ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ಬೆಂಬಲಿತ ಫೇಸ್‌ಬುಕ್ ಪುಟ ರದ್ದು; ಟ್ರೋಲ್‌ ಆದ ಮಾರ್ಕ್ ಜಕರ್‌ಬರ್ಗ್!

Last Updated 21 ಡಿಸೆಂಬರ್ 2020, 2:30 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹೋರಾಟ ಮುಂದುವರಿಸಿದ್ದಾರೆ. ಅವರ ಹೋರಾಟಗಳಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲವಾಗಿರುವ ಫೇಸ್‌ಬುಕ್‌ ಪುಟವೊಂದು ದಿಢೀರ್‌ ರದ್ದುಗೊಂಡಿತ್ತು. ಇದಕ್ಕೆ ಫೇಸ್‌ಬುಕ್‌, ತಮ್ಮಲ್ಲಿ ನಿಗದಿಪಡಿಸಿರುವ 'ಸಮುದಾಯದ ಮಾನದಂಡಗಳಿಗೆ' ವಿರುದ್ಧವಾಗಿದೆ ಎಂಬ ಕಾರಣ ನೀಡಿತ್ತು. ಬಳಕೆದಾರರಿಂದ ಫೇಸ್‌ಬುಕ್‌ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, 'ಕಿಸಾನ್‌ ಏಕತಾ ಮೋರ್ಚಾ' ಖಾತೆಯನ್ನು ಪುನರ್‌ಸ್ಥಾಪಿಸಲಾಗಿದೆ.

ಕಿಸಾನ್‌ ಏಕತಾ ಮೋರ್ಚಾ ಪುಟವನ್ನು ಫೇಸ್‌ಬುಕ್‌ ತೆಗೆದು ಹಾಕಿರುವ ಬಗ್ಗೆ ತಂಡವು ಟ್ವಿಟರ್‌ನಲ್ಲಿ ಭಾನುವಾರ ಸಂಜೆ 7ರ ನಂತರ ಹಂಚಿಕೊಂಡಿತ್ತು. 'ಜನರು ಧ್ವನಿ ಎತ್ತಿದಾಗ, ಸೈದ್ಧಾಂತಿಕವಾಗಿ ಅವರಿಂದ ನಮ್ಮನ್ನು ಮಣಿಸಲು ಸಾಧ್ಯವಾಗದಿದ್ದಾಗ, ಅವರು ಈ ರೀತಿ ಮಾಡಬಲ್ಲರು' ಎಂದು ಕಿಸಾನ್‌ ಏಕತಾ ಮೋರ್ಚಾ ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿತ್ತು.

'ಅದೇ ಪುಟದಿಂದ ಫೇಸ್‌ಬುಕ್‌ ವಿಡಿಯೊ ಲೈವ್‌ ಮಾಡುತ್ತಿದ್ದಾಗ ಪುಟವನ್ನು ರದ್ದುಪಡಿಸಿರುವ ನೋಟಿಫಿಕೇಷನ್‌ ಬಂದಿದೆ' ಎಂದು ಹೋರಾಟಗಾರ ಯೋಗೇಂದ್ರ ಯಾದವ್ ಟ್ವೀಟಿಸಿದ್ದರು.

ಪುಟ ರದ್ದುಗೊಂಡಿರುವ ವಿಷಯ ವ್ಯಾಪಿಸುತ್ತಿದ್ದಂತೆ ನೂರಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ, ರೈತ ವಿರೋಧಿ ನಡೆಯ ವಿರುದ್ಧ ಕಿಡಿ ಕಾರಿದರು. ಸರ್ಕಾರ ಹೇಳಿದಂತೆ ಫೇಸ್‌ಬುಕ್‌ ಕುಣಿಯುತ್ತಿದೆ ಎಂದೆಲ್ಲ ಟೀಕಿಸಿದರು. ಈ ನಡುವೆ ರಾತ್ರಿ 9:30ರ ಬಳಿಕ 'ಕಿಸಾನ್‌ ಏಕತಾ ಮೋರ್ಚಾ' ಖಾತೆ ಬಳಕೆಗೆ ತೆರೆದುಕೊಂಡಿದೆ.

ರೈತರ ಹೋರಾಟಗಳಿಗೆ ಸಂಬಂಧಿಸಿದ ಅಧಿಕೃತ ಪುಟವೆಂದು ಕಿಸಾನ್‌ ಏಕತಾ ಮೋರ್ಚಾ ಪರಿಗಣಿಸಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಪುಟವನ್ನು ಹಿಂಬಾಲಿಸುತ್ತಿದ್ದಾರೆ. ರೈತರ ಹೋರಾಟಗಳ ಕುರಿತಾದ ಅಪ್‌‌ಡೇಟ್‌ಗಳು ಇಲ್ಲಿ ಲಭ್ಯವಿದೆ. ರೈತರ ಒಕ್ಕೂಟದ ಮುಖಂಡರ ಭಾಷಣಗಳ ವಿಡಿಯೊಗಳನ್ನು ಪ್ರಕಟಿಸಲಾಗುತ್ತಿದೆ.

ಭಾರತದಲ್ಲಿ ಸುಮಾರು 30 ಕೋಟಿ ಫೇಸ್‌ಬುಕ್‌ ಬಳಕೆದಾರರಿದ್ದಾರೆ. ಫೇಸ್‌ಬುಕ್‌ನ ಅತಿದೊಡ್ಡ ಮಾರುಕಟ್ಟೆ ಇದಾಗಿದೆ. ಹೀಗಿದ್ದರೂ ಅತ್ಯಂತ ಕನಿಷ್ಠ ಪಾರದರ್ಶಕತೆ ಅಥವಾ ಹೊಣೆಗಾರಿಕೆ ಇರುವುದಾಗಿ ಇಂಟರ್‌ನೆಟ್‌ ಫ್ರೀಡಂ ಫೌಂಡೇಷನ್‌ ಆರೋಪಿಸಿದೆ.

ಈ ಎಲ್ಲ ಬೆಳವಣಿಗೆಗಳ ಜೊತೆಗೆ ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್‌ ಜಕರ್‌ಬರ್ಗ್‌ ಟ್ರೋಲ್‌ಗೆ ಒಳಗಾಗಿದ್ದಾರೆ. 'ಭಾರತದ ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದ್ದಾರೆ', 'ಸಂಘ ಪರಿವಾರಕ್ಕೆ ಸೇರಿದ್ದಾರೆ', 'ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಗುತ್ತಿದೆ, 'ರೈತ ವಿರೋಧಿ ನಡೆ ಅನುಸರಿಸಲಾಗುತ್ತಿದೆ',...ಎಂದೆಲ್ಲ ಟ್ವಿಟರ್‌ನಲ್ಲಿ ಟೀಕಿಸಲಾಗಿದೆ. ಹಲವು ಮೀಮ್‌ಗಳು ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT