ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೂಪ್‌ಗಳಿಗೂ ಒಂದು ಗುಂಪು; ವಾಟ್ಸ್ಆ್ಯಪ್‌ನ ಹೊಸ 'ಕಮ್ಯುನಿಟಿ'

Last Updated 15 ಏಪ್ರಿಲ್ 2022, 14:03 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ಗುಂಪುಗಳನ್ನು ಒಂದೇ 'ಕಮ್ಯುನಿಟಿ' ಅಡಿಯಲ್ಲಿ ತರುವಂತಹ ಹೊಸ ಅವಕಾಶವನ್ನು ಮೆಟಾ ಒಡೆತನದ ವಾಟ್ಸ್‌ಆ್ಯಪ್‌ ಹೊರತರುತ್ತಿದೆ. ಇದರೊಂದಿಗೆ ಗ್ರೂಪ್‌ ಕಾಲ್‌, ಎಮೊಜಿ ರಿಯಾಕ್ಷನ್‌ ಸೇರಿದಂತೆ ಹಲವು ಸೇರ್ಪಡೆಗಳನ್ನು ವಾಟ್ಸ್‌ಆ್ಯಪ್‌ ಹಂಚಿಕೊಂಡಿದೆ.

ಸಮಾನ ಮನಸ್ಕರು ಒಂದು ವೇದಿಕೆಯಲ್ಲಿ ಸೇರುವುದು, ಚರ್ಚಿಸುವುದು, ನೆಚ್ಚಿನ ವಿಷಯಗಳನ್ನು ಹಂಚಿಕೊಳ್ಳುವುದು ಈಗ ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕ ಸುಲಭವಾಗಿದೆ. ಆದರೆ, ಇಂಥದ್ದೇ ಇನ್ನಷ್ಟು ಗುಂಪುಗಳು ಮತ್ತಷ್ಟು ಗುಂಪುಗಳೊಂದಿಗೆ ಒಂದೇ ವೇದಿಕೆಯಲ್ಲಿ (ಕಮ್ಯುನಿಟಿ) ಮಾತುಕತೆ ನಡೆಸುವುದು, ಫೈಲ್‌ಗಳನ್ನು ಹಂಚಿಕೊಳ್ಳುವುದು ಸಾಧ್ಯವಾದರೆ?–ಇಂಥದ್ದೇ ಸಾಧ್ಯತೆಯನ್ನು ವಾಟ್ಸ್‌ಆ್ಯಪ್‌ ಪರಿಚಯಿಸಿದೆ. ಅದನ್ನು 'ಕಮ್ಯುನಿಟೀಸ್‌' (Communities) ಎಂದು ಹೆಸರಿಸಿದೆ.

ಎನ್‌ಜಿಒಗಳು, ಕಚೇರಿಗಳು, ಸ್ಥಳೀಯ ಸಂಸ್ಥೆಗಳು,...ಹೀಗೆ ಯಾವುದೇ ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಒಂದೇ ಸಮುದಾಯದ ರೀತಿಯಲ್ಲಿ ಸೇರುವುದು ಸಾಧ್ಯವಾಗಲಿದೆ. ಗ್ರೂಪ್‌ಗಳ ಅಡ್ಮಿನ್‌ಗಳು ಸೇರಿ 'ಕಮ್ಯುನಿಟಿ' ರೂಪಿಸಿಕೊಳ್ಳಬಹುದು. ಅದರಲ್ಲಿ ಸಂದೇಶಗಳನ್ನು ಅಳಿಸುವುದು, ಹಂಚಿಕೊಳ್ಳಬೇಕಾದ ವಿಷಯಗಳು ಎಲ್ಲವನ್ನೂ ಅಡ್ಮಿನ್‌ಗಳು ನಿಯಂತ್ರಿಸಬಹುದಾಗುತ್ತದೆ. ಈ ಮೂಲಕ ಹಲವು ಗುಂಪುಗಳಿಗೆ ಹಾಗೂ ಹೆಚ್ಚು ಜನರಿಗೆ ವಿಷಯಗಳನ್ನು ತ್ವರಿತವಾಗಿ ತಲುಪಿಸುವುದು ಸಾಧ್ಯವಾಗುತ್ತದೆ.

ಇಂಥ ಕಮ್ಯುನಿಟಿಗಳಲ್ಲಿ ಒಂದೇ ಬಾರಿಗೆ 32 ಜನರಿಗೆ ಆಡಿಯೊ ಕಾಲ್‌ ಮಾಡುವ ಆಯ್ಕೆ ಸಿಗಲಿದೆ. ಹಾಗೇ 2ಜಿಬಿ ಗಾತ್ರದ ಫೈಲ್‌ಗಳನ್ನು ಹಂಚಿಕೊಳ್ಳಬಹುದಾಗುತ್ತದೆ. ಪ್ರಸ್ತುತ ಗುಂಪುಗಳಲ್ಲಿ ಗರಿಷ್ಠ 100ಎಂಬಿ ಗಾತ್ರದ ಫೈಲ್‌ಗಳನ್ನಷ್ಟೇ ಹಂಚಬಹುದಾಗಿದೆ ಹಾಗೂ ಗುಂಪು ಕರೆಗಳಲ್ಲಿ ಗರಿಷ್ಠ 8 ಮಂದಿ ಮಾತುಕತೆ ನಡೆಸಬಹುದಾಗಿದೆ. ಇದೇ ವರ್ಷ ವಾಟ್ಸ್‌ಆ್ಯಪ್‌ಗೆ 'ಕಮ್ಯುನಿಟಿ' ಹೊಸ ಟ್ಯಾಬ್‌ ಮೂಲಕ ಸೇರ್ಪಡೆಯಾಗಲಿದೆ.

ಇದರೊಂದಿಗೆ ಎಮೊಜಿ ರಿಯಾಕ್ಷನ್ ಅನ್ನು ವಾಟ್ಸ್‌ಆ್ಯಪ್‌ ಪರಿಚಯಿಸುತ್ತಿದೆ. ಯಾವುದೇ ವ್ಯಕ್ತಿ ಗುಂಪಿನಲ್ಲಿ ಹಾಕುವ ಒಂದು ಸಾಲಿಗೆ; ಉಳಿದ ಎಲ್ಲ ಸದಸ್ಯರು ಹಲವು ಎಮೋಜಿಗಳ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ. ಆ ಎಲ್ಲವೂ ಪ್ರತ್ಯೇಕ ಸಂದೇಶಗಳಾಗಿ ಕಾಣಿಸಿಕೊಳ್ಳುತ್ತದೆ. ಆದರೆ, ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಇರುವಂತೆ ನಿರ್ದಿಷ್ಟ ಸಂದೇಶಕ್ಕೆ ಅಲ್ಲಿಯೇ ಪ್ರತಿಕ್ರಿಯೆ ನೀಡುವ ಆಯ್ಕೆ ವಾಟ್ಸ್‌ಆ್ಯಪ್‌ನಲ್ಲಿ ಇರಲಿಲ್ಲ. ಈಗ ಪ್ರತಿಕ್ರಿಯೆಗಾಗಿಯೇ ಆರು ಎಮೋಜಿಗಳನ್ನು ಹೊರತರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT