ಶುಕ್ರವಾರ, ಡಿಸೆಂಬರ್ 4, 2020
24 °C

ಟ್ವಿಟರ್‌ನಲ್ಲಿ ಕಸಿವಿಸಿ ತಡೆಯಲು ವಿನೂತನ ವೈಶಿಷ್ಟ್ಯಗಳು: ಬಳಸಿ, ನೆಮ್ಮದಿಯಿಂದಿರಿ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

Prajavani

ಕಿರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ, ಕಾಲೆಳೆಯುವುದು, ಟೀಕೆ, ನಿಂದನೆ - ಇವೆಲ್ಲ ಸಾಮಾನ್ಯ. ಆದರೆ ಇಲ್ಲಿ ನೆಮ್ಮದಿಯಿಂದ ಚಟುವಟಿಕೆಯಿಂದಿರಲು ಕೆಲವೊಂದು ಸೆಟ್ಟಿಂಗ್‌ಗಳಿವೆ. ಇದರಿಂದ ಖಾಸಗಿತನವೂ ಸುರಕ್ಷಿತವಾಗಿರುತ್ತದೆ, ನಿಂದನಾತ್ಮಕ ಟ್ವೀಟ್‌ಗಳಿಂದ ದೂರವಿರಬಹುದು ಮತ್ತು ನೆಮ್ಮದಿಯಿಂದ ಟ್ವೀಟ್ ಲೋಕದಲ್ಲಿ ವಿಹರಿಸಬಹುದು. ಟ್ವಿಟರ್ ಪರಿಚಯಿಸಿರುವ ಈ ನಿಯಂತ್ರಣ ಕ್ರಮಗಳನ್ನು ಬಳಸುವುದು ಹೇಗೆಂಬುದನ್ನು ತಿಳಿದುಕೊಳ್ಳೋಣ.

ಪೋಸ್ಟ್‌ಗೆ ಯಾರು ಉತ್ತರಿಸಬೇಕೆಂದು ನಿರ್ಧರಿಸಿ

ಟ್ವೀಟ್ ಮಾಡಲು ನಾವು ಟೈಪ್ ಮಾಡುವಾಗಲೇ ಕೆಳಗೊಂದು ಗೋಳದ ಐಕಾನ್ ಕಾಣಿಸುತ್ತದೆ. ಅದರಲ್ಲಿ Everyone Can Reply ಅಂತ ಮೊದಲೇ ಹೊಂದಿಸಿದ ಸೆಟ್ಟಿಂಗ್ ಇದೆ. ಅದನ್ನು ಕ್ಲಿಕ್ ಮಾಡಿದರೆ, ಯಾರು ಉತ್ತರಿಸಬಹುದೆಂದು ನೀವೇ ನಿರ್ಧರಿಸುವ ಆಯ್ಕೆಗಳು ಕಾಣಿಸುತ್ತವೆ. ಎಲ್ಲರೂ, ನೀವು ಫಾಲೋ ಮಾಡುವವರು ಅಥವಾ ನಿರ್ದಿಷ್ಟ ವ್ಯಕ್ತಿಗಳನ್ನು ಮಾತ್ರ ಆಯ್ಕೆ ಮಾಡಬಹುದು.

ನಿಮ್ಮ ಟ್ವೀಟ್‌ಗಳಿಗೆ ಬರುವ ಉತ್ತರಗಳನ್ನೂ ಮರೆ ಮಾಡಬಹುದೆಂದು ಗೊತ್ತೇ? ನಿರ್ದಿಷ್ಟ ಕಾಮೆಂಟ್‌ನ ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕಿ ಕ್ಲಿಕ್ ಮಾಡಿದಾಗ, 'Hide Reply' ಆಯ್ಕೆ ಕಾಣಿಸುತ್ತದೆ. ಇದನ್ನು ಒತ್ತಿದರೆ, ಆರೋಗ್ಯಕರ ಚರ್ಚೆಗೆ ಅಡಚಣೆಯಾಗುವ ಉತ್ತರಗಳು ಮರೆಯಾಗುತ್ತವೆ. ಅದನ್ನು ಪ್ರತ್ಯೇಕವಾಗಿ ನೋಡಬಹುದು ಎಂಬುದು ನೆನಪಿರಲಿ.

ಬ್ಲಾಕ್ ಮಾಡುವುದು

ಟ್ವೀಟ್ ಅಥವಾ ಸಂಭಾಷಣೆಯೊಂದು ನಿಮಗೆ ಕಾಣಿಸದಂತಾಗಲು ನೀವು ಬ್ಲಾಕ್ ಮಾಡಬಹುದು. ಯಾವುದೇ ಟ್ವೀಟ್‌ನ ಬಲ ಭಾಗದಲ್ಲಿರುವ ಡ್ರಾಪ್‌ಡೌನ್ ಐಕಾನ್ (ಮೂರು ಚುಕ್ಕೆಗಳು) ಕ್ಲಿಕ್ ಮಾಡಿ, ಅಲ್ಲಿ ಬ್ಲಾಕ್ ಆಯ್ಕೆಯನ್ನು ಒತ್ತಿದರಾಯಿತು. ಇಲ್ಲಿ 'ಆಸಕ್ತಿಯಿಲ್ಲ' ಅಂತ ಹೇಳುವ, 'ಫಾಲೋ' ಮಾಡುವ, 'ಪಟ್ಟಿಗಳಿಗೆ ಸೇರಿಸುವ/ತೆಗೆಯುವ', 'ಮ್ಯೂಟ್' ಮಾಡುವ, ಎಂಬೆಡ್ ಮಾಡುವ ಹಾಗೂ 'ಟ್ವೀಟ್ ಸರಿ ಇಲ್ಲ' ಅಂತ ಟ್ವಿಟರ್‌ಗೆ ವರದಿ ಮಾಡುವ ಇತರ ಆಯ್ಕೆಗಳೂ ಕಾಣಸಿಗುತ್ತವೆ.

ಅದೇ ರೀತಿ, ನಿಮ್ಮ ಟೈಮ್‌ಲೈನ್‌ನಿಂದಲೇ ವ್ಯಕ್ತಿಯನ್ನು ನಿರ್ಬಂಧಿಸಲು, ಅವರ ಪ್ರೊಫೈಲ್‌ಗೆ ಹೋಗಿ, ಬಲ ಮೇಲ್ಭಾಗದಲ್ಲಿರುವ ಮೂರು ಲಂಬ ಚುಕ್ಕಿಗಳನ್ನು ಒತ್ತಿ, ಡ್ರಾಪ್‌ಡೌನ್ ಮೆನುವಿನಿಂದ ಬ್ಲಾಕ್ ಆಯ್ಕೆ ಮಾಡಬಹುದು. ಮುಂದೆ, ನೀವು ಬ್ಲಾಕ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಬೇಕಿದ್ದರೆ, ಅವರ ಪ್ರೊಫೈಲ್‌ಗೆ ಹೋಗಿ ನೋಡಿದಾಗ, 'ಫಾಲೋ' ಎಂಬ ಬಟನ್ ಇರುವಲ್ಲಿ 'ಬ್ಲಾಕ್ಡ್' ಅಂತ ಕಾಣಿಸುತ್ತದೆ. ಬೇಡವೆಂದಾದರೆ ಅನ್‌ಬ್ಲಾಕ್ ಕೂಡ ಮಾಡಬಹುದು.

ಮ್ಯೂಟ್ ಆಯ್ಕೆ

ಬ್ಲಾಕ್ ಮಾಡುವುದರಿಂದ ಅವರೊಂದಿಗೆ ಸಂವಹನ ನಡೆಸುವುದು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ ಮತ್ತೊಂದು ಆಯ್ಕೆಯಿದೆ. ವ್ಯಕ್ತಿಯನ್ನು ಬ್ಲಾಕ್ ಅಥವಾ ಅನ್-ಫಾಲೋ ಮಾಡದೆಯೇ ಅವರ ಟ್ವೀಟ್‌ಗಳು ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಬಾರದು ಎಂದಿದ್ದರೆ, ಟ್ವೀಟ್‌ನ ಬಲಭಾಗದ ಮೂರು ಚುಕ್ಕಿ ಒತ್ತಿದಾಗ ಬರುವ ಡ್ರಾಪ್‌ಡೌನ್ ಮೆನುವಿನಿಂದ 'ಮ್ಯೂಟ್' ಆಯ್ಕೆ ಮಾಡಿದರಾಯಿತು.

ಇದೇ ರೀತಿ, ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಅಥವಾ ಕೀವರ್ಡ್‌ಗಳು ನಿಮ್ಮ ಟೈಮ್‌ಲೈನ್‌ನಲ್ಲಿ ಬರುವುದೇ ಬೇಡವೆಂದು ನೀವು ತೀರ್ಮಾನಿಸಿದರೆ, ಅವನ್ನು ಕೂಡ ಮ್ಯೂಟ್ ಮಾಡಬಹುದು. ಇದಕ್ಕಾಗಿ, ನಿಮ್ಮ ಪ್ರೊಫೈಲ್‌ನಿಂದ 'ಸೆಟ್ಟಿಂಗ್ಸ್ & ಪ್ರೈವೆಸಿ' ಎಂಬಲ್ಲಿ, 'ಮ್ಯೂಟೆಡ್ ವರ್ಡ್ಸ್' ಎಂಬಲ್ಲಿ ನಿರ್ಬಂಧಿಸಬೇಕಾದ ಪದಗಳನ್ನು ಸೇರಿಸಬಹುದು.

ಟ್ವಿಟರ್‌ಗೆ ದೂರು ನೀಡಿ

ತೀರಾ ಅಸಭ್ಯವಾಗಿ, ನಿಂದನಾತ್ಮಕವಾಗಿ ಟ್ವೀಟ್ ಮಾಡುತ್ತಿರುವವರ ಬಗ್ಗೆ ನೀವು ನೇರವಾಗಿ ಟ್ವಿಟರ್‌ಗೆ ದೂರನ್ನೂ ನೀಡಬಹುದು. ಟ್ವೀಟ್ ಬಲ ಮೇಲ್ಭಾಗದ ಡ್ರಾಪ್‌ಡೌನ್ ಮೆನುವಿನಿಂದ 'Report' ಆಯ್ಕೆ ಮಾಡಿ, ಈ ಬಗ್ಗೆ ಟ್ವಿಟರ್‌ಗೆ ಸೂಕ್ತ ಮಾಹಿತಿಯನ್ನು ನೀಡಿದರಾಯಿತು. ಇದೇ ರೀತಿಯ ಟ್ವಿಟರ್ ಖಾತೆಗಳ ಬಗ್ಗೆಯೂ ದೂರು ನೀಡಬಹುದು.

ಟ್ಯಾಗ್ ನಿಯಂತ್ರಣ

ನಿಮ್ಮನ್ನು ಯಾವುದಾದರೂ ಫೋಟೋದಲ್ಲಿ ಟ್ಯಾಗ್ ಮಾಡುವುದು ಇಷ್ಟವಿಲ್ಲವೆಂದಾದರೆ, ಪ್ರೊಫೈಲ್‌ನಲ್ಲಿ 'ಪ್ರೈವೆಸಿ & ಸೇಫ್ಟಿ' ಎಂದಿರುವಲ್ಲಿ ಹೋಗಿ, ಯಾರು ಟ್ಯಾಗ್ ಮಾಡಬಹುದೆಂಬುದನ್ನು ಆಯ್ಕೆ ಮಾಡಬಹುದು.

ಟ್ಯಾಗ್ ಮಾಡಿರುವುದನ್ನು ತೆಗೆಯಲು, ಆ ಟ್ವೀಟ್‌ನ ಮೇಲ್ಭಾಗದಲ್ಲಿ 'more' ಆಯ್ಕೆ ಕ್ಲಿಕ್ ಮಾಡಿ, ಅಲ್ಲಿಂದ ಟ್ಯಾಗ್ ತೆಗೆಯಬಹುದು.

ಕೆಲವರಿಗೆ ತಾವು ಫಾಲೋ ಮಾಡದಿರುವವರಿಂದ ಬರುವ ನೇರ ಸಂದೇಶ (DM - ಡೈರೆಕ್ಟ್ ಮೆಸೇಜ್) ಕಿರಿಕಿರಿಯಾಗಬಹುದು. ಇದನ್ನು ತಡೆಯಲು, ಈ ಸಂದೇಶ ತೆರೆದು, ಅದರಲ್ಲಿರುವ ಮಾಹಿತಿ (ಇನ್ಫರ್ಮೇಶನ್) ಐಕಾನ್ ಕ್ಲಿಕ್ ಮಾಡಿ, 'Report' ಒತ್ತಿ. ಮುಂದೆ ಅವರಿಂದ ನಿಮಗೆ ಸಂದೇಶ ಬರಲಾರದು. ಆ ಖಾತೆಯನ್ನೇ ಬ್ಲಾಕ್ ಮಾಡುವುದು ಮತ್ತೊಂದು ವಿಧಾನ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು