ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಕರಣ ಛಂದಸ್ಸಿನ ಅಧ್ಯಯನಕ್ಕೊಂದು ತಂತ್ರಾಂಶ

Published 5 ಜುಲೈ 2023, 1:40 IST
Last Updated 5 ಜುಲೈ 2023, 1:40 IST
ಅಕ್ಷರ ಗಾತ್ರ

ಜಿ.ಎನ್.‌ ನರಸಿಂಹಮೂರ್ತಿ

ಕನ್ನಡಿಗರು ಬೇರೆ ದೇಶಗಳಿಗೆ ಹೋದಾಗ ಅವರಿಗೆ ಕನ್ನಡದ ಕುರಿತು ಹೆಚ್ಚಿನ ಅಭಿಮಾನ ಜಾಗೃತವಾಗುತ್ತದೆ. ಅದಕ್ಕೆ ಆಯಾ ದೇಶಗಳ ಭಾಷಾ ಸನ್ನಿವೇಶಗಳೇ ಕಾರಣ. ಹೀಗೆ ಬೇರೆ ಭಾಷೆಯವರು ಅವರ ಭಾಷೆಗೆ ಮಾಡುತ್ತಿರುವ ಕೆಲಸಗಳನ್ನು ನೋಡಿ ಅದರಿಂದ ಪ್ರೇರಿತರಾಗಿ ಜರ್ಮನಿಯಲ್ಲಿರುವ ಕನ್ನಡಿಗರ ಸ್ನೇಹಿತ ಬಳಗದವರು ಕನ್ನಡದ ಛಂದಸ್ಸಿನ ಬಗೆಗೆ ಕುತೂಹಲವಿರುವ ಎಲ್ಲ ಕನ್ನಡಿಗರಿಗೆ ಒಂದು ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ.

ವೈಮಾಂತರಿಕ್ಷ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಿತ್ರರು ಸೇರಿ ವ್ಯಾಕರಣ ಎಂಬ ತಂತ್ರಾಂಶವೊಂದನ್ನು ರೂಪಿಸಿದ್ದಾರೆ. ರಾಘವೇಂದ್ರಪ್ರಸಾದ್‌ ರವರು ಇದರ ಮುಖ್ಯಸ್ಥರು.ಈ ತಂತ್ರಾಂಶದಲ್ಲಿ ಯೂನಿಕೋಡ್‌ ಶಿಷ್ಟತೆಯಲ್ಲಿರುವ ಪಠ್ಯಗಳ  ಸಂಧಿ ಮತ್ತು ಛಂದಸ್ಸುಗಳ ಪರಿಶೀಲನೆ ನಡೆಯುತ್ತದೆ. ಅದಕ್ಕಾಗಿ ಈ ಕೆಳಗಿನಂತೆ ಆಯ್ಕೆಗಳಿರುತ್ತವೆ.

ಉದಾ: ಕೌರವೇಶ್ವರ - ಕೌರವ ಈಶ್ವರ [ಗುಣ ಸಂಧಿ], ಕೈಗೊಂಡು - ಕೈ ಕೊಂಡು - ಕೈಗೊಂಡು [ಆದೇಶ ಸಂಧಿ]

ಹೀಗೆ ಕನ್ನಡದ ಮತ್ತು ಸಂಸ್ಕೃತದ  ಸಂಧಿಪದಗಳನ್ನು ಪ್ರತ್ಯೇಕ ಪದಗಳಾಗಿ ಬಿಡಿಸಿ ಸಂಧಿಗಳನ್ನು ಹೆಸರಿಸುತ್ತದೆ.

ಛಂದಸ್ಸಿನ ವಿಚಾರದಲ್ಲಿಯೂ ತಂತ್ರಾಂಶ ಅದ್ಭುತವಾಗಿ ಕೆಲಸ ಮಾಡುತ್ತದೆ.  ಎಲ್ಲ ಬಗೆಯ ವೃತ್ತಗಳು, ತ್ರಿಪದಿ ಸಾಂಗತ್ಯಗಳು ಮುಂತಾದವನ್ನು ಗುರುತಿಸಿ ಬೇಕೆಂದರೆ ಅವುಗಳ ಸಾಲುಗಳಿಗೆ ಲಘು ಗುರುಗಳ ಪ್ರಸ್ತಾರವನ್ನೂ  ಹಾಕಿ, ಗಣಗಳನ್ನು ಗುರುತಿಸಿ ಛಂದಸ್ಸನ್ನು ತಿಳಿಸುತ್ತದೆ.  ಶಿಥಿಲದ್ವಿತ್ವವಿದ್ದರೆ ಅದನ್ನೂ ಗುರುತಿಸಿ ತಿಳಿಸುತ್ತದೆ.  ಶಿಥಿಲದ್ವಿತ್ವವನ್ನು ಗುರುತಿಸುವುದು ಬೇಡವಾದರೆ ಹಾಗೆ ತಂತ್ರಾಂಶಕ್ಕೆ ಸೂಚನೆ ನೀಡಲು ಪ್ರಾಶಸ್ತ್ಯ ಎನ್ನುವಲ್ಲಿ ಅವಕಾಶವಿದೆ( ಚಿತ್ರವನ್ನು ಗಮನಿಸಿ).  ಪ್ರಾಸವಿದ್ದರೆ ಅದನ್ನು ನಮೂದಿಸಿ  ದೋಷವಿದ್ದರೆ ತಿಳಸುತ್ತದೆ. ಹೊಸ ಛಂದಸ್ಸುಗಳನ್ನು ರಚಿಸುವ ಕುತೂಹಲವಿದ್ದವರು ಹಾಗೆ ರಚಿಸಿ ತಮ್ಮ ರಚನೆ ಹೊಸ ಛಂದಸ್ಸಿನ ನಿಯಮಗಳಿಗೆ ಅನುಸಾರವಾಗಿ ಇದೆಯೇ ಎಂಬುದನ್ನು ಸುಲಭವಾಗಿ ಇದರಿಂದ ತಿಳಿದುಕೊಳ್ಳಬಹುದು. ಛಂದಸ್ಸಿನ ಪರಿಶೀಲನೆ ಹಾಗಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಈ ಮುಂದಿನ ರಚನೆಗಳನ್ನು ಗಮನಿಸಬಹುದು:

1. ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿಂ

     ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್‌ ದೊರೆ ಕರ್ಣನೇಱು ಕ

     ರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕ

     ರ್ಣನ ಪಡೆಮಾತಿನೊಳ್‌ ಪುದಿದು ಕರ್ಣರಸಾಯನಮಲ್ತೆ ಭಾರತಂ ||

===============ವಿಶ್ಲೇಷಣೆ========================

[ಚಂಪಕಮಾಲೆ ವೃತ್ತ]

[ನಗಣ|ಜಗಣ|ಭಗಣ|ಜಗಣ|ಜಗಣ|ಜಗಣ|ರಗಣ]

∪∪∪ |∪ _ ∪  |_ ∪∪ |∪ _ ∪ |∪ _ ∪ |∪ _ ∪  |_ ∪ _                                  (28 ಮಾತ್ರೆಗಳು/21 ಅಕ್ಷರಗಳು)

ನೆನೆಯ|ದಿರಣ್ಣ |ಭಾರತ|ದೊಳಿಂಪೆ|ಱರಾರು|ಮನೊಂದೆ |ಚಿತ್ತದಿಂ

∪∪∪ |∪  _ ∪ |_ ∪∪ |∪  _ ∪ |∪ _   ∪ |∪  _ ∪ |_ ∪  _                              (28 ಮಾತ್ರೆಗಳು/21 ಅಕ್ಷರಗಳು)

ನೆನೆವೊ|ಡೆ ಕರ್ಣ|ನಂನೆನೆ|ಯ ಕರ್ಣ|ನೊಳಾರ್ ದೊ|ರೆ ಕರ್ಣ|ನೇಱು ಕ

∪∪∪ |∪ _ ∪  |_ ∪∪ |∪ _ ∪ |∪  _ ∪ |∪  _ ∪ |_ ∪  _                                (28 ಮಾತ್ರೆಗಳು/21 ಅಕ್ಷರಗಳು)

ರ್ಣನ ಕ|ಡುನನ್ನಿ |ಕರ್ಣನ|ಳವಂಕ|ದ ಕರ್ಣ|ನ ಚಾಗ|ಮೆಂದು ಕ

∪∪∪ |∪ _ ∪ |_   ∪∪ |∪  _ ∪ |∪ _ ∪ |∪ _ ∪  |_ ∪ _                                (28 ಮಾತ್ರೆಗಳು/21 ಅಕ್ಷರಗಳು)

ರ್ಣನ ಪ|ಡೆಮಾತಿ|ನೊಳ್ ಪುದಿ|ದು ಕರ್ಣ|ರಸಾಯ|ನಮಲ್ತೆ |ಭಾರತಂ

ಆದಿಪ್ರಾಸ    : ನ          --> ಗಜಪ್ರಾಸ

ಅಂತ್ಯಪ್ರಾಸ  : -

ಶಿತಿಲದ್ವಿತ್ವ : ಬಳಸಿದೆ ;            ಪೂರ್ವಾಂತ್ಯ ದ್ವಿತ್ವ : : ಬಳಸಿಲ್ಲ            

==============ವಿಶ್ಲೇಷಣೆ ಮುಕ್ತಾಯ===================

2. ಪದನಱಿದು ನುಡಿಯಲುಂ ನುಡಿ

ದುದನಱಿದಾರಯಲುಮಾರ್ಪರಾ ನಾಡವರ್ಗಳ್‌

     ಚದುರರ್‌ ನಿಜದಿಂ ಕುಱಿತೋ

     ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್  ||

===============ವಿಶ್ಲೇಷಣೆ========================

[ಆರ್ಯಾಗೀತಿ: 4 ಪಾದ]

∪∪∪∪ |∪∪∪∪ |_ ∪∪  (12ಮಾತ್ರೆಗಳು/11 ಅಕ್ಷರಗಳು)

ಪದನಱಿ|ದು ನುಡಿಯ|ಲುಂನುಡಿ

∪∪∪∪ |_ ∪∪ |∪ _ ∪ |_  _ |∪∪ _   |                      (20 ಮಾತ್ರೆಗಳು/15 ಅಕ್ಷರಗಳು)

ದುದನಱಿ|ದಾರಯ|ಲುಮಾರ್ಪ|ರಾ ನಾ|ಡವರ್ಗಳ್|

∪∪ _   |∪∪ _ |∪∪ _                                              (12 ಮಾತ್ರೆಗಳು/9 ಅಕ್ಷರಗಳು)

ಚದುರರ್ |ನಿಜದಿಂ|ಕುಱಿತೋ

∪∪ _ |_ _ |∪ _ ∪ |∪∪∪∪ |∪∪ _   |                       (20 ಮಾತ್ರೆಗಳು/15 ಅಕ್ಷರಗಳು)

ದದೆಯುಂ|ಕಾವ್ಯ|ಪ್ರಯೋಗ|ಪರಿಣತ|ಮತಿಗಳ್ |

ಆದಿಪ್ರಾಸ    : ದ          --> ಗಜಪ್ರಾಸ

ಅಂತ್ಯಪ್ರಾಸ  : -

ಶಿಥಿಲದ್ವಿತ್ವ : ಬಳಸಿದೆ ;            ಪೂರ್ವಾಂತ್ಯ ದ್ವಿತ್ವ : : ಬಳಸಿಲ್ಲ            

==============ವಿಶ್ಲೇಷಣೆ ಮುಕ್ತಾಯ===================

3. ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ

ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್‌

ಮಾಧವನೀತನ್‌ ಪೆರನಲ್ಲಂ

===============ವಿಶ್ಲೇಷಣೆ========================

[ಅಂಶ: ತ್ರಿಪದಿ]

_ ∪∪  |_ ∪  _ |_ _ ∪  |_ _ _                             (20 ಮಾತ್ರೆಗಳು/12 ಅಕ್ಷರಗಳು)

ಸಾಧುಗೆ |ಸಾಧು ಮಾ|ಧುರ್ಯಂಗೆ |ಮಾಧುರ್ಯಂ

_ _ ∪  |∪∪∪  |∪∪∪∪  |∪∪ _ _   |                    (18 ಮಾತ್ರೆಗಳು/14 ಅಕ್ಷರಗಳು)

ಬಾಧಿಪ್ಪ |ಕಲಿಗೆ |ಕಲಿಯುಗ |ವಿಪರೀತನ್|

_ ∪∪ _ |_   ∪∪ |_ _                                      (14 ಮಾತ್ರೆಗಳು/9 ಅಕ್ಷರಗಳು)

ಮಾಧವನೀ|ತನ್ ಪೆರ|ನಲ್ಲಂ

ಆದಿಪ್ರಾಸ    : ಧ          --> ಸಿಂಹಪ್ರಾಸ

ಅಂತ್ಯಪ್ರಾಸ  : -

ಶಿತಿಲದ್ವಿತ್ವ : ಬಳಸಿದೆ ;            ಪೂರ್ವಾಂತ್ಯ ದ್ವಿತ್ವ : : ಬಳಸಿಲ್ಲ            

==============ವಿಶ್ಲೇಷಣೆ ಮುಕ್ತಾಯ===================

ಈ ತಂತ್ರಾಂಶ ಉಚಿತವಾಗಿ  brahmiakshara.com ಎಂಬ ಅಂತರಜಾಲತಾಣದಲ್ಲಿ  ಲಭ್ಯವಿದೆ. ಈಲಿಂದ ತಂತ್ರಾಂಶದ ಎಎಕ್ಸ್‌ ಎ ಕಡತವನ್ನು ಇಳಿಸಿಕೊಂಡು ಅನುಸ್ಥಾಪಿಸಿಕೊಂಡರೆ ಅದು ಎಂಎಸ್‌ ವರ್ಡ್‌ನ ಪರಿವಿಡಿಪಟ್ಟಿಯಲ್ಲಿ ವ್ಯಾಕರಣ ಎಂದೇ ಕಾಣಿಸಿಕೊಳುತ್ತದೆ. ಅಲ್ಲಿಗೆ ಅದು ಕಾರ್ಯನಿರ್ಹಿಸಲು ಸಿದ್ಧವೆಎಂದು ತಿಳಿಯಬಹುದು.  ಇದು ಸದ್ಯ  64‌ ಬಿಟ್‌ ವಿಂಡೋಸ್ ಆವೃತ್ತಿ ಮತ್ತು ಅಂತಹದೇ ಎಂ ಎಸ್‌ ವರ್ಡ್‌ ವೇದಿಕೆಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ. ಆದರೆ ಇಷ್ಟರಲ್ಲಿಯೇ ಸ್ವತಂತ್ರವಾಗಿ ಎಲ್ಲೆಡೆ ಕಾರ್ಯಪ್ರವೃತ್ತವಾಗುವ ರೀತಿಯಲ್ಲಿ ತಂತ್ರಾಂಶವನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಶ್ರೀ ರಾಘವೇಂದ್ರ ಪ್ರಸಾದ್‌ ಅವರು ತಿಳಿಸಿದ್ದಾರೆ. ಇದು ಸ್ವಾಗತಾರ್ಹವಾದ ಆಶಯವಾಗಿದೆ. ಈ ತಂತ್ರಾಂಶ ಛಂದಸ್ಸಿನ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೆ ಉಪಯುಕ್ತ ಸಾಧನವಾಗಿದೆ. ಸದ್ಯ ಎಲ್ಲ ಕನ್ನಡಿಗರು ಶ್ರೀ ರಾಘವೇಂದ್ರ ಪ್ರಸಾದ್‌ ಮತ್ತು ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸಬೇಕಾಗಿದೆ.

ಹೀಗೆ ಕನ್ನಡಿಗರು ಎಲ್ಲಿದ್ದರೂ ಕನ್ನಡವನ್ನು ಮರೆಯದೆ ಭಾಷೆಗೆ ತಮ್ಮ ಕೊಡುಗೆಗಳನ್ನು ಸಲ್ಲಿಸುತ್ತಾ ಬಂದರೆ ಕನ್ನಡ ಮರೆಯಾಗುವ ಆತಂಕ ಕಡಿಮೆಯಾಗುತ್ತದೆ. ಜೊತೆಗೆ ಅವರೆಲ್ಲ ಕನ್ನಡವನ್ನು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಕಲಿತಿದ್ದರಿಂದಲೇ ಈ ಬಗೆಯ ಕೆಲಸಗಳನ್ನು ಮಾಡುವುದು ಸಾಧ್ಯ ಎಂಬು ಗಮನಿಸಬೇಕಾದ ಸಂಗತಿಯಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದಲ್ಲಿಯೂ , ಕರ್ನಾಟಕದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿಯೂ ಕೆಲವರು ಇಂತಹ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಕನ್ನಡಕ್ಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಇನ್ನೂ ಬೇಕಾದಷ್ಟಿವೆ. ತಂತ್ರಜ್ಞಾನ ಕ್ಷೇತ್ರದ ಇನ್ನಷ್ಟು ಜನ ಕನ್ನಡದ ಕೆಲಸಗಳಿಗೆ ವಾರಕ್ಕೆ ಅರ್ಧದಿನ ಸಮಯ ಕೊಟ್ಟರೂ ಏಷ್ಟೋ ಕೆಲಸಗಳನ್ನು ಮಾಡಬಹುದಾಗಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT