ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ: ಬಯೊ ಹೈಬ್ರಿಡ್ ರೋಬೊ ಸಿದ್ಧ

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ನಾವೀಗಾಗಲೇ ಸಾಕಷ್ಟು ಕ್ಷೇತ್ರಗಳಲ್ಲಿ ರೋಬೊ‌ಗಳನ್ನು ಕಾಣಲು ಶುರು ಮಾಡಿದ್ದೇವೆ. ಕೈಗಾರಿಕಾ ಕ್ಷೇತ್ರದಿಂದ ಹಿಡಿದು, ಮನೆಬಳಕೆಯವರೆಗೂ ರೋಬೊ‌ಗಳು ತಮ್ಮ ಅಸ್ತಿತ್ವವನ್ನು ಈಗಾಗಲೇ ಸ್ಥಾಪಿಸಿವೆ. ಆದರೆ, ರೋಬೊ‌ಗಳ ಅತಿ ದೊಡ್ಡ ದೌರ್ಬಲ್ಯ ಎಂದರೆ ಅವು ಮಾನವನನ್ನು ಸಂಪೂರ್ಣವಾಗಿ ಹೋಲದೇ ಇರುವುದು. ನೋಡಲು ಕೃತಕವಾಗಿರುವುದು ಮಾತ್ರವೇ ಅಲ್ಲದೇ, ಮಾನವನಷ್ಟು ಸುಲಲಿತವಾದ ಚಲನೆ ಅವಕ್ಕೆ ಇಲ್ಲದೇ ಇರುವುದು ದೊಡ್ಡ ಕೊರತೆಯೇ ಸರಿ. ಆದರೆ, ಈ ಕೊರತೆಯನ್ನು ನೀಗಿಸುವಲ್ಲಿ ಅತಿ ದೊಡ್ಡ ಪ್ರಯತ್ನವೊಂದು ನಡೆದಿದೆ. ಮಾನವಜೀವಕೋಶಗಳನ್ನೇ ದತ್ತುಪಡೆದು, ಯಂತ್ರದೊಂದಿಗೆ ಬೆರೆಸಿದ ‘ಹೈಬ್ರಿಡ್ ರೋಬೊ‌’ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಪರಿಸರದಲ್ಲಿನ ಯಾವುದೇ ಜೀವಿಯು ಯಂತ್ರಕ್ಕಿಂತ ಹೆಚ್ಚು ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಬಲ್ಲದು. ರೋಬೊ ಒಂದರ ಚಲನೆ, ಕಾರ್ಯನಿರ್ವಹಣೆ ಅದರ ರಚನೆಯಿಂದಲೇ ಹಲವು ಮಿತಿಗಳನ್ನು ಹೊಂದಿದೆ. ಅಂದರೆ, ಅದರ ದೇಹದ ಒಳಗಿರುವ ಲೋಹ ಅಥವಾ ಮಿಶ್ರಲೋಹದಿಂದ ಮಾಡಿರುವ ಅಸ್ಥಿಪಂಜರ. ಆ ಅಸ್ಥಿಪಂಜರವೇ ಸ್ನಾಯುವಿನಿಂತೆಯೂ ಕೆಲಸ ಮಾಡುವುದು ಅದರ ಚಲನೆಯ ಮಿತಿಗೆ ಮುಖ್ಯ ಕಾರಣವಾಗಿದೆ. ರೋಬೊ‌ಗಳ ಅಂದ ಚೆಂದವನ್ನು ಹೆಚ್ಚಿಸಲು ಕೃತಕ ಚರ್ಮ ಅಥವಾ ರಬ್ಬರ್‌ ಮಾದರಿಯ ವಸ್ತುಗಳಿಂದ ಒಂದು ರೂಪವನ್ನು ಕೊಡಬಹುದೇ ಹೊರತು, ಅದಕ್ಕೆ ಜೀವ ಇರುವುದಿಲ್ಲ. ಹಾಗಾಗಿ, ರೋಬೊ‌ನ ಬಾಹ್ಯ ನೋಟ ಕೃತಕವೂ, ಅದರ ರಚನೆಯು ಅಸ್ವಾಭಾವಿಕವಾಗಿಯೂ ಇರುತ್ತದೆ.

ಈ ಮಿತಿಯನ್ನು ಅರ್ಥ ಮಾಡಿಕೊಂಡಿರುವ ಜಪಾನ್‌ನ ಟೋಕಿಯೋ ವಿಶ್ವವಿದ್ಯಾಲಯದ ರೋಬೊಟಿಕ್ ವಿಜ್ಞಾನಿಗಳ ತಂಡವು ಮಾನವಸ್ನಾಯುವನ್ನು ಯಂತ್ರದೊಂದಿದೆ ಬೆರೆಸಿ ಹೊಸ ರೋಬೊ‌ ಅಭಿವೃದ್ಧಿಪಡಿಸಿದ್ದಾರೆ. ಮೇಲೆ ಉಲ್ಲೇಖಿಸಿದ ಮಿತಿಗಳಿಂದ ಹೊರ ಬರುವುದು ಈ ಪ್ರಯತ್ನದಿಂದ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಏನಿದು ಸಂಶೋಧನೆ?

ಹಿರಿಯ ವಿಜ್ಞಾನಿ ಶೋಜಿ ಟೆಕೂಚಿ ಅವರ ತಂಡದ ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದಾರೆ. ಎರಡು ಕಾಲಿನಿಂದ ನಡೆಯಬಲ್ಲ ಶಕ್ತಿಯನ್ನು ಇದು ಹೊಂದಿದೆ. ಮಾನವದೇಹದಲ್ಲಿ ಕೇವಲ ಅಸ್ಥಿಪಂಜರವು ಮಾತ್ರ ದೇಹದ ಭಾರವನ್ನು ಹೊರುವುದಿಲ್ಲ. ಬದಲಿಗೆ, ‘ಲಿಗಮೆಂಟ್‌’ ಎನ್ನುವ ಗಟ್ಟಿಯಾದ ಸ್ನಾಯುಗಳು ಮೂಳೆಯಷ್ಟೇ ಸಶಕ್ತವಾಗಿ ದೇಹದ ಭಾರವನ್ನು ಹೊರುತ್ತವೆ. ಹಾಗಾಗಿ ಲಿಗಮೆಂಟ್‌ ಹರಿದುಹೋದಲ್ಲಿ (Ligament Tear) ವೈದ್ಯರು ಅದನ್ನು ಮೂಳೆ ಮುರಿಯುವುದಷ್ಟೇ ಸಮಾನವಾಗಿ ಪರಿಗಣಿಸಿ ಚಿಕಿತ್ಸೆಯನ್ನು ಕೊಡುತ್ತಾರೆ.

ಈ ಬಲಿಷ್ಠ ಸ್ನಾಯುಗಳನ್ನು ಕಸಿ ಮಾಡಿ, ರೋಬೊ‌ನ ಅಸ್ಥಿಪಂಜರಕ್ಕೆ ಶೋಜಿ ಅವರ ತಂಡ ಬೆಸೆದಿದೆ. ಇದನ್ನು ಪರಿಸರ ಅನುಕರಣೆ (Bio Mimicry) ಎಂದು ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ. ಮಾನವದೇಹದ ರಚನೆ ಹಾಗೂ ಚಲನೆಯನ್ನೇ ಪರಿಪೂರ್ಣವಾಗಿ ಅನುಕರಿಸುವ ಕ್ರಮವಿದು. ದೇಹದ ಕೀಲುಗಳು ಮೂಳೆಯಿಂದಲೇ ಮಾಡಲ್ಪಟ್ಟಿದ್ದರೂ, ಅದರ ಚಲನೆಗೆ ಶಕ್ತಿ ಹಾಗೂ ಸ್ಥಿರತೆಯನ್ನು ನೀಡುವುದು ಸ್ನಾಯುಗಳು. ಇದನ್ನೇ ಇಲ್ಲಿ ಅನುಕರಣೆ ಮಾಡಲಾಗಿದೆ. ರೋಬೊ‌ನಲ್ಲಿ ಅಸ್ಥಿಪಂಜರಕ್ಕೆ ಲೋಹದ ಬದಲಾಗಿದೆ ಗಟ್ಟಿಯಾದ ರಬ್ಬರ್‌ಗಳನ್ನು ಬಳಸಿದ್ದಾರೆ. ಇದರಿಂದ ರೋಬೊ‌ನ ಅಸ್ಥಿಪಂಜರಕ್ಕೆ ಬಾಗುವಿಕೆಯ ಗುಣ ಸಿಕ್ಕಿದೆ. ಆದರೆ, ಸ್ನಾಯುಗಳು ಮಾತ್ರ ನೈಸರ್ಗಿಕವಾದವು. ಈ ಸ್ನಾಯುಗಳಿಗೆ ವಿದ್ಯುತ್‌ ಸಂಪರ್ಕವನ್ನು ನೀಡಿದಾ‌ಗ ಅವು ಪೂರಕವಾಗಿ ಪ್ರತಿಕ್ರಿಯಿಸಿ ಚಲನೆಯನ್ನು ತೋರಿಸಿವೆ. ಇದನ್ನೇ ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳು ರೋಬೊ‌ನ ಓಡಾಟ, ಕೈ, ಇತ್ಯಾದಿ ಕೀಲುಗಳ ವಿವಿಧ ರೀತಿಯ ಬಳಕೆಯನ್ನು ನೀಡಿದ್ದು, ಹೆಚ್ಚು ಸ್ವಾಭಾವಿಕವಾಗಿಯೂ ಸಮರ್ಥವಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ.

‘ನಿಜವಾದ ಸ್ನಾಯುವನ್ನೇ ಬಳಸಿದರೆ, ಅದು ಜೀವಂತವಾಗಿ ಇರುವಂತೆ ನೋಡಿಕೊಳ್ಳಬೇಕಾದ ಅಗತ್ಯ ಇರುತ್ತದೆ. ಅದಕ್ಕಾಗಿ ಕೃತಕವಾಗಿ ರಕ್ತದಂತೆ ಕಾರ್ಯನಿರ್ವಹಿಸುವ ದ್ರವಗಳು, ಜೀವಪೋಷಣೆಯ ವಿವಿಧ ರಾಸಾಯನಿಕಗಳನ್ನು ಸ್ನಾಯುಗಳ ಮೂಲಕ ಚಲಿಸುವಂತೆ ಮಾಡಿದ್ದಾರೆ. ನರಮಂಡಲದ ಅಗತ್ಯ ಇಲ್ಲಿ ಅತ್ಯಗತ್ಯ. ಈಗಾಗಲೇ ಲಭ್ಯವಿರುವ ರೋಬೊ ಕೃತಕ ನರಮಂಡಲವನ್ನೇ ಹೆಚ್ಚು ಅಭಿವೃದ್ಧಿಪಡಿಸಿದ್ದಾರೆ. ಈ ಬದಲಾವಣೆಗಳ ಒಟ್ಟಾರೆ ಫಲಿತಾಂಶ ಧನಾತ್ಮಕವಾಗಿ ಬಂದಿದೆ. ಮನುಷ್ಯನ ಕೀಲುಗಳಂತೆಯೇ ಎಲ್ಲ ದಿಕ್ಕುಗಳಲ್ಲಿ ಸಂಚರಿಸಬಲ್ಲ, ಕಡಿಮೆ ಯಾಂತ್ರಿಕ ಸದ್ದುಗಳನ್ನು ಮೂಡಿಸಬಲ್ಲ ರೀತಿಯಲ್ಲಿ ಈ ರೋಬೊ‌ ಕಾರ್ಯನಿರ್ವಹಿಸಿದೆ’ ಎಂದು ವಿಜ್ಞಾನಿ ಶೋಜಿ ಟೆಕೂಚಿ ಹೇಳಿದ್ದಾರೆ.

ರೋಬೊ‌ಗಳು ಮಾನವವನ್ನು ಕೇವಲ ನೋಟದಲ್ಲಿ ಮಾತ್ರ ಹೋಲುವಂತೆ ಮಾಡಿದರೆ ಸಾಲದು. ಅವುಗಳ ಕಾರ್ಯನಿರ್ವಹಣೆಯು ಆಂತರಿಕವಾಗಿ ಮಾನವನಂತೆಯೇ ಇರಬೇಕು. ಆಗ ಮಾತ್ರ ಮಾನವಸಮಾಜ ರೋಬೊ‌ಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ಸಾಧ್ಯವಾಗುತ್ತದೆ. ನಮ್ಮ ಈ ಪ್ರಯತ್ನವು ರೋಬೊ‌ಗಳನ್ನು ಮಾನವನ ಸಮುದಾಯ ಜೀವನಕ್ಕೆ ಹತ್ತಿರಕ್ಕೆ ತರಲು ಪುಷ್ಟಿ ನೀಡಿದೆ ಎಂದು ನಾವು ನಂಬಿದ್ದೇವೆ ಎಂದು ಶೋಜಿ ವ್ಯಾಖ್ಯಾನಿಸಿದ್ದಾರೆ.

ಎಲ್ಲೆಲ್ಲಿ ಬಳಕೆ?

ಈಗ ರೋಬೊ‌ಗಳ ಬಳಕೆ ಎಲ್ಲಿಲ್ಲಿ ಇದೆಯೊ ಅಲ್ಲೆಲ್ಲಾ ಈ ರೋಬೊ‌ನ ಬಳಕೆ ಆಗಬಹುದು. ಆದರೆ, ಮಾನವಸಮುದಾಯ ಹಾಗೂ ಜೀವನದಲ್ಲಿ ಈ ರೋಬೊ‌ ಹೆಚ್ಚು ಬಳಕೆಯಾಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ. ಅಂದರೆ, ಸ್ನೇಹ, ಪ್ರೀತಿಯಂತಹ ಮಾನವಸಂಬಂಧಗಳ ನಿರ್ವಹಣೆ, ಮನೆಯೊಳಗೆ ಮಾನವನ ಕೆಲಸಗಳ ನಿರ್ವಹಣೆ, ಮಾನವನ ಮಿತಿ ಹೆಚ್ಚಿರುವ ಕೆಲಸಗಳಲ್ಲಿ ಬಳಕೆಗೆ ಈ ರೋಬೊ‌ ಹೆಚ್ಚು ಬಳಕೆಯಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT