ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾರಿ ಯಾವುದಯ್ಯ ಜಿಪಿಎಸ್ಸು... GPS ಹಿಂದಿದೆ ರೋಚಕ ಇತಿಹಾಸ

Last Updated 14 ಡಿಸೆಂಬರ್ 2021, 23:00 IST
ಅಕ್ಷರ ಗಾತ್ರ

(ಅಮೆರಿಕದವರು ಸಿಪಾಯಿಪಡೆಗೆ ಎಂದಿದ್ದ ಜಿಪಿಎಸ್‌ನ ತಾಂತ್ರಿಕ ಕಾರ್ಯವಿಧಾನಗಳನ್ನು ಮಾಮೂಲಿ ವಿಮಾನಗಳಿಗೂ ಬಿಟ್ಟುಕೊಟ್ಟರು. ಮುಂದೆ ಅದು ಜನಸಾಮಾನ್ಯರ ಬಳಕೆಗೂ ಸಿಗುವಂತಾಯಿತು)

‘ಓ ಇಂಥಲ್ಲಿಗೆ ಹೋಗುವುದು ಹೇಗೆ’ ಅಂತ ಯಾರನ್ನಾದರೂ ನಿಲ್ಲಿಸಿ ಕೇಳಿದರೆ, ‘ಗೊತ್ತಿಲ್ಲ ಸಾರ್’ ಎಂಬ ಮಿತವಚನದಿಂದ ಹಿಡಿದು, ‘ಒಂದ್ ಕೆಲ್ಸ ಮಾಡಿ, ಸೀದಾ ಹೋಗಿ, ಡೆಡ್ ಎಂಡಲ್ಲಿ ಲೆಫ್ಟ್ ತಗೊಳ್ಳಿ... ’ ಎಂದು ಮುಂತಾಗಿ ಸಾಗುವ ಹಿತವಚನದವರೆಗೆ ತರಹೇವಾರಿ ಉತ್ತರಗಳು ಸಿಕ್ಕುತ್ತಿದ್ದ ಕಾಲ ಹೋಗಿ, ದಾರಿ ಕಾಣದಾದವರ ಪಾಲಿಗೆ ವರವಾಗಿ ಜಿಪಿಎಸ್ಸೆಂಬ ಮಾಯೆ ಬಂದು ವರ್ಷಗಳೇ ಸರಿದಿವೆ. ಈ ತಂತ್ರಜ್ಞಾನದ ಜನ್ಮವೃತ್ತಾಂತವನ್ನು, ಅದು ಬೆಳೆದು ಬಂದ ಪರಿಯನ್ನು ಸ್ವಲ್ಪ ಕೆದಕಿದರೆ ಸ್ವಾರಸ್ಯಕರವಾದ ವಿಷಯಗಳು ಸಿಗುತ್ತವೆ.

1957ರಲ್ಲಿ ರಷ್ಯಾದ ವಿಜ್ಞಾನಿಗಳು ಭೂಮಿಯನ್ನು ಪೂರ್ತಿ ಸುತ್ತಬಲ್ಲ ಉಪಗ್ರಹವನ್ನು ಹಾರಿಸಿದಾಗ, ಅದರ ಚಲನೆಯನ್ನು ಅಧ್ಯಯನ ಮಾಡಿದ ಅಮೆರಿಕದ ವಿಜ್ಞಾನಿಗಳ ತಲೆಯಲ್ಲಿ ಈ ಜಿಪಿಎಸ್ಸಿನ ಉಪಾಯ ನಿಧಾನಕ್ಕೆ ಮೊಳಕೆಯೊಡೆದದ್ದು. ನಾವೆಲ್ಲಿದ್ದೇವೆ ಎಂದು ಈ ತಂತ್ರಜ್ಞಾನಕ್ಕೆ ಗೊತ್ತಾಗುವುದು ಹೇಗೆ ಎಂಬುದರ ಕಥೆಯೂ ಅಲ್ಲೇ ಇದೆ. ಅದನ್ನೊಂದಿಷ್ಟು ನೋಡೋಣ.

ಈಗ, ಒಬ್ಬರು, ‘ನಾನು ಮಂಗಳೂರಿನಿಂದ ಐವತ್ತು ಕಿಲೋಮೀಟರ್‌ ದೂರದಲ್ಲಿದ್ದೇನೆ,’ ಎಂದು ತಿಳಿಸಿದರೆ, ಅವರು ಎಲ್ಲಿದ್ದಾರೆ ಎಂಬುದನ್ನು ಹೇಳುವುದು ಕಷ್ಟ. ಅದೇ ಆಸಾಮಿ, ‘ಇಲ್ಲಿಂದ ಉಡುಪಿಗೆ ಹತ್ತು ಕಿಲೋಮೀಟರ್’ ಅಂತ ಮಾಹಿತಿ ಸೇರಿಸಿದರೆ, ನಮಗೆ ಅವರು ಎಲ್ಲಿದ್ದಾರೆ ಎಂಬ ಕಲ್ಪನೆ ಬರತೊಡಗುತ್ತದೆ. ಅದೇ ವ್ಯಕ್ತಿ, ‘ನಾನು ಬೆಂಗಳೂರಿನಿಂದ 400 ಕಿಲೋಮೀಟರ್‌ ದೂರದಲ್ಲಿಯೂ, ಮೂಡಿಗೆರೆಯಿಂದ ನೂರೈವತ್ತು ಕಿಲೋಮೀಟರ್‌ ಆಚೆಗೂ ಇದ್ದೇನೆ’ ಅಂತ ಹೇಳಿಬಿಟ್ಟರೆ, ಅವರು ಎಲ್ಲಿದ್ದಾರೆಂಬ ಗುಟ್ಟನ್ನು ರಟ್ಟು ಮಾಡುವುದಕ್ಕೆ ಈ ನಾಲ್ಕು ವಿವರಗಳು ಸಾಕು. ಈ ನಾಲ್ಕು ಕಡೆಗಳಿಂದ ಅಷ್ಟಷ್ಟು ದೂರ ಇರುವ ಸ್ಥಳ ಯಾವುದು ಅಂತ ಒಂದು ಪೆನ್ನು ಹಿಡಿದು ನಕಾಶೆಯಲ್ಲಿ ಗೆರೆಗಳನ್ನೆಳೆದರೆ, ವಿಷಯ ಗೊತ್ತಾಗಿಬಿಡುತ್ತದೆ. ಜಿಪಿಎಸ್‌ ತಂತ್ರಜ್ಞಾನ ಮಾಡುವುದೂ ಇಂಥದ್ದೇ ಯುಕ್ತಿಯ ಕೆಲಸ. ಭೂಮಿಯಿಂದ ಸುಮಾರು ಇಪ್ಪತ್ತು ಸಾವಿರ ಕಿಲೋಮಿಟರ್‌ಗಳಷ್ಟು ಎತ್ತರದಲ್ಲಿ ಸುತ್ತುತ್ತಿರುವ ಎರಡು ಡಜನ್ ಉಪಗ್ರಹಗಳ ಜೊತೆ ನಿಮ್ಮ ‘ಸ್ಮಾರ್ಟ್‌ ಫೋನ್‌’ಗಳಲ್ಲಿ ಇರುವ ಜಿಪಿಎಸ್‌ ರಿಸೀವರ್‌, ಹೀಗೆ ಮಾತಾಡಿಕೊಂಡರೆ ಆಯ್ತು. ನಾಲ್ಕು ಉಪಗ್ರಹಗಳ ಜೊತೆ, ‘ನೀವೆಲ್ಲಿದ್ದೀರಿ’ ಅಂತ ಮಾತಾಡಿಕೊಂಡರೆ, ನಿಮ್ಮ ಜಿಪಿಎಸ್‌ ರಿಸೀವರಿಗೆ ‘ತಾನೆಲ್ಲಿದ್ದೇನೆ’ ಅಂತಲೂ ಲೆಕ್ಕ ಹಾಕಲು ಸಾಧ್ಯ; ಒಂದಷ್ಟು ಗಣಿತಶಾಸ್ತ್ರವೂ ಭೂಗೋಳಶಾಸ್ತ್ರವೂ ಭೌತಶಾಸ್ತ್ರದ ಒಂದಷ್ಟು ನಿಯಮಗಳೂ ಗೊತ್ತಿದ್ದರೆ ಆಯಿತು.

ಅಮೆರಿಕದವರು ಇದನ್ನು ತಯಾರಿಸಿದ್ದು ಸೈನ್ಯದ ಬಳಕೆಗೆ. ಯುದ್ಧವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಇವುಗಳಿಗೆಲ್ಲ ‘ತಾನೆಲ್ಲಿದ್ದೇನೆ’ ಅಂತ ಗೊತ್ತಾಗಲಿಕ್ಕೆ ‘ಡಿಪಾರ್ಟ್‌ಮೆಂಟ್‌ ಆಫ್‌ ಡಿಫೆನ್ಸ್‌’ನವರು ಈ ತಂತ್ರಜ್ಞಾನಕ್ಕೆ ರಾಶಿ ರಾಶಿ ದುಡ್ಡು ಸುರಿದದ್ದು. ಈಗಲೂ ವರ್ಷಕ್ಕೆ ನೂರಿನ್ನೂರು ಕೋಟಿ ಡಾಲರ್‌ ಸುರಿದು ಅದರ ಉಸ್ತುವಾರಿ ನೋಡಿಕೊಳ್ಳುವುದು ಅಮೆರಿಕದ ಸೇನೆಯೇ. ಹೀಗೆಂದು ಜಿಪಿಎಸ್ ಸಂಕೇತಗಳನ್ನು ಬಳಸಲು ಬೇರೆ ದೇಶಗಳಿಗೆ ವರ್ಷಕ್ಕಿಷ್ಟು ಅಂತ ಚಂದಾ ಶುಲ್ಕವೇನೂ ಇಲ್ಲ. ಇದರ ಹಿಂದಿರುವುದು 1983ರಲ್ಲಿ ನಡೆದೊಂದು ಕಥೆ.

ಆದದ್ದಿಷ್ಟು: ಕೊರಿಯನ್ ಏರ್‌ಲೈನ್ಸ್‌ನ ವಿಮಾನವೊಂದರ ಗಣಕಯಂತ್ರಗಳ ಲೆಕ್ಕಾಚಾರದಲ್ಲಿ ಏನೋ ಏರುಪೇರಾಗಿ, ಆ ಸ್ಖಾಲಿತ್ಯದ ಫಲವಾಗಿ ಆ ವಿಮಾನ ರಷ್ಯಾದ ವಿಮಾನಯಾನ ಪ್ರದೇಶಕ್ಕೆ ನುಗ್ಗಿತು, ಮೊದಲೇ ಶೀತಲಸಮರದ ಕೇಡುಗಾಲ, ರಷ್ಯನ್ನರು ಬಿಡುತ್ತಾರೆಯೇ? ಅದನ್ನು ಯಾವುದೋ ಗೂಢಚರ್ಯೆ ಮಾಡಲಿಕ್ಕೆ ಬಂದ ವಿಮಾನ ಅಂತ ತಪ್ಪಾಗಿ ತಿಳಿದು ಅದಕ್ಕೆ ಗುರಿಯಿಟ್ಟು ಕ್ಷಿಪಣಿಯನ್ನು ಹಾರಿಸಿಯೇ ಬಿಟ್ಟಿತು ರಷ್ಯಾ. ಬಿಲ್ಗಾರನು ಎಚ್ಚ ಬಾಣದಂತೆ ಅದು ಆ ವಿಮಾನವನ್ನು ಹೊಡೆದುರುಳಿಸಿತು. ಇಷ್ಟಾದ ಮೇಲೆ, ಈ ವಿಮಾನಗಳು ತಪ್ಪಿಯೂ ಆ ಕಡೆ ಸುಳಿಯುವುದು ಬೇಡ ಅಂತ, ಅಮೆರಿಕದವರು ಸಿಪಾಯಿಪಡೆಗೆ ಅಂತಿದ್ದ ಜಿಪಿಎಸ್‌ನ ತಾಂತ್ರಿಕ ಕಾರ್ಯವಿಧಾನಗಳನ್ನು ಮಾಮೂಲಿ ವಿಮಾನಗಳಿಗೂ ಬಿಟ್ಟುಕೊಟ್ಟರು. ಮುಂದೆ ಅದು ಜನಸಾಮಾನ್ಯರ ಬಳಕೆಗೂ ಸಿಗುವಂತಾಯಿತು.

ಆದರೂ ತೊಂಬತ್ತರ ದಶಕದ ಜಿಪಿಎಸ್‌ಗಳು ಸ್ವಲ್ಪ ಎಡವಟ್ಟು ಮಾಡುತ್ತಿದ್ದವು; ‘ನಾಲ್ಕನೇ ಅಡ್ಡರಸ್ತೆಯ ಗೆಳೆಯನ ಮನೆಗೆ ಹೊರಟರೆ, ಎಂಟನೇ ಮುಖ್ಯರಸ್ತೆಯಲ್ಲಿರುವ ಮುಸುಡಿ ಕಂಡರಾಗದವನ ಮನೆಗೆ ಕರೆದುಕೊಂಡು ಹೋಗುತ್ತದೆ, ಇಲ್ಲಿರುವ ಇಡ್ಲಿ ಹೋಟೆಲ್ಲಿಗೆ ಮುಖ ಮಾಡಿದರೆ ಈ ಜಿಪಿಎಸ್ಸು ಅಲ್ಲಿರುವ ಬಿರಿಯಾನಿ ಅಡ್ಡಾದ ಕಡೆಗೆ ಎಳೆದುಕೊಂಡು ಹೋಗುತ್ತದೆ’ ಎಂಬಂತಿದ್ದವು ಆ ಕಾಲದ ಜಿಪಿಎಸ್ ಉಪಕರಣಗಳು. ಉಪಗ್ರಹಗಳೇನೋ ಆಗಲೂ ಇದ್ದವು, ತಂತ್ರಜ್ಞಾನವೂ ಇತ್ತು, ಆದರೂ ಯಾಕೆ ಹೀಗೆ ಎಂಬುದಕ್ಕೆ ಮತ್ತೊಂದೇ ಕಥೆಯಿದೆ. ಹೇಳಿಕೇಳಿ ಇದೊಂದು ಮಿಲಿಟರಿಗಾಗಿ ತಯಾರಾದ ತಂತ್ರ, ಹೀಗಾಗಿ ಇದೇನಾದರೂ ದುರುಪಯೋಗವಾದರೆ ಎಂಬ ಚಿಂತೆ ಸೈನ್ಯದವರಿಗೆ ಇದ್ದೇ ಇತ್ತು. ‘ನಮ್ಮ ಯುದ್ಧವಿಮಾನಗಳು, ನೌಕೆಗಳು ಇಂಥಲ್ಲೇ ಇವೆ ಅಂತ ಈ ಹಾಳು ಜಿಪಿಎಸ್ಸು ನಿಷ್ಕೃಷ್ಟವಾಗಿ ಬೆರಳೆತ್ತಿ ತೋರಿಸಿಬಿಟ್ಟರೆ, ಅವರೆಡೆಗೆ ತುಪಾಕಿ ಹಾರಿಸಿ ಘಾತಿಸಲಿಕ್ಕೆ ಬೆರಳು ತುರಿಸುತ್ತ ಕೂತಿರುವ ಶತ್ರುಪಡೆಯ ಕೈಗೆ ಕೋಲು ಕೊಟ್ಟು ಹೊಡೆಸಿಕೊಂಡ ಹಾಗಾಗುತ್ತದೆ, ‘ನಾವಿಲ್ಲಿದ್ದೇವೆ’ ಅಂತ ಹೇಳಿದರೆ ಬಂದು ಹೊಡೆಯುವವರಿಗೆ ಆಹ್ವಾನಪತ್ರಿಕೆ ಕೊಟ್ಟುಬಂದ ಹಾಗಾಗಲಿಕ್ಕಿಲ್ಲವ’ ಎಂಬ ಚಿಂತೆ ಅಮೆರಿಕದ ಸೈನ್ಯದ ತಲೆ ಹೊಕ್ಕಿತು. ಹೀಗಾಗಿ ಉಪಗ್ರಹಗಳಿಂದ ಬರುವ ಸಂಕೇತಗಳಲ್ಲಿ ಅಮೆರಿಕದವರೇ ಬೇಕೆಂತಲೇ ಸ್ವಲ್ಪ ತಪ್ಪು ಬೆರೆಸಿ ಸಾಧನಗಳ ಲೆಕ್ಕದಲ್ಲಿ ಒಂದಷ್ಟು ದೋಷ ಬರುವ ಹಾಗೆ ನೋಡಿಕೊಂಡರು! ಇದನ್ನವರು ಸರಿ ಮಾಡಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆಯಷ್ಟೇ. ಹೀಗೆ, ವಿಜ್ಞಾನದ ಹಿಂದೆ ಮುಂದೆ ಇರುವ ವಿಜ್ಞಾನೇತರ ಪ್ರೇರಣೆ–ಪ್ರಚೋದನೆಗಳದ್ದೇ ಒಂದು ದೊಡ್ಡ ಕಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT