ಸೋಮವಾರ, ಮಾರ್ಚ್ 30, 2020
19 °C
ವಯಸ್ಸಾಯ್ತು ಟ್ರಂಪ್ | ಅಮೆರಿಕ ಅಧ್ಯಕ್ಷರ ಕಾಲೆಳೆದ ನೆಟ್ಟಿಗರು

ಫೇಸ್‌ಬುಕ್‌ನಲ್ಲಿ ನಾನೇ ಮೊದಲು, ನನ್ನ ನಂತರ ನರೇಂದ್ರ ಮೋದಿ ಎಂದ ಟ್ರಂಪ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ಫೇಸ್‌ಬುಕ್‌ನಲ್ಲಿ ನಾನೇ (ಟ್ರಂಪ್) ನಂ.1 ಜನಪ್ರಿಯ. ನನ್ನ ನಂತರದ ಸ್ಥಾನ ಪ್ರಧಾನಿ ನರೇಂದ್ರ ಮೋದಿ ಅವರದು’ ಎಂದು ಹಿಂದೊಮ್ಮೆ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶನಿವಾರ ಟ್ವೀಟ್ ಮಾಡಿದ್ದಾರೆ.

‘ಮಾನ್ಯ ಅಧ್ಯಕ್ಷ ಮಹಾಶಯವರೇ, ನೀವು ಯಾವ ದೇಶಕ್ಕೆ ಹೋಗ್ತೀರೋ ಆ ದೇಶದ ಜನರು ಮತ್ತು ನಾಯಕರಿಗೆ ಸಾಧ್ಯವಾದಷ್ಟೂ ಕಡಿಮೆ ಮುಜುಗರವಾಗುವಂತೆ ವರ್ತಿಸಿ. ಭೂಗೋಳದ ಪುಸ್ತಕವನ್ನು ಇನ್ನೊಮ್ಮೆ ತಿರುವಿಹಾಕಿ, ನಕಾಶೆಗಳನ್ನು ನೋಡಿ ಜ್ಞಾನ ಬೆಳೆಸಿಕೊಳ್ಳಿ’ ಎಂದು ಹಲವರು ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಈ ಹಿಂದೆ ಚೀನಾ ದೇಶವು ಭಾರತದೊಂದಿಗೆ ಗಡಿಹಂಚಿಕೊಂಡಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದನ್ನು ನೆನಪಿಸಿಕೊಟ್ಟಿದ್ದಾರೆ.

‘ಎರಡನೇ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನನ್ನು ಭೇಟಿಯಾಗಲು ಎರಡು ವಾರಗಳ ನಂತರ ಭಾರತಕ್ಕೆ ಹೋಗುತ್ತಿದ್ದೇನೆ. ಇದೊಂದು ದೊಡ್ಡ ಗೌರವ’ ಎಂದು ಟ್ರಂಪ್ ಹೇಳಿದ್ದಾರೆ.

‘ಫೇಸ್‌ಬುಕ್‌ನಲ್ಲಿ ನೀವೇ ನಂ.1 ಎಂದು ಭೋಜನಕೂಟವೊಂದರಲ್ಲಿ ಝುಕರ್‌ಬರ್ಗ್‌ ನನಗೆ ಹೇಳಿದ್ದರು’ ಎಂದು ಟ್ರಂಪ್ ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಬಹಿರಂಗಪಡಿಸಿದ್ದರು. ಟ್ರಂಪ್ ಜೊತೆಗಿನ ಮಾತುಕತೆ ವೇಳೆ ಝೂಕರ್‌ಬರ್ಗ್‌ ಹೇಳಿದ್ದರು ಎನ್ನಲಾದ 2ನೇ ಸ್ಥಾನದವರ ಬಗ್ಗೆಯೂ ಇದೀಗ ಅಮೆರಿಕ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

ಟ್ರಂಪ್‌ ಟ್ವೀಟ್‌ಗೆ ಕಾಮೆಂಟ್ ಮಾಡಿರುವ ಸಾಕಷ್ಟು ಜನರು, ‘ಅಧ್ಯಕ್ಷರೇ ನಿಮಗೆ ವಯಸ್ಸಾಯಿತು. ಅದಕ್ಕೇ ನೀವು ಫೇಸ್‌ಬುಕ್‌ನಲ್ಲಿ ಜನಪ್ರಿಯರಾಗಿದ್ದೀರಿ’ ಎಂದು ಕಾಲೆಳೆದಿದ್ದಾರೆ.

55 ವರ್ಷ ದಾಟಿದವರ ಕಣ್ಮಣಿ!

‘ಫೇಸ್‌ಬುಕ್‌ ಇಷ್ಟಪಡುವವರ ಸರಾಸರಿ ವಯಸ್ಸು 55+ ವರ್ಷ. ಹಿಂದೊಮ್ಮೆ ಎಲ್ಲವೂ ಚೆನ್ನಾಗಿತ್ತು ಎನ್ನುವ ಮಧುರ ನೆನಪುಗಳನ್ನೇ ನೇವರಿಸುವ ಇಂಥವರು ಅಮೆರಿಕವನ್ನು ಮತ್ತೊಮ್ಮೆ ಮಹಾನ್ ದೇಶ ಮಾಡಿ ಎಂದು ಹೇಳುತ್ತಿರುತ್ತಾರೆ. ಫೇಸ್‌ಬುಕ್‌ನಲ್ಲಿ ನೀವು ನಂ.1 ಎನ್ನುವುದು ನಿಮಗೆ ಗೌರವ ಅಥವಾ ಅಭಿಮಾನದ ಮಾತು ಎಂದು ನನಗಂತೂ ಅನ್ನಿಸುತ್ತಿಲ್ಲ’ ಎಂದು ಏಂಜಿನ್ಲಾ ಬೆಲ್ಕಾಮಿನೊ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

‘ಈಚೆಗಂತೂ ಫೇಸ್‌ಬುಕ್ ಸಹ ಫಾಕ್ಸ್‌ ನ್ಯೂಸ್‌ ರೀತಿಯಲ್ಲಿಯೇ ವಯಸ್ಸಾದವರ ಸಾಮ್ರಾಜ್ಯವಾಗುತ್ತಿದೆ. ಸುಳ್ಳುಸುದ್ದಿಗಳನ್ನು ಹರಡುವವರಿಗೆ ಅದು ನೆಚ್ಚಿನ ಮಾಧ್ಯಮವಾಗಿದೆ. ಇಂಟರ್ನೆಟ್‌ನಲ್ಲಿ ಫ್ಯಾಕ್ಟ್‌ಚೆಕ್ ಮಾಡಿ, ಸರಿತಪ್ಪು ಅರಿತುಕೊಳ್ಳುವಷ್ಟು ವಿವೇಚನೆ ಇರುವವರು ಅದರಿಂದ ದೂರ ಉಳಿಯುತ್ತಿದ್ದಾರೆ’ ಎಂದು ಗ್ರೆನ್ ಮೀರಾ ಎನ್ನುವವರು ಟ್ರಂಪ್ ಜೊತೆಗೆ ಫೇಸ್‌ಬುಕ್‌ ವರ್ತನೆಯನ್ನೂ ಲೇವಡಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಮಂತ್ರಣದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಫೆ.24, 25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು