ಬುಧವಾರ, ಜೂನ್ 16, 2021
22 °C

ಬೆತ್ತ ಯಾರದೋ ಸತ್ಯ ಅವನದೇ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಭೋಪಾಲದ ವಿಷಾನಿಲ ಸೋರಿಕೆ, ಚೆರ್ನೊಬಿಲ್‌ ಫುಕುಶಿಮಾಗಳ ವಿಕಿರಣ ಸೋರಿಕೆ ವಿಷಯ ಎಲ್ಲರಿಗೂ ತಿಳಿದಂಥದ್ದೆ. ಅದೇ ಹಾದಿಯಲ್ಲಿ ಕೊರೊನಾ ಸೋಂಕು ಚೀನಾದ ಲ್ಯಾಬಿನಿಂದ ಸೋರಿಕೆಯಾಗಿದ್ದು ಹೌದೆ? ಹೌದೆಂಬ ಹೊಗೆ ಎದ್ದಿದೆ.

**
‘ಶಾಂತತಾ! ಕೋರ್ಟ್ ಚಾಲೂ ಆಹೆ!’

-ಇದು ಖ್ಯಾತ ಮರಾಠಿ ನಾಟಕಕಾರ ವಿಜಯ್ ತೆಂಡೂಲ್ಕರ್ ಅವರ ನಾಟಕದ ಶಿರೋನಾಮೆ. ಒಂದು ಮಗುವಿನ ಅಸಲೀ ಅಪ್ಪ-ಅಮ್ಮ ಯಾರೆಂದು ಪತ್ತೆ ಮಾಡುವ ಅಸಂಗತ ಕಥನ ಅದರಲ್ಲಿದೆ. ‘ಕೋರ್ಟ್ ಚಾಲೂ ಆಗಿದೆ, ಗಲಾಟೆ ಮಾಡಬೇಡಿ’ ಎಂದು ಒಂದು ಪಾತ್ರ ಕೂಗಿ ಹೇಳುತ್ತದೆ.

ಇದೀಗ ವಿಶ್ವವೇದಿಕೆಯಲ್ಲೂ ಇಂಥದ್ದೊಂದು ನಾಟಕ ರಂಗಕ್ಕೇರುತ್ತಿದೆ. ಕೊರೊನಾ ಎಂಬ ಪ್ರಳಯಾಂತಕ ಶಿಶು ಎಲ್ಲಿ, ಹೇಗೆ ಉದ್ಭವಿಸಿತು ಎಂಬ ಚರ್ಚೆಗೆ ರಂಗೇರುತ್ತಿದೆ. ‘ಇದು ಸಹಜವಾಗಿ ನಿಸರ್ಗದಿಂದ ಬಂದಿದ್ದಲ್ಲ; ಚೀನೀಯರ ಪ್ರಯೋಗಶಾಲೆಯಲ್ಲಿ ಸೃಷ್ಟಿಯಾದ ಜೀವಾಯುಧ (Bio Weapon). ಹೇಗೋ ಆಕಸ್ಮಿಕ ಸೋರಿಕೆಯಾಗಿ ಹೊರಬಿದ್ದಿದೆ’ ಎಂದು ತಜ್ಞರು ಮೆಲ್ಲಗೆ ಉಸುರಿದ್ದೇ ವಿರಾಟ್ ರೂಪ ತಾಳುತ್ತಿದೆ.

ಸತ್ಯ ಗೊತ್ತಿದ್ದವರು ಬಾಯಿ ಬಿಡುತ್ತಿಲ್ಲ. ಬಿಡಿಸಲೇಬೇಕೆಂದು ಹಟ ತೊಟ್ಟವರು ಸಾಕ್ಷ್ಯಗಳನ್ನು ಮುಂದಿಡುತ್ತಿಲ್ಲ. ವಿಜ್ಞಾನಿಗಳು, ರಾಜಕಾರಣಿಗಳು, ರಾಜತಾಂತ್ರಿಕರು ರಂಗಕ್ಕೆ ಬರುತ್ತಿದ್ದಾರೆ. ಹಿಮ್ಮೇಳದಲ್ಲಿ ಮಾಧ್ಯಮಗಳ ತಮಟೆ ಜೋರಾಗುತ್ತಿದೆ. ‘ಚೀನಾ ತಪ್ಪಿತಸ್ಥ’ ಎಂಬ ಧ್ವನಿ ನೇಪಥ್ಯದಲ್ಲಿ ಹೊಮ್ಮುತ್ತಿದೆ. ತೀರ್ಪುಗಾರನ ಸ್ಥಾನದಲ್ಲಿರುವ ವಿಶ್ವ ಸ್ವಾಸ್ಥ್ಯ ಸಂಸ್ಥೆಯ (ವಿಸ್ವಾಸಂ ) ಅಧ್ಯಕ್ಷ ಮಾತ್ರ ‘ಸಾಕ್ಷ್ಯ ಸಾಲದು, ಇನ್ನೂ ತನಿಖೆ ಆಗಬೇಕು’ ಎಂದು ಹೇಳುತ್ತಿದ್ದಾರೆ.

ಇದುವರೆಗಿನ ಕತೆ ನಮಗೆ ಗೊತ್ತೇ ಇದೆ: ಚೀನಾದ ವುಹಾನ್ ನಗರದ ತೇವಸಂತೆಯಲ್ಲಿ ಈ ವೈರಾಣು ಪ್ರತ್ಯಕ್ಷವಾಯಿತು. ಸಂತೆಗೆ ಮಾರಾಟಕ್ಕೆ ಬಂದಿದ್ದ ಯಾವುದೋ ಕಾಡುಪ್ರಾಣಿಯ ಮಾಂಸದ ಮೂಲಕ ಈ ಭಯಾನಕ ಸೂಕ್ಷ್ಮಜೀವಿ ಮನುಷ್ಯನಿಗೆ ತಗುಲಿಕೊಂಡಿತು ಎಂದು ಚೀನೀಯರು ಹೇಳಿದ್ದರು. ಆ ಕಾಡುಪ್ರಾಣಿಗೆ ಪ್ರಾಯಶಃ ಯಾವುದೋ ಬಾವಲಿಯ ಎಂಜಲು ಸೋಂಕಿರಬೇಕು ಎಂದು ಊಹಿಸಲಾಗಿತ್ತು. ಹಿಂದೆಯೂ ನಿಫಾ, ಝಿಕಾ ಮತ್ತು ಹಂದಿಜ್ವರ - ಪಕ್ಷಿಜ್ವರಕ್ಕೆ ಕಾರಣವಾದ ವೈರಸ್‌ಗಳೆಲ್ಲ ನಿಸರ್ಗದಿಂದಲೇ ಬಂದಿವೆಯಾದ್ದರಿಂದ ಹೀಗಾಗಿದ್ದೇ ಹೌದೆಂದು ಎಲ್ಲರನ್ನೂ ನಂಬಿಸಲಾಗಿತ್ತು. ಬಾವಲಿಗಳ ದೇಹದಲ್ಲಿ ಇಂಥ ಸಾರ್ಸ್ ಮಾದರಿಯ ವೈರಾಣು ಇರುತ್ತವೆಂದು ಚೀನೀ ಸಂಶೋಧಕಿ ಷಿ ಝೆಂಗ್ಲಿ ಅಲ್ಲಿನ ಗುಹೆಗಳಲ್ಲಿ ಓಡಾಡಿ 2012ರಲ್ಲೇ ವರದಿ ಮಾಡಿದ್ದಳು. 

ಅದಕ್ಕೂ ತುಸು ಹಿಂದೆ 2011ರಲ್ಲೇ ಬೆಳ್ಳಿತೆರೆಗೆ ಬಂದ ‘ಕಂಟೇಜಿಯನ್’ ಎಂಬ ಸಿನೆಮಾದಲ್ಲಿ ಅದೇ ಚಿತ್ರಕಥೆ ಇತ್ತು. ಬುಲ್ಡೋಜರ್‌ಗಳು ಕಾಡಿನ ಹೆಮ್ಮರಗಳನ್ನು ಬೀಳಿಸುತ್ತಿದ್ದಾಗ ಒಂದು ಬಾವಲಿ ಹಾರಿ ಹೋಗಿ ಕಾಡಂಚಿನ ಹಂದಿಗೂಡಿನ ಸೂರಿಗೆ ನೇತಾಡುತ್ತದೆ. ಅದರ ಬಾಯಿಂದ ಬಿದ್ದ ಹಣ್ಣನ್ನು ಹಂದಿ ತಿನ್ನುತ್ತದೆ; ಆ ಹಂದಿಯ ಮಾಂಸವನ್ನು ಹಾಂಗ್‌ಕಾಂಗಿನಲ್ಲಿ ಬೇಯಿಸಿ ಬಡಿಸಿದವನಿಗೆ ಜ್ವರ ಬರುತ್ತದೆ. ಉಂಡವಳು ವಿಮಾನ ಏರಿ, ತನ್ನೊಂದಿಗೆ ರೋಗಾಣುವನ್ನೂ ಅಮೆರಿಕಕ್ಕೆ ಕೊಂಡೊಯ್ಯುತ್ತಾಳೆ. ಅಲ್ಲಿನ ಮಹಾಸಾಂಕ್ರಾಮಿಕ, ಲಾಕ್‌ಡೌನ್ ಕೋಲಾಹಲ, ರಾಜಕಾರಣ, ಮೆಡಿಕಲ್ ಮಾಫಿಯಾ, ಹಣಕ್ಕಾಗಿ ತಜ್ಞರ ಅಪಹರಣ, ಬ್ಲ್ಯಾಕ್‌ಮೇಲ್ ಇತ್ಯಾದಿ ಎಲ್ಲ ಮಸಾಲೆಗಳೂ ಅದರಲ್ಲಿದ್ದವು.

ಇದು ಲ್ಯಾಬಿನಿಂದ ಆಕಸ್ಮಿಕ ಸೋರಿಕೆಯಾದ ಜೀವಾಯುಧವೇ ಹೌದು ಎನ್ನಲು ಮೇಲ್ನೋಟದ ಸಾಕ್ಷ್ಯಗಳು ಹೀಗಿವೆ: 1. ವೈರಾಣುಗಳನ್ನು ಪೋಷಿಸಿ, ಛೇದಿಸಿ, ಪರೀಕ್ಷಿಸುವಲ್ಲಿ ವಿಶ್ವಖ್ಯಾತಿ ಪಡೆದ ಘೋರಭದ್ರ ಸಂಶೋಧನಾ ಸಂಸ್ಥೆ ವುಹಾನ್‌ನಲ್ಲೇ ಇದೆ. 2. ಈ ಸಂಸ್ಥೆಯ ಸಿಬ್ಬಂದಿ ಹತ್ತುವರ್ಷಗಳ ಹಿಂದೆ ತಾಮ್ರದ ಗಣಿಯಲ್ಲಿ ಬಾವಲಿಗಳ ಸಮೀಕ್ಷೆಗೆ ಹೋದಾಗ ಮೂವರಿಗೆ ಸಾರ್ಸ್ ಮಾದರಿಯ ಜ್ವರ ತಗುಲಿತ್ತು. 3. ಕಳೆದ ವರ್ಷ ಫೆಬ್ರುವರಿಯಲ್ಲಿ ಇಬ್ಬರು ಚೀನೀ ಸಂಶೋಧಕರೇ ಇದು ಲ್ಯಾಬ್‌ನಿಂದ ಸೋರಿಕೆಯಾದ ವೈರಾಣುವೇ ಇರಬೇಕೆಂದು ಹೇಳಿದ್ದಾರೆ. 4. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದವರಲ್ಲಿ ಮೂವರು ಈ ಸಂಸ್ಥೆಯ ಸಿಬ್ಬಂದಿಯೇ ಆಗಿದ್ದಾರೆಂದು ಈಗ ಗೊತ್ತಾಗಿದೆ. 5. ಆಕಸ್ಮಿಕ ಸೋರಿಕೆ ಆದಾಗ ತುರ್ತುಕ್ರಮ, ಪ್ರತ್ಯೌಷಧ ಏನಿರಬೇಕು ಎಂಬುದು ವುಹಾನ್ ವಿಜ್ಞಾನಿಗಳಿಗೆ ಗೊತ್ತಿತ್ತು. ಆದ್ದರಿಂದಲೇ ಚೀನಾ ಅತಿ ಕ್ಷಿಪ್ರವಾಗಿ ಚೇತರಿಸಿಕೊಂಡಿದೆ. ಅಷ್ಟು ದೊಡ್ಡ ದೇಶದಲ್ಲಿ ಕೇವಲ 4636 ಜನ ಕೋವಿಡ್‌ನಿಂದ ಗತಿಸಿದ್ದಾರೆ. ತಾನು ಗೆದ್ದಿದ್ದಕ್ಕೆ ಹಬ್ಬ ಆಚರಿಸಿದೆ. ಗೆದ್ದಿದ್ದು ಹೇಗೆ ಎಂದು ಮಾತ್ರ ಹೇಳಲಿಲ್ಲ.

ತನ್ನದೇನೂ ತಪ್ಪಿಲ್ಲ, ಲ್ಯಾಬಿನಿಂದ ವೈರಸ್ ಸೋರಿಕೆ ಆಗಿಲ್ಲ ಎಂದು ವಾದಿಸುವ ಚೀನಾ ಇನ್ನೂ ಒಂದು ಹೇಳಿಕೆಯನ್ನು ಗಾಳಿಯಲ್ಲಿ ಹರಿಬಿಟ್ಟಿದೆ. ಕಾಡಿನಿಂದ ವೈರಾಣು ಬಂದಿರಲಿಕ್ಕಿಲ್ಲ. ವಿದೇಶೀ ಆಹಾರವಸ್ತುಗಳ ಮೂಲಕ ಇದು ಬಂದಿರಬೇಕು ಎಂದು ಹೇಳಿದೆ. ತನ್ನ ದೇಶಕ್ಕೆ ಎಲ್ಲೆಲ್ಲಿಂದ ಸಿದ್ಧ ಆಹಾರವಸ್ತುಗಳು ಬರುತ್ತಿವೆ ಎಂಬುದರ ಪಟ್ಟಿಯನ್ನೇ ಅದು ಕೊಟ್ಟಿದೆ.

ಕಾಡಿನಲ್ಲಿರುವ ಪ್ರಾಣಿ, ಪಕ್ಷಿ, ಕೀಟಗಳಲ್ಲಿ ನಾನಾ ಬಗೆಯ ವೈರಾಣು ಇರುತ್ತವೆ ನಿಜ. ಆದರೆ  ಅವನ್ನು ಲ್ಯಾಬಿಗೆ ತಂದು, ಅದರ ಸೋಂಕುಗುಣ ತೀರಾ ಇಮ್ಮಡಿ ಮುಮ್ಮಡಿ ಆಗುವಂತೆ ತಿದ್ದಿತೀಡಿ ಜೀವಾಣು ಬಾಂಬ್ ಆಗಿ ರೂಪಿಸುವ ಸಂಶೋಧನೆಗಳು ನಡೆಯುತ್ತಲೇ ಇವೆ. ಚೀನಾದ ಅಂಥ ಸಂಶೋಧನೆಗೆ ಅಮೆರಿಕ ಸರ್ಕಾರವೂ ಕೈಜೋಡಿಸಿದ್ದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಪರಮಾಣು ಬಾಂಬ್‌ಗಳ ಬದಲಿಗೆ ಇಂಥ ಜೀವಾಣು ಬಾಂಬ್‌ಗಳನ್ನು, ವಿಷಾನಿಲ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಇಟ್ಟುಕೊಳ್ಳಲು ಎಲ್ಲ ಶಕ್ತರಾಷ್ಟ್ರಗಳೂ ಬಯಸುತ್ತವೆ. ಹಾಗೆ ಮಾಡಬಾರದೆಂದು ವಿಶ್ವಮಟ್ಟದಲ್ಲಿ ಜೀವಾಣು ಬಾಂಬ್ ನಿಷೇಧ ಒಪ್ಪಂದಗಳಿವೆ ನಿಜ. ಆದರೂ ರಹಸ್ಯ ಕಾರ್ಯಾಚರಣೆಗಳು ನಡೆದೇ ಇವೆ. ಇವುಗಳ ಮಧ್ಯೆ  ಬಲಾಢ್ಯ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳೂ ಅಂಥ ಹೈಬ್ರಿಡ್ ವೈರಾಣುಗಳ ಸೃಷ್ಟಿಗೆ ಹಣ ಹೂಡುತ್ತಿವೆ. ಅವುಗಳ ಉದ್ದೇಶ ಏನೆಂದರೆ, ವೈರಸ್‌ಗಳಿಗೆ ಲಸಿಕೆಗಳನ್ನು ತಯಾರಿಸಿ ಲಾಭ ಗಳಿಸುವುದು. ಮನುಕುಲದ ಕಲ್ಯಾಣ!


ವುಹಾನ್‌ ನಗರದಲ್ಲಿ ಸೋಂಕಿತರೆಲ್ಲ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬಿದ್ದಾಗ ಆ ನಗರ ಆಚರಿಸಿದ ‘ಕೊರೊನಾ ಜಯಿಸಿದ ಸಂಭ್ರಮಾಚರಣೆ’ ನೋಟ

ಪರಮಾಣು ಬಾಂಬ್‌ಗಳಿಗಿಂತ ಜೀವಾಣು ಬಾಂಬ್ ಉತ್ತಮ ಏಕೆಂದರೆ, ಆಸ್ತಿಪಾಸ್ತಿ ನಷ್ಟ ಆಗುವುದಿಲ್ಲ; ಲಸಿಕೆ ಪಡೆದಿರುವ ಪ್ರಭಾವಿಗಳೆಲ್ಲ ಬಚಾವ್ ಆಗುತ್ತಾರೆ. ಆದರೆ, ಅಂಥ ಬಾಂಬ್ ದಾಳಿಗೆ ಬಲಿಯಾಗುವ ದೇಶದ ಆರ್ಥಿಕ ಬೆನ್ನೆಲುಬು ಮುರಿಯುತ್ತದೆ. ದೇಶರಕ್ಷಣೆಯ ಎಲ್ಲ ವ್ಯವಸ್ಥೆಗಳೂ ಕುಸಿಯುತ್ತವೆ. ವೈರಿ ಯಾರು, ಪ್ರತ್ಯಸ್ತ್ರವನ್ನು ಯಾವ ದಿಕ್ಕಿಗೆ ಪ್ರಯೋಗಿಸಬೇಕು ಎಂಬುದು ಗೊತ್ತಾಗದೆ ಮಿಲಿಟರಿ ಕೈಕಟ್ಟಿ ಕೂರಬೇಕಾಗುತ್ತದೆ. ಹೆಚ್ಚೆಂದರೆ ತನ್ನ ಪ್ರಜೆಗಳಿಗೆ ಆಮ್ಲಜನಕ, ಲಸಿಕೆ, ವೆಂಟಿಲೇಟರು, ಆಕ್ಸಿಮೀಟರು, ಬಯಲು ರುಗ್ಣಾಲಯಗಳ ಉಸ್ತುವಾರಿಯಲ್ಲೇ ಏಗುತ್ತಿರಬೇಕಾಗುತ್ತದೆ. ದೇಶದ ನಾಯಕರಂತೂ ವಿದೇಶೀ ಸಹಾಯಕ್ಕೆ ಅಂಗಲಾಚುತ್ತ, ತನ್ನ ಅಸ್ತವ್ಯಸ್ತ ಆಡಳಿತಯಂತ್ರವನ್ನು ನಿಭಾಯಿಸುವುದರಲ್ಲೇ ವ್ಯಸ್ತ ಆಗಿರಬೇಕಾಗುತ್ತದೆ. ಪ್ರಜೆಗಳು ದಂಗೆ ಏಳದಂತೆ ನೋಡಿಕೊಂಡರೆ ಸಾಕಾಗಿರುತ್ತದೆ.

ಯಾವ ರಾಷ್ಟ್ರಕ್ಕೂ ಇಂಥ ವಿಷಣ್ಣ ಪ್ರಸಂಗ ಬಾರದಂತೆ, ಎಲ್ಲೂ ಇಂಥ ಶಸ್ತ್ರಾಸ್ತ್ರಗಳ ನಿರ್ಮಾಣ ಆಗದಂತೆ ಜಾಗತಿಕ ಮಟ್ಟದಲ್ಲಿ ನಿಗಾ ಇಡುವ ಹೊಣೆಗಾರಿಕೆ ವಿಸ್ವಾಸಂ ಅಧ್ಯಕ್ಷರ ಮೇಲಿರುತ್ತದೆ. ಆ ಪೀಠಕ್ಕೆ ಯಾರನ್ನು ಕೂರಿಸಬೇಕು ಎಂಬ ಬಗ್ಗೆ ಭಾರೀ ರಾಜಕೀಯ ಜಟಾಪಟಿ ನಡೆಯುತ್ತದೆ. ಈಗಿರುವ (ಇಥಿಯೋಪಿಯಾ ಮೂಲದ) ಟೆಡ್ರೋಸ್ ಮಹಾಶಯ ಅಧ್ಯಕ್ಷನಾಗುವುದು ಅಮೆರಿಕಕ್ಕೆ ಹಾಗೂ ಅದರ ಬೆಂಬಲಿತ ದೇಶಗಳಿಗೆ ಬೇಕಿರಲಿಲ್ಲ. ಆದರೆ ಚೀನಾ ಅದೇನೇನೊ ಮಸಲತ್ತು ಮಾಡಿ, ಆಫ್ರಿಕಾದ ರಾಷ್ಟ್ರಗಳಿಗೆ ಆರ್ಥಿಕ ನೆರವಿನ ಆಮಿಷ ಒಡ್ಡಿ ವೋಟ್ ಬ್ಯಾಂಕನ್ನು ಭದ್ರಪಡಿಸಿ ಟೆಡ್ರೋಸನ್ನು ಗೆಲ್ಲಿಸಿಯೇಬಿಟ್ಟಿತು. ಭಾರತವೂ ಆತನಿಗೇ ವೋಟ್ ಹಾಕಿತು. ಒಂದು ಕಾರಣ ಏನೆಂದರೆ, ಟೆಡ್ರೋಸ್‌ಗೆ ಪ್ರತಿಸ್ಪರ್ಧಿಯಾಗಿ ಪಾಕಿಸ್ತಾನದ ಡಾ. ಸಾನಿಯಾ ನಿಷ್ತಾರ್ ಕಣದಲ್ಲಿದ್ದರು. 

ಚೀನಾ ಬೆಂಬಲಿತ ವ್ಯಕ್ತಿ ಗೆದ್ದಿದ್ದ ಉರಿ; ಅಮೆರಿಕವನ್ನೂ ಕೊರೊನಾ ಅಮರಿಕೊಂಡಿದ್ದ ಪರಿ – ಅಂತೂ ಟ್ರಂಪ್‌ಗೆ ವಿಸ್ವಾಸಂ ಮೇಲೆ ವಿಶ್ವಾಸವೇ ಉಳಿಯಲಿಲ್ಲ. ಕೂಗಾಡಿ, ಈ ಸಂಸ್ಥೆಗೆ ಚಂದಾ ಕೊಡುವುದಿಲ್ಲ ಎಂದು ಬೈದಾಡಿದ್ದಂತೂ ಆಯಿತು. ಆದರೆ ಕೊರೊನಾ ಸೋರಿಕೆಗೆ ಚೀನಾದ ಸಂಶೋಧನೆಯೇ ಕಾರಣ ಎಂದು ಬಹಿರಂಗವಾಗಿ ಹೇಳುವ ಹಾಗಿರಲಿಲ್ಲ. ಉಗ್ರ ತನಿಖೆಗೂ ಒತ್ತಾಯಿಸುವ ಹಾಗಿಲ್ಲ - ಏಕೆಂದರೆ ಅಮೆರಿಕದ ಮಿಲಿಟರಿಯೂ ಅಂಥ ಸಂಶೋಧನೆಯಲ್ಲಿ ಶಾಮೀಲಾಗಿದ್ದ ಸಂಗತಿ ಹೊರಬಂದರೆ?

ಸೋರಿಕೆ ಸಾಧ್ಯತೆ ಕುರಿತು ವಿಸ್ವಾಸಂ ತನಿಖೆ ನಡೆಸಬೇಕು ಎಂದು ಅನೇಕ ವಿಜ್ಞಾನಿಗಳು ಒತ್ತಾಯಿಸಿದ್ದಾರೆ. ಹಿಂದೆಯೇ ಅಂಥದ್ದೊಂದು ತನಿಖಾ ಸಮಿತಿಯನ್ನು ವಿಸ್ವಾಸಂ ವುಹಾನ್‌ಗೆ ಕಳಿಸಿ ವರದಿ ತರಿಸಿತ್ತು. ‘ಇದು ನೈಸರ್ಗಿಕವಾಗಿ ಹೊರಬಿದ್ದ ಕಾಯಿಲೆ’ ಎಂದೇ ತೀರ್ಪು ನೀಡಿತ್ತು. ಆದರೆ, ಆ ಸಮಿತಿಯ 34 ಸದಸ್ಯರ ಪೈಕಿ 17 ಮಂದಿ ಚೀನೀಯರೇ ಆಗಿದ್ದು, ಟೆಡ್ರೋಸ್ ಕೂಡಾ ಚೀನೀ ನೆಂಟನೇ ಆಗಿದ್ದರಿಂದ ತನಿಖಾ ಸಮಿತಿ ನಿಜ ಸಂಗತಿಯನ್ನು ದಫನ ಮಾಡಿದೆ ಎಂಬ ಟೀಕೆ ಬಂದಿತ್ತು. ಇದೀಗ ಅದೇನು ಒತ್ತಡ ಬಂತೊ, ಟೆಡ್ರೋಸ್ ‘ಸಾಕ್ಷ್ಯ ಸಾಲದು, ಇನ್ನಷ್ಟು ತನಿಖೆ ನಡೆಯಬೇಕು’ ಎಂದಿದ್ದಾರೆ.  

ಆದರೆ ಈಗ ಅಮೆರಿಕ ಸತ್ಯಶೋಧಕ್ಕೆ ಇಳಿಯುವುದು ಅನಿವಾರ್ಯವಾಗುತ್ತಿದೆ. ಏಕೆಂದರೆ, ಪ್ರತಿಷ್ಠಿತ 18 ವಿಜ್ಞಾನಿಗಳು ಎರಡು ವಾರಗಳ ಹಿಂದೆ ತನಿಖೆಗೆ ಒತ್ತಾಯಿಸಿ ‘ಸೈನ್ಸ್’ ಪತ್ರಿಕೆಗೆ ಬರೆದ ಪತ್ರ ಜಗಜ್ಜಾಹೀರಾಗಿದೆ. ಅದಕ್ಕೇ ‘ಸತ್ಯಪತ್ತೆ ಕೆಲಸವನ್ನು ತೀವ್ರಗೊಳಿಸಿ’ ಎಂದು ಮೊನ್ನೆ ಬುಧವಾರ ಅಧ್ಯಕ್ಷ ಬೈಡನ್ ಅಮೆರಿಕದ ಗುಪ್ತಚರ ಸಂಸ್ಥೆಗೆ ಆದೇಶ ನೀಡಿದ್ದಾರೆ.

ತನಿಖೆಗೆ ವಿಜ್ಞಾನಿಗಳ ಸಹಾಯವಂತೂ ಬೇಕು. ಅವರು ಅದೇನೇ ಸತ್ಯವನ್ನು ಹೊರಗೆಳೆದರೂ ಅದನ್ನೂ ಅಮೆರಿಕ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಬಿಚ್ಚಿಡಬಹುದು ಅಥವಾ ಮುಚ್ಚಿಡಬಹುದು. ಆಗಿನ ಸ್ವಾರಸ್ಯ ಏನೆಂದರೆ ಗುಪ್ತಚರರು ಪತ್ತೆ ಮಾಡಿದ್ದನ್ನು ಮಾಧ್ಯಮಗಳು ಪತ್ತೆ ಮಾಡಿ ಟಾಂ ಟಾಂ ಮಾಡುತ್ತವೆ.

ಆಯಿತು, ಲ್ಯಾಬಿನಿಂದ ವೈರಾಣು ಸೋರಿಕೆಯಾಗಿದ್ದೇ ಹೌದೆಂದು ಗೊತ್ತಾದರೂ ಏನೀಗ? ಯಾರು ಏನು ಮಾಡಲು ಸಾಧ್ಯ? ಚೀನಾ ಅದನ್ನು ಒಪ್ಪಿಕೊಳ್ಳುವುದಿಲ್ಲ. ಈ ಮಹಾಸಾಂಕ್ರಾಮಿಕದಿಂದ ಯಾರು ಯಾರು ಎಷ್ಟೆಷ್ಟು ಗಿಟ್ಟಿಸಿಕೊಳ್ಳಬೇಕೊ ಅವಷ್ಟನ್ನೂ ದಕ್ಕಿಸಿಕೊಂಡಾಗಿದೆ. ಲಸಿಕೆ, ಪಿಪಿಇ ಕಿಟ್, ಸ್ಯಾನಿಟೈಸರ್, ಆಕ್ಸಿಜನ್, ಟೆಸ್ಟಿಂಗ್ ಉಪಕರಣ, ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್‌ಗಳ ತಯಾರಕರೂ ನೆಟ್‌ವರ್ಕ್ ಕಂಪನಿಗಳೂ ತಂತಮ್ಮ ಕೈಲಾದ ಸೇವೆಗೆ ಇಳಿದು ಲಾಭಾಂಶವನ್ನು ಷೇರುದಾರರಿಗೆ ರವಾನಿಸುತ್ತಿವೆ. ಕಷ್ಟಕ್ಕೀಡಾದವರಿಗೆ, ನಷ್ಟದಲ್ಲಿದ್ದವರಿಗೆ ಮತ್ತು ಪ್ರಾಣತೆತ್ತ ವೈದ್ಯ ವೃಂದಕ್ಕೆ ಪರಿಹಾರ ಕೊಡುವಂತೆ ಚೀನಾವನ್ನು ಕೋರಲು ಸಾಧ್ಯವೆ? 

ಕೊನೆಗೂ ದೊಣ್ಣೆ ಯಾರದೋ ಎಮ್ಮೆಯೂ ಅವನದೇ!

ಅಂತೂ ಸತ್ಯಶೋಧನೆಯ ಈ ಅಸಂಗತ ನಾಟಕ ರಂಗಕ್ಕೇರಲಿದೆ. ರಾಜಕೀಯ ಮಸಲತ್ತು, ತನಿಖಾ ವರದಿಗಾರರ ಕಸರತ್ತುಗಳ ನಡುವೆ ಹೆಚ್ಚೆಂದರೆ ಲ್ಯಾಬ್‌ಗಳ ಭದ್ರತಾ ವ್ಯವಸ್ಥೆ ಇನ್ನಷ್ಟು ಬಿಗಿಯಾದೀತು. ನಮ್ಮನಿಮ್ಮೆಲ್ಲರ ಬದುಕಿನ ಭದ್ರತೆಯ ವಿಷಯ ಪಾರ್ಕಲಾಂ.

ಸದ್ಯಕ್ಕೆ ‘ಶಾಂತತಾ! ಕೋರ್ಟ್ ಚಾಲೂ ಆಗಿದೆ!’

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು