ಸೋಮವಾರ, ಜುಲೈ 26, 2021
22 °C
ರಾಜಕೀಯಕ್ಕಿದು ಸಮಯವಲ್ಲ | ರಾಜಕಾರಿಣಿಗಳಿಗೆ ಜನರ ಬುದ್ಧಿಮಾತು

'ಇದು ಹೊಸ ಭಾರತ ಗೊತ್ತಿದೆ ತಾನೆ': ಟ್ವಿಟರ್‌ನಲ್ಲಿ #GalwanValley ಟ್ರೆಂಡಿಂಗ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರು ಹುತಾತ್ಮರಾದ ವಿಚಾರ ಬಹಿರಂಗಗೊಂಡ ನಂತರ ಟ್ವಿಟರ್‌ನಲ್ಲಿ #GalwanValley #Ladakh #chinaindiaborder #IndiaChinaFaceOff #IndianArmy #Soldiers #ChineseArmy #ChineseAgentRahulಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಅಗುತ್ತಿವೆ. ಗೂಗಲ್‌ನಲ್ಲಿ India-China ಸರ್ಚ್‌ ವರ್ಡ್‌ ಟ್ರೆಂಡ್ ಆಗಿದೆ.

ಮೋದಿ ಆಡಳಿತ ವೈಖರಿಯನ್ನು ಮನಮೋಹನ್ ಸಿಂಗ್ ಜೊತೆಗೆ ಹೋಲಿಕೆ ಮಾಡುವ ಮೂಲಕ ಇಡೀ ಬೆಳವಣಿಗೆಯನ್ನು ರಾಜಕೀಯಗೊಳಿಸುವ ಪ್ರಯತ್ನವನ್ನೂ ಹಲವರು ಮಾಡಿದ್ದಾರೆ. ಆದರೆ ಬಹುತೇಕರು ಸೇನಾಪಡೆಗೆ ಬೆಂಬಲ ಸೂಚಿಸಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ರಾಜಕೀಯಗೊಳಿಸುವ ಹೇಳಿಕೆಗಳನ್ನು ನೇರಾನೇರ ಖಂಡಿಸಿದ್ದಾರೆ.

'ಇದು 1962ರ ಭಾರತವಲ್ಲ. ಕಣ್ಣಿಗೆ ಕಣ್ಣು ಎಂಬ ಸಿದ್ಧಾಂತ ನಮಗೂ ಈಗ ಅರ್ಥವಾಗಿದೆ' ಎಂಬ ಎಂಬರ್ಥದ ಮಾತುಗಳನ್ನು ಹಲವರು ಟ್ವೀಟ್ ಮಾಡಿದ್ದಾರೆ.

'ಭಾರತದ ನೆಲದಲ್ಲಿಯೇ ಭಾರತೀಯ ಸೇನೆಯ ಹಿರಿಯ ಅಧಿಕಾರಿ ಮತ್ತು ಸೈನಿಕರನ್ನು ಚೀನೀಯರು ಕೊಂದಿದ್ದಾರೆ. ಪ್ರಧಾನಿ ಈಗ ಧೈರ್ಯ ತೋರಬೇಕು' ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ನಿಜ್ಮಿ ಟ್ವೀಟ್ ಮಾಡಿದ್ದಾರೆ.

'ಇದು ನಮ್ಮ ಸೇನೆಯನ್ನು ಬೆಂಬಲಿಸುವ ಸಮಯ. ಕೀಳು ರಾಜಕಾರಣಕ್ಕಿದು ಸಮಯವಲ್ಲ' ಎಂದು ಜನರು ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

'ಕಳೆದ 4 ವಾರಗಳಿಂದ ಗಡಿಯಲ್ಲಿ ಉದ್ವಿಗ್ನತೆ ಇತ್ತು. ಚೀನೀಯರು ಏನು ಮಾಡಬಹುದು ಎಂಬ ಅಂದಾಜು ಸಹ ಇತ್ತು. ಆದರೂ ನಮ್ಮವರನ್ನು ಕಳೆದುಕೊಂಡಿದ್ದೇವೆ. ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಅಧಿಕಾರಿ ಮತ್ತು ಸೈನಿಕರಿಗೆ ನನ್ನ ನಮನಗಳು' ಎಂದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ನಿಯಮಿತವಾಗಿ ಲೇಖನಗಳನ್ನು ಬರೆಯುವ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎಚ್.ಎಸ್.ಪನಾಗ್ ವಿಷಾದಿಸಿದ್ದಾರೆ.

'ರಾಜಕಾರಿಣಿಗಳು ಮತ್ತು ರಾಜತಾಂತ್ರಿಕರ ವೈಫಲ್ಯಕ್ಕೆ ಸೈನಿಕರು ಜೀವ ತೆರಬೇಕಾಯಿತು' ಎಂದು ಪತ್ರಕರ್ತೆ ಸಾಗರಿಕ ಘೋಷ್ ಟ್ವೀಟ್ ಮಾಡಿದ್ದಾರೆ.

'ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಯಾರೋ ಏನೋ ಮಾಡಿದರು ಎಂದು ಮತ್ತೊಬ್ಬರು ಇನ್ನೊಂದೇನೋ ಮಾಡುವುದಿಲ್ಲ. ಸಮಾಧಾನ ಚಿತ್ತದಿಂದ ತಮ್ಮಿಷ್ಟದ ಸಂದರ್ಭ ಮತ್ತು ಪ್ರದೇಶದಲ್ಲಿ ತಮ್ಮ ನಿರ್ಧಾರಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ' ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಅವರ ಹೇಳಿಕೆಯನ್ನು ಪತ್ರಕರ್ತ ಅಭಿಜಿತ್ ಮಜುಂದಾರ್ ನೆನಪಿಸಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು