ಫ್ರೆಂಚ್ ಸುದ್ದಿ ಸಂಸ್ಥೆಗಳ ಜೊತೆ ಸಂಘರ್ಷ: ಗೂಗಲ್‌ಗೆ ₹ 4,408 ಕೋಟಿ ದಂಡ

ಪ್ಯಾರಿಸ್: 'ಸ್ಥಳೀಯ ಮಾಧ್ಯಮಗಳು ಹಾಗೂ ಪ್ರಸಾರ ಸಂಸ್ಥೆಗಳು ಪ್ರಕಟಿಸುವ ವಿಷಯಗಳನ್ನು ಗೂಗಲ್ ತನ್ನ ಸರ್ಚ್ ಎಂಜಿನ್‌ನಲ್ಲಿ (ಹುಡುಕು ತಾಣ) ತೋರಿಸಲು ಅಥವಾ ನ್ಯೂಸ್ ಫೀಡ್ಸ್‌ನಲ್ಲಿ ಬಳಕೆ ಮಾಡಲು, ಸಂಸ್ಥೆಯು ಮಾಧ್ಯಮಗಳಿಗೆ ಹಣ ಸಂದಾಯ ಮಾಡಬೇಕು' ಎಂದು ಫ್ರೆಂಚ್ ಪಬ್ಲಿಷರ್‌ಗಳು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸ್ಪಂದಿಸಲು ಗೂಗಲ್ ಮೀನ–ಮೇಷ ಎಣಿಸುತ್ತಿದ್ದು, ಫ್ರಾನ್ಸ್‌ನ ಸ್ಪರ್ಧಾ ನಿಯಂತ್ರಣ ಸಂಸ್ಥೆಯು ಮಂಗಳವಾರ 500 ಮಿಲಿಯನ್ ಯೂರೊ (ಸುಮಾರು 4,408 ಕೋಟಿ ರೂಪಾಯಿ) ದಂಡ ವಿಧಿಸಿರುವುದಾಗಿ ಪ್ರಕಟಿಸಿದೆ.
ಸುದ್ದಿ ಮಾಧ್ಯಮಗಳಿಗೆ ಪರಿಹಾರ ನೀಡುವ ಕುರಿತು ಎರಡು ತಿಂಗಳ ಒಳಗೆ ಪ್ರಸ್ತಾವನೆ ಸಲ್ಲಿಸದಿದ್ದರೆ, ಗೂಗಲ್‌ಗೆ ದಿನಕ್ಕೆ 9 ಲಕ್ಷ ಯೂರೋಗಳಷ್ಟು (7.93 ಕೋಟಿ ರೂಪಾಯಿ) ದಂಡ ಹಾಕುವ ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ 'ಗೂಗಲ್ ಫ್ರಾನ್ಸ್', 'ದಂಡ ಹಾಕುವ ನಿರ್ಧಾರವು 'ಬಹಳ ನಿರಾಶೆ' ಉಂಟು ಮಾಡಿದೆ. ವಿಧಿಸಲಾಗಿರುವ ದಂಡವು ವಾಸ್ತವದಲ್ಲಿ ಸುದ್ದಿ ವಿಷಯಗಳನ್ನ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಬಳಸುವುದಕ್ಕೂ ಅಥವಾ ಅದರ ಶ್ರಮದ ಸೂಚಕವಾಗಿಯೂ ಕಾಣುತ್ತಿಲ್ಲ' ಎಂದು ಪ್ರಕಟಣೆಯಲ್ಲಿ ಹೇಳಿದೆ. ಉತ್ತಮ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಹಾಗೂ ಕೆಲವು ಮಾಧ್ಯಮ ಸಂಸ್ಥೆಗಳೊಂದಿಗೆ ಒಪ್ಪಂದದ ಅಂಚಿನವರೆಗೂ ತಲುಪಿದ್ದೇವೆ ಎಂದು ಗೂಗಲ್ ಫ್ರಾನ್ಸ್ ಹೇಳಿದೆ.
ಗೂಗಲ್ ಮತ್ತು ಇತರೆ ಟೆಕ್ ಕಂಪನಿಗಳು ಸುದ್ದಿ ಪ್ರಕಟಣೆ ಮಾಡುವ ಸಂಸ್ಥೆಗಳಿಗೆ ಪರಿಹಾರ ನೀಡುವಂತೆ ಯುರೋಪಿಯನ್ ಒಕ್ಕೂಟವು ಕೈಗೊಂಡಿರುವ ಪ್ರಯತ್ನದ ಭಾಗಿವಾಗಿ ಈ ನಿರ್ಧಾರ ಪ್ರಕಟವಾಗಿದೆ.
ಇದನ್ನೂ ಓದಿ: ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಲಭ್ಯವಿರದಿದ್ದರೆ ಎಚ್ಚರಿಕೆ ನೀಡಲಾಗುವುದು: ಗೂಗಲ್
ಪಾಶ್ಚಿಮಾತ್ಯ ದೇಶಗಳ ಡಿಜಿಟಲ್ ಸೇವೆಗಳ ಸಕ್ರಿಯ ನಿಯಂತ್ರಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿರುವ ಯುರೋಪಿಯನ್ ಯೂನಿಯನ್ ಆಂಟಿಟ್ರಸ್ಟ್, ಮೂರು ತಿಂಗಳ ಒಳಗೆ ಸುದ್ದಿ ಪ್ರಕಟಣೆ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುವಂತೆ ಈ ವರ್ಷದ ಆರಂಭದಲ್ಲಿ ಗೂಗಲ್‌ಗೆ ತಾತ್ಕಾಲಿಕ ಆದೇಶ ನೀಡಿತ್ತು. ಆ ಆದೇಶವನ್ನು ಉಲ್ಲಂಘಿಸಿರುವ ಕಾರಣಗಳಿಂದಾಗಿ ಗೂಗಲ್‌ಗೆ ಮಂಗಳವಾರ ದಂಡ ವಿಧಿಸಲಾಗಿದೆ.
ಫ್ರೆಂಚ್ ಮತ್ತು ಯುರೋಪಿಯನ್ ಒಕ್ಕೂಟದ ಆ್ಯಂಟಿಟ್ರಸ್ಟ್ ಪ್ರಾಧಿಕಾರಗಳು ಗೂಗಲ್‌ನ ಹಲವು ವಾಣಿಜ್ಯ ಚಟುವಟಿಕೆಗಳ ಮೇಲೆ ಗುರಿಯಾಗಿಸಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.