ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರ ಸಮ್ಮತಿ ಪಡೆಯಲು ವಾಟ್ಸ್‌ಆ್ಯಪ್‌ ಕುಯುಕ್ತಿ

Last Updated 3 ಜೂನ್ 2021, 21:04 IST
ಅಕ್ಷರ ಗಾತ್ರ

ನವದೆಹಲಿ: ‘ಬಳಕೆದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ನೂತನ ಖಾಸಗಿ ನೀತಿಯನ್ನು ಒಪ್ಪಿಕೊಳ್ಳುವಂತೆವಾಟ್ಸ್‌ಆ್ಯಪ್‌ ತನ್ನ ಗ್ರಾಹಕರ ಮೇಲೆ ಒತ್ತಡ ಹೇರುತ್ತಿದೆ. ಈ ಬಗ್ಗೆ ಪ್ರತಿದಿನ ನಿರಂತರವಾಗಿ ಸೂಚನೆ ಕಳುಹಿಸುತ್ತಿದೆ. ಸರ್ಕಾರವು ತರಲು ಹೊರಟಿರುವ ಖಾಸಗಿ ಮಾಹಿತಿ ಭದ್ರತಾ ಮಸೂದೆ ಜಾರಿಗೆ ಬರುವ ಮುನ್ನವೇ ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲುವಾಟ್ಸ್‌ಆ್ಯಪ್‌ ಕುಯುಕ್ತಿ ಮಾಡುತ್ತಿದೆ’ ಎಂದು ಕೇಂದ್ರ ಸರ್ಕಾರವು ಆರೋಪಿಸಿದೆ.

‘ಬಳಕೆದಾರರ ಮಾಹಿತಿಯನ್ನು ತನ್ನ ಮಾತೃ ಸಂಸ್ಥೆ ಫೇಸ್‌ಬುಕ್ ಮತ್ತು ಮೂರನೇ ಸಂಸ್ಥೆಗಳ ಜತೆ ಹಂಚಿಕೊಳ್ಳುವ ಸಂಬಂಧವಾಟ್ಸ್‌ಆ್ಯಪ್‌ ತರಲು ಹೊರಟಿರುವ ನೂತನ ಖಾಸಗಿತನ ನೀತಿಯು ಬಳಕೆದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸುತ್ತದೆ. ಇದು ಖಾಸಗಿತನದ ಹಕ್ಕಿನ ಉಲ್ಲಂಘನೆ’ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಚೈತನ್ಯ ರೋಹಿಲ್ಲಾ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ಈ ಆರೋಪ ಮಾಡಿದೆ. ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಆರೋಪವಿದೆ.

‘ಫೇಸ್‌ಬುಕ್ ಮತ್ತು ಮೂರನೇ ಸಂಸ್ಥೆಯ ಜತೆಗೆ ಮಾಹಿತಿ ಹಂಚಿಕೊಳ್ಳಬಾರದು ಎಂಬ ಆಯ್ಕೆಗೆ ಅವಕಾಶವೇ ಇಲ್ಲ. ಯಾವ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಜತೆಗೆ ಯಾವ ಮಾಹಿತಿ ಹಂಚಿಕೊಳ್ಳಬೇಕು ಮತ್ತು ಯಾವ ಮಾಹಿತಿ ಹಂಚಿಕೊಳ್ಳಬಾರದು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿಲ್ಲ. ಸರ್ಕಾರದ ಮೇಲ್ವಿಚಾರಣೆ ಇಲ್ಲದೆಯೇ ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಪಡೆದುಕೊಳ್ಳುತ್ತದೆ. ಇದರಿಂದ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ’ ಎಂಬುದು ಅರ್ಜಿದಾರರ ಕಳವಳವಾಗಿತ್ತು.

‘ವಾಟ್ಸ್‌ಆ್ಯಪ್‌ನ ಈ ನೀತಿಯನ್ನು ಹೇರಲು, ಸೇವೆ ಸ್ಥಗಿತಗೊಳಿಸುವ ಬೆದರಿಕೆ ತಂತ್ರದ ಮೊರೆ ಹೋಗಿದೆ’ ಎಂದು ಅರ್ಜಿದಾರರು ದೂರಿದ್ದರು.

‘ಸೇವೆ ಸೀಮಿತಗೊಳಿಸುವುದಿಲ್ಲ’

‘ನಮ್ಮ ನೂತನ ಖಾಸಗಿ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರರ ಖಾತೆಯ ಸೇವೆಯನ್ನು ಸೀಮಿತಗೊಳಿಸುವುದಿಲ್ಲ. ಆದರೆ ಅವರು ನೀತಿಯನ್ನು ಒಪ್ಪಿಕೊಳ್ಳುವವರೆಗೂ ಸೂಚನೆಗಳನ್ನು ಕಳುಹಿಸುತ್ತಿರುತ್ತೇವೆ’ ಎಂದುವಾಟ್ಸ್‌ಆ್ಯಪ್‌ ಹೇಳಿದೆ.

ಈ ನೀತಿಯ ಸಂಬಂಧ ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವು ಪ್ರಮಾಣ ಪತ್ರ ಸಲ್ಲಿಸಿದ ಬೆನ್ನಲ್ಲೇವಾಟ್ಸ್‌ಆ್ಯಪ್‌ ಈ ಹೇಳಿಕೆ ಬಿಡುಗಡೆ ಮಾಡಿದೆ.

‘ಬಳಕೆದಾರರ ಖಾಸಗಿತನದ ರಕ್ಷಣೆ ನಮ್ಮ ಆದ್ಯತೆ ಎಂಬುದನ್ನು ನಾವು ಈಗಾಗಲೇ ಭಾರತ ಸರ್ಕಾರಕ್ಕೆ ತಿಳಿಸಿದ್ದೇವೆ. ಅದನ್ನು ಮನವರಿಕೆ ಸಹ ಮಾಡಿಕೊಟ್ಟಿದ್ದೇವೆ.ಇದನ್ನು ಒಪ್ಪಿಕೊಳ್ಳದೇ ಇರುವವರ ಖಾತೆಗಳ ಸೇವೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ನೂತನ ಖಾಸಗಿ ನೀತಿಯು ಬಳಕೆದಾರರ ಖಾಸಗಿ ಸಂದೇಶಗಳು, ಚಿತ್ರಗಳು, ವಿಡಿಯೊ, ಕರೆ ವಿವರಗಳನ್ನು ಕಲೆಹಾಕುವುದಿಲ್ಲ. ವಾಣಿಜ್ಯ ಸಂಸ್ಥೆಗಳ ಜತೆ ನಮ್ಮ ಬಳಕೆದಾರರು ಹೇಗೆ ವರ್ತಿಸಬಹುದು ಎಂಬುದರ ಬಗೆ ಹೆಚ್ಚುವರಿ ಮಾಹಿತಿಯನ್ನಷ್ಟೇ ಸಂಗ್ರಹಿಸಲು ಈ ನೀತಿ ಅವಕಾಶ ಮಾಡಿಕೊಡುತ್ತದೆ. ಮಾಹಿತಿ ಹಂಚಿಕೊಳ್ಳಲು ಮತ್ತು ವಾಣಿಜ್ಯ ಸಂಸ್ಥೆಗಳು ನಮ್ಮ ಬಳಕೆದಾರರನ್ನು ಸಂಪರ್ಕಿಸದೇ ಇರುವಂತೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ’ ಎಂದುವಾಟ್ಸ್‌ಆ್ಯಪ್‌ ಸ್ಪಷ್ಟಪಡಿಸಿದೆ.

***

ಖಾಸಗಿ ಮಾಹಿತಿ ಭದ್ರತಾ ಮಸೂದೆ ಜಾರಿಯಾಗುವ ಮುನ್ನವೇ ಎಲ್ಲಾ ಬಳಕೆದಾರರ ಮಾಹಿತಿಯನ್ನು ಸಂಪೂರ್ಣವಾಗಿ ಸಂಗ್ರಹಿಸುವುದು ವಾಟ್ಸ್‌ಆ್ಯಪ್‌ನ ಗುರಿಯಾಗಿದೆ

-ಕೇಂದ್ರ ಸರ್ಕಾರ

***

ಖಾಸಗಿ ಮಾಹಿತಿ ಭದ್ರತಾ ಮಸೂದೆ ಜಾರಿ ಆಗುವವರೆಗೂ, ಈ ನೀತಿಯನ್ನು ಒಪ್ಪಿಕೊಳ್ಳುವಂತೆ ನಮ್ಮ ಬಳಕೆದಾರರಿಗೆ ಸೂಚನೆ ಕಳುಹಿಸುತ್ತಲೇ ಇರುತ್ತೇವೆ

-ವಾಟ್ಸ್‌ಆ್ಯಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT