ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಬರ್ ವಂಚನೆಯ ಗಾಳಗಳು

Published 8 ಮೇ 2024, 0:00 IST
Last Updated 8 ಮೇ 2024, 0:00 IST
ಅಕ್ಷರ ಗಾತ್ರ
ಜನರ ಆಸೆ ಹೆಚ್ಚಾದಂತೆ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವಂತೆ ಸೈಬರ್ ಕಳ್ಳರು ಕೂಡ ತಮ್ಮ ಶೈಲಿಯನ್ನು ಬದಲಾಯಿಸಿ, ಸರಳವಾದ ಕ್ರಮಗಳ ಮೂಲಕವೇ ಜನರನ್ನು ತಮ್ಮ ಗಾಳದಲ್ಲಿ ಸಿಲುಕಿಸಿಕೊಳ್ಳುತ್ತಿದ್ದಾರೆ.

ಇರುವ ಹಣವನ್ನು ದುಪ್ಪಟ್ಟುಗೊಳಿಸುವ ಅಥವಾ ಮತ್ತಷ್ಟು ಹಣ ಮಾಡುವ ದುರಾಸೆ ಮಾನವನನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ಎಂಬ ಅಂಶವನ್ನು ಸೈಬರ್ ಕಳ್ಳರಂತೂ ಯಥೇಚ್ಛವಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ಈ ಕುರಿತಾಗಿ ಎಷ್ಟೇ ಪ್ರಕರಣಗಳು ವರದಿಯಾಗುತ್ತಿದ್ದರೂ, ಜನರು ಮೋಸ ಹೋಗುವುದು ತಪ್ಪುತ್ತಿಲ್ಲ.

ಹಿಂದೆ ನೈಜೀರಿಯಾ ಮತ್ತು ಇತರ ದೇಶಗಳ ಸೈಬರ್ ಕ್ರಿಮಿನಲ್‌ಗಳ ಜಾಲ, ಚೀನಾದ ಆ್ಯಪ್‌ಗಳು ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದ್ದವು. ಈಗ ಪರಿಸ್ಥಿತಿ ಹಾಗಿಲ್ಲ. ಪ್ರತಿಯೊಬ್ಬನ ಕೈಗೂ ಇಂಟರ್‌ನೆಟ್‌, ತಂತ್ರಜ್ಞಾನವೂ ದೊರಕಿದ ಪರಿಣಾಮ, ಭಾರತದೊಳಗಿನಿಂದಲೇ ಸೈಬರ್ ಕಳ್ಳರ ಕಬಂಧ ಬಾಹುಗಳು ಅಂತರಜಾಲದಲ್ಲಿ ಚಾಚಿಕೊಂಡಿವೆ. ನಾವು ಎಷ್ಟೇ ಎಚ್ಚರ ವಹಿಸಿದರೂ, ಉಚಿತ, ಮತ್ತು ಇರುವ ಹಣ ದಿಢೀರ್ ದುಪ್ಪಟ್ಟು ಮಾಡಿಸಿಕೊಳ್ಳುವ ದುರಾಸೆಯ ಪರಿಣಾಮವಾಗಿ ಕಳೆದುಕೊಳ್ಳುವುದೇ ಹೆಚ್ಚು.

2023ರಲ್ಲಿ ಸೈಬರ್ ವಂಚನೆಯ ಸುಳಿಯಲ್ಲಿ ಸಿಲುಕಿದ ಕರ್ನಾಟಕದ ಜನರೇ ಕಳೆದುಕೊಂಡಿರುವ ಹಣದ ಮೊತ್ತ ₹ 465 ಕೋಟಿ ರೂಪಾಯಿಗೂ ಅಧಿಕ ಅಂತ ಸಿಐಡಿ ಅಧಿಕಾರಿಗಳು ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದರು. ಅಂದರೆ ದಿನಕ್ಕೆ ₹ 1.27 ಕೋಟಿ ಹಣವನ್ನು ಜನರು ಕಳೆದುಕೊಂಡಿದ್ದಾರೆ! ಅದರಲ್ಲಿಯೂ ಈ ವಂಚನೆಗೆ ತುತ್ತಾಗಿರುವವರಲ್ಲಿ ಸುಶಿಕ್ಷಿತರೇ ಹೆಚ್ಚು ಮಂದಿ ಎಂಬುದು ಆತಂಕದ ವಿಷಯವೂ ಹೌದು.

ಲಿಂಕ್ ಕ್ಲಿಕ್ ಮಾಡಿದಾಗ ಯಾವುದೋ ಕುತಂತ್ರಾಂಶ (ಮಾಲ್‌ವೇರ್) ನಮ್ಮ ಮೊಬೈಲ್ ಅಥವಾ ಕಂಪ್ಯೂಟರಿಗೆ ತನ್ನಿಂತಾನಾಗಿ ಡೌನ್‌ಲೋಡ್ ಆಗಿ ಇನ್‌ಸ್ಟಾಲ್ ಆಗಿ ನಮ್ಮ ಮಾಹಿತಿಯನ್ನೆಲ್ಲ ಕದಿಯುವ, ಕಂಪ್ಯೂಟರನ್ನೇ ಲಾಕ್ ಮಾಡುವ ತಂತ್ರ ಬಹುಶಃ ಹಳೆಯದಾಯಿತೇನೋ. ಈಗ ಹೊಸದಾದ, ಆದರೆ ಈಗ ತೀರಾ ಸರಳವಾಗಿ, ಕೇವಲ ಮೆಸೇಜ್ ಆ್ಯಪ್‌ಗಳ ಮೂಲಕವಾಗಿ ಜನರನ್ನು ಬಲೆಗೆ ಕೆಡವಲು ಸೈಬರ್ ಕಳ್ಳರು ಸಜ್ಜಾಗಿದ್ದಾರೆ.

ಗೊತ್ತಿದ್ದೂ ಬಲೆಗೆ ಬೀಳುವ ಕೆಲವು ವಿಧಾನಗಳು:

  • ಉಚಿತ: ಯಾರೇ ಆಗಲಿ, ಉಚಿತವಾಗಿ ಏನೋ ಕೊಡುತ್ತಿದ್ದಾರೆ ಎಂದಾದರೆ ಅಲ್ಲಿ ನಮಗೆ ಮೊದಲು ಸಂದೇಹ ಹುಟ್ಟಲೇಬೇಕು. ‘ಲಿಂಕ್ ಕ್ಲಿಕ್ ಮಾಡಿ ಫಾರ್ಮ್ ಭರ್ತಿ ಮಾಡಿದರೆ ವರ್ಷ ಪೂರ್ತಿ ಇಂಟರ್‌ನೆಟ್‌ ಸೌಕರ್ಯ, ಕಾರು, ಮೊಬೈಲ್ ಫೋನ್ ಉಚಿತ’ ಎಂಬಿತ್ಯಾದಿಯಾಗಿ ಮತ್ತು ‘ಟಾಟಾ ಅಥವಾ ರಿಲಯನ್ಸ್ ತಮ್ಮ ವಿಶೇಷ ಆಚರಣೆಯ ಪ್ರಯುಕ್ತ ಭರ್ಜರಿ ಕೊಡುಗೆ’ ಅಂತೆಲ್ಲ ಖೊಟ್ಟಿ ಸಂದೇಶಗಳು ವಾಟ್ಸ್ಆ್ಯಪ್ ಮೂಲಕ ಹರಿದಾಡುತ್ತಲೇ ಇರುತ್ತವೆ. ಈ ಉಚಿತಗಳ ಬಗ್ಗೆ ಎಚ್ಚರ ವಹಿಸದಿದ್ದರೆ ಬ್ಯಾಂಕ್ ಖಾತೆ ಖಾಲಿಯಾಗುವುದು ಖಚಿತ.

  • ಒಟಿಪಿ: ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಕೇಳಿ ವಂಚಕರು, ಹಲವು ವಿಧಾನಗಳ ಮೂಲಕ ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಉದಾಹರಣೆಗೆ, ‘ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗುವುದನ್ನು ತಡೆಯಬೇಕಿದ್ದರೆ, ಅಪ್‌ಡೇಟ್ ಮಾಡಲು ಲಿಂಕ್ ಕಳಿಸಿ, ಒಟಿಪಿ ಕೇಳುತ್ತಾರೆ. ನಿಮ್ಮ ಬ್ಯಾಂಕ್ ಖಾತೆಯೇ ಸ್ಥಗಿತವಾಗುತ್ತದೆ’ ಎಂದು ಹೆದರಿಸುತ್ತಾರೆ. ಪಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಿ; ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯ ರಿವಾರ್ಡ್ ಪಾಯಿಂಟ್‌ಗಳನ್ನು ನಗದೀಕರಿಸಿ ಅಥವಾ ನವೀಕರಿಸಿ; ನಿಮಗೆ ಬರುವ ಪಿಂಚಣಿ ಸ್ಥಗಿತವಾಗದಂತೆ ತಡೆಯಿರಿ; ಸಾವಿರಾರು ರೂಪಾಯಿ ಆದಾಯ ತೆರಿಗೆ ವಾಪಸ್ ಪಡೆಯಲು ಬ್ಯಾಂಕ್ ಖಾತೆ ಅಪ್‌ಡೇಟ್ ಮಾಡಿಕೊಳ್ಳಿ; ಆಧಾರ್ ಜೋಡಿಸಿ; ನಿಮಗೆ ಬರಬೇಕಿರುವ ಪಾರ್ಸೆಲ್ ಒಂದು ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದೆ, ಅದನ್ನು ಬಿಡಿಸಿಕೊಳ್ಳಿ- ಹೀಗೆಲ್ಲ ನಾನಾ ವಿಧಗಳಿರುತ್ತವೆ. ಅಂಥವರಿಗೆ ಒಟಿಪಿ ಕೊಟ್ಟರೆ ಕೆಟ್ಟೆವು!

ಕ್ಲಿಕ್ ಮಾಡಿ, ವಿವರ ತುಂಬಲು ಪ್ರೇರೇಪಿಸುವ ಇ-ಮೇಲ್‌ಗಳು ನಮ್ಮ ಬ್ಯಾಂಕ್‌ನ ಅಧಿಕೃತ ಜಾಲತಾಣದಿಂದಲೇ ಬಂದಂತಿರುತ್ತವೆ. ಕೂಲಂಕಷವಾಗಿ ಪರಿಶೀಲಿಸಿದಾಗಲಷ್ಟೇ ಅದರ ಡೊಮೇನ್ ವಿಳಾಸ ಅಥವಾ ಯುಆರ್‌ಎಲ್‌ನಲ್ಲಿ ಒಂದೋ ಎರಡೋ ಸಣ್ಣ ಅಕ್ಷರ ಬದಲಾವಣೆಗಳಿರುವುದು ತಿಳಿಯುತ್ತದೆ.

  • ಸಾಮಾಜಿಕ ತಾಣಗಳು: ಇತ್ತೀಚೆಗೆ ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕವೂ ಸೈಬರ್ ವಂಚಕರು ಸುಲಭವಾಗಿ ತಮ್ಮ ಜಾಲಕ್ಕೆ ಬೀಳುವವರಿಗಾಗಿ ಗಾಳ ಹಾಕಿಕೊಂಡಿರುತ್ತಾರೆ. ಇದರಲ್ಲಿ, ನಿಮ್ಮ ಸ್ನೇಹಿತರ ಹೆಸರಿನಲ್ಲೇ ನಕಲಿ ಖಾತೆ ತೆರೆದು (ಮತ್ತೆ ಕೆಲವರ ಅಕೌಂಟ್ ಹ್ಯಾಕ್ ಮಾಡಿ) ‘ನನ್ನ ಇಂದಿನ ಟ್ರಾನ್ಸಾಕ್ಷನ್ ಮಿತಿ ದಾಟಿದೆ’ಅಂತಲೋ, ತುರ್ತಾಗಿ ಹಣ ಬೇಕಿತ್ತು, ನನ್ನ ಬ್ಯಾಂಕ್ ಖಾತೆ ‘ಸ್ಟ್ರಕ್’ ಆಗಿದೆ, ಇವತ್ತೊಂದಿನ ಹಣ ಬೇಕಿತ್ತು ಅಂತಲೋ ನಮ್ಮಲ್ಲಿ ಹಣ ಕೇಳಿ, ನಾಳೆ ಬೆಳಿಗ್ಗೆಯೇ ವಾಪಸ್ ಮಾಡುತ್ತೇನೆ ಅಂತ ಪುಸಲಾಯಿಸಿ, ಹಣ ಕೀಳುವವರು ಹೆಚ್ಚಾಗಿದ್ದಾರೆ.

ಇತ್ತೀಚೆಗೆ ಸದ್ದು ಮಾಡುತ್ತಿರುವ ಮತ್ತೊಂದು ಜಾಲ ಎಂದರೆ, ನಿಮಗೆ ಫೆಡೆಕ್ಸ್ ಮೂಲಕ ಅಂತರರಾಷ್ಟ್ರೀಯ ಪಾರ್ಸೆಲ್ ಬಂದಿದೆ. ಅದು ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದೆ, ಅದನ್ನು ಬಿಡಿಸಲು ತಕ್ಷಣ ಇಂತಿಷ್ಟು ಹಣ ಕಳುಹಿಸಿ ಎಂದೋ, ಅಥವಾ ಪೊಲೀಸರು/ಕಸ್ಟಮ್ಸ್ ಇಲಾಖೆ ಅಂತ ಹೇಳಿಕೊಂಡವರು ಕರೆ ಮಾಡಿ, ನಿಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಇತ್ತು. ಅದನ್ನು ಬಿಡಿಸಿಕೊಳ್ಳಲು ಹಣ ಕೊಡಿ ಎಂದು ಬೆದರಿಸಿರುತ್ತಾರೆ. ಈ ಬಲೆಯಲ್ಲಿ ಸಿಲುಕಿ ಹಣ ಕಳೆದುಕೊಂಡವರೂ ಇದ್ದಾರೆ.

ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ವರದಿಯಾದ ಘಟನೆ. ಉದ್ಯಮಿಯೊಬ್ಬರು ದುಪ್ಪಟ್ಟು ಆಸೆಗೆ ಹೋಗಿ ಬರೋಬ್ಬರಿ ₹5.17 ಕೋಟಿ ಹಣವನ್ನು ಹಂತಹಂತವಾಗಿ ಕಳೆದುಕೊಂಡದ್ದು ವಾಟ್ಸ್ಆ್ಯಪ್, ಟೆಲಿಗ್ರಾಂ ಹಾಗೂ ಅಪರಿಚಿತ ಲಿಂಕ್‌ಗಳ ಮೂಲಕ. ಕಳೆದ ತಿಂಗಳು ಇದೇ ರೀತಿ ಬೆಂಗಳೂರಿನ ಮಹಿಳಾ ಉದ್ಯಮಿಯೊಬ್ಬರು ಕಳೆದುಕೊಂಡಿದ್ದು ₹2.7 ಕೋಟಿ! ಅದು ಆರಂಭವಾಗಿದ್ದು, ಯೂಟ್ಯೂಬ್ ವಿಡಿಯೊಗಳಿಗೆ ಲೈಕ್ ಒತ್ತಿ ಹಣ ಸಂಪಾದನೆ ಮಾಡಬಹುದೆಂಬ ಆಮಿಷದಿಂದ. ಮೊದಲು ಲೈಕ್ ಒತ್ತಿ, ಸ್ವಲ್ಪ ಹಣ ಸಂಪಾದನೆಯೂ ಆಗಿತ್ತು. ನಂತರ ಆ ಹಣವನ್ನು ದುಪ್ಪಟ್ಟು ಮಾಡಬೇಕಿದ್ದರೆ ಹೂಡಿಕೆ ಮಾಡಿ ಅಂತ ಅವರನ್ನು ಒಂದು ವಾಟ್ಸ್ಆ್ಯಪ್ ಗ್ರೂಪಿಗೆ, ಬಳಿಕ ಒಂದು ಟೆಲಿಗ್ರಾಂ ಗ್ರೂಪಿಗೆ ಸೇರಿಸಲಾಯಿತು. ಗ್ರೂಪಿನಲ್ಲಿರುವವರೆಲ್ಲರೂ ನಮ್ಮ ಹಣ ದುಪ್ಪಟ್ಟಾಯಿತು ಅಂತ ಆಗಾಗ್ಗೆ ಬಡ್ಡಿ ಸಮೇತ ಹಣ ಬಂದಿರುವ ದಾಖಲೆಯ ಸಂದೇಶ ಹಾಕುತ್ತಾ, ಹೊಸದಾಗಿ ಸೇರಿದವರಿಗೆ ಪ್ರೇರಣೆ ನೀಡುತ್ತಿದ್ದರು. ಅದರಂತೆ ಹಂತಹಂತವಾಗಿ ಸಾವಿರ, ಲಕ್ಷವಾಗಿ ಕೋಟಿ ಹೂಡಿಕೆ ಮಾಡಿದ ಬಳಿಕ ಅವರನ್ನು ಗ್ರೂಪಿಗೆ ಸೇರಿಸಿದವರು ನಾಪತ್ತೆ. ಅವರು ತಕ್ಷಣವೇ 1930 ನಂಬರಿಗೆ ಕರೆ ಮಾಡಿ ದೂರು ನೀಡಿದ ಕಾರಣ ₹ 1.7 ಕೋಟಿ ವಾಪಸ್ ಸಿಕ್ಕಿತು. ಎಲ್ಲವೂ ವಾಪಸ್ ಬರುವುದು ಖಚಿತವಿಲ್ಲ. ಸೈಬರ್ ವಂಚಕರು ಫೋನ್ ನಂಬರ್, ಬ್ಯಾಂಕ್ ಖಾತೆ ಮುಚ್ಚಿ ಪರಾರಿಯಾಗಿ ಬಿಟ್ಟಿರುತ್ತಾರೆ. ಜಾಡು ಹಿಡಿಯುವುದು ಕಷ್ಟ ಸಾಧ್ಯ.

ಏನು ಮಾಡಬೇಕು?:

ಒಟಿಪಿ ಇರುವುದು ನಮ್ಮ ಭದ್ರತೆಗೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ, ವೋಟರ್ ಐಡಿ - ಎಲ್ಲದಕ್ಕೂ ಲಿಂಕ್ ಆಗಿರುವ ನಮ್ಮ ಮೊಬೈಲ್ ಫೋನ್‌ಗೇ ಒಟಿಪಿ ಬರುತ್ತದೆ, ಹೀಗಾಗಿ ಇದು ಪಾಸ್‌ವರ್ಡ್ ಬಳಿಕದ ಎರಡನೇ ಸುರಕ್ಷಾ ಕವಚ. ಈ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಅದು ಕೇವಲ ನಮ್ಮ ಬಳಕೆಗಾಗಿ ಮಾತ್ರ ಇರುವಂಥದ್ದು.

ಸೈಬರ್ ಕ್ರೈಂ ವರದಿ ಮಾಡಲೆಂದೇ ಇರುವ ಸಹಾಯವಾಣಿ 1930ಕ್ಕೆ ತಕ್ಷಣ ಕರೆ ಮಾಡಿ, ಅದೃಷ್ಟವಿದ್ದರೆ ಅಲ್ಲಿಂದ ನೆರವು ಸಿಗಬಹುದು. ಅದಾಗದಿದ್ದರೆ ತಡ ಮಾಡದೆ ಸಮೀಪದ ಪೊಲೀಸ್ ಠಾಣೆಗೆ, ಲಭ್ಯವಿದ್ದರೆ ಸೈಬರ್ ಠಾಣೆಗೆ ಹೋಗಿ ದೂರು ಕೊಡಬೇಕು. ಬೇಗನೇ ದೂರು ದಾಖಲಿಸಿದರೆ, ಅಪರಾಧದ ಜಾಡು ಹಿಡಿಯುವುದು ಪೊಲೀಸರಿಗೆ ಸುಲಭ. ಮೊಬೈಲ್ / ಇಂಟರ್‌ನೆಟ್‌ / ಸೋಷಿಯಲ್ ಮೀಡಿಯಾ ಬಳಕೆ ಸುರಕ್ಷಿತವಾಗಿರಬೇಕಿದ್ದರೆ ಎಚ್ಚರ ಬೇಕೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT