ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Yoga Day: ಯೋಗಕ್ಕೆ ಕೆಲವು ಆ್ಯಪ್‌ಗಳು

Published 20 ಜೂನ್ 2023, 22:14 IST
Last Updated 20 ಜೂನ್ 2023, 22:14 IST
ಅಕ್ಷರ ಗಾತ್ರ

ಜಗತ್ತಿಗೆ ಭಾರತದ ಕೊಡುಗೆ ಯೋಗಾಸನಗಳು. ಈ ಅವಸರದ ಮತ್ತು ತಂತ್ರಜ್ಞಾನ ಆಧರಿತ ಯುಗದಲ್ಲಿ ನಾವು ಕೇವಲ ಮನಸ್ಸಿಗೆ/ಬುದ್ಧಿಗೆ ಕೆಲಸ ಕೊಡುತ್ತಿದ್ದೇವೆ. ಆದರೆ ದೇಹಕ್ಕೆ ಕೆಲಸವಿಲ್ಲದೆ ಅಥವಾ ವ್ಯಾಯಾಮವಿಲ್ಲದೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಾವು ಸದಾ ಅವಲಂಬಿಸಿರುವ ಮೊಬೈಲ್ ಫೋನ್ ಮೂಲಕವೇ ಯೋಗ ಮಾಡಲು ಪ್ರಚೋದಿಸುವ, ಗುರಿ ಇರಿಸಿಕೊಂಡು ಯೋಗಾಭ್ಯಾಸ ಮಾಡುವ ಮತ್ತು ಅಷ್ಟರ ಮಟ್ಟಿಗಾದರೂ ದೇಹಕ್ಕೆ ವ್ಯಾಯಾಮ ನೀಡಿ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುವ ಸಾಕಷ್ಟು ಆ್ಯಪ್‌ಗಳು ಆ್ಯಪಲ್ ಐಫೋನ್ ಮತ್ತು ಸ್ಮಾರ್ಟ್‌ವಾಚ್‌ಗಳ ಮೂಲಕ ಲಭ್ಯ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಕೂಡ ಹಲವು ಆ್ಯಪ್‌ಗಳು ಲಭ್ಯ ಇವೆ. ಯೋಗ ಅಂತ ಪ್ಲೇಸ್ಟೋರ್ ಅಥವಾ ಆ್ಯಪ್ ಸ್ಟೋರ್‌ಗಳಲ್ಲಿ ಹುಡುಕಿದರೆ ಸಾಕಷ್ಟು ಸಿಗುತ್ತವೆ. ಯೋಗಾಭ್ಯಾಸದ ಪ್ರಮುಖ ಕೆಲವು ಆ್ಯಪ್‌ಗಳು ಇಲ್ಲಿವೆ.

ಪ್ರಯೋಗ
ಯೋಗಾಭ್ಯಾಸ ಮಾಡುವುದು ಹೇಗೆ ಎಂದು ನೇರವಾಗಿ ತಿಳಿಸಿಕೊಡುತ್ತದೆ ಈ ಪ್ರಯೋಗ ಎಂಬ ಆ್ಯಪ್. ಕೈಗೆ ಕಟ್ಟಿಕೊಳ್ಳುವ ಆ್ಯಪಲ್ ವಾಚ್‌ನಲ್ಲಿ ಆಡಿಯೊ ಮೂಲಕ ಇದು ಮಾರ್ಗದರ್ಶನ ನೀಡುತ್ತದೆ. ಯಂತ್ರ ಕಲಿಕಾ ತಂತ್ರಜ್ಞಾನ (ಎಂಎಲ್) ಹಾಗೂ ನಮ್ಮ ದೈಹಿಕ ಚಲನವಲನ (ವಾಚ್ ಮೂಲಕ) ಆಧರಿಸಿ ಪ್ರಯೋಗ ಆ್ಯಪ್, ನಿರ್ದಿಷ್ಟ ಆಸನವನ್ನು ಸರಿಯಾಗಿ ಮಾಡಲಾಗಿದೆಯೇ ಎಂದು ತಿಳಿದು, ತಪ್ಪಾಗಿದ್ದರೆ ಸರಿಪಡಿಸಲು ಆ ಕ್ಷಣವೇ ತಿಳಿಸುತ್ತದೆ.

ಕಲ್ಟ್ ಫಿಟ್
cult.fit ಎಂಬುದು ಆರೋಗ್ಯ ಮತ್ತು ಫಿಟ್ನೆಸ್ ಆ್ಯಪ್. ಇದು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೂ ಪೂರಕವಾದ ಸಲಹೆಗಳನ್ನು ನೀಡುತ್ತದೆ. ಯೋಗ ಮತ್ತು ಧ್ಯಾನದ ಮೂಲಕ ದೈಹಿಕ ಹಾಗೂ ಮಾನಸಿಕ ಕ್ಷೇಮಕ್ಕೆ ನೆರವಾಗುತ್ತದೆ. ತೂಕ ಇಳಿಸುವುದು, ರಕ್ತನಾಳ ಸಂಬಂಧಿತ ದೋಷ ನಿವಾರಣೆ, ಬಲವರ್ಧನೆ, ದೇಹಕ್ಷಮತೆ ವರ್ಧನೆ ಮುಂತಾದ ನಿರ್ದಿಷ್ಟ ಗುರಿಗಳನ್ನು ಇರಿಸಿಕೊಂಡು ನಿರ್ದಿಷ್ಟ ವ್ಯಾಯಾಮ ಮಾಡುವಂತೆ ಮತ್ತು ಗುರಿ ಸಾಧಿಸುವಂತೆ ಇದು ಪ್ರೇರೇಪಣೆ ನೀಡುತ್ತಾ ಹೋಗುತ್ತದೆ.

ಆಸನ ರೆಬೆಲ್
ನಮ್ಮ ಆಧುನಿಕ ಜೀವನ ಶೈಲಿಯ ನಡುವೆ ದೈಹಿಕ-ಮಾನಸಿಕ ಕ್ಷಮತೆಗಾಗಿ ಹಲವು ವಿಧಾನಗಳನ್ನು ಆಸನ-ರೆಬೆಲ್ ಆ್ಯಪ್ ತಿಳಿಸಿಕೊಡುತ್ತದೆ. ತೂಕ ಇಳಿಸುವುದು, ದೇಹದ ಸಾಮರ್ಥ್ಯ ವರ್ಧನೆಗೆ ಸಂಬಂಧಿಸಿ ನಿರ್ದಿಷ್ಟ ಗುರಿಗಳನ್ನು ಇರಿಸಿಕೊಂಡು, ದೈಹಿಕ-ಮಾನಸಿಕ ಸ್ವಾಸ್ಥ್ಯ ವರ್ಧನೆಗೆ ಪೂರಕ ಆಸನಗಳು ಇಲ್ಲಿವೆ.

ಅರ್ಬನ್ ರಿಲೀಫ್
ಅರ್ಬನ್ ಯೋಗಿ ಮೂಲಕ ಲಭ್ಯವಾಗುವ ಈ ಆ್ಯಪ್‌ನಲ್ಲಿ, ವ್ಯಾಯಾಮದ ದೈನಿಕ ಗುರಿ ಸಾಧನೆಗೆ ಪ್ರೇರೇಪಣೆ ನೀಡುವುದರ ಜೊತೆಗೆ ಸುಖನಿದ್ರೆಗೆ ಸಹಕರಿಸುವ ತರಬೇತಿಯೂ ದೊರೆಯುತ್ತದೆ.

ಫೇಸ್ ಯೋಗಿ
ಮುಖದ ನಿರ್ದಿಷ್ಟ ಭಾಗಗಳಿಗೆ ವ್ಯಾಯಾಮ ನೀಡುವ ಮೂಲಕ ಮುಖದ ಸೌಂದರ್ಯ ವೃದ್ಧಿಗೆ ನೆರವಾಗುತ್ತದೆ ಈ ಫೇಸ್ ಯೋಗಿ ಎಂಬ ಆ್ಯಪ್. 7 ದಿನಗಳ ಫೇಸ್ ಫಿಟ್ನೆಸ್ (ಮುಖದ ಕ್ಷಮತೆ) ಪ್ರೋಗ್ರಾಂ ಇದರಲ್ಲಿದ್ದು, ಮುಖದ ಚರ್ಮದ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ.

ಇದರ ಹೊರತಾಗಿ, ಮನಸ್ಸನ್ನು ಶಾಂತವಾಗಿಡಲು, ಸುಖ ನಿದ್ದೆ ಹಾಗೂ ಧ್ಯಾನಕ್ಕೆ ಸಹಕರಿಸಲು ಕಾಮ್ (Calm) ಹಾಗೂ ಹೆಡ್‌ಸ್ಪೇಸ್ ಎಂಬ ಆ್ಯಪ್‌ಗಳಿವೆ. ಈ ಎಲ್ಲ ಆ್ಯಪ್‌ಗಳಲ್ಲಿ ದೊರೆಯುವ ಸೂಚನೆಗಳನ್ನು ಸರಿಯಾಗಿ ಪಾಲಿಸಬೇಕಾಗುತ್ತದೆ. ಯಾವುದೂ ಅತಿಯಾಗಲೂಬಾರದು ಎಂಬುದು ಗಮನದಲ್ಲಿರಬೇಕಾಗುತ್ತದೆ. ಆದರೆ, ಆರೋಗ್ಯ ಸಮಸ್ಯೆ ಇದ್ದವರು ಈ ಆ್ಯಪ್ ಆಧಾರದಲ್ಲಿ ಯಾವುದೇ ವ್ಯಾಯಾಮ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT