ಸೋಮವಾರ, ಫೆಬ್ರವರಿ 17, 2020
30 °C

ಟ್ವಿಟರ್‌ ಲೋಕದಲ್ಲಿ ಕನ್ನಡ ಹುಡುಕುತ್ತ...

ಹರ್ಷ ವಸಿಷ್ಠ Updated:

ಅಕ್ಷರ ಗಾತ್ರ : | |

Prajavani

ಡಿಜಿಟಲ್‌ ಯುಗದಲ್ಲಿ ಕನ್ನಡದ ಬಳಕೆ ಹೇಗಿದೆ? ಭಾಷೆಯ ಬೆಳವಣಿಗೆಗೆ ಜೊತೆಯಾಗಿರುವ ಕನ್ನಡಿಗರು ಏನೆಲ್ಲ ಪ್ರಯತ್ನ ನಡೆಸಿದ್ದಾರೆ, ವೇಗದ ಪಯಣದಲ್ಲಿ ಅಬ್ಬರವಿಲ್ಲದೆ ನಡೆಯುತ್ತಿರುವ ಕನ್ನಡ ಕೆಲಸಗಳು ಏನು ಎಂಬುದನ್ನು ತಾವು ಕಂಡಂತೆ ವಿವರಿಸಿದ್ದಾರೆ ಟ್ವೀಟಿಗ ಹರ್ಷ ವಸಿಷ್ಠ. 

ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿರುವ ಟ್ವಿಟರ್‌ನಲ್ಲಿ ನಮ್ಮ ನಾಡಿನ ಸಂಸ್ಕೃತಿ, ಕಲೆ, ಕ್ರೀಡೆ, ಸಾಹಿತ್ಯ, ಸಿನಿಮಾ, ಭಾಷೆ, ರಾಜಕೀಯ, ಹೀಗೆ ಎಲ್ಲ ತರಹದ ವಿಷಯಗಳ ಮೇಲೆ ಮುಕ್ತ ಚರ್ಚೆ ನಡೆಯುತ್ತಿದೆ. ಇಲ್ಲಿ ಸ್ನೇಹಿತರು, ಬಂಧುಗಳು ಇಲ್ಲದಿರುವ ಕಾರಣದಿಂದಲೋ ಏನೋ, ಜನ ತಮ್ಮ ನಿಜಸ್ವರೂಪದ ದರ್ಶನ ಮಾಡಿಸುತ್ತಾರೆ. ಮನಸ್ಸಿಗೆ ಬಂದದ್ದನ್ನು ಯಾವುದೇ ಸಂಕೋಚವಿಲ್ಲದೆ ಟ್ವೀಟಿಸುತ್ತಾರೆ. ಇದು ಹೆಚ್ಚಾಗಿ ಕಾಣಸಿಗುವುದು ರಾಜಕೀಯ, ಭಾಷೆ ಹಾಗು ಧರ್ಮದ ವಿಷಯಗಳಲ್ಲಿ.

ಭಾಷೆಯ ವಿಚಾರದಲ್ಲಿ ಹಲವು ಟ್ವಿಟರ್‌ ಅಭಿಯಾನಗಳು ನಡೆದಿವೆ ಹಾಗೂ ಯಶಸ್ವಿಯೂ ಆಗಿವೆ. ಬಹಳ ಸಮಯದಿಂದ ನಿರಂತರವಾಗಿ ನಡಿಯುತ್ತಿರುವ ಹಿಂದಿ ಹೇರಿಕೆಯ ವಿರುದ್ಧದ ಅಭಿಯಾನ ಬಹಳಷ್ಟು ಜನರ ಕಣ್ಣು ತೆರೆಸಿದೆ. ಹಿಂದಿ ಹೇರಿಕೆಯಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಟ್ವಿಟರ್‌ನಲ್ಲಿ ಅನೇಕರು ಬೆಳಕು ಚೆಲ್ಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಮತ್ತೊಂದು ವಿಷಯ ಕನ್ನಡದ ನುಡಿ ಸುಧಾರಣೆ. ಕನ್ನಡದಲ್ಲಿ ಬಳಕೆಯಲ್ಲಿರುವ ಸಂಸ್ಕೃತದ ಪದಗಳಿಗೆ ಪ್ರತಿಯಾಗಿ ಹೊಸ ಕನ್ನಡ ಪದಗಳನ್ನು ಕಟ್ಟುವ ಕೆಲಸ ನಡೆದಿದೆ. ಈ ಅಭಿಯಾನಕ್ಕೆ ಬಹಳಷ್ಟು ವಿರೋಧವೂ ಇದ್ದು, ಟ್ವಿಟರ್‌ ಲೋಕ ಈ ಸಂಘರ್ಷಕ್ಕೆ ಪ್ರತಿ ದಿನ ಸಾಕ್ಷಿಯಾಗುತ್ತಿದೆ.

ಇದನ್ನೂ ಓದಿ: ಹಿಂದಿ ದಿವಸ್ ಬೇಡ ಟ್ವಿಟರ್ ಅಭಿಯಾನಕ್ಕೆ ಕೈ ಜೋಡಿಸಿದ ನೆಟ್ಟಿಗರು

ಇವೆಲ್ಲದರ ನಡುವೆ ಒಂದು ಗುಂಪು ಹಲವಾರು ಪಾಡ್‌ಕಾಸ್ಟ್‌ (Podcast)ಗಳನ್ನ ಪ್ರಕಟಿಸುತ್ತಿದೆ. ಈ ಧ್ವನಿ ವಿವರಣೆಗಳು ಕನ್ನಡೇತರರಲ್ಲಿಯೂ ಕನ್ನಡ ಭಾಷೆಯ ಬಗ್ಗೆ ಒಲವು ಬೆಳೆಸಿರುವ ಉದಾಹರಣೆಗಳಿವೆ. 'ಟಾಕ್ ಆಫ್ ದಿ ಟೌನ್' ಹೆಸರಿನ ಈ ಗುಂಪು ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ವಿಷಯವಾಗಿ ನಡೆಸುವ 'ಕಗ್ಗಾನುಭವ', ಶಿಶುನಾಳ ಶರೀಫರ ಹಾಡುಗಳ ವಿಶ್ಲೇಷಣೆ ಹೊತ್ತು ಬರುವ 'ಶರೀಫ ಪದ', ಕರ್ನಾಟಕದ ಬೇರೆ ಬೇರೆ ಭಾಷೆಗಳ ಬಗ್ಗೆ ತಿಳಿಸಿಕೊಡುವ 'ವಾರ್ತ ಸಂಕೇತ', ಕರ್ನಾಟಕದಲ್ಲಿನ ಕೋಟೆಗಳು ಮತ್ತು ಗುಡಿಗಳ ಹಿರಿಮೆ ಹಾಗು ಹಳಮೆಯನ್ನು ಸಾರುವ 'ಚರಿತ ಪಯಣ' ಕನ್ನಡಿಗರಿಗೆ ಟ್ವಿಟರ್‌ ಲೋಕದ ಕೊಡುಗೆ.

ಕನ್ನಡ ಗ್ರಾಹಕನ ಹಕ್ಕುಗಳಿಗೆ ಧನಿಯಾಗಿರುವ 'ಕನ್ನಡ ಗ್ರಾಹಕ ಕೂಟ'ವನ್ನು ರಾಜ್ಯೋತ್ಸವದ ದಿನ ನೆನೆಯಲೇ ಬೇಕು. ಸಾಮಾನ್ಯ ಕನ್ನಡಿಗರಿಗೆ ಬೇಕಾದ ಸೇವೆಗಳನ್ನು ಕನ್ನಡದಲ್ಲೇ ಸಿಗುವಂತೆ ಮಾಡಲು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಹಲವು ಪುಸ್ತಕಗಳನ್ನು ಹೊರತಂದಿದ್ದಾರೆ, ಅನ್ಯ ಭಾಷೆಯ ಚಲನಚಿತ್ರಗಳು ಕನ್ನಡಕ್ಕೆ 'ಡಬ್‌' ಆಗಲು ಕಾನೂನು ಹೋರಾಟವನ್ನು ಸಹ ಮಾಡಿ ಯಶಸ್ವಿಯಾಗಿದ್ದಾರೆ. ಇವರು ಕೂಡ ಟ್ವಿಟ್ಟರ್ ಲೋಕದ ಮಂದಿ. 

ನಮ್ಮ ರಾಜಕಾರಣಿಗಳು, ನೆಚ್ಚಿನ ನಟ-ನಟಿಯರು, ಆಟಗಾರರು ಹಾಗು ಸಮಾನಮನಸ್ಕರನ್ನು ನಮ್ಮ ಕೂಗಳತೆಯ ಹತ್ತಿರಕ್ಕೆ ಟ್ವಿಟ್ಟರ್ ಹಕ್ಕಿ ತಂದಿರಿಸಿದೆ. ಇಲ್ಲಿ ಹೆಚ್ಚಿಚ್ಚು ಕನ್ನಡದ ಬಳಕೆಗೆ ಅವಕಾಶವಿದೆ, ಮತ್ತಷ್ಟು ಪರಿಣಾಮಕಾರಿಯಾಗಿ ಕನ್ನಡ ತಲುಪುವಂತೆ ನಾವು ಬಳಸಬೇಕಷ್ಟೇ. 

(ಲೇಖಕ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು