಿಯನ್ನು ಸುತ್ತಲು ಬಳಸುವ ಭೂಸ್ಥಿರ ಕಕ್ಷೆ (Geostationary orbit). ಅದು ಭವಿಷ್ಯವನ್ನು ಬೆಳಗಿಸಬಲ್ಲ ಕಕ್ಷೆ. ಈ ಕಕ್ಷೆಯಲ್ಲಿ ತಮ್ಮ ಉಪಗ್ರಹಗಳನ್ನು ನೆಲೆಗೊಳಿಸಲು ಸರ್ವರೂ ಹಾತೊರೆಯುತ್ತಾರೆ.

ಎಲ್ಲರ ಅಸೂಯೆಯ ಕಣ್ಣು ತಾಕುವ - 35,786 ಕಿ.ಮೀ. ದೂರದಲ್ಲಿರುವ ಈ ಭೂಸ್ಥಿರ ಕಕ್ಷೆಯ ಒಡೆಯನಾರು ?

ಮೊದಲ ಬಾರಿಗೆ - ಬ್ರೆಜಿಲ್, ಕೊಲಂಬಿಯಾ, ಕಾಂಗೋ, ಈಕ್ವೆಡಾರ್, ಇಂಡೋನೇಷ್ಯ, ಕೀನ್ಯಾ, ಉಗಾಂಡಾ ಮತ್ತು ಝೈರೆ– ಒಟ್ಟು ಎಂಟು ದೇಶಗಳ ಪ್ರತಿನಿಧಿ ಮಹಾಶಯರು ಸಭೆ ಸೇರಿ ಈ ಕಕ್ಷೆಯ ಕೆಲವೊಂದು ಭಾಗಗಳು ತಮ್ಮದೆಂದರು.

ಉದಾಹರಣೆಗೆ - ರಾತ್ರಿ ಆಗಸದಲ್ಲಿ ನನ್ನ ಮನೆ ಮೇಲಿನ ಆಕಾಶದ ಜಾಗ ನನ್ನದು. ನನ್ನ ಮನೆ ಮೇಲೆ ನಕ್ಷತ್ರ ಕಾಣಬಾರದು, ಕಾಣಬೇಕೆನಿಸಿದರೆ, ನಕ್ಷತ್ರ ಮೊದಲು ನನ್ನ ಅನುಮತಿ ಪಡೆಯಬೇಕು ಎಂದರೆ ಹಾಸ್ಯಾಸ್ಪದವಾದೀತಲ್ಲವೇ? ಅದೇ ರೀತಿ ಇತ್ತು ಈ ಎಂಟು ರಾಷ್ಟ್ರಗಳ ಕಕ್ಷೆ ಎಂಬ ಲಕ್ಷ್ಮಿಯ ಒಡೆತನದ ಹಕ್ಕು ಮಂಡನೆ.

ಈ ಹಕ್ಕು ಮಂಡನೆ ನ್ಯಾಯ ಸಮ್ಮತವೇ? ಅಸಲಿಗೆ ಭೂಸ್ಥಿರ ಕಕ್ಷೆ ಯಾರಿಗೆ ಸೇರಿದ್ದು ?

ಊರಾಚೆಗಿನ ಕೆರೆ ಊರಿನವರೆಲ್ಲರಿಗೂ ಸೇರಿದ್ದು, ಅಂತೆಯೇ ನಮ್ಮ ಭೂಮಿಯ ಹೊರಗೆ ಖಗೋಳದಲ್ಲಿ ದೊರೆಯುವ ಸಕಲ ಸಂಪನ್ಮೂಲ ಆವನಿಪುತ್ರರೆಲ್ಲರಿಗೂ ಸಮನಾಗಿ ಸೇರಿದ್ದು ಅಲ್ಲವೇ? 1967ರ ರಾಷ್ಟ್ರಗಳ ನಡುವಿನ ಬಾಹ್ಯಾಕಾಶ ಒಪ್ಪಂದದ ಪ್ರಕಾರ ಭೂಸ್ಥಿರ ಕಕ್ಷೆಯನ್ನು ಒಳಗೊಂಡಂತೆ ಭೂಮಿಯಾಚೆಗಿನ ಬಾಹ್ಯಾಕಾಶ - ಸಮಸ್ತ ಮನುಕುಲದ ಆಸ್ತಿ (The common heritage of mankind). ಯಾವೊಬ್ಬ ಪ್ರತ್ಯೇಕ ವ್ಯಕ್ತಿ, ದೇಶದ ವೈಯಕ್ತಿಕ ಸ್ವತ್ತಲ್ಲ. ಆದರೆ ಎಲ್ಲರ ಸ್ವತ್ತೂ ಹೌದು. ಅಂದರೆ ಈ ಭೂಸ್ಥಿರ ಕಕ್ಷೆ ನನ್ನ ಉಸಿರಿರುವ ತನಕ ನನಗೂ ಸೇರಿದ್ದು ಅದೇ ರೀತಿ ನಿಮಗೂ ಸೇರಿದ್ದು, ಅಲ್ಲದೇ ಮುಂದಿನ ಜನಾಂಗಕ್ಕೂ ಸೇರಿದ್ದು.

ರಸ್ತೆಯ ಮೇಲೆ ಓಡಾಡುವ ನನ್ನ ಕಾರು ಮಾತ್ರ ನನಗೆ ಸೇರಿದ್ದು, ಆದರೆ ರಸ್ತೆ ನನ್ನದಲ್ಲ. ಗಾಳಿಯನ್ನು ಉಸಿರಾಡಿ ನಾನು ಬದುಕಬಹುದೇ ಹೊರತು ಗಾಳಿಯ ಮೇಲೆ ನನಗೆ ಹಕ್ಕಿಲ್ಲ.

ದಟ್ಟಡವಿಯ ಮಧ್ಯದಲ್ಲಿರುವ ಮರದಿಂದ ನೆಲ್ಲಿಕಾಯಿ ಕಿತ್ತು ತಿಂದರೆ ತಪ್ಪಿಲ್ಲ, ದೊಡ್ಡ ಮರದ ನೆರಳಿನಲ್ಲಿ ನಿದ್ರಿಸಿ, ವಿಶ್ರಮಿಸಿ ಪುನರ್ ಚೈತನ್ಯ ಪಡೆದರೆ ತಪ್ಪಿಲ್ಲ - ಆದರೆ ನಾನು ನಿದ್ದೆ ಮಾಡಿದುದರಿಂದ ಮರವೇ ನನ್ನದೆನ್ನುವಂತಿಲ್ಲ. ಈ ಬಗೆಯ ವಿಶೇಷ ನಿಯಮಗಳ ಚೌಕಟ್ಟಿನಡಿಯಲ್ಲಿ ಭೂಸ್ಥಿರ ಕಕ್ಷೆ ಅಥವಾ ಬಾಹ್ಯಾಕಾಶದ ಸಂಪತ್ತನ್ನು ಇರಿಸಲಾಗಿದೆ.

ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಈ ಎಂಟು ರಾಷ್ಟ್ರಗಳು ಕೊಲಂಬಿಯಾ ದೇಶದ ‘ಬಗೋಟ’ ಎಂಬಲ್ಲಿ ಸಭೆ ಸೇರಿ 1976ರ ಡಿಸೆಂಬರ್ 3ರಂದು ಭೂಸ್ಥಿರ ಕಕ್ಷೆಯ ಕೆಲವೊಂದು ಭಾಗಗಳನ್ನು ತಮ್ಮದೆಂದು – ಇತರರು ಬಳಸದಂತೆ ತಡೆಯುವ, ಬಳಸಿದರೆ ತಮ್ಮ ಅನುಮತಿಯನ್ನು ಪಡೆದು ಬಳಸಬೇಕೆಂಬ ಅವಾಸ್ತವಿಕ ಬೇಲಿಯನ್ನು ಹಾಕುವ ಘೋಷಣೆ ಮಾಡಿದವು. ಇದೇ ಪ್ರಸಿದ್ಧವಾದ ‘ಬಗೋಟ ಘೋಷಣೆ’.

ಈ ಎಂಟು ರಾಷ್ಟ್ರಗಳ ವಾದವೇನು?

ಈ ಎಂಟು ರಾಷ್ಟ್ರಗಳು ನಮ್ಮ ಕಾಲ್ಪನಿಕ ಶೂನ್ಯ ಡಿಗ್ರಿ ಅಕ್ಷಾಂಶ ಅಥವಾ ಭೂಮಧ್ಯ ರೇಖೆ (Equator) ಹಾದುಹೋಗುವಂತಹ ಸ್ಥಳದಲ್ಲಿರುವಂತಹವು.

ಭೂಸ್ಥಿರ ಕಕ್ಷೆಯೂ ಭೂಮಧ್ಯ ರೇಖೆಯಿಂದ ಲಂಬವಾಗಿ 35,786 ಕಿ.ಮೀ ದೂರದಲ್ಲಿ ಇರುವಂತಹದು. ಎಲ್ಲರಿಗೂ ತಿಳಿದಿರುವಂತೆ ಉಪಗ್ರಹಗಳು ಭೂಮಿಯನ್ನು ಸುತ್ತುತ್ತಿರುವಂತೆ ಸಾಧ್ಯವಾಗಿರಿಸಿರುವುದು ಭೂಮಿಯ ಗುರುತ್ವ ಶಕ್ತಿ.

ಈ ರಾಷ್ಟ್ರಗಳ ವಾದ - ಭೂಸ್ಥಿರ ಕಕ್ಷೆಯ ಕೆಳಗೇ ತಮ್ಮ ರಾಷ್ಟ್ರಗಳು ಇರುವುದರಿಂದ, ತಮ್ಮ ರಾಷ್ಟ್ರಗಳ ನೆಲದ ಗುರುತ್ವ ಬಲದಿಂದಲೇ ಭೂಸ್ಥಿರ ಕಕ್ಷೆಯಲ್ಲಿ ಉಪಗ್ರಹ ನೆಲೆಗೊಳ್ಳಲು ಸಾಧ್ಯವಾಗಿರುವುದು ಮತ್ತು ಈ ಕಕ್ಷೆಯ – ತಮ್ಮ ದೇಶಗಳ ಮೇಲಿನ ಭಾಗ ಆಯಾ ದೇಶಗಳ ನೈಸರ್ಗಿಕ ಸಂಪತ್ತು ಎಂಬುದಾಗಿತ್ತು.

ಅಸಲಿಗೆ ಈ ವಾದದಲ್ಲಿ ಹುರುಳಿದೆಯೇ? ಸರ್ವ ಸಮ್ಮತವೇ?

ಭೂಮಿಯ ಗುರುತ್ವಬಲ ಇಡಿಯಾಗಿ - ಒಂದು ಗ್ರಹವಾದ ಭೂಮಿಯಿಂದ ಆಗಿರುವುದೇ ಹೊರತು ಆಯಾ ದೇಶಗಳ ನೆಲಪ್ರದೇಶಗಳಿಂದಲ್ಲ. ಇದು ಸತ್ಯವಾದ ಮತ್ತು ಜಗತ್ತಿನ ಇತರೆ ರಾಷ್ಟ್ರಗಳ ವಾದ. ಹಾಗಾಗಿ ಈ ಎಂಟು ರಾಷ್ಟ್ರಗಳ ವಾದದಲ್ಲಿ ಹುರುಳಿಲ್ಲ ಮತ್ತು ಅವು ಭೂಸ್ಥಿರ ಕಕ್ಷೆಯ ಹಕ್ಕುದಾರರಲ್ಲ.

ಈ ರೀತಿ ಆ ಎಂಟು ರಾಷ್ಟ್ರಗಳು ವಾದಮಾಡಲು ಕಾರಣವಾದರೂ ಏನು?

‘ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ’ ಈ ಗಾದೆಮಾತು ಈ ಎಂಟು ರಾಷ್ಟ್ರಗಳ ಅಸಹಾಯಕ ಸ್ಥಿತಿಯನ್ನು, ಅವು ಕಂಡ ಭವಿಷ್ಯದ ಅನಿಶ್ಚಿತತೆಯನ್ನು ಸಮರ್ಪಕವಾಗಿ ತಿಳಿಸುತ್ತದೆ. 70ರ ದಶಕದಲ್ಲಿ ಭೂಸ್ಥಿರ ಕಕ್ಷೆ ಖಾಲಿ ಇದ್ದರೂ ಈ ರಾಷ್ಟ್ರಗಳ ಬಳಿ ಉಪಗ್ರಹ ತಂತ್ರಜ್ಞಾನ ಇರಲಿಲ್ಲ. ಶ್ರೀಮಂತ ರಾಷ್ಟ್ರಗಳಿಂದ ಉಪಗ್ರಹಗಳನ್ನು ಕೊಳ್ಳಲು ಆರ್ಥಿಕ ಸ್ಥಿತಿ ಸಹಕರಿಸುತ್ತಿರಲಿಲ್ಲ. ಬಡತನದಿಂದ ಬಳಲಿದ್ದ ಹಲವು ದೇಶಗಳ ತತ್‌ಕ್ಷಣದ ಅಗತ್ಯ ಉಪಗ್ರಹ ತಂತ್ರಜ್ಞಾನ ಆಗಿರಲಿಲ್ಲ ಸಹ.

1967ರ ಬಾಹ್ಯಾಕಾಶ ಒಪ್ಪಂದದ ಪ್ರಕಾರ ಬಾಹ್ಯಾಕಾಶ ಸಕಲ ಮಾನವ ಜನಾಂಗಕ್ಕೆ ಸೇರಿದ್ದು (The province of mankind). ಯಾರು ಬೇಕಾದರೂ ಎಷ್ಟು ಉಪಗ್ರಹಗಳನ್ನು ಬೇಕಾದರೂ ಅಗತ್ಯ ಇದ್ದಲ್ಲಿ, ಭೂಸ್ಥಿರ ಕಕ್ಷೆಯ ಖಾಲಿ ಇರುವ ಸ್ಥಳದಲ್ಲಿ ಇತರರಿಗೆ ತೊಂದರೆಯಾಗದಂತೆ ನೆಲೆಗೊಳಿಸಬಹುದು. ಉಪಗ್ರಹದ ಜೀವಿತಾವಧಿ ಮುಗಿದ ಮೇಲೆ ಅದೇ ಜಾಗದಲ್ಲಿ ಮತ್ತೊಬ್ಬರ ಉಪಗ್ರಹ ಬರಲೂಬಹುದು. ಆವರ್ತನ ಪಟ್ಟಿ (Frequency Band) ಹಂಚಿಕೆಯನ್ನು ICU (International Telecommunication Union) ಮಾಡುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಶ್ರೀಮಂತ ರಾಷ್ಟ್ರಗಳು ಹೆಚ್ಚು ಹೆಚ್ಚು ಉಪಗ್ರಹಗಳನ್ನು ಕಳುಹಿಸಿ, ಕಕ್ಷೆಯ ಎಲ್ಲಾ ಸ್ಥಾನಗಳು ತುಂಬಿಹೋದರೆ, ಮುಂದೊಂದು ದಿನ ತಮ್ಮ ಉಪಗ್ರಹಗಳಿಗೆ ಜಾಗವೇ ಇಲ್ಲದಂತಹ ಪರಿಸ್ಥಿತಿ ಬರಬಹುದೇನೋ ಎಂಬ ಭವಿಷ್ಯದ ಅನಿಶ್ಚಿತತೆ, ಇತರರನ್ನು ತಡೆಯಲು - ತಮ್ಮ ಕೂಗಿಗೆ ಬೆಲೆ ಸಿಗುವ ಸಂಭವನೀಯತೆ ಕಡಿಮೆ ಎಂಬ ಅರಿವಿದ್ದರೂ ತಮ್ಮಂತಹ ಬಡ ರಾಷ್ಟ್ರಗಳ ಸಮಸ್ಯೆಗೆ ವಿಶ್ವದ ಗಮನ ಸೆಳೆಯಲು ‘ಬಗೋಟ ಘೋಷಣೆ’ ಮಾಡಿದವು ಎಂಬುದು ಹಿನ್ನೆಲೆ ತಿಳಿದವರ ಅಭಿಪ್ರಾಯ.

ಕೊನೆಯ ಮಾತು: ಬಾಹ್ಯಾಕಾಶದಲ್ಲಿ ಎಷ್ಟು ಬೇಕಾದರೂ ಉಪಗ್ರಹಗಳನ್ನು ನೆಲೆಗೊಳಿಸಬಹುದು. ಆದರೆ, ಅತಿ ವಿರಳ ಮತ್ತು ಅಪರೂಪದ ಸಂಪನ್ಮೂಲವಾದ ಈ ಭೂಸ್ಥಿರ ಕಕ್ಷೆಯಲ್ಲಿ ಒಂದು ಅಂದಾಜಿನ ಪ್ರಕಾರ ಹೆಚ್ಚೆಂದರೆ 1800 ಉಪಗ್ರಹಗಳನ್ನು ಮಾತ್ರ ನೆಲೆಗೊಳಿಸಲು ಸಾಧ್ಯ. ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಈ ಸಂಪನ್ಮೂಲದ ಬಳಕೆಯಲ್ಲಿ ಸಮಪಾಲು ದೊರೆತು ಸರ್ವರೂ ಕೂಡಿಬಾಳಲು, ಅಭಿವೃದ್ಧಿ ಹೊಂದಲು ಸಹಾಯವಾಗುವಂತಹ ವಿವೇಚನೆ, ಎಲ್ಲಾ ರಾಷ್ಟ್ರಗಳ ನಡುವೆ ಜಾಗತಿಕ ಮಟ್ಟದಲ್ಲಿ ಒಮ್ಮತ ಮೂಡಲಿ, ಹೊಸ ತಂತ್ರಜ್ಞಾನದಿಂದ ಈ ಕಕ್ಷೆಯ ಸಮರ್ಪಕ ಉಪಯೋಗ ಆಗಲಿ ಎಂಬುದೇ ಸರ್ವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT