ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸೇರಿ ಭಾರತದ 10 ನಗರಗಳಲ್ಲಿ ಗೂಗಲ್‌ ಸ್ಟ್ರೀಟ್ ವ್ಯೂ ಸೇವೆ ಮತ್ತೆ ಆರಂಭ

ಅಕ್ಷರ ಗಾತ್ರ

ನವದೆಹಲಿ: ಸ್ಥಳೀಯ ಕಂಪನಿಗಳೆರಡರ ಸಹಯೋಗದೊಂದಿಗೆ ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿ ಸ್ಟ್ರೀಟ್ ವ್ಯೂ ಸೇವೆಯನ್ನು ಗೂಗಲ್ ಬುಧವಾರದಿಂದ ಮತ್ತೆ ಆರಂಭಿಸಿದೆ.

ಜೆನೆಸಿಸ್ ಇಂಟರ್‌ನ್ಯಾಷನಲ್ ಹಾಗೂ ಟೆಕ್ ಮಹಿಂದ್ರಾ ಸಹಯೋಗದಲ್ಲಿ ಸ್ಟ್ರೀಟ್ ವ್ಯೂ ಸೇವೆ ಒದಗಿಸುತ್ತಿರುವುದಾಗಿ ಗೂಗಲ್ ಪ್ರಕಟಣೆ ತಿಳಿಸಿದೆ.

ರಸ್ತೆಗಳು ಮತ್ತು ಇತರ ಪ್ರದೇಶಗಳ ‘ಹೈ ಡೆಫಿನಿಷನ್’ ಚಿತ್ರಗಳನ್ನು ತೋರಿಸುವ ಸ್ಟ್ರೀಟ್ ವ್ಯೂ ಸೇವೆಯನ್ನು ಭದ್ರತಾ ಕಾರಣಗಳಿಗಾಗಿ ಈ ಹಿಂದೆ ಸರ್ಕಾರ ನಿಷೇಧಿಸಿತ್ತು.

‘ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಶಿಕ್, ವಡೋದರ, ಅಹ್ಮದ್ ನಗರ ಹಾಗೂ ಅಮೃತಸರ ಒಳಗೊಂಡಂತೆ ಭಾರತದ 1,50,000 ಕಿ.ಮೀ. ವ್ಯಾಪ್ತಿಯ ಪ್ರದೇಶಗಳ ಹೊಸ ಚಿತ್ರಣ ಮ್ಯಾಪ್‌ನಲ್ಲಿ ಲಭ್ಯವಾಗಲಿದೆ. ಸಹಭಾಗಿತ್ವ ಹೊಂದಿದ ಸ್ಥಳೀಯ ಸಂಸ್ಥೆಗಳು ಪರವಾನಗಿ ಪಡೆದಿರುವ ಚಿತ್ರಗಳು ಸ್ಟ್ರೀಟ್‌ ವ್ಯೂನಲ್ಲಿ ಕಾಣಿಸಲಿವೆ’ ಎಂದು ಪ್ರಕಟಣೆ ತಿಳಿಸಿದೆ.

ಈ ಯೋಜನೆಯನ್ನು 2022ರ ಅಂತ್ಯದ ವೇಳೆಗೆ 50 ನಗರಗಳಿಗೆ ವಿಸ್ತರಿಸಲು ಗೂಗಲ್, ಜೆನೆಸಿಸ್ ಇಂಟರ್‌ನ್ಯಾಷನಲ್ ಹಾಗೂ ಟೆಕ್ ಮಹಿಂದ್ರಾ ಚಿಂತನೆ ನಡೆಸುತ್ತಿವೆ.

ಸ್ಥಳೀಯ ಸಹಭಾಗಿತ್ವದೊಂದಿಗೆ ಗೂಗಲ್ ಸ್ಟ್ರೀಟ್‌ ವ್ಯೂ ಸೇವೆ ನೀಡುತ್ತಿರುವುದು ವಿಶ್ವದಲ್ಲೇ ಮೊದಲಾಗಿದೆ.

ಬೆಂಗಳೂರಿನಲ್ಲಿ ವೇಗದ ಮಿತಿ ಮಾಹಿತಿಯೂ ಲಭ್ಯ

ಸಂಚಾರ ವಿಭಾಗದಿಂದ ಪಡೆದ ದತ್ತಾಂಶಗಳ ಆಧಾರದಲ್ಲಿ ವೇಗದ ಮಿತಿಯ ಮಾಹಿತಿ ನೀಡುವ ಸೇವೆಯನ್ನೂ ಗೂಗಲ್ ಆರಂಭಿಸಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರ ಜತೆ ಸಹಭಾಗಿತ್ವ ಹೊಂದುವುದಾಗಿ ಗೂಗಲ್ ಹೇಳಿದೆ.

ಗೂಗಲ್ ಸ್ಟ್ರೀಟ್‌ ವ್ಯೂ ಎಂದರೆ...

ರಸ್ತೆ, ಪ್ರವಾಸಿ ಸ್ಥಳ, ಬೆಟ್ಟ–ಗುಡ್ಡ, ನದಿ ಇತ್ಯಾದಿಗಳ 360 ಡಿಗ್ರಿ ಕೋನದ ‘ಹೈ ಡೆಫಿನಿಷನ್’ ಚಿತ್ರಗಳನ್ನು ಗೂಗಲ್ ಸ್ಟ್ರೀಟ್ ವ್ಯೂ ಬಳಕೆದಾರರಿಗೆ ತೋರಿಸುತ್ತದೆ. ಇದು ನಿರ್ದಿಷ್ಟ ಸ್ಥಳದ 360 ಡಿಗ್ರಿ ಪನೋರಮಿಕ್ ಹಾಗೂ ಸ್ಟ್ರೀಟ್ ಲೆವೆಲ್ 3ಡಿ ಚಿತ್ರಗಳನ್ನು ಒಳಗೊಂಡಿರುತ್ತದೆ. ಈ ಸೇವೆ 2007ರಲ್ಲಿ ಅಮೆರಿಕದ ಕೆಲವು ನಗರಗಳಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿತ್ತು.

ಬೆಂಗಳೂರಿನಲ್ಲಿ 2011ರಲ್ಲೇ ಲಭ್ಯವಿದ್ದ ಸ್ಟ್ರೀಟ್‌ ವ್ಯೂ

2011ರಲ್ಲಿ ಪೈಲಟ್ ಯೋಜನೆ ರೂಪದಲ್ಲಿ ಬೆಂಗಳೂರಿನಲ್ಲಿ ಸ್ಟ್ರೀಟ್‌ ವ್ಯೂ ಸೇವೆ ಲಭ್ಯವಿತ್ತು. 2016ರಲ್ಲಿ ಭದ್ರತಾ ಕಾರಣಗಳಿಗಾಗಿ ಇದನ್ನು ಸರ್ಕಾರ ನಿಷೇಧಿಸಿತ್ತು. ಇದೀಗ, ಗೂಗಲ್ ಭಾರತೀಯ ಕಂಪನಿಗಳ ಜೊತೆಗೆ ಸೇರಿಕೊಂಡು ಸ್ಟ್ರೀಟ್ ವ್ಯೂ ಲಭ್ಯವಾಗುವಂತೆ ಮಾಡಿದೆ.

ನೋಡುವುದು ಹೇಗೆ?

ಗೂಗಲ್ ಮ್ಯಾಪ್‌ನಲ್ಲಿರುವ ಪೆಗ್‌ಮ್ಯಾನ್ ಅನ್ನು ಕ್ಲಿಕ್ ಮಾಡಿ ಆ ಬಳಿಕ ನೀಲಿ ರೇಖೆಗಳು ಅಥವಾ ಬಿಂದುಗಳು ಕಾಣಿಸುವ ಜಾಗದಲ್ಲಿ ಕ್ಲಿಕ್‌ ಮಾಡಿದರೆ ಸ್ಟ್ರೀಟ್ ವ್ಯೂ ಕಾಣಿಸುತ್ತದೆ. ಭದ್ರತಾ ಕಳವಳ ಇರುವ ಪ್ರದೇಶಗಳನ್ನು ಮಬ್ಬಾಗಿಸಿ ತೋರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT