ಶನಿವಾರ, ಆಗಸ್ಟ್ 13, 2022
24 °C
ನಾಡಿನ ಕವಿಗಳ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದ ಕಾರ್ಯಕ್ರಮ

'ಪ್ರಜಾವಾಣಿ ಫೇಸ್‌ಬುಕ್‌ ಲೈವ್'‌ಗೆ ಲೈಕ್‌ಗಳ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಪ್ರಜಾವಾಣಿ’ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದಲ್ಲಿ ಬಿ.ವಿ.ಕಾರಂತ್ ರಾಷ್ಟ್ರೀಯ ರಂಗೋತ್ಸವ ಪ್ರಶಸ್ತಿ ಪುರಸ್ಕೃತ ಬೀದರ್‌ ಜಿಲ್ಲೆಯ ಬಿದರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರ ತಂಡ ಒಂದೂವರೆ ತಾಸು ಚಲನಚಿತ್ರಗಳಲ್ಲಿ ಉತ್ತರ ಕರ್ನಾಟಕದ ಕವಿಗಳ ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ಸಂಗೀತ ಶೋತೃಗಳ ಮನ ತಣಿಸಿತು. ಇಲ್ಲಿಯ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಗಾಯಕಿ ರೇಖಾ ಅಪ್ಪಾರಾವ್‌ ಸೌದಿ ಅವರು ಬಿಡುವಿಲ್ಲದಂತೆ 11 ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಕನ್ನಡಿಗರು ನಾಡಿನ ಸಾಹಿತಿಗಳನ್ನು ಸ್ಮರಿಸುವಂತೆ ಮಾಡಿದರು.

ಪ್ರೇಮ ತರಂಗ ಚಲನಚಿತ್ರದ ದ.ರಾ.ಬೇಂದ್ರೆ ರಚಿತ ‘ನೀ ಹಿಂಗ ನೋಡಬ್ಯಾಡ ನನ್ನ...,’ ಬೆಳ್ಳಿ ಮೋಡ ಚಿತ್ರದ ‘ಮೂಡಲ ಮನೆಯ ಮುತ್ತಿನ ನೀರಿನ...’, ಗೋಪಾಲ ವಾಜಪೇಯಿ ಬರೆದ ನಾಗಮಂಡಲ ಚಲನಚಿತ್ರದ ‘ಕಂಬದಾ ಮೇಲಿನ ಗೊಂಬೆಯೇ...’, ‘ಈ ಹಸಿರು ಸಿರಿಯಲಿ..’, ಮನಸು ಮೆರೆಯಲಿ ನವಿಲೇ...’, ‘ಯಾವ ದೇಶದ ರಮಣ...’, ಜೀವನ ಚೈತ್ರ ಚಲನಚಿತ್ರದ ಮೂಗುರು ಮಲ್ಲಪ್ಪ ರಚಿತ ‘ಮಾನವನಾಗಿ ಹುಟ್ಟಿದ ಮೇಲೆ ಏನೇನ್‌ ಕಂಡಿ..’ ಹಾಡುಗಳನ್ನು ಹಾಡಿ ಫೇಸ್‌ಬುಕ್‌ನಲ್ಲೇ ಪ್ರೇಕ್ಷಕರನ್ನು ಸೆರೆ ಹಿಡಿದರು.

ಬೀದರ್‌ನ ರೇಖಾ ಅಪ್ಪಾರಾವ್‌ ಸೌದಿ ಅವರಿಂದ ಲೈವ್

ಬೀದರ್‌ನ ರೇಖಾ ಅಪ್ಪಾರಾವ್‌ ಸವದಿ ಅವರಿಂದ ಚಲನಚಿತ್ರಗಳಲ್ಲಿ ಜನಪ್ರಿಯವಾಗಿದ್ದ ಉತ್ತರ ಕರ್ನಾಟಕದ ಕವಿಗಳ ಹಾಡು ಸಹಕಲಾವಿದರು: ಅಮಿತ್‌ ಜನವಾಡ್ಕರ್‌, ರಾಜೇಶ್‌ ಕುಲಕರ್ಣಿ, ಎನ್‌.ಎಸ್‌.ಕುಲಕರ್ಣಿ #PVFacebookLive #FBLive #PVFBLive

Posted by Prajavani on Saturday, 12 September 2020

ಕಾಡುಕುದರೆ ಚಲನಚಿತ್ರದ ಚಂದ್ರಶೇಖರ ಕಂಬಾರ ರಚಿತ ‘ಕಾಡು ಕುದರೆ ಓಡಿ ಬಂದಿತ್ತ...’, ಶಿಶುನಾಳ ಷರೀಫ್‌ ಚಲನಚಿತ್ರದ ಶಿಶುನಾಳ ಶರೀಫ್‌ ಅವರು ಬರೆದ ‘ಕೊಡಗನ ಕೋಳಿ ನುಂಗಿತ್ತ...’, ಕಿತ್ತೂರು ಚೆನ್ನಮ್ಮ ಚಲನಚಿತ್ರದ ಅಕ್ಕಮಹಾದೇವಿ ರಚಿತ ವಚನ ‘ತನು ಕರಗದವರಲ್ಲಿ ಪುಷ್ಪವನೊಲ್ಲೆನಯ್ಯ ನೀನು...‘ ಹಾಡು ಹಾಡಿದರು.

ದ.ರಾ.ಬೇಂದ್ರೆ ರಚಿತ ಹುಬ್ಬಳ್ಳಿ ಚಲನಚಿತ್ರದ ‘ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ...‘ ಹಾಗೂ ಒಂದು ನೋಟು ಚಲನಚಿತ್ರದ ‘ಕುರುಡು ಕಾಂಚಾಣ ಕುಣಿಯತ್ತಲಿತ್ತೋ’ ಹಾಡುಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನ ತಣಿಸಿದರು.

ಅಮಿತ್‌ ಜನವಾಡ್ಕರ್, ರಾಜೇಶ ಕುಲಕರ್ಣಿ ಹಾಗೂ ಎನ್‌.ಎಸ್‌.ಕುಲಕರ್ಣಿ ಸಹಕಾರ ಸಾಥ್‌ ನೀಡಿದರು. ಶಿವಾನಂದ ಭಜಂತ್ರಿ ಅವರು ಕಿಬೋರ್ಡ್, ರಮೆಶ ರತ್ನಾಕರ್ ರಿದಂಪ್ಯಾಡ್ ಹಾಗೂ ವಿಠ್ಠಲಪ್ರಸಾದ ದೇಶಪಾಂಡೆ ತಬಾಲ ಸಾಥ್‌ ನೀಡಿದರು.

ಪ್ರಜಾವಾಣಿ ಜಿಲ್ಲಾ ವರದಿಗಾರ ಚಂದ್ರಕಾಂತ ಮಸಾನಿ ಸ್ವಾಗತಿಸಿದರು. ಸಾಹಿತಿ ಪಾರ್ವತಿ ಸೋನಾರೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು