ಶನಿವಾರ, ನವೆಂಬರ್ 23, 2019
23 °C

ಮನೆಯೊಡತಿ ಮಾಡಿಕೊಟ್ಟ ವಿಸಿಟಿಂಗ್‌ ಕಾರ್ಡ್‌ನಿಂದ ಕೆಲಸದಾಕೆಗೆ ಬಂತು ಬಹುಬೇಡಿಕೆ

Published:
Updated:

ಮುಂಬೈ: ಪುಣೆಯ ಮೂಲದ ಗೀತಾ ಕಾಳೆ ಬೇರೆಯವರ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುವ ಮಹಿಳೆ. ಅವರು ಬೇರೊಂದು ಕಡೆ ಕೆಲಸ ಕಳೆದುಕೊಂಡು ನಿರಾಶರಾಗಿದ್ದ ಸಂದರ್ಭದಲ್ಲಿ ಅವರಿಗೆ ನೂರಾರು ಉದ್ಯೋಗಾವಕಾಶಗಳು ಹುಡುಕಿಬಂದವು. ಇದಕ್ಕೆ ಕಾರಣವಾಗಿದ್ದು, ಗೀತಾ ಕಾಳೆ ಅವರಿಗೆ ‘ಬ್ಯುಸಿನೆಸ್‌ ವಿಸಿಟಿಂಗ್‌ ಕಾರ್ಡ್‌‘ ಮಾಡಿಕೊಟ್ಟ ಧನಶ್ರೀ ಶಿಂಧೆ ಎಂಬ ಬ್ರ್ಯಾಂಡಿಂಗ್‌ ಮತ್ತು ಮಾರ್ಕೆಟಿಂಗ್‌ ಕಂಪನಿಯೊಂದರ ಹಿರಿಯ ವ್ಯವಸ್ಥಾಪಕಿ. 

ಕುತೂಹಲಕಾರಿ ಘಟನೆಯ ಹಿನ್ನೆಲೆ: ಪುಣೆಯ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಧನಶ್ರೀ ಶಿಂಧೆ ಅವರು ಗೀತಾ ಕಾಳೆಗೆ ಮನೆಗೆಲಸದ ನೌಕರಿ ನೀಡಿದವರು. ಅಂದೊಂದು ದಿನ ಧನಶ್ರೀ ಶಿಂಧೆ ಅವರು ಕೆಲಸ ಮುಗಿಸಿ ಮನೆಗೆ ಮರಳಿದ್ದಾರೆ. ಆ ವೇಳೆ ಮನೆಗೆಲಸದಲ್ಲಿ ತೊಡಗಿದ್ದ ಗೀತಾ ಮೌಸಿ ನಿರುತ್ಸಾಹದಲ್ಲಿರುವುದನ್ನು ಗಮನಿಸಿ ಪ್ರಶ್ನಿಸಿದ್ದಾರೆ. ಅದಕ್ಕೆ ಗೀತಾ ಮೌಸಿ ತಾವು ಬೇರೆ ಕಡೆ ಮಾಡುತ್ತಿದ್ದ ಕೆಲಸ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಆಗ ಗೀತಾ ಮೌಸಿಗೆ ಸಮಾಧಾನ ಹೇಳಿದ ಧನಶ್ರೀಯವರಿಗೆ ವಿಸಿಟಿಂಗ್‌ ಕಾರ್ಡ್‌ನ ಯೋಚನೆ ಹೊಳೆದಿದೆ. 

ಇದಾದ 24 ಗಂಟೆಗಳಲ್ಲಿ ಗೀತಾ ಕಾಳೆ ಹೆಸರಿನಲ್ಲಿ ನೂರು ಸ್ಮಾರ್ಟ್‌ ಬ್ಯುಸಿನೆಸ್‌ ಕಾರ್ಡ್‌ಗಳನ್ನು ಧನಶ್ರೀ ಕಾಳೆ ತಯಾರಿಸಿದ್ದಾರೆ. ಕಾರ್ಡ್‌ನಲ್ಲಿ ಗೀತಾ ಅವರ ವೃತ್ತಿ ಅನುಭವ, ಯಾವ ಕೆಲಸಕ್ಕೆ ಎಷ್ಟು ಶುಲ್ಕ (ಉದಾ. ಬಟ್ಟೆ ತೊಳೆಯಲು ಒಂದು ತಿಂಗಳಿಗೆ 800 ರು.) ಎಂಬುದರ ಬಗ್ಗೆ ವಿವರ ನೀಡಿದ್ದಾರೆ. 

ಈ ವಿಸಿಟಿಂಗ್‌ ಕಾರ್ಡ್‌ ಅನ್ನು ಕೈಯಲ್ಲಿ ಹಿಡಿದು ಗೀತಾ ಕಾಳೆ ಅವರೊಂದಿಗೆ ಧನುಶ್ರೀ ಶಿಂಧೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳೊಂದಿಗೆ ಗೀತಾ ಮೌಸಿಯ ಕುತೂಹಲದ ಕತೆಯನ್ನು ಧನಶ್ರೀ ಸ್ನೇಹಿತೆ ಅಸ್ಮಿತಾ ಜಾವ್ಡೆಕರ್‌ ಎಂಬುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಗೀತಾ ಕಾಳೆಯವರ ವಿಸಿಟಿಂಗ್‌ ಕಾರ್ಡ್‌ ಅನ್ನು ನೆರೆಯವರಿಗೆ ನೀಡಿದಾಗ ಕಲ್ಪನೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ,’ ಎಂದು ಅಸ್ಮಿತಾ ತಮ್ಮ ಪೋಸ್ಟ್‌ ಮೂಲಕ ಹೇಳಿಕೊಂಡಿದ್ದಾರೆ. ಈ ಮಾಹಿತಿಯನ್ನು ಪೋಸ್ಟ್‌ ಮಾಡಿದ ಕೆಲ ಗಂಟೆಗಳಲ್ಲಿ ಗೀತಾ ಕಾಳೆಯವರ ಫೋನ್‌ಗೆ ನೂರಾರು ಕರೆಗಳು ಬರತೊಡಗಿವೆ.

ಧನಶ್ರೀ ಶಿಂಧೆ ಮತ್ತು ಗೀತಾ ಕಾಳೆ ಅವರ ಕುತೂಹಲಭರಿತ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪೋಸ್ಟ್‌ಗೆ 2100 ‘ಲೈಕ್ಸ್‌‘ ಬಂದಿದ್ದು, 492 ಜನರು ಶೇರ್‌ ಮಾಡಿಕೊಂಡಿದ್ದಾರೆ. ‘ಇದು ಕೆಲಸ ಹುಡುಕುವ ಅತ್ಯಂತ ಸೃಜನಾತ್ಮಕ ವಿಧಾನ,’ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.   

ಪ್ರತಿಕ್ರಿಯಿಸಿ (+)