ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಹುಡುಗನ ಹೈಬ್ರಿಡ್ ಬೈಕ್

Last Updated 30 ಜನವರಿ 2019, 19:30 IST
ಅಕ್ಷರ ಗಾತ್ರ

ತುಂಡಾದ ವೈರ್‌, ಹಾಳಾದ ಶೆಲ್‌ಗಳು, ಕಟ್ ಆಗಿರುವ ಚೈನ್‌, ಹಳೆಯ ‍ಪ್ಲಾಸ್ಟಿಕ್‌ ಬಾಟಲ್‌, ಕೆಟ್ಟು ಹೋದ ಹಳೆ ರೇಡಿಯೊ, ಬಳಸಿ ಬಿಸಾಕಿದ ಟೈರ್‌, ಹಳೆ ಗುಜುರಿ ವಸ್ತುಗಳು, ಕಿತ್ತುಹೋದ ಇಂಡಿಕೇಟರ್ಸ್‌– ಇವು ಅಜಯಕುಮಾರ ಬಂಕಲಗಿಯ ಇಷ್ಟದ ವಸ್ತುಗಳು. ಇಂಥವನ್ನೆಲ್ಲ ಬಳಸಿಕೊಂಡು ವಿವಿಧ ಮಾದರಿಗಳನ್ನು ತಯಾರಿಸುವಲ್ಲಿ ನಿಸ್ಸೀಮ. ಈಗ ಇಂಥದ್ದೇ ‘ತ್ಯಾಜ್ಯ’ಗಳನ್ನು ಬಳಸಿಕೊಂಡು ಹೈಬ್ರಿಡ್‌ ಬೈಕ್‌ ತಯಾರಿಸಿದ್ದಾರೆ ಅಜಯ.

ಇವರು ಕಲಬುರ್ಗಿ ಜಿಲ್ಲೆಯ ಚಿತ್ತಾಪುರದವರು. ಸದ್ಯ ಕಲಬುರ್ಗಿಯ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಎಲೆಕ್ಟ್ರಾನಿಕ್ಸ್‌ 4ನೇ ಸೆಮಿಸ್ಟರ್‌ ವಿದ್ಯಾರ್ಥಿ. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕ. ನಿತ್ಯ ಏನಾದರೊಂದು ಹೊಸ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ತುಡಿತ. ಪ್ರತಿ ಕೆಲಸಕ್ಕೂ ಅಜ್ಜ ಮಾಜಿ ಸೈನಿಕ ಸಿದ್ರಾಮಪ್ಪನವರ ಸಾಥ್‌ .

‘ಊರಿಗೆ ಬಂದಾಗೊಮ್ಮೆ ಹಣ ಕೊಟ್ಟು ಹೋಗುತ್ತಾರೆ. ಅದೇ ಹಣ ಬಳಸಿ ನನ್ನ ಮಾದರಿಗಳಿಗೆ ಬೇಕಾಗುವ ವಸ್ತುಗಳನ್ನು ಖರೀದಿಸುತ್ತೇನೆ. ತೀರಾ ಅವಶ್ಯವಿರುವ ವಸ್ತುಗಳನ್ನು ಮಾತ್ರ ಕೊಳ್ಳುತ್ತೇನೆ. ಇನ್ನುಳಿದಂತೆ ಮನೆಯಲ್ಲಿ ಸಿಗುವ ಹಳೆ ವಸ್ತುಗಳನ್ನೇ ಬಳಸಿಕೊಳ್ಳುತ್ತೇನೆ’ ಎಂದು ಮುಗುಳುನಗೆ ಬೀರುತ್ತಾರೆ ಅಜಯಕುಮಾರ.

ಮನೆ ಮೇಲಿರುವ ಪುಟ್ಟ ಜಾಗವೇ ಇವರ ವರ್ಕ್‌ಷಾಪ್ ಅಡ್ಡ. ಹಗಲು ಸೂರ್ಯನ ಬೆಳಕು, ರಾತ್ರಿ ತಾನೇ ತಯಾರಿಸಿದ ಎಲ್‌ಇಡಿ ಲೈಟ್‌ನ ಬೆಳಕು. ಈ ಬೆಳಕಿನಲ್ಲೇ ತನ್ನೆಲ್ಲ ಚಟುವಟಿಕೆಗಳನ್ನು ಮಾಡುತ್ತಾರೆ. ಇವರು ಅಪ್ಪ ಬಳಸುತ್ತಿದ್ದ 24 ವರ್ಷದ ಹಳೆ ಸೈಕಲ್ಲಿಗೆ ಹೊಸ ಸ್ಪರ್ಶ ನೀಡಿದ್ದಾರೆ. ಅಪ್ಪನ ಸೈಕಲ್ ಈಗ ಹೈಬ್ರಿಡ್‌ ಬೈಕ್‌ ಆಗಿದೆ. ನೋಡಲು ಸೈಕಲ್‌ನಂತೆ ಇದ್ದರೂ ಇದು ಬೈಕ್‌ನಂತೆ ಓಡುತ್ತೆ. 750 ಎಂ.ಎಲ್‌ ಪೆಟ್ರೋಲ್‌, 5–6 ತಾಸು ಬ್ಯಾಟರಿ ಚಾರ್ಜ್‌. ಇವರೆಡರ ಮೇಲೆ 110 ಕಿ.ಮೀ ವರೆಗೆ ಚಲಿಸಬಲ್ಲ ಸಾಮರ್ಥ್ಯವಿದೆ ಈ ಸೈಕಲ್‌ಗೆ. ಜೊತೆಗೆ ಪೆಡಲಿಂಗ್‌ ವ್ಯವಸ್ಥೆಯೂ ಇದೆ.

‘ಇದು ಹೊಸ ಪರಿಕಲ್ಪನೆಯೇನಲ್ಲ. ಆದರೆ, 100 ಕಿ.ಮೀ ನಿಂದ 110 ಕಿ.ಮೀ ವರೆಗೆ ಚಲಿಸಬಲ್ಲ ಸಾಮರ್ಥ್ಯದ ಬೈಕ್ ತಯಾರಿಸಿರುವುದು ಹೊಸದು. ‘ಪೆಡಲ್‌ ತುಳಿಯಲು ಶಕ್ತಿ ಇರುವವರೆಗೆ ಪೆಡಲು ತುಳಿಯುವುದು, ಕಾಲು ನೋವು ಬಂದಾಗ ಎಲೆಕ್ಟ್ರಿಕಲ್ ಶಕ್ತಿಯ ಮೇಲೆ ಬ್ಯಾಟರಿ ಬಳಸಿ ಓಡಿಸುವುದು. ಬ್ಯಾಟರಿ ಪವರ್ ಖಾಲಿಯಾದಾಗ ಫೋರ್ ಸ್ಟ್ರೋಕ್ ಎಂಜಿನ್ ಬಳಸುವುದು. ಫೋರ್ ಸ್ಟ್ರೋಕ್ ಎಂಜಿನ ಬಳಸುತ್ತಿರುವಾಗ ಬ್ಯಾಟರಿ ಪುನಃ ಚಾರ್ಜ್ ಆಗಲು ಆರಂಭಿಸುತ್ತದೆ. ಈ ತರಹದಲ್ಲಿ ಪೆಟ್ರೋಲ್‌ ಎಂಜಿನ್‌ ಚಾಲಿತ ಬೈಕ್ ಓಡಿಸಬಹುದು. ಪೆಟ್ರೋಲ್‌ ಖಾಲಿಯಾದಾಗ ಚಾರ್ಜೆಬಲ್‌ ಬ್ಯಾಟರಿ ಮೂಲಕ ಮತ್ತೆ ಓಡಿಸಬಹುದು. ಒಟ್ಟಾರೆ ಈ ಮೂರರ ಸಾಂಗತ್ಯದಲ್ಲಿ 110 ಕಿ.ಮೀವರೆಗೆ ಈ ಹೈಬ್ರಿಡ್‌ ಬೈಕ್‌ ಓಡಿಸಬಹುದು’ ಎನ್ನುತ್ತಾರೆ ಅಜಯ್‌.

250 ವಾಟ್‌ ಹಾಗೂ 24 ವೋಲ್ಟ್‌ ಹೊಂದಿದ ಒಂದು ಗೇರ್‌ ಮೋಟಾರ್‌ಗೆ 12–12 ವೊಲ್ಟ್ ಲಿಥಿಯಂ ಎರಡು ವಿದ್ಯುತ್‌ ಚಾಲಿತ್‌ ಬ್ಯಾಟರಿ ಜೋಡಿಸಿದ್ದಾರೆ. ಜತೆಗೆ ಬ್ಯಾಟರಿಯ ಚಾರ್ಜ್‌ ಲೆವೆಲ್‌ ಪರಿಶೀಲಿಸಲು ಬ್ಯಾಟರಿ ಲೆವೆಲ್‌ ಇಂಡಿಕೇಟರ್ಸ್‌ ಕೂಡ ಅಳವಡಿಸಿದ್ದಾರೆ. ಇದರಿಂದ ಬ್ಯಾಟರಿ ಚಾರ್ಜ್‌ ಕಡಿಮೆ ಇದ್ದಾಗ ಸೂಚನೆ ನೀಡುತ್ತದೆ. ಒಂದು ಡೈನಮೋ ಮತ್ತು ಪವರ್‌ ಕಂಟ್ರೋಲರ್‌ ಸಪ್ಲೈಯರ್‌ ಅಳವಡಿಸಿದ್ದಾರೆ.

ಬ್ರೇಕ್‌ಗಳ ವಿಷಯಕ್ಕೆ ಬಂದರೆ ಸ್ಮಾರ್ಟ್‌ ಬ್ರೇಕ್‌ ಸಿಸ್ಟಮ್‌ ಕೂಡ ಇದೆ. ಎಲೆಕ್ಟ್ರಿಕಲ್‌ ಎಕ್ಸಿಲೇಟರ್‌ ವ್ಯವಸ್ಥೆ ಇದೆ. ಫೋರ್‌ಸ್ಟ್ರೋಕ್‌ ಎಂಜಿನ್‌ ಬಳಸಿದ್ದಾರೆ. ಜೊತೆಗೆ ಚೈನ್‌ ಸ್ಪಾಕೆಟ್‌ ಬಳಸುವ ಮೂಲಕ ಸರಾಗ ಪಯಣಕ್ಕೆ ಅನುಕೂಲ ಮಾಡಿದ್ದಾನೆ. ದಿನವೊಂದಕ್ಕೆ 5–6 ತಾಸು ಚಾರ್ಜು ಮಾಡುವುದರಿಂದ ಕನಿಷ್ಠ 42ಕಿ.ಮೀ ರಿಂದ 45 ಕಿ.ಮೀ ವರೆಗೆ ಪ್ರಯಾಣಿಸಬಹುದು.‌

ಸ್ಮಾರ್ಟ್‌ಫೋನ್‌ ಕಂಟ್ರೋಲ್‌

ಹೈಬ್ರಿಡ್‌ ಬೈಕ್‌ನ ಮತ್ತೊಂದು ವಿಶೇಷತೆಯೆಂದರೆ ಸ್ಮಾರ್ಟ್‌ಫೋನ್‌ ಕಂಟ್ರೋಲಿಂಗ್‌ ವ್ಯವಸ್ಥೆ. ಇದರ ಮೂಲಕ ಬೈಕ್‌ ಅನ್ನು ಲಾಕ್‌ ಮಾಡುವುದಷ್ಟೇ ಅಲ್ಲದೇ ಈ ಸ್ಮಾರ್ಟ್‌ ಫೋನ್‌ ಕಂಟ್ರೋರಲ್‌ ಮೂಲಕ ಒಮ್ಮೆ ಲಾಕ್‌ ಮಾಡಿದರೆ ಪುನಃ ಆ ಮೊಬೈಲ್‌ ಮೂಲಕ ಮಾತ್ರ ಅನ್‌ಲಾಕ್‌ ಮಾಡಬಹುದು. ಇದರಿಂದ ಬೈಕ್‌ ರಕ್ಷಣೆ ಮಾಡಿಕೊಳ್ಳಬಹುದು. ಮೊಬೈಲ್‌ ಫೋನ್‌ನಲ್ಲಿ ಸೆಟ್ಟಿಂಗ್ಸ್‌ನ ಮೂಲಕ ಕನೆಕ್ಟ್‌ ಮಾಡಲಾಗುತ್ತದೆ. ಕೀ ಬಳಸದೆಯೂ ಬೈಕ್‌ನ್ನು ಲಾಕ್‌, ಅನ್‌ಲಾಕ್‌ ಮಾಡಬಹುದು.

ವಾಹನಗಳ ಅತಿಯಾದ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳನ್ನು ಗಮನಿಸಿ, ಈ ಹೈಬ್ರಿಡ್‌ ಬೈಕ್‌ನ ಮೂಲಕ ಪರಿಸರ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಬಹುದು ಅಜಯ ಅವರ ಅಭಿಪ್ರಾಯ. ಇತರೆ ಬೈಕ್ ನೂರು ಕಿ.ಮೀ ಚಲಿಸಿದಾಗ ಉಂಟಾಗುವ ಪರಿಣಾಮದಲ್ಲಿ ಹೈಬ್ರಿಡ್‌ ಬೈಕ್ ಎರಡು ನೂರು ಕಿ.ಮೀ ಗೆ ಸಮ ಎನ್ನುತ್ತಾರೆ ಬೈಕ್‌ನ ಸಾರಥಿ. ಚಾರ್ಜೆಬಲ್ ಬ್ಯಾಟರಿ ಮೇಲೆ ಬೈಕ್ ಓಡುವಾಗ ಶಬ್ದ ಹಾಗೂ ಹೊಗೆ ಬರುವುದಿಲ್ಲ. ಇಲ್ಲಿ ಕನಿಷ್ಠ 35-40 ಕಿ.ಮೀ ನಷ್ಟು ಮಾಲಿನ್ಯ ಇತರೆ ಬೈಕ್‌ಗಳಿಗಿಂತ ಹೈಬ್ರಿಡ್ ಬೈಕ್ ಮಾಡುತ್ತದೆ. ಇದರ ಮೂಲಕ ಶೇ 50 ಇಂಧನ ಉಳಿತಾಯವೂ ಸಾಧ್ಯ. ಹೈಬ್ರಿಡ್‌ ಬೈಕ್ ಮಾಹಿತಿಗಾಗಿ ಅಜಯಕುಮಾರ ಬಂಕಲಗಿ ಸಂಪರ್ಕಿಸಲು 89510 83490

ನೆರವಿನ ನಿರೀಕ್ಷೆಯಲ್ಲಿ

‘ಒಂದು ಹೈಬ್ರಿಡ್‌ ಬೈಕ್‌ನ ಪ್ರಾಜೆಕ್ಟ್‌ ಪೂರ್ತಿ ಮಾಡಲು ಕನಿಷ್ಠ ₹ 20 ಸಾವಿರದಿಂದ ರಿಂದ ₹ 25 ಸಾವಿರ ಬೇಕು. ಆದರೆ, ಆರ್ಥಿಕವಾಗಿ ಅಷ್ಟೊಂದು ಹಣ ಮನೆಯಲ್ಲಿ ನೀಡಲು ಸಾಧ್ಯವಿಲ್ಲ. ಮಧ್ಯಮ ವರ್ಗದ ಕುಟುಂಬವಾದ್ದರಿಂದ ಅಷ್ಟೊಂದು ಹಣ ಹೊಂದಿಸಲು ತೊಂದರೆಯಾಗುತ್ತದೆ’ ಎಂದು ಮುಖ ಸಪ್ಪೆ ಮಾಡುತ್ತಾನೆ ಅಜಯ್. ಆದರೂ ತನ್ನ ಪ್ರಾಜೆಕ್ಟ್‌ ನಿರ್ವಹಣೆಗೆ ಶಿಕ್ಷಕರ, ಸ್ನೇಹಿತರ ಸಹಾಯದಿಂದ ಮಾಡಿದ್ದಾನೆ. ಮಾರುಕಟ್ಟೆಯಲ್ಲಿ ಇಂಥ ಒಂದು ಬೈಕ್ ತಯಾರಿಕೆಗೆ 50-60 ಸಾವಿರದವರೆಗೆ ಖರ್ಚು ತಗಲುತ್ತದೆ. ಆದರೆ ನಾನು ಅವರದೇ ಸೈಕಲ್ ಬಳಸಿ 15ರಿಂದ 20 ಸಾವಿರದಲ್ಲಿ ಎಲೆಕ್ಟ್ರಿಕ್ ಹೈಬ್ರೀಡ್ ಬೈಕಾಗಿ ತಯಾರಿಸಿ ಕೊಡುತ್ತೇನೆ. ಯಾವುದಾದರೂ ಕಂಪನಿಯವರು ಸಾಥ್‌ ನೀಡಿದರೆ ಯಶಸ್ವಿಯಾಗಿ ಹೈಬ್ರಿಡ್‌ ಬೈಕ್‌ನ್ನು ಕಾರ್ಯರೂಪಕ್ಕೆ ತರಬಹುದು ಎನ್ನುವುದು ಅಜಯ್ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT