ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದಲ್ಲಿ ಟ್ವಿಟರ್‌ ನಿಷೇಧ: ನೆಲೆ ವಿಸ್ತರಿಸುವತ್ತ ‘ಕನ್ನಡದ ಕೂ’ ದೃಷ್ಟಿ

Last Updated 6 ಜೂನ್ 2021, 2:24 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಅಧ್ಯಕ್ಷರ ಟ್ವೀಟ್‌ ಅನ್ನೇ ಅಳಿಸಿಹಾಕಿದ ಕಾರಣಕ್ಕೆ ನೈಜೀರಿಯಾದಲ್ಲಿ ಟ್ವಿಟರ್‌ ಅನಿರ್ದಿಷ್ಟಾವಧಿಗೆ ನಿಷೇಧಕ್ಕೊಳಗಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಾಮಾಜಿಕ ಜಾಲತಾಣ ‘ಕೂ’ ನೈಜೀರಿಯಾದಲ್ಲಿ ತನ್ನ ನೆಲೆ ವಿಸ್ತರಿಸಲು ಗಮನ ಹರಿಸಿದೆ.

ಈ ಬಗ್ಗೆ ಶನಿವಾರ ಸಾಮಾಜಿಕ ತಾಣ ‘ಕೂ’ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಸಂಸ್ಥೆಯ ಸಂಸ್ಥಾಪಕ, ಸಿಇಒ ಅಪ್ರಮೇಯ ರಾಧಾಕೃಷ್ಣ, 'ಕೂ ನೈಜೀರಿಯಾದಲ್ಲಿ ಲಭ್ಯವಿದೆ. ಆ ದೇಶದ ಬಳಕೆದಾರರಿಗಾಗಿ ಸ್ಥಳೀಯ ಭಾಷೆಗಳನ್ನು ಕೂನಲ್ಲಿ ಸೇರಿಸಲು ನಾವು ಉತ್ಸುಕರಾಗಿದ್ದೇವೆ. ಏನು ಹೇಳುವಿರಿ?,' ಎಂದಿದ್ದಾರೆ.

‘ಕೂ’ ಸಂಸ್ಥಾಪಕ, ಸಿಇಒ ಅಪ್ರಮೇಯ ರಾಧಾಕೃಷ್ಣ ಪೋಸ್ಟ್‌
‘ಕೂ’ ಸಂಸ್ಥಾಪಕ, ಸಿಇಒ ಅಪ್ರಮೇಯ ರಾಧಾಕೃಷ್ಣ ಪೋಸ್ಟ್‌

ಮತ್ತೊಂದೆಡೆ ಸುದ್ದಿ ಸಂಸ್ಥೆ ಪಿಟಿಐನೊಂದಿಗೆ ಮಾತನಾಡಿರುವ ರಾಧಾಕೃಷ್ಣ “ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂಗೆ ಈಗ ನೈಜೀರಿಯಾದಲ್ಲಿ ಅವಕಾಶವೊಂದು ಸೃಷ್ಟಿಯಾಗಿದೆ. ಕೂ ಆ್ಯಪ್‌ನಲ್ಲಿ ಸ್ಥಳೀಯ ನೈಜೀರಿಯನ್ ಭಾಷೆಗಳನ್ನು ಪರಿಚಯಿಸಲು ನಾವು ಚಿಂತಿಸುತ್ತಿದ್ದೇವೆ,’ ಎಂದು ಹೇಳಿದ್ದಾರೆ.

‘ನೈಜೀರಿಯನ್ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಳ್ಳಲು ನಾವು ಉತ್ಸುಕವಾಗಿದ್ದೇವೆ. ಕೂ ಪ್ರತಿ ದೇಶದ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಲಿದೆ,‘ ಎಂದು ರಾಧಾಕೃಷ್ಣ ಹೇಳಿದ್ದಾರೆ.

60 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ 'ಕೂ', ಇತ್ತೀಚೆಗೆ ‘ಟೈಗರ್ ಗ್ಲೋಬಲ್‘ ನೇತೃತ್ವದಲ್ಲಿ ಸುಮಾರು ₹218 ಕೋಟಿಯನ್ನು ಫಂಡ್‌ ರೈಸಿಂಗ್‌ ಮೂಲಕ ಸಂಗ್ರಹಿಸಿದೆ.

ಕನ್ನಡದ ನಂಟು

ಪ್ರಧಾನಿ ಮೋದಿ ಅವರು ಆತ್ಮ ನಿರ್ಭರ ಭಾರತ ಪರಿಕಲ್ಪನೆಗೆ ಒತ್ತು ನೀಡಿದ ಸಂದರ್ಭದಲ್ಲಿ ಕೇಳಿ ಬಂದಿದ್ದೇ ಟ್ವಿಟರ್‌ಗೆ ಪರ್ಯಾಯವಾದ ದೇಸೀ ಆ್ಯಪ್ 'ಕೂ (Koo)'. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ತಮ್ಮ ಮಾಸಿಕ 'ಮನದ ಮಾತು' ಕಾರ್ಯಕ್ರಮದಲ್ಲಿ 'ಕೂ' ಬಗ್ಗೆ ಉಲ್ಲೇಖಿಸಿದ್ದರು. ಈ ಹಂತದಲ್ಲಿ ಸಾಕಷ್ಟು ಮಂದಿ ಭಾರತೀಯರು ಕೂ ಬಳಸಲಾರಂಭಿಸಿದರು.

ಗಮನಿಸಬೇಕಾದ ಅಂಶವೆಂದರೆ, ಕೂ ಕರ್ನಾಟಕ ಮೂಲದ್ದು. ಕೂ ರೂವಾರಿ ಅಪ್ರಮೇಯ ರಾಧಾಕೃಷ್ಣ ಅವರು ಬೆಂಗಳೂರಿನವರು. ಕೂ ಆರಂಭವಾಗಿದ್ದೇ ಮೊದಲಿಗೆ ಕನ್ನಡಿಗರಿಗಾಗಿ.

‘ಕನ್ನಡಿಗರು ತಮ್ಮ ಮನಸ್ಸಿನ ಭಾವನೆಗಳನ್ನು ಧ್ವನಿ, ವಿಡಿಯೊ ಮತ್ತು ಅಕ್ಷರ ರೂಪದಲ್ಲಿ ಇಲ್ಲಿ ಹಂಚಿಕೊಳ್ಳಬಹುದು. ಘಟನಾವಳಿಗಳಿಗೆ ಸ್ಪಂದಿಸಬಹುದು. ಸುದ್ದಿಗಳಿಗೆ ಪ್ರತಿಕ್ರಿಯಿಸಬಹುದು. ಕವನಗಳನ್ನೂ ಬರೆದು ಸಹೃದಯದ ಓದುಗರ ಜತೆ ಹಂಚಿಕೊಳ್ಳಬಹುದು. ‘ಕೂ ಕಿರುತಂತ್ರಾಂಶ ಡೌನ್‌ಲೋಡ್‌ ಮಾಡಿಕೊಂಡವರ ಸಂಖ್ಯೆ ಈಗಾಗಲೇ ಐದು ಲಕ್ಷಕ್ಕೆ ತಲುಪಿದೆ. 1 ನಿಮಿಷದ ಧ್ವನಿ, 1 ನಿಮಿಷದ ವಿಡಿಯೊಗಳನ್ನು ಹಂಚಿಕೊಳ್ಳಬಹುದು’ ಎಂದು ಅಪ್ರಮೇಯ ವರ್ಷಗಳ ಹಿಂದೆ ಹೇಳಿದ್ದರು.

ಕೇಂದ್ರದ ಪ್ರೋತ್ಸಾಹದ ನಂತರ ಪುಟಿದ ಕೂ

ಸ್ವದೇಶಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ವ್ಯವಸ್ಥೆ ವಿಸ್ತರಿಸುವ ಕೂಗಿನ ಮಧ್ಯೆ ಭಾರತದಲ್ಲಿ ಕೂ ಜನಪ್ರಿಯತೆಯು ಉತ್ತುಂಗಕ್ಕೇರಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕೇಂದ್ರ ಸಚಿವರು ಮತ್ತು ಸರ್ಕಾರಿ ಇಲಾಖೆಗಳು ಕೂ ಪ್ರವೇಶಿಸಿವೆ. ಕೇಂದ್ರದ ಮಂತ್ರಿಗಳು ನೆಟ್ಟಿಗರನ್ನು ಕೂಗೆ ಆಹ್ವಾನಿಸಿದ್ದಾರೆ. ಇದಾದ ಬಳಿಕ ಈ ವೇದಿಕೆ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ.

ಟ್ವಿಟರ್‌ ಸಂಘರ್ಷ ವರದಾನ?

ಸ್ವದೇಶಿ ಹಿನ್ನೆಲೆ, ಕೇಂದ್ರದ ಪ್ರೋತ್ಸಾಹಗಳಿಂದ ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಕೂಗೆ ಸದ್ಯ ದೇಶದಲ್ಲಿ ಮತ್ತಷ್ಟು ಅನುಕೂಲಕಾರಿ ವಾತಾವರಣೆ ಸೃಷ್ಟಿಯಾಗಿದೆ. ಹೊಸ ಐಟಿ ನಿಯಮಗಳ ಅನುಸರಣೆ ವಿಚಾರದಲ್ಲಿ ಟ್ವಿಟರ್‌ ಮತ್ತು ಕೇಂದ್ರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಮಧ್ಯೆ ನಿಯಮಗಳ ಅನುಸರಣೆ ವಿಚಾರದಲ್ಲಿ ಟ್ವಿಟರ್‌ಗೆ ಕೊನೆಯ ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಶನಿವಾರ ನೋಟಿಸ್ ಕೂಡ ನೀಡಿದೆ.

ಇದೆಲ್ಲದರ ಜೊತೆಗೆ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಖಾತೆಗಳ ಬ್ಲೂ ಟಿಕ್‌ ತೆಗೆದು ಟ್ವಿಟರ್‌ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದೆಲ್ಲವೂ ಕೂಗೆ ಭಾರತದಲ್ಲಿ ಅನುಕೂಲಕಾರಿ ವಾತಾವರಣ ಸೃಷ್ಟಿ ಮಾಡಿಕೊಡುವ ಸಾಧ್ಯತೆಗಳಿವೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT