ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏರ್‌ಬ್ಯಾಗ್‌ ಜೀನ್ಸ್‌

Last Updated 28 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಏರ್‌ಬ್ಯಾಗ್‌ಗಳು ಉಪಯೋಗವಾಗುವುದು ಎಂದರೆ, ಅದರ ಅರ್ಥ ಬಲವಾದ ಅಪಘಾತವಾಗಿದೆ ಎಂದೇ ಅರ್ಥ.

**

ಮನೆಯಿಂದ ಹೊರಹೊರಟರೆ ಸಾಕು, ಎಲ್ಲರೂ ಆಸ್ಟ್ರೋನಾಟ್‌ಗಳ ಹಾಗೆ, ಧರಿಸಿದ ಉಡುಪಿನ ಮೇಲೊಂದು ಜ್ಯಾಕೆಟ್‌, ತಲೆಗೊಂದು ಹೆಲ್ಮೆಟ್‌, ಕಾಲುಗಳಿಗೆ ಬೂಟು ಧರಿಸಿ ಹೊರಡಬೇಕಾದ ಪರಿಸ್ಥಿತಿ! ಇದಕ್ಕೆ ಕಾರಣ, ಹೆಲ್ಮೆಟ್‌ ಹಾಕದಿದ್ದರೆ ದಾರಿಯಲ್ಲಿ ತಡೆದು ದಂಡ ಹಾಕುವ ಪೊಲೀಸರು ಎನ್ನಬೇಡಿ ಮತ್ತೆ. ಖಂಡಿತವಾಗಲೂ ಇದಕ್ಕೆ ಕಾರಣ ಚಂದ್ರನ ಮೇಲ್ಮೈಯಂತೆ ಕಾಣುವ, ಗುಂಡಿಗಳ ಆಗರವಾದ ರಸ್ತೆಗಳು, ಸದಾ ನಡೆಯುತ್ತಿರುವ ರಸ್ತೆ ಹಾಗೂ ಮೆಟ್ರೊ ಕಾಮಗಾರಿಯಿಂದ ಏಳುವ ದೂಳು ಇತ್ಯಾದಿ.

ಇಲ್ಲಿ, ಹೆಲ್ಮೆಟನ್ನು ಧರಿಸಬೇಕಿರುವುದು ಅಪಘಾತವಾದರೆ ಅಪಾಯವಾಗದಿರಲಿ ಎಂದು ತಾನೇ? ಇಂತಹ ಮುನ್ನೆಚ್ಚರಿಕೆಗಳನ್ನು ಸ್ವತಃ ನಾವೇ ತೆಗೆದುಕೊಳ್ಳಬೇಕೆಂಬ ಸಾಮಾನ್ಯಜ್ಞಾನ ಇಲ್ಲದಾಗ, ಸರ್ಕಾರಗಳು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡಿ, ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಹಾಗೆ ಬಂದ ಹೆಲ್ಮೆಟ್‌ ಕಡ್ಡಾಯದ ನಿಯಮವನ್ನು ಹಿಂಬಾಲಿಸುತ್ತಲೇ ಬಂದ ಮತ್ತೊಂದು ನಿಯಮವೇ ಸೀಟ್‌ಬೆಲ್ಟ್‌ ಕಡ್ಡಾಯ ಎಂಬುದು. ಮೊದಲಿಗೆ ಚಾಲಕರಿಗೆ ಮಾತ್ರ ಅನ್ವಯವಾಗಿದ್ದ ಈ ನಿಯಮ, ಕ್ರಮೇಣ ಎಲ್ಲಾ ಪ್ರಯಾಣಿಕರಿಗೂ ಅನ್ವಯವೆನ್ನಲಾಯಿತು. ಈಗ ಏರ್‌ಬ್ಯಾಗ್‌ಗಳ ಸರದಿ. ಮೊದಲು ಚಾಲಕರಿಗೆ ಮಾತ್ರ ಮೀಸಲಾಗಿದ್ದ ಏರ್‌ಬ್ಯಾಗ್‌ಗಳು, ಈಗ ಕಾರಿನ ಎಲ್ಲಾ ಸೀಟ್‌ಗಳಿಗೂ ಲಭ್ಯವಾಗಲೇಬೇಕು ಎಂಬ ನಿಯಮ ಜಾರಿಯಾಗುತ್ತಿದೆ. ಅದಕ್ಕೆ ತಕ್ಕಹಾಗೆ ಕಾರು ತಯಾರಿಕಾ ಸಂಸ್ಥೆಗಳು ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿವೆ.

ಈ ‘ಏರ್‌ಬ್ಯಾಗ್‌’ ಎಂದರೆ ‘ಗಾಳಿ ತುಂಬಿದ ಚೀಲ’ ಎಂದರ್ಥ ಅಲ್ಲವೇ? ಇಷ್ಟೊಂದು ಸರಳವಾದ ಹೆಸರಿನ ಈ ಉತ್ಪನ್ನವನ್ನು ನೆನೆಸಿಕೊಂಡಾಕ್ಷಣ ಒಮ್ಮೆ ನಡುಕ ಬರಲಿಕ್ಕೂ ಸಾಕು. ಏಕೆಂದರೆ, ಏರ್‌ಬ್ಯಾಗ್‌ಗಳು ಉಪಯೋಗವಾಗುವುದು ಎಂದರೆ, ಅದರ ಅರ್ಥ ಬಲವಾದ ಅಪಘಾತವಾಗಿದೆ ಅಂತಲೇ. ಅಪಘಾತವಾದಾಗ, ಗಾಳಿಚೀಲಗಳು ಉಬ್ಬಿಕೊಂಡು, ನಮಗೆ ಗಾಡಿಯ ಯಾವ ಭಾಗವೂ ತಾಗಿ ದೈಹಿಕ ಆಘಾತವಾಗದಂತೆ ತಡೆಯುತ್ತವೆ; ಇಂತಹ ಜೀವರಕ್ಷಕ ಉತ್ಪನ್ನವನ್ನು ಮೊದಲಬಾರಿಗೆ ತಯಾರಿಸಿದವರು ಪೀಟರ್‌ ಫ್ಲೋಜಾನ್‌ಚಿಚ್‌ ಎಂಬ ಸ್ಲೋವೇನಿಯಾದ ಸಂಶೋಧಕ ಹಾಗೂ ಒಲಂಪಿಕ್‌ ಆಟಗಾರ. ಮೊದಲ ಏರ್‌ಬ್ಯಾಗ್‌ ತಯಾರಾದದ್ದು 1957ರಲ್ಲೇ ಆದರೂ, ವಾಣಿಜ್ಯಿಕವಾಗಿ ಕಾರುಗಳಲ್ಲಿ ಏರ್‌ಬ್ಯಾಗ್‌ಗಳ ಬಳಕೆಯು ಪ್ರಾರಂಭವಾದದ್ದು 1970ರಲ್ಲಿ.

ಈ ಗಾಳಿಚೀಲದಲ್ಲೇನೂ ಯಾವಾಗಲೂ ಗಾಳಿ ತುಂಬಿಕೊಂಡಿರುವುದಿಲ್ಲ; ಗಾಡಿಯು ಅಪಘಾತಕ್ಕೆ ಸಿಲುಕಿದಾಗ, ಆ ಅಚಾನಕ್‌ ಪರಿಣಾಮದ ಫಲಿತಾಂಶವಾಗಿ ಒಳಗೆ ಅಡಗಿದ್ದ ಈ ಚೀಲವು ಕ್ಷಣಮಾತ್ರದಲ್ಲೇ ಗಾಳಿಯನ್ನು ತುಂಬಿಕೊಂಡು, ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ರಕ್ಷಣಾಕವಚವಾಗಿ ಹೊರಬರುತ್ತದೆ. ಅಪಘಾತದ ಸಮಯದಲ್ಲಿ ಏರ್‌ಬ್ಯಾಗ್‌ಗಳು ಕ್ಷಣಮಾತ್ರದಲ್ಲೇ ಹೊರಬರಬೇಕೆಂದರೆ ಮೊದಲಿಗೆ ಆಘಾತ ಸಂವೇದಕಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು; ಆ ಸಂವೇದಕಗಳಿಗೆ ಆಘಾತದ ಸಂವೇದನೆ ಸಿಕ್ಕ ಕ್ಷಣದಲ್ಲಿಯೇ, ಆಘಾತದ ಪ್ರಮಾಣ, ಅಪಾಯದ ಮಟ್ಟ, ಆಘಾತದ ಕೋನದಂತಹ ಅಂಶಗಳ ವಿಶ್ಲೇಷಣೆ ನಡೆಯುತ್ತದೆ; ಅಪಾಯದ ಮಟ್ಟ, ಆಘಾತದ ತೀವ್ರತೆ ಕಡಿಮೆಯಿದ್ದರೆ ಗಾಳಿಚೀಲಗಳು ಊದಿಕೊಂಡು ಪ್ರಯಾಣಿಕರ ರಕ್ಷಣೆಗೆ ಧಾವಿಸುವುದಿಲ್ಲ; ಹೆಚ್ಚು ತೀವ್ರತೆಯಿದ್ದರೆ, ಅರೆಕ್ಷಣದಲ್ಲಿ ಸಂವೇದಕಗಳ ವಿಶ್ಲೇಷಕ ಘಟಕದ ಆಜ್ಞೆಯಂತೆ, ಪ್ರತಿಕ್ರಿಯಾತ್ಮಕವಾಗಿ ರಾಸಾಯನಿಕ ಹಾಗೂ ಭೌತಿಕ ಸ್ಫೋಟ ನಡೆಯುತ್ತದೆ. ‘ಸ್ಫೋಟವಾ?’ ಎಂದು ಭಯಪಡಬೇಕಿಲ್ಲ! ಸ್ಫೋಟವೆಂದರೆ ‘ಭಯಂಕರ’, ‘ಜೀವವಿನಾಶಕ’ ಎನಿಸುತ್ತದಲ್ಲವೇ? ಆದರೆ ಇಲ್ಲಿ ನಡೆಯುವ ಸ್ಫೋಟವು ಜೀವ ಉಳಿಸುವಂತಹದ್ದು. ವಾಹನಕ್ಕೆ ಉಂಟಾದ ಭೌತಿಕ ಆಘಾತದಿಂದ, ಸಂವೇದಕದಲ್ಲಿ ಒಂದು ಕಿಡಿ ಉತ್ಪತ್ತಿಯಾಗುತ್ತದೆ; ಆದು ಈ ಪಾಲಿಮರ್‌ನಿಂದ ತಯಾರಾದ ಚೀಲದೊಳಗೆ ಇರುವ ರಾಸಾಯನಿಕ ಸಂಯುಕ್ತ ಪದಾರ್ಥವಾದ ‘ಸೋಡಿಯಂ ಅಝೈಡ್‌’ಅನ್ನು ರಾಸಾಯನಿಕವಾಗಿ ಉರಿಯುವಂತೆ, ಸ್ಫೋಟಿಸಿ ವಿಘಟನೆಯಾಗುವಂತೆ ಮಾಡುತ್ತದೆ; ಅದರ ಪರಿಣಾಮವಾಗಿ ನೈಟ್ರೋಜನ್‌ ಅಂದರೆ ಸಾರಜನಕ ಅನಿಲವು ಉತ್ಪಾದನೆಯಾಗಿ, ಗಾಳಿಚೀಲವನ್ನು ತುಂಬಿಸುತ್ತದೆ; ಸ್ವಾಭಾವಿಕವಾಗಿ, ಹೆಚ್ಚಿನ ತಾಪಮಾನದಲ್ಲಿ ಅನಿಲಗಳು ಹರಡುವುದು, ಹಬ್ಬುವುದು ಹೆಚ್ಚು; ಹಾಗಾಗಿ, ಅರೆಕ್ಷಣದಲ್ಲೇ ಇಡಿಯ ಚೀಲವನ್ನು ಆವರಿಸಿಕೊಂಡು ಮೆತ್ತನೆಯ ದಿಂಬಿನಂತಹ ರಚನೆ ತಯಾರಾಗುತ್ತದೆ ಮತ್ತು ಪ್ರಯಾಣಿಕರನ್ನು ಕುತ್ತಿಗೆ ಮುರಿತ, ತಲೆಗೆ ಬಲವಾದ ಪೆಟ್ಟು, ಎದೆಮೂಳೆಗಳ ಮುರಿತದಂತಹ ದೈಹಿಕ ಆಘಾತಗಳಿಂದ ಕಾಪಾಡುತ್ತದೆ.

ಈ ಗಾಳಿಚೀಲಗಳು ವಾಹನದ ಒಳಗೇ ಇರಬೇಕಿಲ್ಲ, ನಾವು ಧರಿಸಿರುವ ಕವಚದಲ್ಲೂ ಇರಬಹುದು; ಉದಾಹರಣೆಗೆ, ಸೈಕಲ್‌ ಸವಾರರು, ಸ್ಕೂಟರ್‌, ಬೈಕುಗಳನ್ನು ಓಡಿಸುವವರು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್‌, ನೀ ಕ್ಯಾಪ್‌ಗಳನ್ನು ಬಳಸುವಂತೆ ಏರ್‌ಬ್ಯಾಗ್‌ಗಳಿರುವ ಪುಟ್ಟ ಪಟ್ಟಿಯನ್ನೂ ಧರಿಸಬಹುದಾಗಿದೆ; ಅದರಿಂದ ಅಪಘಾತದ ಸಮಯದಲ್ಲಿ ಗಾಳಿಚೀಲವು ಹೊರಬಂದು ಭುಜ, ಎದೆ ಹಾಗೂ ಕುತ್ತಿಗೆಯ ಭಾಗವನ್ನು ಕಾಪಾಡುತ್ತದೆ.

ಏರ್‌ಬ್ಯಾಗ್‌ಪಟ್ಟಿಯು ಕೇವಲ ದೇಹದ ಮೇಲ್ಭಾಗವನ್ನು ಮಾತ್ರ ಕಾಪಾಡುತ್ತದೆ. ಇಡೀ ದೇಹಕ್ಕೆ ರಕ್ಷಣೆ ಬೇಕಲ್ಲ ಎಂದು ಯೋಚಿಸಿದ ‘ಮೋ.ಸೈಕಲ್‌’ ಎಂಬ ಸ್ವೀಡನ್‌ನ ಸಂಸ್ಥೆಯು, 17 ವರ್ಷಗಳಿಂದ ಆ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಿತ್ತು. ಅದರ ಫಲವಾಗಿ, ಈಗ ಫೆಬ್ರುವರಿ 28ರಂದು ‘ಏರ್‌ಬ್ಯಾಗ್‌ ಜೀನ್ಸ್‌’ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಇದು ನೋಡಲು, ಧರಿಸಲು ಸಾಮಾನ್ಯ ಜೀನ್ಸಿನ ಹಾಗೇ ಇದ್ದರೂ, ಅಪಘಾತವಾದರೆ, ಅದರೊಳಗಿನ ಗಾಳಿಚೀಲವು ಊದಿಕೊಂಡು ನಮ್ಮ ಮೂಳೆಗಳನ್ನು ಬಲವಾದ ಆಘಾತದಿಂದ ರಕ್ಷಿಸುತ್ತದೆ. ಇದೇ ಏರ್‌ಬ್ಯಾಗ್‌ ಜೀನ್ಸ್‌ನಿಂದ ಮಾಡಲಾದ ಪ್ಯಾಂಟ್‌ಗಳ ಜೊತೆಗೆ ಏರ್‌ಬ್ಯಾಗ್‌ ಜ್ಯಾಕೆಟ್‌ ಕೂಡ ಲಭ್ಯವಂತೆ! ಇವು ನಮ್ಮ ಇಡೀ ದೇಹವನ್ನು ರಕ್ಷಿಸುವುದಲ್ಲದೇ, ಪರಿಸರಸ್ನೇಹಿ ವಸ್ತುಗಳಿಂದ ಮಾಡಲಾಗಿದ್ದು, ಮರುಬಳಕೆ ಸಾಧ್ಯ, ಹಾಗಾಗಿ ಪರಿಸರವನ್ನೂ ರಕ್ಷಿಸುತ್ತದೆ ಎಂಬುದು ಇದನ್ನು ತಯಾರಿಸುತ್ತಿರುವ ಸಂಸ್ಥೆಯ ಆಶ್ವಾಸನೆ.

ಈ ಜೀನ್ಸ್‌ನ ಒಳಗಿರುವ ಏರ್‌ಬ್ಯಾಗ್‌ ರಾಸಾಯನಿಕಗಳಿಗೂ, ಕಾರುಗಳ ಏರ್‌ಬ್ಯಾಗ್‌ನೊಳಗಿರುವ ರಾಸಾಯನಿಕಗಳಿಗೂ ಏನೂ ವ್ಯತ್ಯಾಸವಿಲ್ಲ. ಇಲ್ಲಿ ಈ ಏರ್‌ಬ್ಯಾಗ್‌ ಅನ್ನು ಒಳಗೊಂಡ ಜೀನ್ಸಿಗೂ ದ್ವಿಚಕ್ರವಾಹನಕ್ಕೂ ಯಾಂತ್ರಿಕ ಸೇತುವೆಯಾಗಿ ಒಂದು ಬೆಲ್ಟ್‌ ನೀಡಲಾಗಿರುತ್ತದೆ; ಅಪಘಾತವಾಗಿ ಆ ಬೆಲ್ಟ್‌ ಕಳಚಿದ ಅರೆಕ್ಷಣದೊಳಗೆ, ಸಂವೇದಕಗಳು ಅದನ್ನು ದಾಖಲಿಸಿಕೊಂಡು, ಗಾಳಿಚೀಲದೊಳಗಿನ ರಾಸಾಯನಿಕವನ್ನು ವಿಘಟಿಸುವಂತೆ ಪ್ರಚೋದಿಸುತ್ತವೆ; ಅದರ ಪರಿಣಾಮವಾಗಿ ಅನಿಲದ ಉತ್ಪಾದನೆ, ಚೀಲದ ಉಬ್ಬುವಿಕೆ ಹಾಗೂ ಮೂಳೆಗಳ, ಮೂಳೆನಾರಿನ ರಕ್ಷಣೆ ಸಾಧ್ಯವಾಗುತ್ತದೆ. ಎಷ್ಟೇ ಎಚ್ಚರದಿಂದ ವಾಹನ ಚಲಾಯಿಸಿದರೂ, ಕೆಲವೊಮ್ಮೆ ಇತರ ವಾಹನಗಳಿಂದಲೋ, ಹೊರಗಿನ ಇತರ ಅಂಶಗಳಿಂದಲೋ ಅಪಘಾತವಾಗಬಹುದು; ಹಾಗಾಗಿ, ಇಂತಹ ಹೊಸ ತಂತ್ರಜ್ಞಾನಗಳ, ಉತ್ಪನ್ನಗಳ ಉಪಯೋಗಗಳನ್ನು ಬಳಸಿಕೊಳ್ಳುವುದು ಇಂದಿನ ಅನಿವಾರ್ಯತೆಯೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT