ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿದ್ದನ್ನು 'ಕೊಡುವ' ಕೃತಕ ಬುದ್ಧಿಮತ್ತೆಯ ಜಾಣರು

Published 23 ಏಪ್ರಿಲ್ 2024, 22:33 IST
Last Updated 23 ಏಪ್ರಿಲ್ 2024, 22:33 IST
ಅಕ್ಷರ ಗಾತ್ರ

ಚಾಟ್‌ಜಿಪಿಟಿ, ಮೆಟಾ ಎಐ, ಮೈಕ್ರೋಸಾಫ್ಟ್ ಕೋಪೈಲಟ್, ಗೂಗಲ್ ಜೆಮಿನಿ, ಎಕ್ಸ್‌ನ ಗ್ರಾಕ್
ವಾಟ್ಸ್ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳ ಒಡೆತನವನ್ನು ಹೊಂದಿರುವ ತಂತ್ರಜ್ಞಾನ ದಿಗ್ಗಜ ಕಂಪನಿ ಮೆಟಾ, ಹೊಸ ಜನರೇಟಿವ್ ಎಐ ಚಾಟ್‌ಬಾಟ್ ಅನ್ನು ಪರಿಚಯಿಸುತ್ತಿರುವುದರೊಂದಿಗೆ, ಕೃತಕ ಬುದ್ಧಿಮತ್ತೆಯ ಆಧಾರಿತವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರವು ಮತ್ತಷ್ಟು ವಿಸ್ತಾರವಾಗಿದೆ.

ಕಳೆದ ವರ್ಷಾಂತ್ಯದಲ್ಲಿ ಲಾರ್ಜ್ ಲಾಂಗ್ವೇಜ್ ಮಾಡೆಲ್ (LLM) ಹಾಗೂ ಜನರೇಟಿವ್ ಎಐ ತಂತ್ರಜ್ಞಾನಗಳ ಸಂಯೋಗದಿಂದ ‘ಓಪನ್ ಎಐ’ ಎಂಬ ಸಂಸ್ಥೆಯು ಚಾಟ್-ಜಿಪಿಟಿ ಎಂಬ ‘ಕೇಳಿದ್ದನ್ನು ಕೊಡಬಲ್ಲ’ ಚಾಟ್‌ಬಾಟ್ ಅನ್ನು ಘೋಷಿಸಿತ್ತು. ಈ ಯಾಂತ್ರಿಕ ಸಹಾಯಕನಂತಿರುವ ತಂತ್ರಜ್ಞಾನವು ಜನಸಾಮಾನ್ಯರ ಕೈಗೂ ಸಿಗಲಾರಂಭಿಸಿದ ಬಳಿಕ, ಅದಕ್ಕೀಗ ಸಾಕಷ್ಟು ಪ್ರತಿಸ್ಫರ್ಧಿಗಳು ಹುಟ್ಟಿಕೊಂಡಿದ್ದಾರೆ. ಪ್ರಮುಖ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳೆಲ್ಲವೂ ಈ ಕ್ಷೇತ್ರದಲ್ಲಿ ಹೊಸ ಮಾರುಕಟ್ಟೆಯ ಸಾಧ್ಯತೆಯನ್ನು ಮನಗಂಡು, ತಮ್ಮದೇ ಆದ ‘ಜನರೇಟಿವ್ ಎಐ ಟೂಲ್‌’ಗಳನ್ನು ಅಭಿವೃದ್ಧಿಪಡಿಸಿಕೊಂಡಿವೆ. ಓಪನ್ ಎಐ ಹೊರತಂದಿದ್ದ ಚಾಟ್ ಜಿಪಿಟಿಯ 4ನೇ ಆವೃತ್ತಿ ಈಗ ಹೊರಬಂದಿದ್ದು, ನಾವು ಕೇಳಿದ ಪ್ರಶ್ನೆಗಳಿಗೆ ಹೆಚ್ಚು ನಿಖರವಾದ ಉತ್ತರ, ಹೆಚ್ಚು ಸ್ಪಷ್ಟವಾಗಿರುವ ಅನುವಾದದೊಂದಿಗೆ ಸೂಕ್ತವಾದ ಚಿತ್ರಗಳನ್ನು, ವಿಡಿಯೊಗಳನ್ನು ರಚಿಸಿಕೊಡಬಲ್ಲುದು ಮತ್ತು ಯಾವುದೇ ಕೋಡ್‌ಗಳನ್ನು ಕೂಡ ಸೃಷ್ಟಿಸಿಕೊಡಬಲ್ಲುದು.

ಈ ಅಗಾಧ ಸಾಧ್ಯತೆಯಿರುವ ಚಾಟ್-ಜಿಪಿಟಿಗೆ ಪ್ರಮುಖ ಪ್ರತಿಸ್ಫರ್ಧಿಗಳು ಯಾರು ಎಂದು ನೋಡಿದರೆ, ಅದಾಗಲೇ ಗೂಗಲ್, ಮೈಕ್ರೋಸಾಫ್ಟ್, ಮೆಟಾ, ಎಕ್ಸ್ ಮುಂತಾದವೆಲ್ಲ ತಮ್ಮದೇ ಆದ ಜನರೇಟಿವ್ ಎಐ ಟೂಲ್‌ಗಳನ್ನು ಸಿದ್ಧಪಡಿಸಿವೆ. ಎಲ್ಲವೂ ತಮ್ಮದೇ ಆದ ರೀತಿಯಲ್ಲಿ ನಾವು ಕೇಳಿದ್ದನ್ನು ಮಾಡಿಕೊಡಬಲ್ಲ ಸಾಮರ್ಥ್ಯ ಇರುವಂಥವು. ಅಂದರೆ ನಾವು ಯಾವುದೇ ಪ್ರಶ್ನೆ ಕೇಳಿದರೆ, ಅಂತರ್ಜಾಲವನ್ನೆಲ್ಲ ಜಾಲಾಡಿ, ತನ್ನಲ್ಲಿರುವ ದತ್ತಾಂಶ ಸಂಚಯ (ಡೇಟಾಬೇಸ್) ತಡಕಾಡಿ, ಹೆಚ್ಚು ನಿಖರವಾದ ಉತ್ತರವನ್ನು ನಮ್ಮ ಮುಂದೆ ತಂದಿಡಬಲ್ಲವು. ಮತ್ತು ವಿಡಿಯೊ ಮಾಡುವವರಿಗೆ ಸ್ಕ್ರಿಪ್ಟ್ ಮಾಡಿಕೊಡುತ್ತದೆ, ವಿಡಿಯೊ-ಆಡಿಯೊಗಳನ್ನೂ ಸೃಷ್ಟಿಸಿಕೊಡುತ್ತದೆ. ನಾವು ಸೂಕ್ತವಾದ ಪ್ರಾಂಪ್ಟ್ (ನಮಗೆ ಏನು ಬೇಕೋ ಅದರ ವಿವರಣೆ, ಸೂಕ್ತ ಕೀವರ್ಡ್ ಇರುವ ಅಕ್ಷರಪುಂಜ) ದಾಖಲಿಸಿದರೆ, ಅದಕ್ಕೆ ಅನುಗುಣವಾಗಿ ಸಹಜವೆಂಬಂತೆ ಕಾಣಿಸುವ ಚಿತ್ರಗಳನ್ನು ರಚಿಸಿಕೊಡುತ್ತದೆ.

ಇದುವರೆಗೆ ಪ್ರಯೋಗಾಲಯಗಳಿಗೆ ಸೀಮಿತವಾಗಿದ್ದ ಎಐ ಚಾಟ್‌ಬಾಟ್ ತಂತ್ರಜ್ಞಾನವು ಜನಸಾಮಾನ್ಯರಿಗೆ ಆ್ಯಪ್‌ಗಳ ರೂಪದಲ್ಲಿ, ವೆಬ್‌ಸೈಟ್‌ಗಳ ರೂಪದಲ್ಲಿ ದೊರೆಯುತ್ತಿವೆ. ಇಲ್ಲಿರುವ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್ಎಲ್ಎಂ) ಪ್ರೋಗ್ರಾಂಗಳು ನಾವೇನು ಟೈಪ್ ಮಾಡುತ್ತೇವೋ ಅದನ್ನು ತಾನೇ ಅರಿತುಕೊಂಡು (ನಾವು ಹಿಂದೆ ಕೇಳಿದ ಪ್ರಶ್ನೆಗಳು ಅಥವಾ ಮಾಹಿತಿಯ ಆಧಾರದಲ್ಲಿ) ಸ್ವಯಂ-ಪೂರ್ಣಗೊಳಿಸುವ (ಆಟೋ-ಕಂಪ್ಲೀಟ್) ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ. ಅಂದರೆ ಮಾನವನು ಹಿಂದೆ ಊಡಿಸಿದ ಮಾಹಿತಿಯ ಆಧಾರದಲ್ಲಿಯೇ ಈ ಯಂತ್ರವು ಕೆಲಸ ಮಾಡುತ್ತದೆಯಾದರೂ, ಇದು ಮಾನವನಿಗೆ ಸರಿಸಾಟಿಯಾಗಲಾರದು. ಏಕೆಂದರೆ, ಅಂತಿಮವಾಗಿ, ಇದು ಸರಿ ಇದೆಯೇ ಇಲ್ಲವೇ ಎಂಬುದನ್ನು ಮನುಷ್ಯ ಜಾಣ್ಮೆಯೇ ನಿರ್ಧರಿಸಬೇಕಾಗುತ್ತದೆ.

ಚಾಟ್ ಜಿಪಿಟಿಯ ಪ್ರಮುಖ ಪ್ರತಿಸ್ಫರ್ಧಿಗಳು
* ಮೆಟಾ ಎಐ (Meta Llama 3): ಇದು ಜಾಗತಿಕವಾಗಿ ಈಗ ಜನಸಾಮಾನ್ಯರ ಫೋನ್‌ಗಳಲ್ಲಿ ಲಭ್ಯವಾಗಲು ಶುರುವಾಗಿದೆ ಎಂದು ಮೆಟಾ ಸಂಸ್ಥೆಯು ಏ.18ರಂದು ಘೋಷಿಸಿದೆ. ತನ್ನ ವಾಟ್ಸ್ಆ್ಯಪ್, ಫೇಸ್‌ಬುಕ್, ಮೆಸೆಂಜರ್, ಇನ್‌ಸ್ಟಾಗ್ರಾಂಗಳಲ್ಲಿ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರ, ನೀವು ಕೇಳಿದ ಚಿತ್ರ, ವಿಡಿಯೊಗಳ ಸೃಷ್ಟಿ ಇದರಿಂದ ಸಾಧ್ಯವಾಗುತ್ತದೆ. ಇದು www.meta.ai ಜಾಲತಾಣದಲ್ಲಿ ಕೂಡ ದೊರೆಯುತ್ತಿದೆ.

* ಮೈಕ್ರೋಸಾಫ್ಟ್‌ನ ಕೋಪೈಲಟ್: ಸಂಸ್ಥೆ ಮೈಕ್ರೋಸಾಫ್ಟ್ ಕೆಲವು ತಿಂಗಳ ಹಿಂದೆಯೇ ತನ್ನ ‘ಬಿಂಗ್ಞ‘ ಎಂಬ ಸರ್ಚ್ ಎಂಜಿನ್ ಮೂಲಕ, ಚಾಟ್ ಜಿಪಿಟಿ-4 ನೆರವಿನಿಂದ ಎಐ ಚಾಟ್‌ಬಾಟ್ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಇದೀಗ ‘ಕೋಪೈಲಟ್’ ಎಂದು ಮರುನಾಮಕರಣ ಮಾಡಿರುವ ಮೈಕ್ರೋಸಾಫ್ಟ್, ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕಾರ್ಯಾಚರಿಸುವ ಎಲ್ಲ ಹೊಸ ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗೆ ತಂತ್ರಾಂಶ ಅಪ್‌ಡೇಟ್ ಮೂಲಕ 'ಕೋಪೈಲಟ್' ಸುಲಭವಾಗಿ ಕೈಗೆ ಸಿಗುವಂತೆ ಮಾಡಿದೆ. ಸ್ಕ್ರೀನ್‌ನ ತಳಭಾಗದಲ್ಲಿರುವ ಟಾಸ್ಕ್‌ಬಾರ್‌ನಲ್ಲಿ ನೀಲಿ-ಹಳದಿ-ಗುಲಾಬಿ ಬಣ್ಣಗಳ ಐಕಾನ್ ಮೂಲಕ ಕೋಪೈಲಟ್‌ಗೆ ಶಾರ್ಟ್‌ಕಟ್ ಅನ್ನು ಮೈಕ್ರೋಸಾಫ್ಟ್ ಒದಗಿಸಿದೆ. ಅದನ್ನು ಕ್ಲಿಕ್ ಮಾಡಿ, ನಮಗೆ ಬೇಕಾದ ಪ್ರಶ್ನೆಗಳನ್ನು ಕೇಳಬಹುದು, ಬೇಕಾದ ಫೈಲನ್ನು ರಚಿಸಿಕೊಳ್ಳಬಹುದು. copilotai.com ಎಂಬ ಜಾಲತಾಣದಲ್ಲೂ ಇದು ಕೆಲಸ ಮಾಡುತ್ತದೆ.

* ಗೂಗಲ್‌ನ ಜೆಮಿನಿ: ಆರಂಭದಲ್ಲಿ ಬಾರ್ಡ್ ಹೆಸರಿನಲ್ಲಿದ್ದ ಗೂಗಲ್‌ನ ಎಐ ಸಹಾಯಕ ತಂತ್ರಜ್ಞಾನವೀಗ ‘ಜೆಮಿನಿ’ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ. ಜೆಮಿನಿ ಎಐ ಚಾಟ್‌ಬಾಟ್ ನಮ್ಮ ಕಲ್ಪನೆಗಳಿಗೆ ಹೊಸ ಬಣ್ಣ ನೀಡಬಲ್ಲುದು, ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗಬಲ್ಲದು ಮತ್ತು ಕಲ್ಪಿಸಿದ್ದಕ್ಕೆ ಜೀವ ಕೊಡಬಲ್ಲದು ಎಂದು ಗೂಗಲ್ ಹೇಳಿಕೊಳ್ಳುತ್ತಿದೆ. gemini.google.com ತಾಣದಲ್ಲಿಯೂ ಇದು ಲಭ್ಯ.

* ಎಕ್ಸ್‌ನ ಗ್ರಾಕ್ (Grok): ಎಕ್ಸ್ ಎಂದು ಮರುನಾಮಕರಣಗೊಂಡಿರುವ ಟ್ವಿಟರ್ ಕೂಡ ತನ್ನದೇ ಆದ ಎಐ ಚಾಟ್‌ಬಾಟ್ ಹೊರತಂದಿದ್ದು ಅದಕ್ಕೆ ಗ್ರಾಕ್ (Grok) ಎಂದು ಹೆಸರಿಸಲಾಗಿದೆ. ಆರಂಭದಲ್ಲಿ ಪ್ರೀಮಿಯಂ ಪ್ಲಸ್ ಚಂದಾದಾರರಿಗೆ ಮಾತ್ರ ಲಭ್ಯವಿದ್ದ ಈ ತಂತ್ರಜ್ಞಾನವು ಈಗ ಸಾಮಾನ್ಯ ಪ್ರೀಮಿಯಂ ಚಂದಾದಾರರಿಗೂ (ವಾರ್ಷಿಕ ಚಂದಾ ನೀಡುವ) ದೊರೆಯುತ್ತಿದೆ. ‘ರಿಯಲ್ ಟೈಂ’, ಎಂದರೆ ಆ ಕ್ಷಣದಲ್ಲಿನ ಬೆಳವಣಿಗೆ ಕುರಿತಾದ ಪ್ರಶ್ನೆಗಳಿಗೆ ಹೆಚ್ಚು ನಿಖರ ಉತ್ತರ ದೊರೆಯುತ್ತದೆ ಎಂಬುದು ಎಕ್ಸ್ ಹೇಳಿಕೆ. ಏಕೆಂದರೆ, ಎಕ್ಸ್‌ನಲ್ಲಿ ಹೆಚ್ಚಾಗಿ ಆ ಕ್ಷಣದ ಬೆಳವಣಿಗೆಗಳ ಮಾಹಿತಿ ದೊರೆಯುತ್ತಿದ್ದು, ಅದರ ಆಧಾರದಲ್ಲಿಯೇ ಚಾಟ್‌ಬಾಟ್ ಮಾಹಿತಿ ನೀಡುತ್ತದೆ. grok.x.ai ಜಾಲತಾಣದಲ್ಲಿಯೂ ಈ ಸೇವೆ ಲಭ್ಯ (ಹಣ ಪಾವತಿ ಮಾಡಬೇಕಾಗುತ್ತದೆ).

ಇವಿಷ್ಟು ಹೆಚ್ಚು ಜನಪ್ರಿಯವಾಗಿರುವ ಜಾಗತಿಕ ತಂತ್ರಜ್ಞಾನ ದೊಡ್ಡ ಸಂಸ್ಥೆಗಳು ಹೊರತಂದಿರುವ ಎಐ ಚಾಟ್‌ಬಾಟ್‌ಗಳಾಗಿದ್ದರೆ, ಕೆಲವು ಸಣ್ಣಪುಟ್ಟ ಸಂಸ್ಥೆಗಳು ಕೂಡ ಇದೇ ರೀತಿಯಲ್ಲಿ ನಮಗೆ ಬೇಕಾದ ಪಠ್ಯ, ಚಿತ್ರ, ವಿಡಿಯೊ, ಆಡಿಯೊ, ಕೋಡ್ ಮತ್ತಿತರ ಮಾಹಿತಿಯನ್ನು ನೀಡಬಲ್ಲವು ಮತ್ತು ಅನುವಾದವನ್ನೂ ಮಾಡಿಕೊಡಬಲ್ಲವು. ಅವುಗಳಲ್ಲಿ ಪ್ರಮುಖವಾದವೆಂದರೆ, ಯೂಚಾಟ್ (You.com ನಲ್ಲಿ YouChat), ಚಾಟ್‌ಸಾನಿಕ್, ಕ್ಲಾಡ್ (Claud by Anthrophic), ಮುರ್ಫ್ ಎಐ (Murf AI), ಕಾಪಿ ಎಐ ಹೊರತಂದಿರುವ ಚಾಟ್, ರೈಟರ್ ಡಾಟ್ ಕಾಂ (Writer.com), ಓಪನ್ ಎಐ ಪ್ಲೇಗ್ರೌಂಡ್, ಜಾಸ್ಪರ್ ಎಐ (Jasper AI) ಇತ್ಯಾದಿ. ಇವುಗಳು ಉಚಿತವಾಗಿಯೂ ಲಭ್ಯ ಮತ್ತು ಹಣ ಪಾವತಿಸಿದರೆ ಹೆಚ್ಚುವರಿ ವೈಶಿಷ್ಟ್ಯಗಳು, ಹೆಚ್ಚು ನಿಖರವಾದ ಮಾಹಿತಿ ನಮಗೆ ದೊರೆಯುತ್ತದೆ.

ಈ ಎಲ್ಲ ಚಾಟ್‌ಬಾಟ್‌ಗಳು ಅಂಗೈಯಲ್ಲೇ ಅರಮನೆ ಕಟ್ಟಬಲ್ಲ, ಕಲ್ಪಿಸಿದ್ದನ್ನು ಕೊಡುವ ಕಲ್ಪವೃಕ್ಷದಂತೆ, ಕಾಮಿಸಿದ್ದನ್ನು ನೀಡುವ ಕಾಮಧೇನುವಿನಂತೆ ಎಂದೆಲ್ಲ ಹೇಳಬಹುದಾದರೂ, ಮಾನವನ ಜಾಣ್ಮೆಗೆ ಎಂದಿಗೂ ಸರಿಸಾಟಿಯಾಗಲಾರವು. ವಿಶೇಷತಃ ಇವುಗಳು ಸೃಷ್ಟಿ ಮಾಡುವ ಪಠ್ಯ, ಚಿತ್ರ, ವಿಡಿಯೊಗಳೆಲ್ಲವೂ ಆಂಗ್ಲಭಾಷೆ ಆಧಾರಿತವಾಗಿ ಮತ್ತು ಆಂಗ್ಲ (ಯೂರೋಪ್, ಅಮೆರಿಕ ಮುಂತಾದ) ನಾಡಿನ ಆಚಾರ-ವಿಚಾರಗಳಿಗೆ ಅನುಗುಣವಾಗಿ ತಯಾರಾಗುತ್ತವೆ. ಇದುವರೆಗೂ ಭಾರತೀಯ ದೃಷ್ಟಿಕೋನದಿಂದ, ಭಾರತೀಯ ಭಾಷಾ ವೈವಿಧ್ಯದ ಆಧಾರದಲ್ಲಿ ಸೃಷ್ಟಿಯಾದ ಚಿತ್ರ, ವಿಡಿಯೊಗಳು ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT