ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರದ ಬಗಲಲ್ಲಿ ಸದಾ ದೊಣ್ಣೆ

Last Updated 12 ಜೂನ್ 2021, 19:30 IST
ಅಕ್ಷರ ಗಾತ್ರ

ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಹಕ್ಕು. ಆದರೆ, ಅದು ಅನಿರ್ಬಂಧಿತ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ. ಅದರ ಅರ್ಥ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಬೇಕು ಎಂದು ಅಲ್ಲ. ಆದರೂ ಈ ರೀತಿಯಲ್ಲಿ ಅರ್ಥ ಮಾಡಿಕೊಂಡ ಸಂದರ್ಭಗಳಿಗೆ ಕೊರತೆಯೇನೂ ಇಲ್ಲ.

***

ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಮತ್ತು ಕೆಟ್ಟದ್ದನ್ನು ಆಡಬೇಡ ಎಂಬುದು ಜನರ ಮನಸ್ಸಿಗೆ ಇಳಿಯಲಿ ಎಂಬ ಕಾರಣಕ್ಕೆ ಕಿವಿ, ಕಣ್ಣು ಮತ್ತು ಬಾಯಿ ಮುಚ್ಚಿದ ಮೂರು ಮಂಗಗಳ ರೂಪಕವನ್ನು ಗಾಂಧೀಜಿ ಬಳಸಿದ್ದರು. ಇದು ಬಹಳ ಪ್ರಸಿದ್ಧವೂ ಹೌದು. ಗಾಂಧೀಜಿಯವರ ಈ ರೂಪಕವನ್ನು ಭಾರತ ಸರ್ಕಾರವು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡಿದೆ ಎಂದು ಭಾವಿಸಲು ಬೇಕಾದಷ್ಟು ಕಾರಣಗಳು ಈಗ ಕಾಣಸಿಗುತ್ತವೆ. ಏನನ್ನೂ ನೋಡಬೇಡ, ಏನನ್ನೂ ಕೇಳಬೇಡ ಮತ್ತು ಏನನ್ನೂ ಆಡಬೇಡ ಎಂಬುದು ಗಾಂಧೀಜಿಯ ಮೂರು ಮಂಗಗಳ ರೂಪಕಕ್ಕೆ ಸರ್ಕಾರ ಈಗ ಕೊಟ್ಟಿರುವ ಅರ್ಥ ಅನ್ನಿಸುತ್ತಿದೆ.

ಜನರು ವ್ಯಾಪಕವಾಗಿ ಬಳಸುವಸಾಮಾಜಿಕ ಜಾಲತಾಣದಂತಹ ಮಾಧ್ಯಮಗಳಲ್ಲಿಯಂತೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ತೂಗುಕತ್ತಿ ಸದಾ ಇದ್ದೇ ಇದೆ. ಅಭಿವ್ಯಕ್ತಿಯ ಅವಕಾಶವನ್ನು ಹಿಗ್ಗಿಸಲು ವರದಾನವಾಗಬೇಕಾಗಿದ್ದ ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿಯ ದಮನದ ತಾಣಗಳೂ ಆಗುತ್ತಿವೆ. ಭಿನ್ನಮತ, ಪ್ರತಿರೋಧಗಳನ್ನು ದಾಖಲಿಸುವ, ಆ ಮೂಲಕ ಜನರ ಗಮನ ಸೆಳೆಯುವ ಉದ್ದೇಶದ ಬರಹಗಳನ್ನು ತಡೆಯಲು ಹಲವು ದಾರಿಗಳನ್ನು ಕಂಡುಕೊಳ್ಳಲಾಗಿದೆ. ನಮ್ಮ ದೇಶದ ಈಗಿನ ಸನ್ನಿವೇಶದಲ್ಲಿ ಕನಿಷ್ಠ ಎರಡು ರೀತಿಯಲ್ಲಿ ಇದು ನಡೆಯುತ್ತಿದೆ. ಸಾಮಾಜಿಕ ಜಾಲತಾಣ ಸಂಸ್ಥೆಗಳನ್ನು ಸಂಪರ್ಕಿಸಿ, ನಿರ್ದಿಷ್ಟ ‘ಕಂಟೆಂಟ್‌’ ಅನ್ನು ಅಳಿಸಿ ಹಾಕಿ ಎಂದು ಸರ್ಕಾರವೇ ಫರ್ಮಾನು ಹೊರಡಿಸುವುದು ಅದರಲ್ಲಿ ಒಂದು. ಸರ್ಕಾರದ ವಿರುದ್ಧ ಯಾವುದೇ ಕಂಟೆಂಟ್‌ ಪ್ರಕಟಿಸುವ ವ್ಯಕ್ತಿಯ ಮೇಲೆ ಸಾಮಾಜಿಕ ಜಾಲತಾಣದಲ್ಲಿಯೇ ಮುಗಿಬಿದ್ದು, ಬಾಯಿಗೆ ಬಂದಂತೆ ಬೈದು, ‘ಚಿತ್ರಹಿಂಸೆ’ ಕೊಟ್ಟು ಅಭಿವ್ಯಕ್ತಿ ಎಂದರೇ ಬೆಚ್ಚಿ ಬೀಳುವಂತೆ ಮಾಡುವ ರೀತಿ ಇನ್ನೊಂದು. ಇಂತಹ ಹಲವು ಗುಂಪುಗಳೇ ಇವೆ. ಇದು ಸಂಘಟಿತವಾದ ಕೃತ್ಯವೇ ಆದರೂ ಪುರಾವೆಗಳಿಲ್ಲದ ಕಾರಣ ಅಸಂಘಟಿತ ಎಂದೇ ಹೇಳಬೇಕಾಗುತ್ತದೆ. ಆದರೆ, ಸರ್ಕಾರ ಮಾತ್ರ ವ್ಯವಸ್ಥಿತವಾಗಿಯೇ ಪೋಸ್ಟ್‌ಗಳನ್ನು ಅಳಿಸಿ ಹಾಕಿಸುತ್ತದೆ.

ಮಲಯಾಳಂನ ಖ್ಯಾತ ಕವಿ ಸಚ್ಚಿದಾನಂದನ್‌ ಅವರು ಸರ್ಕಾರದ ಬಗ್ಗೆ ವಿಮರ್ಶಾತ್ಮಕವಾಗಿ ಬರೆದರು ಎಂಬ ಕಾರಣಕ್ಕೆ ಅವರ ಫೇಸ್‌ಬುಕ್‌ ಖಾತೆಯನ್ನು 24 ತಾಸು ಸ್ಥಗಿತಗೊಳಿಸಲಾಗಿತ್ತು. ಇದು ಅಭಿವ್ಯಕ್ತಿ ದಮನದ ಸರ್ಕಾರಿ ರೀತಿ. ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಅವರ ವಿರುದ್ಧ ದ್ವೀಪದ ಜನರು ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿರುವುದು ಇತ್ತೀಚಿನ ಸುದ್ದಿ. ಕೇರಳ ಮತ್ತು ಲಕ್ಷದ್ವೀಪದ ನಡುವೆ ಬಿಡಿಸಲಾಗದ ನಂಟು. ಮಲಯಾಳ ನಟ ಪೃಥ್ವಿರಾಜ್‌ ಸುಕುಮಾರನ್‌ ಅವರು ಲಕ್ಷದ್ವೀಪದಿಂದ ಹಿಂದಿರುಗಿದ ಬಳಿಕ ‘ಅಲ್ಲಿನ ಸ್ಥಿತಿ ಕಳವಳಕಾರಿಯಾಗಿದೆ’ ಎಂದು ಹೇಳಿಕೊಂಡಿದ್ದರು. ಕೆಲವೇ ತಾಸುಗಳಲ್ಲಿ, ಗಾಂಧೀಜಿಯ ಮಂಗಗಳು ಹೇಳುವ ‘ಕೆಟ್ಟದ್ದನ್ನು ಆಡಬೇಡ, ಕೆಟ್ಟದ್ದನ್ನು ಕೇಳಬೇಡ’ ಎಂಬುದರ ವ್ಯಾಪ್ತಿಯಲ್ಲಿರುವ ಎಲ್ಲ ಕರ್ಣಕಠೋರ ಬೈಗುಳಗಳ ಸುರಿಮಳೆಯಾಗಿದೆ.

ಪಂಜಾಬಿ ಗಾಯಕ ಜಾಝಿಬಿ ಮತ್ತು ಇಬ್ಬರ ಟ್ವಿಟರ್‌ ಖಾತೆಯನ್ನು ಸರ್ಕಾರದ ಆಣತಿಯಂತೆ ಸ್ಥಗಿತಗೊಳಿಸಲಾಗಿದೆ. ಕೇಂದ್ರದ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಆಗಾಗ ಟ್ವೀಟ್‌ ಮಾಡಿದ್ದೇ ಜಾಝಿಬಿ ಅವರು ಎಸಗಿರುವ ಅಪರಾಧ. ಜಾಝಿಬಿ ಮತ್ತು ಇತರ ನಾಲ್ವರ ಟ್ವಿಟರ್‌ ಖಾತೆ ಸ್ಥಗಿತಗೊಳಿಸಲು ಸರ್ಕಾರ ಇದೇ ಆರರಂದು ಮನವಿ ಸಲ್ಲಿಸಿತ್ತು.

ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಹಕ್ಕು. ಆದರೆ, ಅದು ಅನಿರ್ಬಂಧಿತ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ. ಅದರ ಅರ್ಥ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಬೇಕು ಎಂದು ಅಲ್ಲ. ಆದರೂ ಈ ರೀತಿಯಲ್ಲಿ ಅರ್ಥ ಮಾಡಿಕೊಂಡ ಸಂದರ್ಭಗಳಿಗೆ ಕೊರತೆಯೇನೂ ಇಲ್ಲ.

ಭಾರತದಲ್ಲಿ ಅಭಿವ್ಯಕ್ತಿ ಮತ್ತು ವಾಕ್‌ ಸ್ವಾತಂತ್ರ್ಯಕ್ಕೆ ಎಷ್ಟು ಬೆಲೆ ಇದೆ ಎಂಬುದನ್ನು ಜಮ್ಮು–ಕಾಶ್ಮೀರವು ಸ್ಪಷ್ಟವಾಗಿ ತೋರಿಸುತ್ತದೆ. ಈ ರಾಜ್ಯವು ಹೊಂದಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿ, ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶಗಳಾಗಿಸಿದ ಸಂದರ್ಭದಲ್ಲಿ 2019ರ ಆಗಸ್ಟ್‌ 4ರಿಂದ 2020ರ ಮಾರ್ಚ್‌ 4ರವರೆಗೆ ನಿರಂತರವಾಗಿ 213 ದಿನ ಅಂತರ್ಜಾಲವನ್ನೇ ಸ್ಥಗಿತಗೊಳಿಸಲಾಗಿತ್ತು. ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯವೂ ವ್ಯಕ್ತವಾಗಬಾರದು, ಜನರು ಪ್ರತಿರೋಧ ತೋರಬಾರದು ಎಂಬುದಷ್ಟೇ ಇದರ ಉದ್ದೇಶ.

2016ರ ಜುಲೈ 8ರಿಂದ 2016ರ ನವೆಂಬರ್‌ 19ರವರೆಗೂ ಕಾಶ್ಮೀರದಲ್ಲಿ ಸತತ 133 ದಿನ ಇಂಟರ್‌ನೆಟ್‌ ಸೌಲಭ್ಯ ಕಡಿತಗೊಳಿಸಲಾಗಿತ್ತು.2012ರ ಜನವರಿಯಿಂದ 2020ರ ಮಾರ್ಚ್‌ 20ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 308 ಬಾರಿ ಇಂಟರ್ನೆಟ್‌ ಸ್ಥಗಿತವಾಗಿದೆ ಎಂಬ ಮಾಹಿತಿಯು ಇಂಟರ್‌ನೆಟ್‌ ಶಟ್‌ಡೌನ್‌ ಜಾಲತಾಣದಲ್ಲಿ ಇದೆ.ಪ್ರಾಕ್ಸಿ ನೆಟ್‌ವರ್ಕ್‌ ಮೂಲಕ ಅಂತರ್ಜಾಲ ಸೌಲಭ್ಯ ಪಡೆದ ಕಾಶ್ಮೀರಿಗರ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರನ್ನು ಪೊಲೀಸರು ತನಿಖೆಗೆ ಒಳಪಡಿಸಿದ ಹಲವು ಪ್ರಕರಣಗಳೂ ವರದಿಯಾಗಿವೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅದುಮಿಡಲು ಸರ್ಕಾರಗಳು ನಡೆಸುವ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣ ಕಂಪನಿಗಳು ಕೈಜೋಡಿಸಬಾರದು ಎಂಬ ವಾದ ಇದೆ. ಆದರೆ, ಟ್ವಿಟರ್‌ ನಿಯಮಗಳು ಮತ್ತು ಸ್ಥಳೀಯ ಕಾನೂನುಗಳನ್ನು ಗಮನದಲ್ಲಿ ಇರಿಸಿಕೊಂಡೇ ಕ್ರಮ ಕೈಗೊಳ್ಳಲಾಗಿದೆ ಎಂದು ಜಾಝಿಬಿ ಪ್ರಕರಣದಲ್ಲಿ ಟ್ವಿಟರ್‌ ಹೇಳಿದೆ. ಹಾಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಲ್ಲಿ ಸಾಮಾಜಿಕ ಜಾಲತಾಣಗಳ ಕಡೆಯಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಜಗತ್ತಿನಾದ್ಯಂತ, ಪ್ರತಿಭಟನೆಯ ಕಿಡಿಯನ್ನು ಜ್ವಾಲೆಯಾಗಿಸುವುದಕ್ಕೆ ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿವೆ. ಆದರೆ, ಭಾರತದಲ್ಲಿ ಅಂತಹ ಪೋಸ್ಟ್‌ಗಳನ್ನು ಮೊಳಕೆಯಲ್ಲಿಯೇ ಚಿವುಟಲು ಬೇಕಾದ ವ್ಯವಸ್ಥೆಯನ್ನು ಸಿದ್ಧಪಡಿಸಿ ಇರಿಸಲಾಗಿದೆ. ಭಾರತೀಯ ದಂಡ ಸಂಹಿತೆಯ 124ಎ ಸೆಕ್ಷನ್‌ (ದೇಶದ್ರೋಹ), ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಇತ್ತೀಚೆಗೆ ಜಾರಿಗೆ ಬಂದ ಮಾಹಿತಿ ತಂತ್ರಜ್ಞಾನ ನಿಯಮಗಳು-2021 ಸರ್ಕಾರದ ಕೈಗೆ ಅತಿಯಾದ ಅಧಿಕಾರವನ್ನು ಕೊಟ್ಟಿವೆ. ಯಾವುದೋ ಕಂಟೆಂಟ್‌ನ ಮೂಲವನ್ನು ಸರ್ಕಾರಕ್ಕೆ ಒಪ್ಪಿಸಲು ಸಾಮಾಜಿಕ ಜಾಲತಾಣ ಸಂಸ್ಥೆಗಳು ಒಪ್ಪಿಗೆ ಕೊಟ್ಟರೆ, ಬಳಕೆದಾರನ ಜುಟ್ಟನ್ನು ತಟ್ಟೆಯಲ್ಲಿಟ್ಟು ಸರ್ಕಾರಕ್ಕೆ ಕೊಟ್ಟಂತೆಯೇ. 2020ರ ದ್ವಿತೀಯಾರ್ಧದಲ್ಲಿ ಭಾರತವು ಬಳಕೆದಾರರ ಮಾಹಿತಿಗಾಗಿ 40,300 ಕೋರಿಕೆ ಸಲ್ಲಿಸಿದೆ ಎಂದು ಫೇಸ್‌ಬುಕ್‌ ಇತ್ತೀಚೆಗೆ ಬಹಿರಂಗಪಡಿಸಿದೆ. ಇದರ ‍ಪೈಕಿ 2,435 ಸಂದರ್ಭಗಳಲ್ಲಿ ತುರ್ತಾಗಿ ಮಾಹಿತಿ ಕೊಡುವಂತೆ ಕೋರಲಾಗಿದೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರವು ತನ್ನ ಕಣ್ಣಳತೆಯ ವ್ಯಾಪ್ತಿಯಲ್ಲಿಯೇ ಇರಿಸಿದೆ ಎಂಬುದರ ಸಂಕೇತ.

ರೈತರು ಕೇಂದ್ರದ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯ ವಿವರಗಳನ್ನು ಪ್ರಕಟಿಸುತ್ತಿದ್ದಕಿಸಾನ್‌ ಏಕತಾ ಮೋರ್ಚಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಪುಟವನ್ನು ಕಳೆದ ಡಿಸೆಂಬರ್‌ 20ರಂದು ಸ್ಥಗಿತಗೊಳಿಸಲಾಗಿತ್ತು. ಆದರೆ, ವ್ಯಾಪಕವಾದ ಪ್ರತಿರೋಧಕ್ಕೆ ಮಣಿದ ಫೇಸ್‌ಬುಕ್‌ ಕೆಲವೇ ತಾಸುಗಳಲ್ಲಿ ಪುಟವನ್ನು ಸಕ್ರಿಯಗೊಳಿಸಿತು. ರೈತರ ಪ್ರತಿಭಟನೆ ಬಗ್ಗೆ ವರದಿಗಳನ್ನು ಪ್ರಕಟಿಸಿದ ಕಾರಣಕ್ಕಾಗಿ ‘ದಿ ಕ್ಯಾರವಾನ್‌’ ಪತ್ರಿಕೆಯ ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಲವು ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರ ಸಾಮಾಜಿಕ ಜಾಲತಾಣ ಖಾತೆಗಳೂ ಇಂತಹ ಕ್ರಮಕ್ಕೆ ಒಳಗಾಗಿವೆ.

ಪ್ರತಿರೋಧದ ಮಾತನ್ನು ಬದಿಗಿಡಿ. ನೋವಿನ ಆರ್ತನಾದವನ್ನೂ ಸಹಿಸಿಕೊಳ್ಳಲಾಗದ ಸ್ಥಿತಿಯತ್ತ ದೇಶವು ಸಾಗಿದೆ ಎಂಬುದಕ್ಕೂ ಈ ಕಾಲವು ಸಾಕ್ಷಿಯಾಗಿದೆ. ಕೋವಿಡ್‌ನಿಂದಾಗಿ ಉಸಿರಾಡಲು ಪರಿತಪಿಸುತ್ತಿರುವ ಅಜ್ಜನಿಗೆ ವೈದ್ಯಕೀಯ ಆಮ್ಲಜನಕದ ಸಿಲಿಂಡರ್‌ ಕೊಡಿ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಯುವಕನ ಮೇಲೆ ಉತ್ತರ ಪ್ರದೇಶ ಸರ್ಕಾರ ಕೆಂಗಣ್ಣು ಬೀರಿತ್ತು. ಸರ್ಕಾರದ ವರ್ಚಸ್ಸು ಕುಗ್ಗಿಸಲು ನಡೆಸುವ ಯತ್ನ ಎಂದು ಆರೋಪಿಸಿ ಆ ಯುವಕನ ಮೇಲೆ ದೇಶದ್ರೋಹದ ಪ್ರಕರಣ ಜಡಿದು ಆತನನ್ನು ಹಣಿಯಲು ಮುಂದಾಗಿತ್ತು. ಕೋವಿಡ್‌ನಿಂದಾಗಿ ದೇಶದ ಜನರು ತತ್ತರಿಸಿರುವ ಸಂದರ್ಭದಲ್ಲಿ, ನೆರವಿಗಾಗಿ ಮಾಡುವ ಕೋರಿಕೆಗಳ ವಿರುದ್ಧ ಕ್ರಮ ಕೈಗೊಂಡರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಭಾವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಕಟು ಎಚ್ಚರಿಕೆ ನೀಡಬೇಕಾದ ಸ್ಥಿತಿಯಲ್ಲಿ ಅಭಿವ್ಯಕ್ತಿ ಮತ್ತು ವಾಕ್‌ ಸ್ವಾತಂತ್ರ್ಯವನ್ನು ತಂದು ನಿಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT